ದೇವರನ್ನು ತಿದ್ದುವ ಪ್ರಯತ್ನ! : ಓಶೋ ವ್ಯಾಖ್ಯಾನ

ನೀವು ಪಿಕಾಸೋನ ಚಿತ್ರ ನೋಡುತ್ತ, “ಇದು ಹೀಗಿರಬೇಕಿತ್ತು, ಹಾಗಿರಬೇಕಿತ್ತು, ಇಲ್ಲಿ ಬಣ್ಣ ಗಾಢ, ಇಲ್ಲಿ ತೆಳು “ ಎಂದೆಲ್ಲ ಆರೋಪ ಮಾಡಲು ಶುರುಮಾಡಿದಿರೆಂದರೆ, ನೀವು ಪಿಕಾಸೋ ನ್ನ ನಿರಾಕರಿಸುತ್ತಿದ್ದೀರಿ. “ ನಾನು ಹೀಗಿದ್ದರೆ ಚೆನ್ನಾಗಿತ್ತು “ ಎಂದು ನಿಮಗೆ ಅನಿಸಲು ಶುರುವಾದಾಗ ನೀವು ದೇವರನ್ನು ತಿದ್ದಲು ಶುರು ಮಾಡಿದ್ದೀರಿ. ಈಗ ನೀವು ಪರೋಕ್ಷವಾಗಿ ದೇವರಿಗೆ ಏನು ಹೇಳುತ್ತಿದ್ದೀರೆಂದರೆ, “ ನೀನು ಒಬ್ಬ ದಡ್ಡ, ನಾನು ಹೀಗಿರಬೇಕಿತ್ತು ಆದರೆ ನೀನು ನನ್ನ ಹಾಗೆ ಸೃಷ್ಟಿಸಿದ್ದೀಯಾ “. ನೀವು ದೇವರ ಸೃಷ್ಟಿಯನ್ನ ಅಣಕಿಸುತ್ತಿದ್ದೀರಿ, ದೇವರ ಸೃಷ್ಟಿಯನ್ನು ಸುಧಾರಿಸುವ ಮಾತನಾಡುತ್ತಿದ್ದೀರಿ, ಇದು ಸಾಧ್ಯವಿಲ್ಲದ ವಿಷಯ… | ಓಶೋ; ಕನ್ನಡಕ್ಕೆ:ಚಿದಂಬರ ನರೇಂದ್ರ

ಒಬ್ಬ ಯುವಕ ತಾನು ಬಡವನಾಗಿದ್ದಕ್ಕೆ ತುಂಬಾ ಬೇಜಾರು ಮಾಡಿಕೊಂಡಿದ್ದ. ಗೆಳೆಯನೊಬ್ಬನ ಸಲಹೆಯ ಮೇರೆಗೆ ಅವನು ಝೆನ್ ಮಾಸ್ಟರ್ ನ ಭೇಟಿಯಾಗಿ ತನ್ನ ಸಂಕಟವನ್ನು ಹೇಳಿಕೊಂಡ.

ಯಾಕೆ ಗೊತ್ತಿಲ್ಲ ನಾನು ಯಾವಾಗಲೂ ಬಡವ. ನನ್ನ ಗೆಳೆಯರೆಲ್ಲ ಶ್ರೀಮಂತರು, ನಾನೂ ಅವರ ಹಾಗೆ ಆಗಬೇಕು.

ನೀನು ನಿಜವಾಗಿಯೂ ಬಡವನಾ? ನನಗ್ಯಾಕೋ ನೀನು ಸುಳ್ಳು ಹೇಳುತ್ತಿರುವೆ ಎಂದು ಅನಿಸುತ್ತದೆ.

ಇಲ್ಲ ನಿಜವಾಗಿಯೂ ನಾನು ಬಡವನೇ. ನನಗೆ ಮನೆಯಿಲ್ಲ, ಹೊಲ ಇಲ್ಲ, ಆಸ್ತಿ ಇಲ್ಲ.

