ಮಾಳಿಗೆ ಮೇಲೆ ಒಂಟೆ! : ಓಶೋ ಹೇಳಿದ ದೃಷ್ಟಾಂತ ಕಥೆ

ಶ್ರೀಮಂತಿಕೆಯಲ್ಲಿ ಖುಷಿ ಸಿಗುವುದೇ ಆದರೆ, ಮಾಳಿಗೆಯ ಮೇಲೆ ಒಂಟೆಯೂ ಸಿಗುವುದು! ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮ್ಮೆ ಒಬ್ಬ ಪ್ರವಾಸಿ, ಝೆನ್ ಮಾಸ್ಟರ್’ ನ ಮನೆಗೆ ಬಂದ. ಅಲ್ಲಿ ಕೇವಲ ಒಂದು ಟೇಬಲ್ ಮತ್ತು ಒಂದು ಖುರ್ಚಿ ನೋಡಿದ ಪ್ರವಾಸಿಗೆ ಆಶ್ಚರ್ಯವಾಯಿತು.

ಪ್ರವಾಸಿ : ಬೇರೆ ಫರ್ನೀಚರ್ ಎಲ್ಲ ಎಲ್ಲಿ ಮಾಸ್ಟರ್ ?

ಮಾಸ್ಟರ್ : ಯಾಕೆ? ನಿನ್ನ ಫರ್ನೀಚರ್ ಎಲ್ಲಿ?

ಪ್ರವಾಸಿ : ನನ್ನ ಫರ್ನೀಚರ್ ? ನಾನು ಪ್ರವಾಸಿ, ಸುಮ್ಮನೇ ಇಲ್ಲಿಂದ ಹಾಯ್ದು ಹೋಗುತ್ತಿದ್ದೆ.

ಮಾಸ್ಟರ್ : ನಾನೂ ಅಷ್ಟೇ.

ಫಾರ್ಸಿ ಯಲ್ಲಿ ಒಂದು ಸುಂದರ ಪದವಿದೆ, “ಖಾನಾ-ಬದೋಶ್”. ಈ ಪದದ ಅರ್ಥ “ ಮನೆಯನ್ನ ತನ್ನ ಹೆಗಲ ಮೇಲೆ ಹೊತ್ತುಕೊಂಡವನು”. ಖಾನಾ ಎಂದರೆ ಮನೆ, ಬದೋಶ್ ಎಂದರೆ “ಹೆಗಲ ಮೇಲೆ”, ಹೆಗಲ ಮೇಲೆ ಮನೆಯಿರುವವನು. ಖಾನಾ ಬದೋಶ್ ಎಂದರೆ, ಸೂಫಿ, ಸನ್ಯಾಸಿ. ಮನೆ ಕಟ್ಟಬೇಡಿ ಬೇಕಾದರೆ ಒಂದು ಟೆಂಟ್ ಹಾಕಿಕೊಳ್ಳಿ. ಕರೆ ಬಂದಾಗ ಟೆಂಟ್ ಬಿಚ್ಚಿಹಾಕಿ ಹೊರಡಲು ಸಿದ್ಧರಾಗಿರಬೇಕು. ಮನೆ ಕಟ್ಟಿಕೊಂಡುಬಿಟ್ಟರೆ ಬಿಟ್ಟು ಹೊರಡುವುದು ಅಷ್ಟು ಸುಲಭವಲ್ಲ.

ಸೂಫಿ ಇಬ್ರಾಹಿಂ ಕುರಿತಾದ ಒಂದು ಕಥೆ ಇದೆ. ಮೊದಲು ಇಬ್ರಾಹಿಂ, ಬಲ್ಖ್ ನ ಚಕ್ರವರ್ತಿಯಾಗಿದ್ದವ. ಒಂದು ರಾತ್ರಿ ಅವನು ತನ್ನ ಅರಮನೆಯಲ್ಲಿ ನಿದ್ದೆ ಮಾಡುತ್ತಿದ್ದಾಗ, ಅರಮನೆಯ ಮಾಳಿಗೆಯ ಮೇಲೆ ಯಾರೋ ಓಡಾಡಿದ ಸದ್ದಾಯಿತು. ಇಬ್ರಾಹಿಂ, ಸಿಟ್ಟಿನಿಂದ ಕೂಗಿದ, “ ಯಾರು ಆ ಮೂರ್ಖ? ಕತ್ತಲೆಯಲ್ಲಿ ಮಾಳಿಗೆ ಮೇಲೆ ಓಡಾಡುತ್ತಿರುವುದು ? ಯಾರು ನೀನು ? “

“ ನಾನು ಮೂರ್ಖ ಅಲ್ಲ, ನನ್ನ ಒಂಟೆ ಕಳೆದುಹೋಗಿದೆ. ನಾನು ನನ್ನ ಒಂಟೆಯನ್ನ ಹುಡುಕುತ್ತಿದ್ದೇನೆ “ ಮಾಳಿಗೆ ಮೇಲಿದ್ದವ ಉತ್ತರಿಸಿದ.

ಇಬ್ರಾಹಿಂ, ಜೋರಾಗಿ ನಗಲು ಶುರುಮಾಡಿದ, “ ಮಾಳಿಗೆ ಮೇಲೆ ಕಳೆದು ಹೋದ ಒಂಟೆಯನ್ನು ಹುಡುಕುವವ ಮೂರ್ಖನಲ್ಲದೇ ಮತ್ತ್ಯಾರು ? ನೀನೊಬ್ಬ ಶತಮೂರ್ಖ, ಒಂಟೆ ಮಾಳಿಗೆಯನ್ನು ಹತ್ತುವುದು ಹೇಗೆ ಸಾಧ್ಯ? “

ಮಾಳಿಗೆಯ ಮೇಲಿಂದ ಉತ್ತರ ಬಂತು, “ ಇನ್ನೊಬ್ಬರನ್ನು ಮೂರ್ಖ ಎಂದು ಕರೆಯುವುದಕ್ಕಿಂತ ಮೊದಲು ಒಮ್ಮೆ ನಿನ್ನ ಬಗ್ಗೆ ಯೋಚಿಸು, ನಿನಗೆ ಹಣದಲ್ಲಿ, ಶ್ರೀಮಂತಿಕೆಯಲ್ಲಿ, ವೈನ್ ನಲ್ಲಿ ಖುಶಿ ಸಿಗುವುದು ನಿಜವಾದರೆ ಖಂಡಿತ ನನಗೆ ನನ್ನ ಒಂಟೆ ಈ ಮಾಳಿಗೆಯ ಮೇಲೆ ಸಿಗುತ್ತದೆ. “

Leave a Reply