ಮಾಸ್ಟರ್ ಪ್ರಯತ್ನ ಮಾಡುತ್ತಲೇ ಹೋದ, ಆದರೆ ಪ್ರಯತ್ನ ಮಾಡಿದಂತೆಲ್ಲ ಅವನು ಬೆವರಲು ಶುರು ಮಾಡಿದ. ಪಕ್ಕದಲ್ಲಿ ಕುಳಿತಿದ್ದ ಶಿಷ್ಯ ತನ್ನ ಕುತ್ತಿಗೆಯನ್ನ ನಕಾರಾತ್ಮಕವಾಗಿ ಅಲ್ಲಾಡಿಸುತ್ತ ಪೇಂಟಿಂಗ್ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತ ಮಾಡುತ್ತಿದ್ದ. ಶಿಷ್ಯನ ಮುಖದಲ್ಲಿನ ಅಸಮಾಧಾನ ನೋಡಿ ನೋಡಿ ಮಾಸ್ಟರ್ ನಿಂದ ಹೆಚ್ಚು ಹೆಚ್ಚು ತಪ್ಪುಗಳು ಆಗಲು ಶುರು ಆದವು… । ಓಶೋ ರಜನೀಶ್ ಹೇಳಿದ ಕಥೆ; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಒಬ್ಬ ಝೆನ್ ಮಾಸ್ಟರ್ ಪೇಂಟಿಂಗ್ ಮಾಡುತ್ತಿದ್ದ . ಅವನು ತನ್ನ ಪ್ರಧಾನ ಶಿಷ್ಯನಿಗೆ ತನ್ನ ಪಕ್ಕದಲ್ಲಿಯೇ ಕುಳಿತುಕೊಂಡು ತನ್ನ ಪೇಂಟಿಂಗ್ ಯಾವಾಗ ಪರಫೆಕ್ಟ್ ಅನಿಸುತ್ತದೆ ಎನ್ನುವುದನ್ನ ಗಮನಿಸಲು ಹೇಳಿದ. ಮಾಸ್ಟರ್ ನ ಆಜ್ಞೆಯಿಂದಾಗಿ ಶಿಷ್ಯ ಕಳವಳಕ್ಕೊಳಗಾದ, ಏಕೆಂದರೆ ಅವನು ಇಲ್ಲಿಯವರೆಗೂ ಮಾಸ್ಟರ್ ನ ಯಾವ ಪರಫೆಕ್ಟ್ ಅಲ್ಲದ ಕೆಲಸವನ್ನೂ ಗಮನಿಸಿರಲಿಲ್ಲ. ಶಿಷ್ಯನ ಮುಖದಲ್ಲಿಯ ಕಳವಳನ್ನು ಕಂಡು ಮಾಸ್ಟರ್ ಕೂಡ ವಿಚಲಿತನಾದ.
ಅದೆನೋ ಅವತ್ತು ಯಾವುದೂ ಸರಿ ಬರುತ್ತಿರಲಿಲ್ಲ. ಮಾಸ್ಟರ್ ಎಷ್ಟು ಪ್ರಯತ್ನ ಮಾಡಿದರೂ ಏನೋ ಒಂದು ತಪ್ಪು ಆಗುತ್ತಿತ್ತು. ಚೈನಾ, ಜಪಾನ್ ನ ಅಂದಿನ ದಿನಗಳಲ್ಲಿ ಕ್ಯಾಲಿಗ್ರಾಫಿಯನ್ನ ರೈಸ್ ಪೇಪರ್ ಮೇಲೆ ಮಾಡುತ್ತಿದ್ದರು. ರೈಸ್ ಪೇಪರ್ ತುಂಬ ನಾಜೂಕಾದ ಪೇಪರ್, ಕ್ಯಾಲಿಗ್ರಾಫರ್ ಕೊಂಚ ತನ್ನ ಏಕಾಗ್ರಚಿತ್ತ ಕಳೆದುಕೊಂಡು ವಿಚಲಿತನಾದರೂ, ರೈಸ್ ಪೇಪರ್ ಮೇಲೆ ಇಂಕ್ ಹರಡಿಕೊಂಡು ಶತಮಾನಗಳವರೆಗೆ ಕ್ಯಾಲಿಗ್ರಾಫರ್ ನ ಮನಸ್ಸಿನೊಳಗಿನ ಹಿಂಜರಿಕೆ ಎದ್ದು ಕಾಣುತ್ತಿತ್ತು.
ರೈಸ್ ಪೇಪರ್ ನ ಮೋಸ ಮಾಡುವುದು ಸಾಧ್ಯವಿಲ್ಲ. ಅದರ ಮೇಲೆ ಪೇಂಟ್ ಮಾಡುವವರು ಸತತವಾಗಿ ಒಂದೇ ಹರಿವಿನಲ್ಲಿ ಪೇಂಟ್ ಮಾಡಬೇಕು, ಅವರು ಕೊಂಚ ವಿಚಲಿತರಾದರೂ ಅವರ ಹಿಂಜರಿಕೆ ರೈಸ್ ಪೇಪರ್ ಮೇಲೆ ದಾಖಲಾಗುತ್ತಿತ್ತು. ಪೇಂಟಿಂಗ್ ಬಗ್ಗೆ ತಿಳುವಳಿಕೆಯಿರುವವರು ಈ ಹಿಂಜರಿಕೆಯನ್ನು ತಕ್ಷಣ ಗುರುತಿಸಿ ಹೇಳಬಹುದಾಗಿತ್ತು, ಇದು ಝೆನ್ ಪೇಂಟಿಂಗ್ ಅಲ್ಲವೆಂದು, ಝೆನ್ ಪೇಂಟಿಂಗ್ ಗಳಲ್ಲಿರಲೇಬೇಕಾದ ಸ್ವಾಭಾವಿಕತೆ (spontaneity) ಇಲ್ಲಿ ಇಲ್ಲ ಎಂದು.
