ಪ್ರೀತಿಯ ಆಚರಣೆ (ಭಾಗ – 5) : Art of love #46

ಪರಂಪರೆ ಎನ್ನುವುದು ಮೂಲಭೂತವಾಗಿ ಕೇವಲ ಕೆಲವು ಬಗೆಯ ಜ್ಞಾನಗಳ ಸಂವಹನವಲ್ಲ, ಬದಲಾಗಿ ಹಲವು ಬಗೆಯ ಮಾನವೀಯ ಗುಣಗಳ ಸಂವಹನ. ಜ್ಞಾನದ ಸಂವಹನ ಮತ್ತು ಬೆಳವಣಿಗೆ ಯಶಸ್ವಿಯಾಗಿ ಮುಂದುವರೆದರೂ, ಮುಂದೆ ಬರಲಿರುವ ಪೀಳಿಗೆ ಈ ಮಾನವೀಯ ಗುಣಗಳನ್ನು ಗಮನಿಸದೇ ಹೋದರೆ, ಐದು ಸಾವಿರ ವರ್ಷ ಇತಿಹಾಸದ ಮನುಷ್ಯ ಸಂಸ್ಕೃತಿ ಒಡೆದು ಹೋಗುತ್ತದೆ… | ಎರಿಕ್ ಫ್ರಾಮ್ ; ಕನ್ನಡಕ್ಕೆ: ಚಿದಂಬರ ನರೇಂದ್ರ

ಸಾಮಾನ್ಯ ಮನುಷ್ಯನಿಗೆ ತನ್ನ ದೇಹದಲ್ಲಿ ನಡೆಯುವ ಆಗು ಹೋಗುಗಳ ಕುರಿತಾದ ಸೆನ್ಸಿಟಿವಿಟಿ ಇದೆ. ತನ್ನ ದೇಹದಲ್ಲಿ ಆಗುವ ಬದಲಾವಣೆಗಳನ್ನ ಅಥವಾ ಸಣ್ಣ ಸಣ್ಣ ನೋವುಗಳನ್ನೂ ಅವನು ಗಮನಿಸಬಲ್ಲ ; ಈ ರೀತಿಯ ಶಾರೀರಿಕ ಸೆನ್ಸಿಟಿವಿಟಿಯನ್ನ ಅನುಭವಿಸುವುದು, ಗಮನಿಸುವುದು ತುಂಬ ಸುಲಭ ಏಕೆಂದರೆ ಬಹುತೇಕ ಜನರಿಗೆ ಆರೋಗ್ಯವಂತ ಮನುಷ್ಯನ ಕುರಿತಾದ ಒಂದು ಕಲ್ಪನೆ ಇದೆ. ಆದರೆ ಮನುಷ್ಯನ ಮಾನಸಿಕ ಸ್ಥಿತಿಯ ಬಗ್ಗೆ ಇದೇ ಬಗೆಯ ಸೆನ್ಸಿಟಿವಿಟಿಯನ್ನು ಹೊಂದುವುದು ಹೆಚ್ಚು ಕಷ್ಟ , ಏಕೆಂದರೆ ಯಾವುದು ಆರೋಗ್ಯವಂತ ಮಾನಸಿಕ ಸ್ಥಿತಿ ಎನ್ನುವ ಕಲ್ಪನೆ ಬಹುತೇಕರಿಗೆ ಇಲ್ಲ. ಬಹುತೇಕರು ತಮ್ಮ ತಂದೆ-ತಾಯಿ, ಬಂಧು-ಬಳಗ, ತಾವು ಭಾಗವಾಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿರುವ ಜನರ ಮಾನಸಿಕ ಸ್ಥಿತಿಯನ್ನ ಆದರ್ಶ ಎಂದುಕೊಂಡಿರುತ್ತಾರೆ. ಮತ್ತು ಎಲ್ಲಿಯವರೆಗೆ ಈ ಎಲ್ಲರ ಹಾಗೆಯೇ ತಮ್ಮ ವರ್ತನೆ ಇದೆಯೋ ಅಲ್ಲಿಯವರೆಗೆ ತಮ್ಮ ಮಾನಸಿಕ ಸ್ಥಿತಿ ಸರಿಯಾಗಿದೆ ಎಂದುಕೊಂಡಿರುತ್ತಾರೆ, ಹಾಗಾಗಿ ಅವರಿಗೆ ತಮ್ಮ ಮಾನಸಿಕ ಸ್ಥಿತಿಯನ್ನ ವಿಶೇಷವಾಗಿ ಗಮನಿಸುವಲ್ಲಿ ಯಾವ ಆಸಕ್ತಿಯೂ ಇರುವುದಿಲ್ಲ. ಉದಾಹರಣೆಗೆ ಬಹಳಷ್ಟು ಜನರಿಗೆ ಪ್ರೀತಿ ಎಂದರೇನು? ಪ್ರೀತಿಯ ಮನುಷ್ಯ ಹೇಗಿರುತ್ತಾನೆ? ಧೈರ್ಯದ, ಸಮಗ್ರತೆಯ, ಏಕಾಗ್ರತೆಯ ಮನುಷ್ಯ ಹೇಗಿರುತ್ತಾನೆ ಎನ್ನುವುದರ ಕಲ್ಪನೆಯೇ ಇಲ್ಲ. ಆದ್ದರಿಂದ ಮನುಷ್ಯ ಸ್ವತಃ ತನ್ನ ಬಗ್ಗೆ ಪೂರ್ಣ ಸೆನ್ಸಿಟಿವಿಟಿಯನ್ನ ಬೆಳೆಸಿಕೊಳ್ಳಲು ಅವನಿಗೆ ಪರಿಪೂರ್ಣ ಆರೋಗ್ಯವಂತ ಮನುಷ್ಯ ಹೇಗಿರುತ್ತಾನೆ ಎನ್ನುವ ಕಲ್ಪನೆ ಇರಬೇಕಾಗುತ್ತದೆ. ಆದರೆ ಮನುಷ್ಯನಿಗೆ ತನ್ನ ಬಾಲ್ಯದಲ್ಲಾಗಲಿ ಅಥವಾ ಮುಂದಿನ ಬದುಕಿನಲ್ಲಾಗಲಿ ಇಂಥ ಯಾವ ಅನುಭವಗಳೂ ಆಗಿಲ್ಲದಿರುವಾಗ, ಅವನು ಇಂಥ ಅನುಭವಗಳನ್ನು ಹೊಂದಲು ಏನು ಮಾಡಬೇಕು? ಈ ಪ್ರಶ್ನೆಗೆ ಖಂಡಿತವಾಗಿಯೂ ಯಾವ ಸರಳ ಉತ್ತರ ಇಲ್ಲ; ಆದರೆ ಈ ಪ್ರಶ್ನೆ ನಮ್ಮ ಶಿಕ್ಷಣ ಪದ್ಧತಿಯ ಅತ್ಯಂತ ಪ್ರಮುಖ ಕೊರತೆಯ ಬಗ್ಗೆ ಬೆಟ್ಟು ಮಾಡಿ ತೋರಿಸುತ್ತದೆ.

