ಚಹಾ ಅಂಗಡಿಯವಳ ಝೆನ್ ದೃಷ್ಟಾಂತ ಕಥೆ : ಓಶೋ ವ್ಯಾಖ್ಯಾನ

ಬದುಕಿಗೆ ಯಾವ ಉದ್ದೇಶವೂ ಇಲ್ಲ , ಅದು ತಾನೇ ಒಂದು ಉದ್ದೇಶ. ಅದು ಯಾವುದೋ ಒಂದು ಉದ್ದೇಶದ ಸಾಧನೆಗಾಗಿರುವ ದಾರಿ ಅಲ್ಲ, ಬದುಕೇ ಒಂದು ಉದ್ದೇಶ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ಝೆನ್ ಮಾಸ್ಟರ್ ಹೈಕುನ್ ತನ್ನ ಶಿಷ್ಯರಿಗೆ, ಆಶ್ರಮದ ಎದುರು ಚಹಾ ಅಂಗಡಿ ಇಟ್ಟುಕೊಂಡಿದ್ದ ಹೆಂಗಸಿನ ಝೆನ್ ತಿಳುವಳಿಕೆಯ ಬಗ್ಗೆ ಮೇಲಿಂದ ಮೇಲೆ ವರ್ಣಿಸಿ ಹೇಳುತ್ತಿದ್ದ.

ಮಾಸ್ಟರ್ ಮಾತನ್ನು ಶಿಷ್ಯರು ನಂಬುತ್ತಿರಲಿಲ್ಲ, ತಾವೇ ಪರೀಕ್ಷೆ ಮಾಡಲು ಮುಂದಾಗುತ್ತಿದ್ದರು.

ತನ್ನ ಅಂಗಡಿಗೆ ಬಂದ ಸನ್ಯಾಸಿಗಳಿಗೆ, ಆ ಹೆಣ್ಣು ಮಗಳು ಪ್ರಶ್ನೆ ಮಾಡುತ್ತಿದ್ದಳು.

“ ನೀವು ಇಲ್ಲಿ ಬಂದಿರುವುದು ಚಹಾ ಕುಡಿಯಲಿಕ್ಕೋ ಅಥವಾ ನನ್ನ ಝೆನ್ ಜ್ಞಾನ ಪರೀಕ್ಷೆ ಮಾಡಲಿಕ್ಕೋ ? “

ಚಹಾ ಕುಡಿಯಲಿಕ್ಕೆ ಎಂದವರಿಗೆ ರುಚಿಯಾದ ಚಹಾ ಮಾಡಿ ಕುಡಿಸುತ್ತಿದ್ದಳು.

ಝೆನ್ ಬಗ್ಗೆ ಚರ್ಚೆ ಮಾಡಬೇಕು ಎಂದವರನ್ನು, ಪರದೆಯ ಹಿಂದೆ ಬರಲು ಕೇಳಿಕೊಳ್ಳುತ್ತಿದ್ದಳು. ಅವರು ಪರದೆಯ ಹಿಂದೆ ಬಂದೊಡನೆ ಪೊರಕೆ ತೆಗೆದುಕೊಂಡು ಸರಿಯಾಗಿ ಬಾರಿಸಲು ಶುರು ಮಾಡುತ್ತಿದ್ದಳು.

ಹತ್ತರಲ್ಲಿ ಒಂಭತ್ತು ಜನ ಅವಳ ಪೊರಕೆ ಏಟಿನ ರುಚಿ ಉಂಡಿದ್ದಾರೆ.