ಸಾವಿರ ನಾಣ್ಯ ಕೊಡುತ್ತೇನೆ ನಿನ್ನ ಬೆರಳು ಕತ್ತರಿಸಿ ಕೊಡುತ್ತೀಯಾ ಹಾಗಾದರೆ?

ಇಲ್ಲ, ಸಾಧ್ಯವಿಲ್ಲ.

ಹಾಗಾದರೆ ಕೈ ಕತ್ತರಿಸಿ ಕೊಡು, ಲಕ್ಷ ನಾಣ್ಯ ಕೊಡುತ್ತೇನೆ.

ಉಹೂಂ. ಇಲ್ಲ ಇಲ್ಲ. ಅದು ಹೇಗಾದೀತು?

ಕಣ್ಣು ಕೊಡು ಮತ್ತೆ, ಐದು ಲಕ್ಷ ನಾಣ್ಯ ಕೊಡುತ್ತೇನೆ.

ಸತ್ತರೂ ಸಾಧ್ಯವಿಲ್ಲ.

ಹೋಗಲಿ, ಹತ್ತು ಲಕ್ಷ ನಾಣ್ಯ ಕೊಡುತ್ತೇನೆ, ನಿನ್ನ ಯೌವ್ವನ ಕೊಡು, ನೀನು ಹೂಂ ಎಂದರೆ ಒಂದು ಸೆಕೆಂಡಿನಲ್ಲಿ ನಿನ್ನ 80 ವರ್ಷದ ಮುದುಕನನ್ನಾಗಿ ಮಾಡುತ್ತೇನೆ.

ಈ ಮಾತು ಕೇಳುತ್ತಿದ್ದಂತೆಯೇ ಯುವಕ ಸುಮ್ಮನಾಗಿಬಿಟ್ಟ. ತಾನು ಎಷ್ಟು ಶ್ರೀಮಂತ ಎನ್ನುವುದು ಅವನಿಗೆ ಗೊತ್ತಾಗಿಬಿಟ್ಟಿತ್ತು.

ನೀವು ಯಾವಾಗ ಇನ್ನೊಬ್ಬರಂತೆ ಆಗುವ ಪ್ರಯತ್ನವನ್ನು ಬಿಟ್ಟುಬಿಡುತ್ತೀರೋ, ಆಗ ಸಮಾಧಾನ ನಿಮ್ಮನ್ನು ಆವರಿಸಿಕೊಳ್ಳುತ್ತದೆ, ಆಗ ಒಂದು ಬೆಡಗು ನಿಮ್ಮೊಳಗೆ ಒಂದಾಗುತ್ತದೆ. ಆಗ ನೀವು ಒಂದು ದಿವ್ಯವಾದ ಭವ್ಯವಾದ ಸಾಮರಸ್ಯದ ಭಾಗವಾಗುತ್ತೀರಿ, ಏಕೆಂದರೆ ನೀವು ಈಗ ಎಲ್ಲ ಬಿಕ್ಕಟ್ಟುಗಳಿಂದ ಸಂಘರ್ಷಗಳಿಂದ ಹೊರತಾಗಿದ್ದೀರಿ, ಯಾವುದನ್ನೂ ತಲುಪುವ ಹಪಹಪಿಯಿಲ್ಲ, ಯಾವುದನ್ನೂ ಹೋರಾಡಿ ಪಡೆಯುವ ಬಯಕೆಗಳಿಲ್ಲ, ಯಾವುದನ್ನೂ ನಿಮ್ಮ ಮೇಲೆ ಹಿಂಸೆಯಿಂದ, ಒತ್ತಾಯಪೂರ್ವಕವಾಗಿ ಹೇರಿಕೊಳ್ಳುವ ತವಕಗಳಿಲ್ಲ.