ಮಾಸ್ಟರ್ ಪ್ರಯತ್ನ ಮಾಡುತ್ತಲೇ ಹೋದ, ಆದರೆ ಪ್ರಯತ್ನ ಮಾಡಿದಂತೆಲ್ಲ ಅವನು ಬೆವರಲು ಶುರು ಮಾಡಿದ. ಪಕ್ಕದಲ್ಲಿ ಕುಳಿತಿದ್ದ ಶಿಷ್ಯ ತನ್ನ ಕುತ್ತಿಗೆಯನ್ನ ನಕಾರಾತ್ಮಕವಾಗಿ ಅಲ್ಲಾಡಿಸುತ್ತ ಪೇಂಟಿಂಗ್ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತ ಮಾಡುತ್ತಿದ್ದ. ಶಿಷ್ಯನ ಮುಖದಲ್ಲಿನ ಅಸಮಾಧಾನ ನೋಡಿ ನೋಡಿ ಮಾಸ್ಟರ್ ನಿಂದ ಹೆಚ್ಚು ಹೆಚ್ಚು ತಪ್ಪುಗಳು ಆಗಲು ಶುರು ಆದವು.
ಅಷ್ಟರಲ್ಲಿ ಇಂಕ್ ಮುಗಿದುಹೋಗತೊಡಗಿತು. ಮಾಸ್ಟರ್ ತನ್ನ ಶಿಷ್ಯನಿಗೆ ಇನ್ನಷ್ಟು ಇಂಕ್ ತಯಾರಿಸಿಕೊಂಡು ಬರಲು ಹೇಳಿದ. ಶಿಷ್ಯ ಇಂಕ್ ತಯಾರಿಸಿಕೊಂಡು ಬರಲು ಅಲ್ಲಿಂದ ಎದ್ದು ಒಳಗೆ ಹೋದ. ಶಿಷ್ಯ ಅಲ್ಲಿಂದ ಎದ್ದು ಹೋದಕೂಡಲೇ ಮಾಸ್ಟರ್ ತನ್ನ ಪೇಂಟಿಂಗ್ ಮುಗಿಸಿಬಿಟ್ಟ, ಅದು ಮಾಸ್ಟರ್ ಪೀಸ್ ಆಗಿತ್ತು. ಇಂಕ್ ತಯಾರಿಸಿಕೊಂಡು ಮತ್ತೆ ಅಲ್ಲಿಗೆ ಬಂದ ಶಿಷ್ಯ, ಮಾಸ್ಟರ್ ಕೈಯ್ಯಲ್ಲಿದ್ದ ಪೇಂಟಿಂಗ್ ನೋಡಿ ಆಶ್ಚರ್ಯಚಕಿತನಾದ, “ ಯಾವ ಮಾಯೆ ಸಂಭವಿಸಿತು ಮಾಸ್ಟರ್ ನಾನು ಹೋಗಿಬರುವಷ್ಟರಲ್ಲಿ? ಇದು ಪರಫೆಕ್ಟಾದ ಪೇಂಟಿಂಗ್ “
ಮಾಸ್ಟರ್ ನಗುತ್ತ ಶಿಷ್ಯನಿಗೆ ಉತ್ತರಿಸಿದ, “ ನನಗೆ ಈಗ ಬಂದ ತಿಳುವಳಿಕೆಯೆಂದರೆ, ನನ್ನ ಅಸಫಲ ಪ್ರಯತ್ನಗಳಿಗೆಲ್ಲ ಕಾರಣ, ನೀನು ಪಕ್ಕದಲ್ಲಿ ಕುಳಿತುಕೊಂಡು ನನ್ನ ಕೆಲಸವನ್ನು ಗಮನಿಸುತ್ತಿದ್ದುದು. ನನ್ನ ಕೆಲಸವನ್ನು ಒಬ್ಬರು ಗಮನಿಸುತ್ತಿದ್ದಾರೆ, ಅವರು ನನ್ನ ಕೆಲಸವನ್ನು ಹೊಗಳಬಹುದು ಅಥವಾ ಟೀಕೆ ಮಾಡಬಹುದು ಎನ್ನುವ ವಿಚಾರವೇ ನನ್ನ ಸ್ವಾಭಾವಿಕತೆಗೆ ಧಕ್ಕೆ ತಂದಿತ್ತು, ನನ್ನ ಒಳಗಿನ ಪ್ರಶಾಂತತೆಯನ್ನ ನಾಶ ಮಾಡಿತ್ತು. ಇನ್ನು ಮುಂದೆ ನಾನು ಹೀಗೆ ವಿಚಲಿತನಾಗುವುದಿಲ್ಲ. ನಾನು ಒಂದು ಪರಿಪೂರ್ಣ ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೆ, ಪರಿಪೂರ್ಣತೆಗಾಗಿನ ನನ್ನ ಪ್ರಯತ್ನವೇ ನನ್ನನ್ನು ದಾರಿ ತಪ್ಪಿಸುತ್ತಿತ್ತು, ನನ್ನನ್ನು ಅಶಾಂತಿಗೆ ದೊಡಿತ್ತು. ನಮ್ಮ ಸ್ವಾಭಾವಿಕತೆಯಿಲ್ಲದ ಯಾವ ಕೆಲಸವೂ ಪರಿಪೂರ್ಣವಲ್ಲ.
Source : A sudden clash of thunder | Osho