ಕಬೀರ ಹೇಳುತ್ತಾನೆ; ಸಹಜವಾಗಿರಿ, ಸ್ವಾಭಾವಿಕವಾಗಿರಿ. ನೀವು ಸುಮ್ಮನೇ ಕುಳಿತಿರುವಾಗ, ನಿಮ್ಮೊಳಗೆ ಒಂದು ಪ್ರಾರ್ಥನೆ ಹುಟ್ಟಿಕೊಂಡರೆ, ಅದನ್ನ ಹೇಳಿಬಿಡಿ. ಯಾವ ಫಾರ್ಮಲ್ ಪ್ರಾರ್ಥನೆಯ ಅವಶ್ಯಕತೆಯೂ ಇಲ್ಲ. ನಿಮ್ಮ ಮನಸ್ಸಿನಲ್ಲಿ ಹುಟ್ಟಿಕೊಂಡಿರುವ ಪ್ರಾರ್ಥನೆಯನ್ನ ಹಾಗೇ ಹೇಳಿಬಿಡಿ , ಯಾವ ದೇವರಿಗೂ ನೀವು ನಿಮ್ಮ ಪ್ರಾರ್ಥನೆಯನ್ನ ಮೀಸಲಾಗಿಡಬೇಕಿಲ್ಲ… ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಒಬ್ಬ ಜರ್ಮನ್ ವಿದ್ವಾಂಸ, ಋಗ್ವೇದವನ್ನು ಬಾಯಿಪಾಠ ಹೇಳುತ್ತಿದ್ದ ವಯಸ್ಸಾದ ಭಾರತೀಯ ಪಂಡಿತನೊಬ್ಬನನ್ನು ಭೇಟಿಯಾಗಲು ಬಂದ. ಭಾರತೀಯ ಪಂಡಿತ ಋಗ್ವೇದವನ್ನು ಚಾಚೂ ತಪ್ಪದೇ ನಿರರ್ಗಳವಾಗಿ ಬಾಯಿಪಾಠ ಹೇಳುತ್ತಿದ್ದುದು ಅವನ ಪ್ರಸಿದ್ಧಿಗೆ ಮತ್ತು ಜರ್ಮನ್ ವಿದ್ವಾಂಸನ ಕುತೂಹಲಕ್ಕೆ ಕಾರಣವಾಗಿತ್ತು.
ಋಗ್ವೇದದ ಎರಡು ಸೂಕ್ತಿಗಳನ್ನ, (ಅವು ಋಗ್ವೇದದ ಸೂಕ್ತಿಗಳು ಎಂದು ತಿಳಿಸದೇ) ಉಲ್ಲೇಖಿಸಿದ ಜರ್ಮನ್ ಮನುಷ್ಯ, “ ಈ ಎರಡು ಸೂಕ್ತಿಗಳ ಕುರಿತಾಗಿ ನಾನು ನಿಮ್ಮೊಡನೆ ಚರ್ಚೆ ಮಾಡಬೇಕಿದೆ “ ಎಂದು ಭಾರತೀಯ ಪಂಡಿತನ ಅನುಮತಿ ಕೇಳಿದ. ಆ ಸೂಕ್ತಿಗಳನ್ನು ಕೇಳಿಸಿಕೊಂಡ ಭಾರತೀಯ ಪಂಡಿತ ಸಂಶಯ ವ್ಯಕ್ತಪಡಿಸಿದ “ ನಾನು ಈ ಎರಡು ಸೂಕ್ತಿಗಳನ್ನು ಹಿಂದೆ ಯಾವತ್ತೂ ಕೇಳೇ ಇಲ್ಲ” ಪಂಡಿತನ ಮಾತುಗಳಿಂದ ಜರ್ಮನ್ ವಿದ್ವಾಂಸನಿಗೆ ಆಶ್ಚರ್ಯವಾಯಿತು, “ನೀವು ಋಗ್ವೇದವನ್ನ ಮನನ ಮಾಡಿಕೊಂಡಿದ್ದೀರೆಂದೂ, ಪೂರ್ಣ ಋಗ್ವೇದವನ್ನ ಬಾಯಿಪಾಠ ಹೇಳಬಲ್ಲಿರಿ ಎಂದೂ ಕೇಳಿದ್ದೆ, ಆದರೆ ಋಗ್ವೇದದ ಈ ಎರಡು ಸೂಕ್ತಿಗಳ ಬಗ್ಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದೀರಿ, ಇದು ಹೇಗೆ ಸಾಧ್ಯ?” “ ಹೌದು ನಾನು ಋಗ್ವೇದವನ್ನ ಮೊದಲಿನಿಂದ ಕೊನೆಯವರೆಗೂ ಬಾಯಿಪಾಠ ಹೇಳಬಲ್ಲೆ, ಆದರೆ ನಡುವಿನ ಸೂಕ್ತಿಗಳ ಬಗ್ಗೆ ಕೇಳಿದರೆ ನನಗೆ ಕಷ್ಟ ಆಗುತ್ತದೆ, ಹಾಗೆ ನೆನಪಿಟ್ಟುಕೊಳ್ಳುವುದು ನನಗೆ ಸಾಧ್ಯವಿಲ್ಲ.” ಭಾರತೀಯ ಪಂಡಿತ ತನ್ನ ಸಮಸ್ಯೆ ಹೇಳಿಕೊಂಡ.
ಬಹಳ ಸಲ ಹೀಗಾಗುತ್ತದೆ, ನೀವು ಪೂರ್ಣ ಪಾಠವನ್ನ ಬೇಕಾದರೆ ಬಹು ಸುಲಭವಾಗಿ ಹೇಳಿಬಿಡಬಲ್ಲಿರಿ, ಏಕೆಂದರೆ ಅಲ್ಲಿ ಪ್ರಜ್ಞೆಯ ಭಾಗವಹಿಸುವಿಕೆ ಇಲ್ಲ, ನೀವು ಮಾಡುತ್ತಿರುವುದು ಕೇವಲ ಯಾಂತ್ರಿಕ ಪುನರುಚ್ಚರಣೆ. ಬಹುತೇಕ ಭಾರತೀಯ ಪುರೋಹಿತರು ಇಂಥವರೇ, ಟೇಪ್ ರಿಕಾರ್ಡರ್ ನ ಆನ್ ಮಾಡಿ ಬಿಟ್ಟಂತೆ. ಗ್ರಾಮಾಫೋನ್ ನಂತೆ. ನೀವು ಅದರ ಕಂಟೆಂಟ್ ಬಗ್ಗೆ ಪ್ರಶ್ನೆ ಮಾಡಿದರೆ, ಅವರಿಗೆ ತಾವು ಇದನ್ನ ನೂರಾರು ಬಾರಿ ಬಾಯಿಪಾಠ ಹೇಳಿರುವುದೂ ಗೊತ್ತಿರುವುದಿಲ್ಲ. ಆ ಸೂಕ್ತಿಯ ಬಗ್ಗೆ ಅವರಿಗೆ ಒಂದು ಕಾಂಟೆಕ್ಸ್ಟ್ ಲ್ಲಿ ಮಾತ್ರ ಗೊತ್ತು .
ನೀವು ಕೆಲವು ಧಾರ್ಮಿಕ ಆಚರಣೆಗಳನ್ನ ಪ್ರತಿನಿತ್ಯ ಆಚರಿಸುತ್ತೀರಿ, ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮಾಡುತ್ತೀರಿ, ಮಸಿದಿಗೆ ಹೋಗಿ ನಮಾಜ್ ಮಾಡುತ್ತೀರಿ, ಪವಿತ್ರ ಗಂಥಗಳ ಪಠಣ ಮಾಡುತ್ತೀರಿ, ಆದರೆ ಈ ಎಲ್ಲದರಲ್ಲಿ ನಿಮ್ಮ ಪ್ರಜ್ಞೆಯ ಭಾಗವಹಿಸುವಿಕೆ ಇಲ್ಲದಿದ್ದರೆ ನೀವು ಮಾಡಿರುವುದೆಲ್ಲ ವ್ಯರ್ಥ. ಇವನ್ನೆಲ್ಲ ನೀವು ಯಾಂತ್ರಿಕವಾಗಿ ಮಾಡುತ್ತಿದ್ದೀರಿ, ಈ ಎಲ್ಲವೂ ಈಗ ನಿಮ್ಮ ಹವ್ಯಾಸಗಳಾಗಿ ಪರಿವರ್ತಿತವಾಗಿವೆ. ಒಂದು ದಿನ ಒಂದು ಧಾರ್ಮಿಕ ಆಚರಣೆ ನಿಮಗೆ ಮಿಸ್ ಆಯಿತೆಂದರೆ, ನೀವು ನಿಮ್ಮ ಸಿಗರೇಟ್ ಮಿಸ್ ಮಾಡಿಕೊಂಡಷ್ಟೇ ದುಃಖ ಪಡುತ್ತೀರಿ. ಯಾವ ವ್ಯತ್ಯಾಸವೂ ಇಲ್ಲ. ಏಕೆಂದರೆ ಈ ಎಲ್ಲವನ್ನೂ ನೀವು ಯಾಂತ್ರಿಕವಾಗಿ ಮಾಡುತ್ತಿದ್ದೀರಿ. ಇಂಥ ಆಚರಣೆಗಳು ನಿಮ್ಮ ಅಸ್ತಿತ್ವದ ವಿಕಾಸಕ್ಕೆ ಯಾವ ಸಹಾಯವನ್ನೂ ಮಾಡುವುದಿಲ್ಲ.
