ಓಶೋ ಹೇಳಿದ ಸಾಕ್ರೆಟಿಸ್ ನ ದೃಷ್ಟಾಂತ ಕಥೆ… | ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರಾಚೀನ ಗ್ರೀಸ್ ನಲ್ಲಿ ಸಾಕ್ರೆಟಿಸ್ ಜ್ಞಾನಿ ಎನ್ನುವ ವಿಚಾರ ಎಲ್ಲ ಕಡೆ ಮನೆಮಾತಾಗಿತ್ತು. ಒಂದು ದಿನ ಒಬ್ಬ ಮನುಷ್ಯ ಸಾಕ್ರೆಟಿಸ್ ನನ್ನು ಹುಡುಕಿಕೊಂಡು ಅವನ ಮನೆಗೆ ಬಂದ. ಮಾತಿನ ನಡುವೆ ಆ ಮನುಷ್ಯ ಸಾಕ್ರೆಟಿಸ್ ನ ಪ್ರಶ್ನೆ ಮಾಡಿದ,
“ ನಿನ್ನ ಗೆಳೆಯನ ಬಗ್ಗೆ ನಾನೊಂದು ವಿಷಯ ಕೇಳಿದೆ ನಿನಗೆ ಗೊತ್ತಾ? ”
“ ಒಂದು ನಿಮಿಷ ನಿಲ್ಲು, ನೀನು ನನ್ನ ಗೆಳೆಯನ ಬಗ್ಗೆ ನನಗೆ ಹೇಳುವುದಕ್ಕಿಂತ ಮೊದಲು, ಮೂರು ಜರಡಿಗಳ ಪರೀಕ್ಷೆ ( Test of three sieves) ದಾಟಿ ಬರಬೇಕು.” ಸಾಕ್ರೆಟಿಸ್ ಆ ಮನುಷ್ಯನ ಮಾತುಗಳನ್ನ ತಡೆಹಿಡಿದ.
“ ಮೂರು ಜರಡಿಗಳ ಪರೀಕ್ಷೆ ?” ಆ ಮನುಷ್ಯನಿಗೆ ಆಶ್ಚರ್ಯವಾಯಿತು.
“ ಹೌದು ಮೂರು ಜರಡಿಗಳ ಪರೀಕ್ಷೆ ” ಸಾಕ್ರೆಟಿಸ್ ಮಾತು ಮುಂದುವರೆಸಿದ….. “ ಇನ್ನೊಬ್ಬರ ಬಗ್ಗೆ ಮಾತನಾಡುವುದಕ್ಕಿಂತ ಮೊದಲು ಒಂದಿಷ್ಟು ಸಮಯ ತೆಗೆದುಕೊಂಡು, ನೀವು ಹೇಳಬೇಕೆನ್ನುತ್ತಿರುವ ವಿಷಯದ ನಿಮ್ಮ ಅಭಿಪ್ರಾಯ ಏನು ಎನ್ನುವ ಬಗ್ಗೆ ಯೋಚಿಸಿ, ನಿಮ್ಮ ಮಾತುಗಳನ್ನ ಈ ಪ್ರಶ್ನೆಗಳನ್ನ ಬಳಸಿ ಫಿಲ್ಟರ್ ಮಾಡಬಹುದಾ ನೋಡಿ, ನಾನು ಇದನ್ನ ಮೂರು ಜರಡಿಗಳ ಪರೀಕ್ಷೆ ಎನ್ನುತ್ತೇನೆ. “
“ ಈ ಪರೀಕ್ಷೆಯ ಮೊದಲ ಜರಡಿ ಎಂದರೆ ‘ಸತ್ಯದ ಜರಡಿ’ , ನೀನು ನನಗೆ ಹೇಳಬೇಕೆಂದಿರುವ ವಿಷಯದ ಬಗ್ಗೆ ನಿನಗೆ ಖಾತ್ರಿ ಇದೆಯಾ ?” ಸಾಕ್ರೆಟಿಸ್ ಪ್ರಶ್ನೆ ಮಾಡಿದ.
