ಪ್ರೊಫೆಸರ್ ಹೆರ್ಗಿಲ್`ನ ಶಿಷ್ಯವೃತ್ತಿ : ಓಶೋ ವ್ಯಾಖ್ಯಾನ

ಬಾಣ ಬಿಡುವುದು, ಗುರಿ ಮುಟ್ಟುವುದು ಮುಖ್ಯವಲ್ಲ, ಬಿಲ್ಲುದಾರಿಕೆಯಲ್ಲಿ ಹಾಸುಹೊಕ್ಕಾಗಿರುವ ಧ್ಯಾನವನ್ನು ಹೊಂದುವುದು ಮುಖ್ಯ. ಧ್ಯಾನದಲ್ಲಿ ಒಂದಾಗಿರುವ ಮನುಷ್ಯ ತನ್ನ ಗುರಿಯ ಬಗ್ಗೆ ಚಿಂತೆ, ಪ್ರಯತ್ನ ಮಾಡದಿರುವಾಗಲೂ ತನ್ನ ಗುರಿಯನ್ನ ಮುಟ್ಟುತ್ತಾನೆ, ತನ್ನೊಳಗೆ ಒಂದಾಗಿರುವ ಪ್ರಶಾಂತತೆ, ಮೌನ, ನಿರಾಯಾಸ ಮತ್ತು ಸ್ಪಷ್ಟತೆಯ ಕಾರಣವಾಗಿ… ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಜರ್ಮನ್ ಪ್ರೊ.ಹೆರ್ಗಿಲ್, ಜಪಾನಿಗೆ ಝೆನ್ ಕಲಿಯಲು ಬಂದ ಮೊದಲ ಪಾಶ್ಚಿಮಾತ್ಯರಲ್ಲಿ ಒಬ್ಬ. ಅವನು ಬಿಲ್ಲುಗಾರಿಕೆ ಕಲಿಯಲು ಜಪಾನಿನ ಝೆನ್ ಮಾಸ್ಟರ್ ಬಳಿ ಶಿಷ್ಯನಾಗಿ ಬಂದಿದ್ದ. ಅದಾಗಲೇ ಪ್ರೊ.ಹೆರ್ಗಿಲ್ ಜರ್ಮನಿಯಲ್ಲಿ ಪ್ರಸಿದ್ಧ ಬಿಲ್ಲುಗಾರನೆಂದು ಹೆಸರು ಮಾಡಿದ್ದ, ಸತತವಾಗಿ bulls-eye ತಲುಪುವುದರಲ್ಲಿ ಅವನು ಪರಿಣಿತಿ ಗಳಿಸಿದ್ದ.

ಪ್ರೊ.ಹೆರ್ಗಿಲ್ ಮೂರು ವರ್ಷಗಳಷ್ಟು ಕಾಲ ಝೆನ್ ಮಾಸ್ಟರ್ ಹತ್ತಿರ ಶಿಷ್ಯವೃತ್ತಿ ಮಾಡಿದರೂ ಅದ್ಯಾಕೋ ಅವನಿಗೆ ಮಾಸ್ಟರ್ ನನ್ನು ಮೆಚ್ಚಿಸುವುದು ಸಾಧ್ಯವಾಗಿರಲಿಲ್ಲ. ಪ್ರತಿ ಬಾರಿ ಅವನು ಬಿಟ್ಟ ಬಾಣ ತನ್ನ ಗುರಿಯನ್ನ ಯಶಸ್ವಿಯಾಗಿ ತಲುಪಿದರೂ, ಮಾಸ್ಟರ್ ಮಾತ್ರ “ you missed it “ ಎಂದು ಉದ್ಗರಿಸುತ್ತಿದ್ದ.

“ ಏನು ತಪ್ಪಾಯಿತು ಮಾಸ್ಟರ್ “ ಎಂದು ಪ್ರೊ.ಹೆರ್ಗಿಲ್ ಕೇಳಿದಾಗಲೆಲ್ಲ ಮಾಸ್ಟರ್ ಉತ್ತರಿಸುತ್ತಿದ್ದ, “ ಗುರಿಯನ್ನ ಮುಟ್ಟುವುದು, bulls-eye ತಲುಪುವುದು ಅಷ್ಟು ಮುಖ್ಯವಲ್ಲ, ನೀನು ನಿನ್ನ ಬಿಲ್ವುಗಾರಿಕೆಯಲ್ಲಿ ಸ್ವಾಭಾವಿಕನಾಗಿಲ್ಲ (spontaneous). ಗುರಿ ಮುಟ್ಟುವುದನ್ನ ಮರೆತು ಬಿಡು, ಯಾವಾಗಲೂ ಸ್ವಾಭಾವಿಕವಾಗಿರಬೇಕು ಎನ್ನುವುದನ್ನ ನೆನಪಿಡು, ಯಾವತ್ತೂ ಪ್ರಯತ್ನ ಮಾಡಲು ಹೊಗಬೇಡ. “

ಹೀಗೇ ಮೂರು ವರ್ಷಗಳು ಕಳೆದು ಹೋದವು, ಪ್ರೊ.ಹೆರ್ಗಿಲ್ ಗೆ ಮಾಸ್ಟರ್ ಹೇಳುತ್ತಿರುವುದು ಅರ್ಥವೇ ಆಗಲಿಲ್ಲ. ಪ್ರತಿಬಾರಿ ಅವನು ತನ್ನ ಗುರಿ ಮುಟ್ಟುತ್ತಿದ್ದ ಮತ್ತು ಪ್ರತಿ ಬಾರಿ ಮಾಸ್ಟರ್ “ No you missed it “ ಎನ್ನುತ್ತ ಪ್ರೊಫೆಸರ್ ನ ಉತ್ಸಾಹ ಕುಂದಿಸಿಬಿಡುತ್ತಿದ್ದ.

“ ಹೀಗೆ ಕಲಿಯುವುದು ನಿರರ್ಥಕ, ಸಮಯ ವ್ಯರ್ಥ “ ಎನ್ನುತ್ತ ಪ್ರೊ.ಹೆರ್ಗಿಲ್ ಜರ್ಮನಿಗೆ ವಾಪಸ್ ಹೋಗಲು ತೀರ್ಮಾನಿಸಿದ. ಸ್ವಾಭಾವಿಕವಾಗಿ ಇರುವುದೆಂದರೆ ಏನು ಎನ್ನುವುದು ಪ್ರೊಫೆಸರ್ ಗೆ ಗೊತ್ತಾಗಲೇ ಇಲ್ಲ. ಬಿಲ್ಲುಗಾರಿಕೆಯಲ್ಲಿ ಸ್ವಾಭಾವಿಕವಾಗಿರುವುದೆಂದರೆ ಏನು ಎನ್ನುವುದು ತಿಳಿದುಕೊಳ್ಳುವಲ್ಲಿ ಪ್ರೊಫೆಸರ್ ವಿಫಲನಾದ. ಬಿಲ್ಲನ್ನು ಹೆದೆಯೇರಿಸಿ ಬಾಣವನ್ನು ಗುರಿಯಿಟ್ಟು ಬಿಡುವುದನ್ನ ಪ್ರಯತ್ನವಿಲ್ಲದೆ ಹೇಗೆ ಮಾಡುವುದು? ಗುರಿಯಿಡಲು ಪ್ರಯತ್ನ ಬೇಕಲ್ಲವೆ? ನೀವೂ ಕೂಡ ಪ್ರೊ.ಹೆರ್ಗಿಲ್ ನ ಪರವಾಗಿದ್ದೀರಿ ಅಲ್ವಾ? ಅವನ ವಿಚಾರವನ್ನ ಒಪ್ಪುತ್ತೀರಿ ಅಲ್ವಾ?

ಆದರೆ ಝೆನ್ ಇದನ್ನ ಒಪ್ಪುವುದಿಲ್ಲ. ಝೆನ್ ಮಾಸ್ಟರ್ ಮಾತ್ರ ಬೇಸರ ಮಾಡಿಕೊಳ್ಳದೆ ಕಲಿಸುತ್ತಲೇ ಹೋದ. ಪ್ರೊ.ಹೆರ್ಗಿಲ್ ಗೆ ತಾನು ಹೇಳುತ್ತಿರುವುದು ತಿಳಿಯುತ್ತಿಲ್ಲ, ಅವನು ಪ್ರಯತ್ನ ಮಾಡುವುದನ್ನ ನಿಲ್ಲಿಸುತ್ತಿಲ್ಲ, ರಿಲ್ಯಾಕ್ಸ್ ಆಗಿ ಬಿಲ್ಲುಗಾರಿಕೆ ಮಾಡುತ್ತಿಲ್ಲ ಎಂದು ಝೆನ್ ಮಾಸ್ಟರ್ ಬೇಜಾರು ಮಾಡಿಕೊಳ್ಳಲೇ ಇಲ್ಲ. ಅವನಿಗೆ ಬಿಲ್ಲಿಗಾರಿಕೆಯ ಪಾಠ ಮಾಡುತ್ತಲೇ ಹೋದ.

ಮೂರು ವರ್ಷಗಳ ನಂತರ ಪ್ರೊ.ಹೆರ್ಗಿಲ್, ಮಾಸ್ಟರ್ ಗೆ ಹೇಳಿದ, “ ಮಾಸ್ಟರ್ ನಾಳೆ ನಾನು ಜರ್ಮನಿಗೆ ವಾಪಸ್ಸಾಗುತ್ತಿದ್ದೇನೆ, ಕ್ಷಮಿಸಿ ನೀವು ಹೇಳಿದ್ದು ನನಗೆ ಅರ್ಥ ಆಗಲೇ ಇಲ್ಲ. ಇವತ್ತೂ ನಾನು ನನ್ನ ನಂಬಿಕೆಯನ್ನ ಬದಲಾಯಿಸಿಲ್ಲ. ನನ್ನ ಪ್ರಕಾರ ನಾನು ೧೦೦% ಸರಿ, ಆದರೂ ನೀವು ಯಾಕೆ ನನಗೆ ಬಿಲ್ಲುಗಾರಿಕೆ ಗೊತ್ತಿಲ್ಲ ಎಂದು ಹೇಳುತ್ತೀರಿ ಎನ್ನುವುದು ನನಗೆ ತಿಳಿಯಲೇ ಇಲ್ಲ. “

ಮರುದಿನ ಮುಂಜಾನೆ ಪ್ರೊ.ಹೆರ್ಗಿಲ್
ಕೊನೆಯ ಬಾರಿ ಮಾಸ್ಟರ್ ನ ಭೇಟಿಯಾಗಲು ಬಂದ. ಅವನು ಬಂದಾಗ, ಮಾಸ್ಟರ್ ತನ್ನ ಇನ್ನೊಬ್ಬ ಶಿಷ್ಯನಿಗೆ ಬಿಲ್ಲುಗಾರಿಕೆ ಕಲಿಸುತ್ತಿದ್ದ. ಪ್ರೊ.ಹೆರ್ಗಿಲ್, ಮಾಸ್ಟರ್ ಕಲಿಸುವುದನ್ನ ನೋಡುತ್ತ ಅಲ್ಲಿಯೇ ಖುರ್ಚಿಯ ಮೇಲೆ ಕುಳಿತುಕೊಂಡ. ಅವನು ಅನಾಸಕ್ತನಾಗಿ ಮಾಸ್ಟರ್ ನನ್ನು ಗಮನಿಸುತ್ತಿದ್ದ, ಅವನಲ್ಲಿ ಝೆನ್ ಮೂಲಕ ಬಿಲ್ಲುಗಾರಿಕೆ ಕಲಿಯುವ ಯಾವ ಆಸಕ್ತಿ, ಉತ್ಸಾಹವೂ ಉಳಿದಿರಲಿಲ್ಲ. ಅವನು ಆ ಐಡಿಯಾವನ್ನೇ ಡ್ರಾಪ್ ಮಾಡಿಬಿಟ್ಟಿದ್ದ. ಹಾಗಾಗಿ ಪ್ರೊ.ಹೆರ್ಗಿಲ್ ತುಂಬ ರಿಲ್ಯಾಕ್ಸ ಆಗಿದ್ದ, ಯಾವ ಪೂರ್ವಾಗ್ರಹ, ಕಲಿಯುವ ಉದ್ದೇಶ, ಪ್ರಯತ್ನವಿಲ್ಲದಂತೆ ಸುಮ್ಮನೇ ಮಾಸ್ಟರ್ ನ ಬಿಲ್ಲುಗಾರಿಕೆಯನ್ನ ಗಮನಿಸುತ್ತಿದ್ದ. ಹೇಗೆ ಮಾಸ್ಟರ್ ತನ್ನ ಕೈಯಲ್ಲಿ ಬಾಣ ತೆಗೆದುಕೊಂಡು ಬಿಲ್ಲು ಹೆದೆಯೇರಿಸಿ, ಗುರಿಯ ಬಗ್ಗೆ ಯಾವ ಒತ್ತಡವೂ ಇಲ್ಲದೇ, ಪೂರ್ತಿ ರಿಲ್ಯಾಕ್ಸ್ ಆಗಿ, ತುಂಬ ಖುಶಿಯಲ್ಲಿ ಬಾಣ ತನ್ನ ಗುರಿ ಮುಟ್ಟುವುದೋ ಇಲ್ಲವೋ ಎನ್ನುವ ಯಾವ ಆತಂಕವೂ ಇಲ್ಲದಂತೆ, ಆಟ ಆಡುವ ಮಕ್ಕಳ ಹಾಗೆ ಅತ್ಯಂತ ನಿರಾಯಾಸವಾಗಿ ಬಾಣ ಬಿಡುವುದನ್ನ ಪ್ರೊ.ಹೆರ್ಗಿಲ್ ಗಮನಿಸಿದ.

ಮೂರು ವರ್ಷಗಳಿಂದ ಮಾಸ್ಟರ್ ಜೊತೆ ಬಿಲ್ಲುಗಾರಿಕೆ ಅಭ್ಯಾಸ ಮಾಡುತ್ತಿದ್ದರೂ, ಅವನಲ್ಲಿ ಝೆನ್ ಮೂಲಕ ಬಿಲ್ಲುಗಾರಿಕೆ ಕಲಿಯಬೇಕು ಎನ್ನುವ ಬಯಕೆ, ಒತ್ತಡ ತೀವ್ರವಾಗಿದ್ದರಿಂದ ಪ್ರೊ.ಹೆರ್ಗಿಲ್, ಮಾಸ್ಟರ್ ನ ಈ ಈ ನಿರಾಯಾಸ ಬಿಲ್ಲುಗಾರಿಕೆಯನ್ನ ಗಮನಿಸಿರಲೇ ಇಲ್ಲ. ತನ್ನ ಬಿಲ್ಲುಗಾರಿಕೆ ಮಾಸ್ಟರ್ ಗಿಂತ ಹೇಗೆ ಭಿನ್ನ ಎನ್ನುವುದನ್ನ ಅರ್ಥ ಮಾಡಿಕೊಂಡಿರಲೇ ಇಲ್ಲ. ಬಿಲ್ಲುಗಾರಿಕೆಯ ಮೌಲ್ಯ ಇರುವುದು ಬಾಣ ತನ್ನ ಗುರಿಯನ್ನ ತಲುಪುವುದರಲ್ಲಿ ಇಲ್ಲ, ಮೌಲ್ಯ ಇರುವುದು ನಿಮ್ಮ ನಿರಾಯಸದಲ್ಲಿ, ನಿಮ್ಮ gesture ನಲ್ಲಿ. ಮೌಲ್ಯ ಇರುವುದು, ನೀವು ಪ್ರಶಾಂತವಾಗಿದ್ದೀರಾ ? ನೀವು ಇಡಿಯಾಗಿದ್ದೀರಾ? (Are you total?), ನಿಮ್ಮ ಮೈಂಡ್ ಎಲ್ಲ ಆಲೋಚನಗಳಿಂದ ಮುಕ್ತವಾಗಿದೆಯಾ? ಎನ್ನುವುದರಲ್ಲಿ.

