ಮುಕ್ತರಾಗುವುದೆಂದರೆ… । ಓಶೋ ವ್ಯಾಖ್ಯಾನ

ಯಾರನ್ನೂ ಬಲವಂತದಿಂದ ಈ ಜಗತ್ತಿನ ಬದುಕಿನಿಂದ ಬೇರೆ ಮಾಡಬಾರದು, ಹಾಗೆ ಮಾಡಿದಾಗ ಅವರು ಜಗತ್ತಿನಿಂದ ಬೇರೆಯಾಗುವುದಿಲ್ಲ, ಇನ್ನೂ ಗಟ್ಟಿಯಾಗಿ ಜಗತ್ತಿಗೆ ಅಂಟಿಕೊಳ್ಳುತ್ತಾರೆ. ಜಗತ್ತಿನಿಂದ ಬೇರೆಯಾಗುವುದು ಕತ್ತರಿಸಿಕೊಳ್ಳುವುದರ ಮೂಲಕ ಅಲ್ಲ, ಮುಕ್ತರಾಗುವ ಮೂಲಕ… | ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ಜಗತ್ತಿನಿಂದ ಕತ್ತರಿಸಿಕೊಂಡು ಬೇರೆಯಾಗಬೇಕಿಲ್ಲ, ಜಗತ್ತಿನಿಂದ ಮುಕ್ತರಾಗಬೇಕು, ಸ್ವತಂತ್ರರಾಗಬೇಕು. ಜಗತ್ತಿನಿಂದ ಕತ್ತರಿಸಿಕೊಳ್ಳುವುದು, ಜಗತ್ತಿನಿಂದ ಮುಕ್ತರಾಗುವುದು ಎರಡೂ ಬೇರೆ ಬೇರೆ ಸಂಗತಿಗಳು. ಕತ್ತರಿಸಿಕೊಳ್ಳುವುದು ಎಂದರೆ ಇನ್ನೂ ಹಣ್ಣಾಗದ ಕಾಯಿಯನ್ನು ಗಿಡದಿಂದ ಕಿತ್ತು ಬೇರೆ ಮಾಡುವುದು, ಮುಕ್ತರಾಗುವುದು ಎಂದರೆ ಪೂರ್ತಿಯಾಗಿ ಪಕ್ವವಾದ ಹಣ್ಣು ತಾನೇ ತಾನಾಗಿ ಮರದಿಂದ ಕಳಚಿ ಬೀಳುವುದು. ಹೊರಗಿನಿಂದ ನೋಡಿದಾಗ ಈ ಎರಡೂ ಪ್ರಕ್ರಿಯೆಗಳೂ ಒಂದೇ ತೆರನಾಗಿ ಕಾಣಿಸುತ್ತವೆ, ಎರಡರಲ್ಲೂ ಫಲ ಮರದಿಂದ ಬೇರೆಯಾಗಿದೆ. ಆದರೆ ಈ ಎರಡರಲ್ಲೂ ಒಂದು ಮೂಲಭೂತ ವ್ಯತ್ಯಾಸವಿದೆ. ಒಂದು ಮರದಿಂದ ಕಾಯಿಯನ್ನು ಕಿತ್ತಾಗ, ಆ ಕಾಯಿಯಲ್ಲಿ ಮರದಿಂದ ಬೇರೆಯಾದ ನೋವು ಉಳಿದುಕೊಂಡಿರುತ್ತದೆ ಹಾಗು ಮರದಲ್ಲಿಯೂ ಕಾಯಿಯನ್ನು ತನ್ನಿಂದ ಬೇರ್ಪಡಿಸಿದ ಗಾಯ ಮಾಸಿ ಹೋಗಿರುವುದಿಲ್ಲ. ಆದರೆ ಪಕ್ವವಾದ ಹಣ್ಣನ್ನು ಮರದಿಂದ ಕೀಳುವ ಅವಶ್ಯಕತೆಯಿಲ್ಲ, ಅದು ತಾನೇ ತಾನಾಗಿ ಮರದಿಂದ ಕಳಚಿಕೊಳ್ಳುತ್ತದೆ ಯಾವ ನೋವು, ಯಾವ ಗಾಯಗಳಿಲ್ಲದೆ, ಮರದ ಜೊತೆ ಇನ್ನೂ ಸ್ವಲ್ಪ ದಿನ ಬದುಕುವ ಬಯಕೆಗಳಿಲ್ಲದೆ. ಹಣ್ಣು ಪಕ್ವವಾದಾಗ, ಮರ ತನ್ನ ಕರ್ತವ್ಯವನ್ನ ಪೂರ್ಣ ಮುಗಿಸಿದಂತೆ ಹಾಗಾಗಿ ಮರದಲ್ಲಿಯೂ ಕೂಡ ಹಣ್ಣು ತನ್ನಿಂದ ಬೇರೆಯಾದ ಕುರಿತಾಗಿ ಯಾವ ನೋವೂ ಇಲ್ಲ. ಪಕ್ವವಾದ ಹಣ್ಣು ಮರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತ ಹೃತ್ಪೂರ್ವಕವಾಗಿ, ಮರದಿಂದ ಬೀಳ್ಕೊಡುಗೆಯನ್ನ ಪಡೆಯುತ್ತದೆ. ಹಣ್ಣು ಬೇರ್ಪಟ್ಟ ಮೇಲೆ ಮರವೂ ಹಗುರಾಗುತ್ತದೆ ಯಾವ ನೋವನ್ನೂ ತನ್ನೊಳಗೆ ಉಳಿಸಿಕೊಳ್ಳದಂತೆ.