“ ಈ ವಿಷಯದ ಸತ್ಯದ ಬಗ್ಗೆ ನನಗೆ ಗೊತ್ತಿಲ್ಲ, ಇದನ್ನ ಯಾರೋ ನನಗೆ ಹೇಳಿದ್ದು”
“ ಓಹ್ ಒಳ್ಳೆಯದು ಹಾಗಾದರೆ, ನೀನು ನನಗೆ ಹೇಳಬಯಸುತ್ತಿರುವ ಮಾತು ನಿಜವೋ ಸುಳ್ಳೋ ನಿನಗೆ ಗೊತ್ತಿಲ್ಲ. ಈಗ ನಾವು ಎರಡನೇಯ ಜರಡಿಗೆ ಹೋಗೋಣ, ಇದು ‘ ಅಂತಃಕರಣದ ಜರಡಿ’. ನೀನು ಹೇಳಬಯಸುತ್ತಿರುವ ಮಾತು ಒಳ್ಳೆಯ ಮಾತ? ಆ ಮಾತಿನಲ್ಲಿ ಅಂತಃಕರಣ ಇದೆಯಾ?” ಸಾಕ್ರೆಟಿಸ್ ಮತ್ತೆ ಪ್ರಶ್ನೆ ಮಾಡಿದ.
“ ಇಲ್ಲ ಇದು ಆ ಮನುಷ್ಯನ ಬಗೆಗಿನ ಒಳ್ಳೆಯ ಮಾತೇನಲ್ಲ, ಬದಲಾಗಿ ಇದು ಆ ಮನುಷ್ಯನ ಕೆಟ್ಟತನದ ಕುರಿತಾದದ್ದು.”
“ ಹಾಗಾದರೆ ನೀನು ಆ ಮನುಷ್ಯನ ಕೆಟ್ಟತನದ ಬಗ್ಗೆ ನನಗೆ ಹೇಳಬಯಸುತ್ತಿದ್ದೀ ಮತ್ತು ಈ ವಿಷಯದ ಸತ್ಯದ ಬಗ್ಗೆ ನಿಮಗೆ ಯಾವ ಖಾತ್ರಿಯೂ ಇಲ್ಲ…… ಸರಿ, ಈಗ ಮೂರನೇ ಜರಡಿಯ ಪರೀಕ್ಷೆ ಮಾಡೋಣ, ಇದು ‘ ಉಪಯೋಗದ ಜರಡಿ’, ನೀನು ಹೇಳಬಯಸುತ್ತಿರುವ ಮಾತಿನಿಂದ ಏನಾದರೂ ಉಪಯೋಗ ಇದೆಯಾ?” ಸಾಕ್ರೆಟಿಸ್ ಮೂರನೇ ಜರಡಿಯ ಪ್ರಶ್ನೆ ಮುಂದಿಟ್ಟ.
“ ಇಲ್ಲ ಉಪಯೋಗದ ಥರದ್ದು ಏನಿಲ್ಲ”
“ ಹಾಗಾದರೆ, ನೀನು ಹೇಳಬಯಸುತ್ತಿರುವ ಮಾತಿನ ಸತ್ಯದ ಬಗ್ಗೆ ನಿನಗೆ ಗೊತ್ತಿಲ್ಲ, ಮತ್ತು ಅದು ಒಳ್ಳೆಯ ಮಾತಲ್ಲ ಹಾಗು ಅದರಿಂದ ಯಾವ ಉಪಯೋಗವೂ ಇಲ್ಲ. ಮತ್ತೆ ಯಾಕೆ ಇಂಥ ಮಾತನ್ನ ನನಗೆ ಹೇಳಬಯಸುತ್ತಿದ್ದೀ?” ಸಾಕ್ರೆಟಿಸ್ ಮಾತು ಮುಗಿಸಿದ.
ಗಾಸಿಪ್ ಗಳೇ ಹೀಗೆ, ಮೊದಮೊದಲು ತಮಾಷೆ ಎನಿಸುತ್ತದೆ, ಖುಶಿ ಕೊಡುತ್ತವೆ ಆದರೆ, ಕೊನೆಯಲ್ಲಿ ನಮ್ಮ ಹೃದಯವನ್ನು ಕಹಿಯಾಗಿಸುತ್ತವೆ, ನಮ್ಮ ಅಸ್ತಿತ್ವವನ್ನ ವಿಷಮಯ ಮಾಡುತ್ತವೆ.