ಒಮ್ಮೆ ಸರ್ಕಾರದ ಹಿರಿಯ ಅಧಿಕಾರಿಯೊಬ್ಬ ವಯಸ್ಸಾದ ಝೆನ್ ಮಾಸ್ಟರ್ ನ ಭೇಟಿಯಾಗಲು ಹೋದ. ಸ್ವಭಾವತಃ ದುರಹಂಕಾರಿಯಾಗಿದ್ದ ಆ ಅಧಿಕಾರಿ ಝೆನ್ ಮಾಸ್ಟರ್ ಎದುರು ತನ್ನ ಶ್ರೇಷ್ಠತೆಯನ್ನು ಪ್ರದರ್ಶಿಸಲು ಮುಂದಾದ.
ಮಾತುಕತೆ ಮುಗಿಯುವ ಹಂತಕ್ಕೆ ಬಂದಾಗ ಅಧಿಕಾರಿ , “ ಓಲ್ಡ್ ಮಾಂಕ್, ನನಗೆ ನಿನ್ನ ಬಗ್ಗೆ, ನೀನು ಇಷ್ಟು ಹೊತ್ತು ಹೇಳಿದ ವಿಷಯಗಳ ಬಗ್ಗೆ ನನಗಿರುವ ಅಭಿಪ್ರಾಯ ಏನು ಗೊತ್ತಾ? “ ಎಂದು ಚುಚ್ಚಿದ.
“ ನಿನಗೆ ನನ್ನ ಬಗ್ಗೆ ಇರುವ ಅಭಿಪ್ರಾಯದ ಕುರಿತು ನನಗೆ ಚಿಂತೆ ಇಲ್ಲ, ಯಾವುದರ ಬಗ್ಗೆಯಾದರೂ ನಿನ್ನ ಅಭಿಪ್ರಾಯ ರೂಪಿಸಿತೊಳ್ಳಲು ನೀನು ಸ್ವತಂತ್ರ.” ಮಾಸ್ಟರ್ ಉತ್ತರಿಸಿದ,
“ ಅದೇನೆ ಇರಲಿ ನನ್ನ ಅಭಿಪ್ರಾಯ ಹೇಳಿಬಿಡುತ್ತೇನೆ, ನನ್ನ ಪ್ರಕಾರ ನೀನು ಮತ್ತು ನಿನ್ನ ಮಾತುಗಳು ಸೆಗಣಿಯ ಮುದ್ದೆಯಂತೆ “ ಅಧಿಕಾರಿ ಬಿಗುಮಾನದಿಂದ ಸೊಕ್ಕಿನ ಮಾತುಗಳನ್ನಾಡಿದ.
ಅಧಿಕಾರಿಯ ಮಾತಿಗೆ ಒಮ್ನೆ ಜೋರಾಗಿ ನಕ್ಕ ಮಾಸ್ಟರ್, ಸುಮ್ಮನಾಗಿಬಿಟ್ಟ.
ತಾನು ಮಾಡಲು ಪ್ರಯತ್ನಿಸಿದ ಅಪಮಾನಕ್ಕೆ ತಕ್ಕ ಪ್ರತಿಕ್ರಿಯೆ ಬರದಿದ್ದಾಗ ಕುತೂಹಲಗೊಂಡ ಅಧಿಕಾರಿ, “ ನನ್ನ ಬಗ್ಗೆ ನಿನ್ನ ಅಭಿಪ್ರಾಯ ಹೇಳು. “ ಮಾಸ್ಟರ್ ನ ಕೆಣಕಿದ.
“ ನನ್ನ ಕಣ್ಣಲ್ಲಿ ನೀನು ಥೇಟ್ ಬುದ್ಧನ ಹಾಗೆ” ಮಾಸ್ಟರ್ ಉತ್ತರಿಸಿದ.
ಮಾಸ್ಟರ್ ನ ಮಾತಿನಿಂದ ಖುಷಿಯಾದ ಅಧಿಕಾರಿ ಸಂಜೆ ಮನೆಗೆ ಬಂದಾಗ ತನ್ನ ಹೆಂಡತಿಯ ಮುಂದೆ ಮಾಸ್ಟರ್ ಜೊತೆ ನಡೆದ ಎಲ್ಲ ವಿಷಯವನ್ನೂ ಹೇಳಿ ಕೊಚ್ಚಿಕೊಂಡ.
“ ನಾನು ಪ್ರತಿದಿನ ಮಾಸ್ಟರ್ ಮಾಡುವ ಉಪನ್ಯಾಸಗಳನ್ನು ಕೇಳಲು ಹೋಗುತ್ತೇನೆ, ಅವನು ಸದಾ ಹೇಳುವ ಮಾತು ಏನೆಂದರೆ, ನೀವು ಸ್ವತಃ ಏನಾಗಿದ್ದೀರೋ ಇನ್ನೊಬ್ಬರಲ್ಲೂ ಅದನ್ನೇ ಕಾಣಲು ಪ್ರಯತ್ನಿಸುತ್ತೀರಿ. ಮಾಸ್ಟರ ಸ್ವತಃ ಬುದ್ಧನಾಗಿರುವುದರಿಂದ ಅವನು ನಿನ್ನಲ್ಲಿ ಬುದ್ಧನನ್ನು ಕಂಡ, ನೀನು ಸೆಗಣಿಯ ಮುದ್ದೆಯಾಗಿರುವುದರಿಂದ ಮಾಸ್ಟರ್ ನಲ್ಲೂ ನಿನಗೆ ಸೆಗಣಿಯೇ ಕಾಣಿಸಿತು.” ಅಧಿಕಾರಿ ಯ ಹೆಂಡತಿ, ಗಂಡನ ಮೂರ್ಖತನವನ್ನ ಅವನಿಗೆ ಬಿಡಿಸಿ ಹೇಳಿದಳು.
ಮುಲ್ಲಾ ನಸ್ರುದ್ದೀನ್ ಗೂ ಮತ್ತು ಸ್ಥಳೀಯ ಪಕ್ಕದ ಊರಿನ ಧರ್ಮೋಪದೇಶಕನಿಗೂ ಸದಾ ಜಗಳ ಆಗುತ್ತಿತ್ತು. ಒಮ್ಮೆಯಂತೂ ಜಗಳ ಕೋರ್ಟಿನ ಮೆಟ್ಟಲೇರಿತು.
ಎರಡೂ ಕಡೆಯ ವಾದಗಳನ್ನು, ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಆಜ್ಞೆ ಮಾಡಿದರು,
“ ಇದು ಅಂಥ ದೊಡ್ಡ ವ್ಯಾಜ್ಯವೇನಲ್ಲ, ಇಬ್ಬರೂ ಒಂದೆಡೆ ಕೂತು ಪರಿಹರಿಸಿಕೊಳ್ಳಬಹುದು. ಇಬ್ಬರೂ ಒಬ್ಬರಿಗೊಬ್ಬರು ಹಸ್ತಲಾಘವ ಮಾಡಿ, ಇನ್ನೊಬ್ಬರ ಬಗ್ಗೆ ಒಳ್ಳೆಯ ಮಾತುಗಳನ್ನ ಹೇಳಿ “
ಮುಂದೆ ಬಂದ ಧರ್ಮೋಪದೇಶಕ, ನಸ್ರುದ್ದೀನ್ ನ ಕೈ ಕುಲುಕಿ ಹೇಳಿದ,
“ ನೀನು ನನಗೆ ಏನು ಬಯಸುತ್ತಿದ್ದೀಯೋ ನಾನೂ ನಿನಗೆ ಅದನ್ನೇ ಬಯಸುತ್ತೇನೆ “
“ ನೋಡಿ ಮಹಾಸ್ವಾಮಿ, ಇವ ಮತ್ತೆ ಜಗಳ ಶುರು ಮಾಡುತ್ತಿದ್ದಾನೆ “
ನಸ್ರುದ್ದೀನ್ ಕಿರುಚಿದ.