ಧ್ಯಾನದ ದಾರಿ : ಜಿಡ್ಡು ಚಿಂತನೆ

ಮನಸ್ಸು ನಿಶ್ಚಲವಾಗಿದ್ದಾಗ ಮಾತ್ರ ಗ್ರಹಿಕೆ ಸಾಧ್ಯ, ಮತ್ತು ತನ್ನ ಬಗ್ಗೆ ಅರಿವು ಸಾಧ್ಯವಾಗದವರೆಗೆ ಮನಸ್ಸಿಗೆ ನಿಶ್ಚಲವಾಗಿರುವುದು ಸಾಧ್ಯವಿಲ್ಲ. ಈ ಅರಿವು ರಹಿತ ಸ್ಥಿತಿಯನ್ನ ಯಾವ ಶಿಸ್ತಿನಿಂದ , ಯಾವ ಹಳೆಯ ಅಥವಾ ಆಧುನಿಕ ಅಥಾರಿಟಿಯನ್ನ ಅನುಸರಿಸುವುದರಿಂದ ಹೋಗಲಾಡಿಸುವುದು ಸಾಧ್ಯವಿಲ್ಲ. ನಂಬಿಕೆ ಕೇವಲ ಪ್ರತಿರೋಧ ಮತ್ತು ಪ್ರತ್ಯೇಕತೆಯನ್ನ ಹುಟ್ಟುಹಾಕುತ್ತದೆ ಮತ್ತು ಪ್ರತ್ಯೇಕತೆಯ ಹಾಜರಾತಿಯಲ್ಲಿ ಪ್ರಶಾಂತತೆ ನೆಲೆಯಾಗುವ ಸಾಧ್ಯತೆಯೇ ಇಲ್ಲ… ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ: ಚಿದಂಬರ ನರೇಂದ್ರ

ಸತ್ಯ ಎನ್ನುವುದು ಅಂತಿಮವೆ ? (Final), ನಿಖರ ಪರಿಪೂರ್ಣವೆ? (Absolute), ಯಾವತ್ತೂ ಬದಲಾಗದ್ದೆ? (Fixed). ನಾವು ಸತ್ಯವೆಂದರೆ ನಿಖರ ಪರಿಪೂರ್ಣ ಎಂದು ನಂಬಲು ಬಯಸುತ್ತೇವೆ, ಹಾಗೆ ನಂಬಿದಾಗ ಮಾತ್ರ ನಾವು, ಸತ್ಯದ ಒಳಗೆ ಆಶ್ರಯವನ್ನ ಬಯಸಬಹುದು. ನಾವು ಸತ್ಯವನ್ನ ಶಾಶ್ವತವಾದದ್ದು ಎಂದು ನಂಬಲು ಬಯಸುತ್ತೇವೆ, ಹಾಗೆ ನಂಬಿದಾಗ ಮಾತ್ರ ನಾವು ಸತ್ಯಕ್ಕೆ ಅಂಟಿಕೊಳ್ಳಬಹುದು, ಜೋತು ಬೀಳಬಹುದು, ಅದರಲ್ಲಿ ನಮ್ಮ ಖುಶಿಯನ್ನ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು. ಆದರೆ ಸತ್ಯ ನಿಖರ ಪರಿಪೂರ್ಣವೆ? ನಿರಂತರವೆ? ಮತ್ತೆ ಮತ್ತೆ ಅನುಭವಿಸಬಹುದಾದಂಥದ್ದೆ ? ಅದೇ ಅನುಭವವನ್ನು ಮತ್ತೆ ಮತ್ತೆ ಹೊಂದುವುದೆಂದರೆ ನೆನಪನ್ನು ಪೋಷಿಸುವುದಲ್ಲವೆ?

ನನ್ನ ಪ್ರಶಾಂತ ಸ್ಥಿತಿಯಲ್ಲಿ ನಾನು ಒಂದು ರೀತಿಯನ್ನ ಸತ್ಯವನ್ನ ಅನುಭವಿಸಬಹುದು, ಆದರೆ ನೆನಪಿನ ಸಹಾಯದಿಂದ ನಾನು ಈ ಆನುಭವಕ್ಕೆ ಅಂಟಿಕೊಂಡು ಅದನ್ನು ಅಬ್ಸಲ್ಯೂಟ್ ಮಾಡಿಕೊಂಡರೆ, ಸ್ಥಿರವಾಗಿಸಿಕೊಂಡರೆ, ಅದು ಸತ್ಯವೆ? ಸತ್ಯ ಎನ್ನುವುದು ನೆನಪುಗಳ ನಿರಂತರ ಪೋಷಣೆಯೆ? ಅಥವಾ ಸತ್ಯ ಎನ್ನುವುದು ಮೈಂಡ್ ಪರಿಪೂರ್ಣವಾಗಿ ಸ್ಥಿರ (utterly still) ವಾಗಿದ್ದಾಗ ಮಾತ್ರ ಲಭ್ಯವಾಗುವ ಸಂಗತಿಯೆ?