ಅಧ್ಯಾತ್ಮದ ಕುರಿತಾದ ಚರ್ಚೆಯೇ ಅಸಂಗತ. ಗಾಳಿಯಲ್ಲಿ ನರ್ತಿಸುತ್ತಿರುವ ಗುಲಾಬಿ ಹೂವು, ಎಷ್ಟು ಸೂಕ್ಷ್ಮ ಆದರೂ ಎಷ್ಟು ಶಕ್ತಿಶಾಲಿ, ಎಷ್ಟು ಮೃದು ಆದರೂ ಬಲಿಷ್ಠ ಬೀಸುಗಾಳಿಯೊಂದಿಗೆ ಹೋರಾಡುತ್ತಿದೆ. ಅದರ ಬದುಕು ಕೆಲವೇ ಕೆಲವು ಕ್ಷಣಗಳದ್ದು ಆದರೂ ಎಂಥ ಆತ್ಮವಿಶ್ವಾಸ !ಯಾವತ್ತಾದರೂ ನೀವು ತಳಮಳದಲ್ಲಿರುವ ಗುಲಾಬಿ ಹೂವನ್ನು ನೋಡಿದ್ದೀರಾ? ಎಂಥ ಆತ್ಮವಿಶ್ವಾಸ ! ಎಂಥ ಪ್ರಖರ ಆತ್ಮವಿಶ್ವಾಸ ! ತನ್ನ ಬದುಕು ತೀರುವುದೇ ಇಲ್ಲ, ಸದಾ ಮುಂದುವರೆಯುತ್ತಲೇ ಇರುತ್ತದೆ ಎನ್ನುವ ನಂಬುಗೆ. ಗುಲಾಬಿ ಬದುಕುತ್ತಿದೆ, ಗಾಳಿಯೊಂದಿಗೆ ಕುಣಿದಾಡುತ್ತ, ಗಾಳಿಯೊಂದಿಗೆ ಪಿಸುಗುಡುತ್ತ, ತನ್ನ ಪರಿಮಳವನ್ನು ಸುತ್ತೆಲ್ಲ ಹರಡುತ್ತ — ಆದರೆ ನೀನು ಆ ಹೂವಿನ ಎದುರು ಪ್ರಶ್ನೆ ಹೊತ್ತು ನಿಂತಿದ್ದೀಯ,

“ ಈ ಎಲ್ಲದರ ಉದ್ದೇಶ ಏನು? “

ನೀವು ಒಬ್ಬ ಹೆಣ್ಣನ್ನು ಪ್ರೀತಿಸುತ್ತಿದ್ದೀರ, ಆದರೆ ಅದೇ ಪ್ರಶ್ನೆ ಹೊತ್ತು, “ ಈ ಎಲ್ಲದರ ಉದ್ದೇಶ ಏನು? “ , ನಿಮ್ಮ ಪ್ರೇಮಿಯ ಕೈ ನಿಮ್ಮ ಕೈಯ್ಯಲ್ಲಿದೆ, ಅವಳು ತನ್ನ ಗಲ್ಲ ನಿಮ್ಮ ತುಟಿಯವರೆಗೆ ತಂದಿದ್ದಾಳೆ, ಆದರೆ ನೀವು ಇನ್ನೂ ಪ್ರಶ್ನೆ ಮಾಡುತ್ತಿದ್ದೀರ, “ ಈ ಎಲ್ಲದರ ಉದ್ದೇಶ ಏನು? “ ಇದು ಬದುಕಿಗೆ ನೀವು ಮಾಡುತ್ತಿರುವ ಅಪಮಾನವಲ್ಲವೆ? ಬದುಕಿಗೇನಾದರೂ ಸಿಟ್ಟು ಬಂದು ಅದು ನಿಮ್ಮನ್ನು ಬಿಟ್ಟು ಹೋಗಿಬಿಟ್ಟರೆ, ಆಗ ಯಾರನ್ನ ಪ್ರಶ್ನಿಸುತ್ತೀರಿ?