ನಮ್ಮ ಶಾಲೆ ಕಾಲೇಜುಗಳಲ್ಲಿ ನಾವು ವಿಷಯಗಳ ಬಗ್ಗೆ ಮಾಹಿತಿಯನ್ನೆನೋ ನೀಡುತ್ತೇವೆ ಆದರೆ ಮನುಷ್ಯನ ಸಮಗ್ರ ಬೆಳವಣಿಗೆಗೆ ಅವಶ್ಯಕವಾದ ಕಲಿಕೆಯನ್ನ ಶಿಕ್ಷಣ ವ್ಯವಸ್ಥೆಯಿಂದ ಹೊರತಾಗಿಸಿ ಬಿಡುತ್ತೇವೆ : ಇಂಥದೊಂದು ಕಲಿಕೆಯನ್ನ ಪ್ರಬುದ್ಧ ಮನಸ್ಥಿತಿಯ ಪ್ರೀತಿಯ ಮನುಷ್ಯನ ಉಪಸ್ಥಿತಿ ಮಾತ್ರ ಸಾಧ್ಯ ಮಾಡಬಲ್ಲದು.

ನಮ್ಮ ಹಿಂದಿನ ಸಂಸ್ಕೃತಿಗಳ ಕಾಲದಲ್ಲಿ, ಅಥವಾ ಚೈನಾ ಮತ್ತು ಇಂಡಿಯಾಗಳಲ್ಲಿ, ಅತ್ಯಂತ ಗೌರವಕ್ಕೆ ಪಾತ್ರನಾಗುವ ಮನುಷ್ಯನೆಂದರೆ, ಮಹೋನ್ನತ ಅಧ್ಯಾತ್ಮಿಕ ಗುಣ ಸ್ವಭಾವಗಳನ್ನು ಹೊಂದಿರುವ ಮನುಷ್ಯ. ಶಾಲೆ ಕಾಲೇಜುಗಳಲ್ಲಿ ಶಿಕ್ಷಕರ ಕೆಲಸ ಕೇವಲ ವಿಷಯಗಳ ಬಗೆಗಿನ ಮಾಹಿತಿಯನ್ನು ಹಂಚುವುದಾಗಿರದೇ, ವಿದ್ಯಾರ್ಥಿಗಳಲ್ಲಿ ಮಾನವೀಯ ದೃಷ್ಟಿಕೋನವನ್ನು ಹುಟ್ಟುಹಾಕುವುದೂ ಆಗಿತ್ತು. ಸಮಕಾಲೀನ ಬಂಡವಾಳಶಾಹಿ ಸಮಾಜದಲ್ಲಿ, ಮತ್ತು ಕಮ್ಯೂನಿಸ್ಟ್ ರಷ್ಯಾದಲ್ಲಿ ಕೂಡ ಗೌರವಕ್ಕೆ ಮತ್ತು ಅನುಕರಣೆಗೆ ಪಾತ್ರರಾಗುವ ಜನ ಯಾವ ಅಧ್ಯಾತ್ಮಿಕ ಗುಣ ಸ್ವಭಾವಗಳನ್ನೂ ಹೊಂದಿದವರಲ್ಲ, ಬದಲಾಗಿ ಇವರು ಜನರಿಗೆ ಕಾಲ್ಪನಿಕ ತೃಪ್ತಿಯನ್ನ ಕೊಡುವವರು.
ಸಿನಿಮಾ ಕಲಾವಿದರು, ರೇಡಿಯೋ, ಟೀವಿ ಸ್ಟಾರ್ ಗಳು, ಪತ್ರಿಕೆಗಳ ಜನಪ್ರಿಯ ಅಂಕಣಕಾರರು, ಪ್ರಮುಖ ಇಂಡಸ್ಟ್ರಿಯಲಿಸ್ಟ್ ಗಳು, ರಾಜಕಾರಣಿಗಳು ಈ ಥರದವರು ಈಗ ಜನ ಅನುಕರಿಸುವ ಮಾಡೆಲ್ ಗಳು. ಇವರ ಪ್ರಮುಖ ಅರ್ಹತೆ ಎಂದರೆ, ಇವರು ಸುದ್ದಿ ಮಾಡುವುದರಲ್ಲಿ ಸಿದ್ಧಹಸ್ತರು. ಪರಿಸ್ಥಿತಿ ಹೀಗಿದ್ದರೂ ಅಷ್ಟೇನೂ ಪೂರ್ತಿ ನಿರಾಶಾದಾಯಕವಾಗಿಲ್ಲ.