ಯಾವಾಗ ಮೈಂಡ್, ನೆನಪುಗಳ ಜಾಲದಲ್ಲಿ ಸಿಲುಕಿರುವುದಿಲ್ಲವೋ, ಗುರುತಿಸುವಿಕೆಯ ಕೇಂದ್ರ ಉದ್ದೇಶಕ್ಕಾಗಿ ನೆನಪುಗಳನ್ನು ಪೋಷಿಸುವುದಿಲ್ಲವೋ, ಆದರೆ ನಾನು, ನನ್ನ ಸಂಬಂಧಗಳಲ್ಲಿ, ನನ್ನ ಕ್ರಿಯೆಗಳಲ್ಲಿ, ನಾನು ಹೇಳುತ್ತಿರುವ ಎಲ್ಲದರ ಬಗ್ಗೆ , ನಾನು ಮಾಡುತ್ತಿರುವ ಎಲ್ಲದರ ಬಗ್ಗೆ ಅರಿವು ಹೊಂದುತ್ತ, ಎಲ್ಲದರ ಸತ್ಯವನ್ನ ಆಯಾ ಕ್ಷಣಗಳಲ್ಲಿ ಅದು ಇರುವ ಹಾಗೆ ಗಮನಿಸುತ್ತಿರುವಾಗ ನಮಗೆ ಸತ್ಯದ ಅನುಭವವಾಗುತ್ತದೆಯೆ? ಇದು ಧ್ಯಾನದ ಹಾದಿಯಲ್ಲವೆ? ಮನಸ್ಸು ನಿಶ್ಚಲವಾಗಿದ್ದಾಗ ಮಾತ್ರ ಗ್ರಹಿಕೆ ಸಾಧ್ಯ, ಮತ್ತು ತನ್ನ ಬಗ್ಗೆ ಅರಿವು ಸಾಧ್ಯವಾಗದವರೆಗೆ ಮನಸ್ಸಿಗೆ ನಿಶ್ಚಲವಾಗಿರುವುದು ಸಾಧ್ಯವಿಲ್ಲ. ಈ ಅರಿವು ರಹಿತ ಸ್ಥಿತಿಯನ್ನ ಯಾವ ಶಿಸ್ತಿನಿಂದ , ಯಾವ ಹಳೆಯ ಅಥವಾ ಆಧುನಿಕ ಅಥಾರಿಟಿಯನ್ನ ಅನುಸರಿಸುವುದರಿಂದ ಹೋಗಲಾಡಿಸುವುದು ಸಾಧ್ಯವಿಲ್ಲ. ನಂಬಿಕೆ ಕೇವಲ ಪ್ರತಿರೋಧ ಮತ್ತು ಪ್ರತ್ಯೇಕತೆಯನ್ನ ಹುಟ್ಟುಹಾಕುತ್ತದೆ ಮತ್ತು ಪ್ರತ್ಯೇಕತೆಯ ಹಾಜರಾತಿಯಲ್ಲಿ ಪ್ರಶಾಂತತೆ ನೆಲೆಯಾಗುವ ಸಾಧ್ಯತೆಯೇ ಇಲ್ಲ.

ಪ್ರಶಾಂತತೆ ಸಾಧ್ಯವಾಗುವುದು ನಾನು ನನ್ನ ಬಗೆಗಿನ ಎಲ್ಲ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಂಡಾಗ, “ನನ್ನನ್ನು” ಸಂಯೋಜಿಸಿರುವ ನನ್ನೊಳಗೆ ಪರಸ್ಪರ ಸಂಘರ್ಷದಲ್ಲಿರುವ ಹಲವಾರು ಘಟಕಗಳನ್ನ ಅರ್ಥಮಾಡಿಕೊಂಡಾಗ. ಇದು ಕಠಿಣ ಕೆಲಸವಾಗಿರುವುದರಿಂದ, ನಾವು ಇತರರಿಂದ ಹಲವಾರು ತಂತ್ರಗಳನ್ನ ಕಲಿಯಬಯಸುತ್ತೇವೆ ಮತ್ತು ಇಂಥ ತಂತ್ರಗಳನ್ನ ಧ್ಯಾನ ಎಂದು ಗುರುತಿಸುತ್ತೇವೆ. ಮನಸ್ಸು ಮಾಡುವ ಇಂಥ ತಂತ್ರಗಳನ್ನ ಧ್ಯಾನ ಎನ್ನುವುದು ತಪ್ಪು. ಸ್ವಂತದ ಬಗ್ಗೆ ತಿಳುವಳಿಕೆಯನ್ನ ಹೊಂದುವ ಪ್ರಕ್ರಿಯೆಯ ಮೊದಲ ಹೆಜ್ಜೆಯೇ ಧ್ಯಾನ, ಮತ್ತು ಇಂಥ ಧ್ಯಾನದ ಹೊರತಾಗಿ ಸ್ವಂತದ ಬಗ್ಗೆಯ ಯಾವ ಅರಿವು ಸಾಧ್ಯವಿಲ್ಲ.

Leave a Reply