ಒಂದು ಮಾತನ್ನ ಸ್ಪಷ್ಟವಾಗಿ ತಿಳಿದುಕೊಳ್ಳಿ, “ ಬದುಕಿಗೆ ಯಾವ ಉದ್ದೇಶವೂ ಇಲ್ಲ , ಅದು ತಾನೇ ಒಂದು ಉದ್ದೇಶ. ಅದು ಯಾವುದೋ ಒಂದು ಉದ್ದೇಶದ ಸಾಧನೆಗಾಗಿರುವ ದಾರಿ ಅಲ್ಲ, ಬದುಕೇ ಒಂದು ಉದ್ದೇಶ. ಆಗಸದಲ್ಲಿ ಹಾರುತ್ತಿರುವ ಹಕ್ಕಿ,ಗಾಳಿಗೆ ತೂಗುತ್ತಿರುವ ಹೂವು, ಮುಂಜಾನೆ ಕಾಣಿಸಿಕೊಳ್ಳುವ ಸೂರ್ಯ, ರಾತ್ರಿ ಮಿನುಗುವ ನಕ್ಷತ್ರಗಳು, ಹೆಣ್ಣನ್ನು ಪ್ರೇಮಿಸುತ್ತಿರುವ ಗಂಡು, ರಸ್ತೆಯಲ್ಲಿ ಆಡುತ್ತಿರುವ ಮಗು , ನೀವು ಈಗ ಕುಡಿಯುತ್ತಿರುವ ಬಿಸಿ ಬಿಸಿ ಚಹಾ………. ಈ ಎಲ್ಲವೂ ಬದುಕಿನ ಅಭಿವ್ಯಕ್ತಿಯೇ.

ಯಾವ ಉದ್ದೇಶವೂ ಇಲ್ಲ, ಬದುಕು ತನ್ನ ಅಸ್ತಿತ್ವವನ್ನು ಸಂಭ್ರಮಿಸುತ್ತಿದೆ, ಬದುಕಿನ ಶಕ್ತಿ ಉಕ್ಕಿ ಹರಿಯುತ್ತಿದೆ, ಉನ್ಮತ್ತವಾಗಿ ನರ್ತಿಸುತ್ತಿದೆ ಯಾವ ಉದ್ದೇಶವಿಲ್ಲದೆ. ಇದು ಪ್ರದರ್ಶನ ಅಲ್ಲ, ಇದು ವ್ಯವಹಾರ ಅಲ್ಲ.

ಬದುಕು ಒಂದು ಲವ್ ಅಫೇರ್, ಬದುಕು ಒಂದು, ಕವಿತೆ, ಬದುಕು ಒಂದು ಸಂಗೀತ. ಇಂಥ ಅಪರೂಪದ ಎದುರು “ ಈ ಎಲ್ಲದರ ಉದ್ದೇಶ ಏನು? “ ಎನ್ನುವ ಮೂರ್ಖ ಪ್ರಶ್ನೆ ಇಡಬೇಡಿ. ನೀವು ಇಂಥದೊಂದು ಪ್ರಶ್ನೆ ಕೇಳಿದ ಕ್ಷಣದಲ್ಲಿಯೇ ಬದುಕಿನಿಂದ ಹೊರತಾಗುತ್ತೀರಿ. ಬದುಕನ್ನ ಯಾವ ಅಧ್ಯಾತ್ಮಿಕ ಪ್ರಶ್ನೆಗಳಿಂದ ಸೇರಿಕೊಳ್ಳುವುದು ಸಾಧ್ಯವಿಲ್ಲ, ಅಧ್ಯಾತ್ಮದ ಪ್ರಶ್ನೆಗಳನ್ನು ಬದಿಗಿಟ್ಟು ಬದುಕನ್ನ ನೇರವಾಗಿ ಪ್ರವೇಶಿಸಬೇಕು, ಸಂಭ್ರಮಿಸಬೇಕು, ಆಗ ಯಾವ ಉತ್ತರದ ಅಪೇಕ್ಷೆಯೂ ಉಳಿದುಕೊಳ್ಳುವುದಿಲ್ಲ, ಎಲ್ಲ ಪ್ರಶ್ನೆಗಳೂ ಕಳಚಿಕೊಳ್ಳುತ್ತವೆ.

Leave a Reply