ಆಗ ಒಂದು ವಿಶಿಷ್ಟ ಮುಗ್ಧತೆ ನಿಮ್ಮ ಮೂಲಕ ಪ್ರತಿಫಲಿಸತೊಡಗುತ್ತದೆ. ಆ ಮುಗ್ಧತೆಯೊಳಗೆ ನೀವು ನಿಮ್ಮ ಬಗ್ಗೆ ಅಂತಃಕರಣ ಮತ್ತು ಪ್ರೀತಿಯನ್ನು ಹೊಂದಲು ಶುರುಮಾಡುತ್ತೀರಿ. ಆಗ ನೀವು ಎಷ್ಟು ಖುಶಿಯನ್ನು ಅನುಭವಿಸುತ್ತೀರಿ ಎಂದರೆ, ಅಕಸ್ಮಾತ್ ದೇವರೇ ನಿಮಗೆ ಎದುರಾಗಿ “ ನಿನಗೆ ಇನ್ನೊಬ್ಬರ ಥರ ಆಗುವ ಬಯಕೆಯಿದೆಯೆ? “ ಎಂದು ಕೇಳಿದರೆ “ ನೀನು ಹುಚ್ಚನಾ, ನಾನು ಪರಿಪೂರ್ಣ, ಇನ್ನೊಮ್ಮೆ ನನ್ನ ತಂಟೆಗೆ ಬರಬೇಡ “ ಎಂದು ದೇವರನ್ನು ದಬಾಯಿಸಿ ಬಿಡುತ್ತೀರಿ.

“ ನಾನಿರುವ ರೀತಿಯಲ್ಲಿಯೇ ನಾನು ಪರಿಪೂರ್ಣ, ನಾನು ಅನುಭವಿಸುತ್ತಿರುವುದು ಪರಿಪೂರ್ಣ ಖುಶಿ “ ಎಂದು ದೇವರನ್ನು ನೀವು ಒಪ್ಪಿಸಿದ ಕ್ಷಣದಲ್ಲಿಯೇ ನೀವು ದೇವರನ್ನು ಗೌರವಿಸುತ್ತಿದ್ದೀರಿ. ಇದನ್ನೇ ನಾವು ಪೌರ್ವಾತ್ಯರು “ಶೃದ್ಧೆ” ಎನ್ನುತ್ತೇವೆ. ಈ ಶೃದ್ಧೆ ನಿಮ್ಮಲ್ಲಿ ಹುಟ್ಟಿರುವ ಕಾರಣದಿಂದ ನಿಮ್ಮನ್ನು ನೀವು ಒಪ್ಪಿಕೊಂಡಿದ್ದೀರಿ, ನಿಮ್ಮನ್ನು ನೀವು ಒಪ್ಪಿಕೊಳ್ಳುವ ಮೂಲಕ ನೀವು, ನಿಮ್ಮ ಸೃಷ್ಟಿಕರ್ತನನ್ನು ಒಪ್ಪಿಕೊಂಡಿದ್ದೀರಿ. ನಿಮ್ಮನ್ನು ನೀವು ನಿರಾಕರಿಸುವುದೆಂದರೆ ನೀವು ನಿಮ್ಮ ಸೃಷ್ಟಿತರ್ತನನ್ನು ನಿರಾಕರಿಸಿದಂತೆ.