ಯಾರನ್ನೂ ಬಲವಂತದಿಂದ ಈ ಜಗತ್ತಿನ ಬದುಕಿನಿಂದ ಬೇರೆ ಮಾಡಬಾರದು, ಹಾಗೆ ಮಾಡಿದಾಗ ಅವರು ಜಗತ್ತಿನಿಂದ ಬೇರೆಯಾಗುವುದಿಲ್ಲ, ಇನ್ನೂ ಗಟ್ಟಿಯಾಗಿ ಜಗತ್ತಿಗೆ ಅಂಟಿಕೊಳ್ಳುತ್ತಾರೆ. ಜಗತ್ತಿನಿಂದ ಬೇರೆಯಾಗುವುದು ಕತ್ತರಿಸಿಕೊಳ್ಳುವುದರ ಮೂಲಕ ಅಲ್ಲ, ಮುಕ್ತರಾಗುವ ಮೂಲಕ. ಬಲವಂತದಿಂದ ನೀವು ನಿಮ್ಮನ್ನು ಜಗತ್ತಿನಿಂದ ಕತ್ತರಿಸಿಕೊಳ್ಳುವಿರಾದರೆ, ಆಮೇಲೆ ಏನು ಮಾಡುವಿರಿ? ಎಲ್ಲಿಗೆ ಹೋಗುವಿರಿ? ನಿಮಗೆ ಹೆಂಡತಿ (ಗಂಡ) ಮಕ್ಕಳು, ಅಂಗಡಿಯ ವ್ಯಾಪಾರ ಎಲ್ಲ ಇರುವಾಗ, ಈ ಎಲ್ಲವನ್ನು ಬಿಟ್ಟು ಎಲ್ಲಿಗೆ ಹೋಗುವಿರಿ? ನೀವು ಬೇರೆಲ್ಲಿಯಾದರೂ ಹೋಗಬಹುದು ಆದರೆ ಆ ಅಂಗಡಿಯ ಮಾಲಿಕ ನಿಮ್ಮೊಳಗೆ ಉಳಿದುಬಿಟ್ಟಿದ್ದರೆ, ನೀವು ಎಲ್ಲಿ ಹೋದರೂ ಒಂದು ಹೊಸ ಅಂಗಡಿಯನ್ನ ಓಪನ್ ಮಾಡುತ್ತೀರಿ, ಅದು ಅಧ್ಯಾತ್ಮದ ಜಗತ್ತು ಆಗಿದ್ದರೂ ಅದು ಅಂಗಡಿಯೇ, ಯಾವ ವ್ಯತ್ಯಾಸವೂ ಇಲ್ಲ. ನೀವು ಈಗಲೂ ಅಂಗಡಿಯ ಮಾಲಿಕರೇ, ಮೊದಲು ಅಕ್ಕಿ ಬೇಳೆ ಮಾರುತ್ತಿದ್ದವರು ಈಗ ಅಧ್ಯಾತ್ಮದ ಸರಕನ್ನು ವ್ಯಾಪಾರ ಮಾಡುತ್ತಿದ್ದೀರಿ, ಯಾವ ವ್ಯತ್ಯಾಸವೂ ಇಲ್ಲ.

ಹೆಣ್ಣಿನ (ಅಥವಾ ಗಂಡಿನ) ಕುರಿತಾದ ಆಕರ್ಷಣೆ ನಿಮ್ಮೊಳಗೆ ಉಳಿದುಬಿಟ್ಟಿದ್ದರೆ, ನಿಮ್ಮ ಹೆಂಡತಿಯಿಂದ (ಅಥವಾ ಗಂಡನಿಂದ) ಬೇರೆಯಾಗಿ ಹೋಗುವುದು ನಿಮಗೆ ಯಾವ ಸಹಾಯವನ್ನೂ ಮಾಡುವುದಿಲ್ಲ, ಬೇರೆ ಹೆಣ್ಣು (ಅಥವಾ ಗಂಡು) ನಿಮ್ಮ ಆಕರ್ಷಣೆಯ ಕೇಂದ್ರವಾಗಬಹುದು. ನಿಮ್ಮ ಮನಸ್ಸಿನಲ್ಲಿ ಹಣದ ಕುರಿತಾದ ಆಕರ್ಷಣೆ ಉಳಿದುಕೊಂಡು ಬಿಟ್ಟಿದ್ದರೆ, ನೀವು ಹಣವನ್ನು ತ್ಯಜಿಸಿದರೂ, ಬೇರೆ ಅರ್ಥದಲ್ಲಿ ನಾಣ್ಯಗಳನ್ನು ಕೂಡಿಡಲು ಶುರು ಮಾಡುವಿರಿ. ಈ ಬಾರಿ ನೀವು ತ್ಯಾಗವನ್ನ, ಸಂಯಮವನ್ನ ಸಂಗ್ರಹಿಸಲು ಶುರು ಮಾಡಬಹುದು, ಇವು ಕೂಡ ಒಂದು ಅರ್ಥದಲ್ಲಿ ನಾಣ್ಯಗಳೇ, ಯಾವ ವ್ಯತ್ಯಾಸವೂ ಇಲ್ಲ. ಕೂಡಿಡುವ ಅಹಂಕಾರ ನಿಮ್ಮೊಳಗೆ ಉಳಿದುಕೊಂಡರೆ, ನೀವು ಬೇರೆ ಬೇರೆ ಸಂಗತಿಗಳನ್ನ ಕೂಡಿಡುತ್ತ ಹೋಗುತ್ತೀರಿ. ಆದ್ದರಿಂದಲೇ ನಾನು ಹೇಳುತ್ತಿರುವುದು ಜಗತ್ತಿನಿಂದ ಕತ್ತರಿಸಿಕೊಳ್ಳಬೇಡಿ ಜಗತ್ತಿನಿಂದ ಮುಕ್ತರಾಗಿ ಎಂದು.

ಈ ಜಗತ್ತಿನಲ್ಲಿ ಬದುಕುತ್ತಿರುವಾಗಲೇ ನಿಮಗೆ ಮುಕ್ತರಾಗುವುದು ಸಾಧ್ಯವಾಗುವುದಾದರೆ ಅದು ನಿಜವಾದ ಸ್ವಾತಂತ್ರ್ಯ. ನೀವು ನೀರಿನೊಳಗೆ ಕಾಲಿಡುತ್ತಿರಿ ಆದರೆ ಕಾಲುಗಳು ನೀರಿನಿಂದ ಒದ್ದೆಯಾಗುವುದಿಲ್ಲ. ನೀವು ಪದ್ಮಪತ್ರದ ಹಾಗಾಗಬೇಕು, ನೀವು ನೀರನ್ನು ಮುಟ್ಟಬಹುದು ಆದರೆ ನೀರಿಗೆ ನಿಮ್ಮನ್ನ ಮುಟ್ಟುವುದು ಸಾಧ್ಯವಾಗಬಾರದು. ನೀವು ನೀರಿನ ನಡುವೆಯೇ ಇರುವಿರಿ ಆದರೆ ನೀರಿನಿಂದ ಮುಕ್ತರಾಗಿ. ಸನ್ಯಾಸದ ನಿಜವಾದ, ಅಲ್ಟಿಮೇಟ್ ಆದ ಪರಿಕಲ್ಪನೆ ಅಟ್ಯಾಚ್ಮೆಂಟ್ ನ ತ್ಯಜಿಸುವುದಲ್ಲ, ಸನ್ಯಾಸ ಅಟ್ಯಾಚ್ಮೆಂಟ್, ನಾನ್ ಅಟ್ಯಾಚ್ಮೆಂಟ್ ಎರಡನ್ನೂ ಮೀರಿದ್ದು, ನಿಜವಾದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ನೀವು ಸಾಧಿಸಬೇಕಾಗಿರುವುದು ಇಂಥ ಸ್ವಾತಂತ್ರ್ಯವನ್ನ.

Source: Osho Rajaneesh | The Great Transcendence

1 Comment

Leave a Reply