Albert Schweitzer ನಂಥ ವ್ಯಕ್ತಿ ಅಮೇರಿಕೆಯಲ್ಲಿ ಪ್ರಸಿದ್ಧಿಯನ್ನ ಪಡೆಯಬಹುದಾದರೆ, ನಮ್ಮ ಯುವ ಜನತೆ ಐತಿಹಾಸಿಕ ವ್ಯಕ್ತಿಗಳಿಂದ ಪ್ರೇರಣೆ ಪಡೆಯುತ್ತ, ಮನುಷ್ಯ ಕೇವಲ ಮನರಂಜನೆಯ ವ್ಯಕ್ತಿಯಾಗಿ (ಈ ಪದದ ವಿಶಾಲಾರ್ಥದಲ್ಲಿ) ಅಲ್ಲದೆಯೇ, ಮನುಷ್ಯನಾಗಿ ಕೂಡ ಎಂಥ ಉನ್ನತ ಸಾಧನೆಗಳನ್ನ ಮಾಡಬಹುದು ಎನ್ನುವ ಸಾಧ್ಯತೆಗಳನ್ನು ನಾವು ಕಲ್ಪಿಸಿಕೊಳ್ಳಬಲ್ಲೆವಾದರೆ, ನಮ್ಮ ಎಲ್ಲ ಮಹಾ ಸಾಹಿತ್ಯವನ್ನ, ಕಲೆಯನ್ನ ನಾವು ಗಮನಿಸಬಲ್ಲೆವಾದರೆ, ಮನುಷ್ಯ ಆರೋಗ್ಯಕರವಾಗಿ ಬದುಕಲು ಬೇಕಾಗುವ ಒಂದು ಉತ್ತಮ ಜೀವನ ವಿಧಾನವನ್ನ ರೂಪಿಸಿಕೊಳ್ಳಬಹುದಾದಂಥ ಸಾಧ್ಯತೆಯಂತೂ ಇದೆ, ಮತ್ತು ಈ ಮೂಲಕ ನಾವು, ಮನುಷ್ಯ ಸ್ವತಃ ತನ್ನ ಜೊತೆಯೂ ಸೆನ್ಸಿಟಿವ್ ಆಗಿರಲು ಇರುವ ಅಡತಡೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಇಂಥದೊಂದು ಪ್ರಬುದ್ಧ ಜೀವನ ವಿಧಾನವನ್ನು ರೂಪಿಸಿಕೊಳ್ಳುವಲ್ಲಿ ನಾವು ವಿಫಲರಾಗುವೆವಾದರೆ, ನಮ್ಮ ಇಡೀ ಸಾಂಸ್ಕೃತಿಕ ಪರಂಪರೆ ಕುಸಿದು ಬೀಳುವ ಸಾಧ್ಯತೆಯನ್ನು ನಾವು ಎದುರಿಸಬೇಕಾಗುತ್ತದೆ.

ಈ ಪರಂಪರೆ ಎನ್ನುವುದು ಮೂಲಭೂತವಾಗಿ ಕೇವಲ ಕೆಲವು ಬಗೆಯ ಜ್ಞಾನಗಳ ಸಂವಹನವಲ್ಲ, ಬದಲಾಗಿ ಹಲವು ಬಗೆಯ ಮಾನವೀಯ ಗುಣಗಳ ಸಂವಹನ. ಜ್ಞಾನದ ಸಂವಹನ ಮತ್ತು ಬೆಳವಣಿಗೆ ಯಶಸ್ವಿಯಾಗಿ ಮುