ಹಿಂದೆ ಧರ್ಮಗಳು ಪ್ರತಿಯೊಂದು ಕ್ರಿಯೆಯನ್ನ, ಸಂಗತಿಯನ್ನ ಹೆಸರಿಟ್ಟು ಗುರುತಿಸುತ್ತಿದ್ದವು, ಇದು ಅನುಭವ, ಇದು ಭೋಗ ಎಂದು ವ್ಯತ್ಯಾಸ ಮಾಡುತ್ತಿದ್ದವು. ಆದರೆ ಮೂಲಭೂತವಾಗಿ ಕ್ರಿಯೆಗಳಲ್ಲಿ, ಸಂಗತಿಗಳಲ್ಲಿ ಸಮಸ್ಯೆಯಿಲ್ಲ, ಅವು ತಾವು ಇರಬೇಕಾದ ಹಾಗೆಯೇ ಇವೆ. ವ್ಯತ್ಯಾಸ ಆಗುವುದು ಅರಿವಿನ ಹಾಜರಾತಿ ಮತ್ತು ಅನುಪಸ್ಥಿತಿ ಕಾರಣವಾಗಿ ಮಾತ್ರ… ~ ಓಶೋ ರಜನೀಶ್ | ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಬೇರೆ ಮಾಸ್ಟರ್ ಗಳ ಜೊತೆ ಅಭ್ಯಾಸ ಮಾಡುತ್ತಿದ್ದ ಮೂವರು ಶಿಷ್ಯರ ನಡುವೆ, ಯಾರ ಮಾಸ್ಟರ್ ಶ್ರೇಷ್ಠ ಎನ್ನುವುದರ ಕುರಿತು ವಾದ ಶುರುವಾಯಿತು.
“ ನನ್ನ ಮಾಸ್ಟರ್ ಊಟ ಇಲ್ಲದೇ ದಿನಗಟ್ಟಲೇ ಇರಬಲ್ಲ “ ಒಬ್ಬ ಶಿಷ್ಯ ಕೊಚ್ಚಿಕೊಂಡ.
“ ನನ್ನ ಮಾಸ್ಟರ್ ನಿದ್ದೆಯಿಲ್ಲದೇ ತಿಂಗಳುಗಟ್ಟಲೇ ಇರಬಲ್ಲ “ ಇನ್ನೊಬ್ಬ ಶಿಷ್ಯ ವಾದ ಮುಂದುವರೆಸಿದ.
“ ನನ್ನ ಮಾಸ್ಟರ್ ಹಸಿವಾದಾಗ ಊಟಮಾಡುತ್ತಾನೆ, ನಿದ್ದೆ ಬಂದಾಗ ಮಲಗುತ್ತಾನೆ “ ಮೂರನೇ ಶಿಷ್ಯ ತನ್ನ ಮಾಸ್ಟರ್ ಬಗ್ಗೆ ಹೇಳಿದ.
ಅನುಭವ (experiencing) ಮತ್ತು ಭೋಗ (indulgence) ನಡುವಿನ ವ್ಯತ್ಯಾಸ “ಅರಿವಿನ” ಹಾಜರಾತಿ ಅಥವಾ ಅನುಪಸ್ಥಿತಿ, ಇದನ್ನು ಬಿಟ್ಟರೆ ಈ ಎರಡರ ನಡುವೆ ಬೇರೆ ಯಾವ ವ್ಯತ್ಯಾಸವೂ ಇಲ್ಲ. ನೀವು ಕ್ರಿಯೆಯಲ್ಲಿರುವಾಗ ನಿಮ್ಮ ಅರಿವು ಜಾಗೃತವಾಗಿದ್ದರೆ ಅದು ಅನುಭವ, ಇರದಿದ್ದರೆ ಅದು ಭೋಗ, ಲೋಲುಪತೆ. ನೀವು ಊಟ ಮಾಡುತ್ತಿರಬಹುದು, ಸಂಗೀತ ಕೇಳುತ್ತಿರಬಹುದು, ಪ್ರೇಮಿಸುತ್ತಿರಬಹುದು, ನಕ್ಷತ್ರಗಳಿಂದ ತುಂಬಿಕೊಂಡಿರುವ ಆಕಾಶವನ್ನು ನೋಡುತ್ತಿರಬಹುದು, ಕ್ರಿಯೆ ಯಾವುದೇ ಇರಲಿ, ಅಲ್ಲಿ ನಿಮ್ಮ ಅರಿವಿನ ಉಪಸ್ಥಿತಿ ಇರದಿದ್ದರೆ, ಈ ಕ್ರಿಯೆಗಳಲ್ಲಿ ನೀವು ಕೇವಲ ಸಾಕ್ಷಿಯಾಗಿರದಿದ್ದರೆ, ನೀವು ಜಡ್ಡಮೆಂಟ್ ಗಳಲ್ಲಿ ಮುಳುಗಿಹೋಗಿದ್ದರೆ, ರೊಬೋಟ್ ಗಳಂತೆ ಯಾಂತ್ರಿಕವಾಗಿದ್ದರೆ ಅದು ಭೋಗ, ಲೋಲುಪತೆ, ವಿಷಯಾಸಕ್ತಿ, ಇಂಥದೊಂದು ಕ್ರಿಯೆಯಲ್ಲಿ ನಿಮಗೆ ಯಾವ ಅನುಭವವೂ ಸಾಧ್ಯವಿಲ್ಲ. ಪ್ರತಿ ಅನುಭವವೂ ಸುಂದರ ಹಾಗೆಯೇ ಪ್ರತಿ ಲೋಲುಪತೆಯೂ ಕುರೂಪಿ.
ಹಿಂದೆ ಧರ್ಮಗಳು ಪ್ರತಿಯೊಂದು ಕ್ರಿಯೆಯನ್ನ, ಸಂಗತಿಯನ್ನ ಹೆಸರಿಟ್ಟು ಗುರುತಿಸುತ್ತಿದ್ದವು, ಇದು ಅನುಭವ, ಇದು ಭೋಗ ಎಂದು ವ್ಯತ್ಯಾಸ ಮಾಡುತ್ತಿದ್ದವು. ಆದರೆ ಮೂಲಭೂತವಾಗಿ ಕ್ರಿಯೆಗಳಲ್ಲಿ, ಸಂಗತಿಗಳಲ್ಲಿ ಸಮಸ್ಯೆಯಿಲ್ಲ, ಅವು ತಾವು ಇರಬೇಕಾದ ಹಾಗೆಯೇ ಇವೆ. ವ್ಯತ್ಯಾಸ ಆಗುವುದು ಅರಿವಿನ ಹಾಜರಾತಿ ಮತ್ತು ಅನುಪಸ್ಥಿತಿ ಕಾರಣವಾಗಿ ಮಾತ್ರ.
ಬುದ್ಧ ಊಟ ಮಾಡುವುದು ಮತ್ತು ನೀವು ಊಟ ಮಾಡುವುದು, ಹೊರ ನೋಟಕ್ಕೆ ಒಂದೇ ತೆರನಾದ ಕ್ರಿಯೆಗಳು, ಉದ್ದೇಶದ ದೃಷ್ಟಿಕೋನವೂ ಭಿನ್ನವೆನಲ್ಲ. ಆದರೆ ಬುದ್ಧ ಊಟವನ್ನ ಅನುಭವಿಸುತ್ತಿದ್ದಾನೆ, ನೀವು ಊಟದಲ್ಲಿ ಒಂದು ಲೋಲುಪತೆಯನ್ನ ಕಂಡುಕೊಂಡಿದ್ದೀರಿ, ಊಟ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ನ್ಯಾಯ ನಿರ್ಣಯ ಮಾಡುತ್ತಿದ್ದೀರಿ. ಊಟ ಇಷ್ಟ ಆದರೆ ತಿನ್ನುತ್ತಲೇ ಹೋಗುತ್ತೀರಿ, ಇಷ್ಟವಾಗದಿದ್ದರೆ ಊಟ ಬಿಟ್ಟು ಏಳುತ್ತೀರಿ. ನಿಮಗೆ ಹಸಿವು ಮುಖ್ಯ ಆಗಿಲ್ಲ, ತಿನ್ನುವುದು ನಿಮಗೊಂದು ಸುಖದ ವಿಷಯವಾಗಿದೆ. ನಿಮ್ಮಿಬ್ಬರ ಊಟದಲ್ಲಿ ವ್ಯತ್ಯಾಸ ಇರುವುದು ಅರಿವಿನ ವಿಷಯದಲ್ಲಿ ಮಾತ್ರ. ಬುದ್ಧ ಪೂರ್ಣ ಅರಿವಿನೊಂದಿಗೆ ಊಟ ಮಾಡುತ್ತಿದ್ದಾನೆ, ಊಟದ ಪ್ರತಿ ತುತ್ತನ್ನು ಉಣ್ಣುವಾಗಲೂ ಅವನಿಗೆ ಸಾಧ್ಯವಾಗುತ್ತಿರುವ ಅನುಭವಕ್ಕೆ ಸಾಕ್ಷಿಯಾಗುತ್ತಿದ್ದಾನೆ. ಬುದ್ಧ ನಿಮಗಿಂತ ಹೆಚ್ಚು ಸುಖ ಅನುಭವಿಸುತ್ತಿದ್ದಾನೆ ಆದರೆ ಅವನು ಆ ಸುಖವನ್ನು ವ್ಯಾಖ್ಯಾನ ಮಾಡುತ್ತಿಲ್ಲ, ಕೇವಲ ಆ ಸುಖಕ್ಕೆ ಸಾಕ್ಷಿಯಾಗಿದ್ದಾನೆ. ನೀವು ಊಟ ಮಾಡುತ್ತಿರುವುದೆನೋ ನಿಜ, ಆದರೆ ನಿಮ್ಮ ಮನಸ್ಸು ನೀವು ಬಿಟ್ಟು ಬಂದಿರುವ ಅಂಗಡಿಯಲ್ಲಿದೆ, ನೀವು ಪೂರ್ಣ ಮಾಡಬೇಕಾಗಿರುವ ಆಫೀಸಿನ ಕೆಲಸದಲ್ಲಿದೆ, ನಿಮ್ಮ ಹೆಂಡತಿ / ಗಂಡ ನ ಜೊತೆಗಿನ ನಿಮ್ಮ ಬಿಕ್ಕಟ್ಟಿನಲ್ಲಿದೆ, ನೀವು ಭೌತಿಕವಾಗಿ ಊಟ ಮಾಡುತ್ತಿದ್ದೀರಿ ಆದರೆ ಅದೇ ಕಾಲಕ್ಕೆ ಮಾನಸಿಕವಾಗಿ ನೀವು ಹಲವು ಕ್ರಿಯೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿರುವಿರಿ, ಹೀಗಾದಾಗ ನಿಮ್ಮ ಊಟದ ಸುಖ ನಿರ್ಣಯವಾಗುವುದು ಊಟದ ಗುಣಮಟ್ಟದ ಕಾರಣವಾಗಿ ಅಲ್ಲ, ಹಸಿವು ಪೂರ್ತಿಯಾದ ಕಾರಣಕ್ಕಲ್ಲ, ನಿಮ್ಮ ಮಾನಸಿಕ ಸ್ಥಿತಿಯ ಕಾರಣವಾಗಿ.
ಬುದ್ಧ ಊಟ ಮಾಡುವಾಗ, ಭೌತಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಸಮಗ್ರವಾಗಿ, ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಅವನು ಊಟ ಮಾಡುವಾಗ, ಆತ ಕೇವಲ ಊಟ ಮಾಡುತ್ತಾನೆ. ಒಂದು ಕ್ರಿಯೆ ಅನುಭವವಾಗುವುದು, ಭೋಗವಾಗುವುದು ನಿಮ್ಮ ಅರಿವಿನ ಮೇಲೆ ಅವಲಂಬಿತವಾಗಿದೆ, ಆದ್ದರಿಂದ ಯಾವುದಕ್ಕೂ ಹೆಸರಿಡಬೇಡಿ, ಯಾವುದನ್ನೂ ಮೌಲ್ಯ ಮಾಡಬೇಡಿ, ನಿಮ್ಮ ಅರಿವನ್ನು ಒಟ್ಟಿಗೂಡಿಸುವ ಪ್ರಯತ್ನ ಮಾಡಿ.