ಕಬೀರ ಹೇಳುತ್ತಾನೆ; ಸಹಜವಾಗಿರಿ, ಸ್ವಾಭಾವಿಕವಾಗಿರಿ. ನೀವು ಸುಮ್ಮನೇ ಕುಳಿತಿರುವಾಗ, ನಿಮ್ಮೊಳಗೆ ಒಂದು ಪ್ರಾರ್ಥನೆ ಹುಟ್ಟಿಕೊಂಡರೆ, ಅದನ್ನ ಹೇಳಿಬಿಡಿ. ಯಾವ ಫಾರ್ಮಲ್ ಪ್ರಾರ್ಥನೆಯ ಅವಶ್ಯಕತೆಯೂ ಇಲ್ಲ. ನಿಮ್ಮ ಮನಸ್ಸಿನಲ್ಲಿ ಹುಟ್ಟಿಕೊಂಡಿರುವ ಪ್ರಾರ್ಥನೆಯನ್ನ ಹಾಗೇ ಹೇಳಿಬಿಡಿ , ಯಾವ ದೇವರಿಗೂ ನೀವು ನಿಮ್ಮ ಪ್ರಾರ್ಥನೆಯನ್ನ ಮೀಸಲಾಗಿಡಬೇಕಿಲ್ಲ.
ಒಮ್ಮೆ ಹೀಗಾಯಿತು…..
ಮಾಸ್ಟರ್ ಹೈಕೂಯಿನ್ ತನ್ನ ಬಹು ದಿನಗಳ ಪ್ರಯಾಣದ ನಂತರ ಆಶ್ರಮಕ್ಕೆ ಹಿಂತಿರುಗಿದ. ಅವನು ಆಶ್ರಮ ಪ್ರವೇಶಿಸಿದಾಗ ಅದು ಸಂಜೆಯ ಧ್ಯಾನದ ಸಮಯವಾಗಿತ್ತು. ಆಶ್ರಮದ ಎಲ್ಲ ಮಾಸ್ಟರ್ ಗಳು, ಸನ್ಯಾಸಿಗಳೂ ತೀವ್ರ ಝಾಝೆನ್ ಧ್ಯಾನದಲ್ಲಿ ಮಗ್ನರಾಗಿದ್ದರು. ಯಾರಿಗೂ ಹೈಕೂಯಿನ್ ಬಂದಿರುವ ವಿಷಯ ಗೊತ್ತೇ ಆಗಲಿಲ್ಲ.
ಆದರೆ ಆಶ್ರಮದೊಳಗೆ ಹೈಕೂಯಿನ್ ಕಾಲಿಡುತ್ತಿದ್ದಂತೆಯೇ ಆಶ್ರಮದ ನಾಯಿಗಳು ಬೊಗಳುತ್ತ ಮಾಸ್ಟರ್ ಸುತ್ತ ಓಡಾಡುತ್ತ ಗದ್ದಲ ಹಾಕತೊಡಗಿದವು, ಬೆಕ್ಕುಗಳು ಮಾಸ್ಟರ್ ನ ಕಾಲು ನೆಕ್ಕುತ್ತ ಚೀರತೊಡಗಿದವು, ಕೋಳಿಗಳು ಸದ್ದು ಮಾಡುತ್ತ ಓಡಾಡತೊಡಗಿದವು, ಮೊಲಗಳು ಆ ಕಡೆಯಿಂದ ಈ ಕಡೆ ಸುಮ್ಮನೇ ಜಿಗಿದಾಡತೊಡಗಿದವು. ಎಲ್ಲ ಪ್ರಾಣಿ ಪಕ್ಷಿಗಳಲ್ಲಿ ಉತ್ಸಾಹ ತುಂಬಿ ತುಳುಕುತ್ತಿತ್ತು.
ಮಾಸ್ಟರ್ ಹೈಕೂಯಿನ್, ಧ್ಯಾನಸ್ಥರಾಗಿದ್ದ ತನ್ನ ಶಿಷ್ಯರನ್ನೂ, ಗದ್ದಲ ಹಾಕುತ್ತಿದ್ದ ಈ ಪ್ರಾಣಿಗಳನ್ನು ಒಮ್ಮೆ ಗಮನಿಸಿ ಮಾತನಾಡಿದ,
“ ಪ್ರೀತಿಯ ಒಂದೇ ಒಂದು ಆಕ್ರಂದನ ಸಾವಿರ ವರ್ಷ ಕುಳಿತು ಧ್ಯಾನ ಮಾಡುವುದಕ್ಕಿಂತ ಮಹತ್ತರವಾದದ್ದು.
(Source: The Path of Love: Love Is The Master Key By Osho Rajanish)