ನೀವು ಪಿಕಾಸೋನ ಚಿತ್ರ ನೋಡುತ್ತ, “ ಇದು ಹೀಗಿರಬೇಕಿತ್ತು, ಹಾಗಿರಬೇಕಿತ್ತು, ಇಲ್ಲಿ ಬಣ್ಣ ಗಾಢ, ಇಲ್ಲಿ ತೆಳು “ ಎಂದೆಲ್ಲ ಆರೋಪ ಮಾಡಲು ಶುರುಮಾಡಿದಿರೆಂದರೆ, ನೀವು ಪಿಕಾಸೋ ನ್ನ ನಿರಾಕರಿಸುತ್ತಿದ್ದೀರಿ. “ ನಾನು ಹೀಗಿದ್ದರೆ ಚೆನ್ನಾಗಿತ್ತು “ ಎಂದು ನಿಮಗೆ ಅನಿಸಲು ಶುರುವಾದಾಗ ನೀವು ದೇವರನ್ನು ತಿದ್ದಲು ಶುರು ಮಾಡಿದ್ದೀರಿ. ಈಗ ನೀವು ಪರೋಕ್ಷವಾಗಿ ದೇವರಿಗೆ ಏನು ಹೇಳುತ್ತಿದ್ದೀರೆಂದರೆ, “ ನೀನು ಒಬ್ಬ ದಡ್ಡ, ನಾನು ಹೀಗಿರಬೇಕಿತ್ತು ಆದರೆ ನೀನು ನನ್ನ ಹಾಗೆ ಸೃಷ್ಟಿಸಿದ್ದೀಯಾ “. ನೀವು ದೇವರ ಸೃಷ್ಟಿಯನ್ನ ಅಣಕಿಸುತ್ತಿದ್ದೀರಿ, ದೇವರ ಸೃಷ್ಟಿಯನ್ನು ಸುಧಾರಿಸುವ ಮಾತನಾಡುತ್ತಿದ್ದೀರಿ, ಇದು ಸಾಧ್ಯವಿಲ್ಲದ ವಿಷಯ.

ದೇವರನ್ನು ತಿದ್ದಲು ನೀವು ಮಾಡುತ್ತಿರುವ ಸಂಘರ್ಷ ವ್ಯರ್ಥ ಪ್ರಯಾಸ, ಸೋಲು ನಿಮಗೆ ಕಟ್ಟಿಟ್ಟ ಬುತ್ತಿ. ಭಗವಂತನ ಸೃಷ್ಟಿಯನ್ನು ನೀವು ಹೆಚ್ಚು ಹೆಚ್ಚು ಆಕ್ಷೇಪಿಸಿದಂತೆ, ಹೆಚ್ಚು ಹೆಚ್ಚು ವೈಫಲ್ಯ ನಿಮ್ಮದಾಗುತ್ತ ಹೋಗುತ್ತದೆ. ಈ ಸೋಲು ನಿಮ್ಮನ್ನು ನಿರ್ವೀರ್ಯರನ್ನಾಗಿಸುತ್ತದೆ ಮತ್ತು ನಿರ್ವೀರ್ಯತೆಯೊಳಗಿಂದ ಅಂತಃಕರಣ, ಪ್ರೀತಿ ಹುಟ್ಟುವುದು ಹೇಗೆ ಸಾಧ್ಯ?

ಪ್ರೀತಿ, ಅಂತಃಕರಣ ಹುಟ್ಟುವುದು ನೀವು ನಿಮ್ಮ ಅಸ್ತಿತ್ವದಲ್ಲಿ ಪರಿಪೂರ್ಣವಾಗಿ ನೆಲೆಯಾದಾಗ ಮಾತ್ರ, “ ಹೌದು ನಾನಿರುವುದೇ ಹೀಗೆ, ನನಗೆ ನನ್ನದಾಗಿಸಿಕೊಳ್ಳಬೇಕೆನಿಸುವ ಯಾವ ಮಾದರಿಗಳಿಲ್ಲ “ ಎಂದು ಶೃದ್ಧೆಯಲ್ಲಿ ಒಂದಾಗಲು ತೊಡಗಿದ ಕ್ಷಣಗಳಲ್ಲಿಯೇ ಪರಿಪೂರ್ಣತೆ ನಿಮ್ಮನ್ನು ಅಪ್ಪಿಕೊಳ್ಳುತ್ತದೆ.

Source: A sudden clash of thunder | Osho Rajaneesh

Leave a Reply