ಬಾಣ ಬಿಡುವುದು, ಗುರಿ ಮುಟ್ಟುವುದು ಮುಖ್ಯವಲ್ಲ, ಬಿಲ್ಲುದಾರಿಕೆಯಲ್ಲಿ ಹಾಸುಹೊಕ್ಕಾಗಿರುವ ಧ್ಯಾನವನ್ನು ಹೊಂದುವುದು ಮುಖ್ಯ. ಧ್ಯಾನದಲ್ಲಿ ಒಂದಾಗಿರುವ ಮನುಷ್ಯ ತನ್ನ ಗುರಿಯ ಬಗ್ಗೆ ಚಿಂತೆ, ಪ್ರಯತ್ನ ಮಾಡದಿರುವಾಗಲೂ ತನ್ನ ಗುರಿಯನ್ನ ಮುಟ್ಟುತ್ತಾನೆ, ತನ್ನೊಳಗೆ ಒಂದಾಗಿರುವ ಪ್ರಶಾಂತತೆ, ಮೌನ, ನಿರಾಯಾಸ ಮತ್ತು ಸ್ಪಷ್ಟತೆಯ ಕಾರಣವಾಗಿ.

ಒಮ್ಮೆ ಹೀಗಾಯಿತು……

ಒಬ್ಬ ಝೆನ್ ವಿದ್ಯಾರ್ಥಿಗೆ ಮಾರ್ಶಲ್ ಆರ್ಟ್ ನ ಹುಚ್ಚು. ಝೆನ್ ಜೊತೆಜೊತೆಗೆ ಯುದ್ಧಕಲೆಯನ್ನೂ ಅಭ್ಯಾಸ ಮಾಡುತ್ತಿದ್ದ.

ಒಮ್ಮೆ ಅವನಿಗೆ ತನ್ನ ಯುದ್ಧಕಲೆಯನ್ನು ಬಳಸಿ ಗುರುವಿನ ಸಾಮರ್ಥ್ಯ ಪರೀಕ್ಷಿಸುವ ಮನಸ್ಸಾಯಿತು.

ಗುರು ವಿಶ್ರಾಂತಿಯಲ್ಲಿದ್ದಾಗ ಅಚಾನಕ್ ಆಗಿ ಈಟಿಯಿಂದ ಗುರುವಿನ ಮೇಲೆ ಆಕ್ರಮಣ ಮಾಡಿದ.

ಗುರು ಕ್ಷಣಾರ್ಧದಲ್ಲಿ ತನ್ನ ಜಪಮಣಿ ಬಳಸಿ ಈಟಿಯ ದಿಕ್ಕನ್ನೇ ಬದಲಾಯಿಸಿದ.
ಶಿಷ್ಯನಿಗೆ ಆಶ್ಚರ್ಯವಾಯಿತು.

ಗುರು ಉತ್ತರಿಸಿದ

“ ಹುಡುಗಾ, ನಿನ್ನ ಯುದ್ಧತಂತ್ರ ಇನ್ನೂ ಪಕ್ವವಾಗಿಲ್ಲ, ಈಟಿಗಿಂತಲೂ ಮೊದಲು ನಿನ್ನ mind move ಆಗಿದ್ದನ್ನ ನಾನು ಕ್ಷಣಾರ್ಧದಲ್ಲಿ
ಗಮನಿಸಿದೆ “

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.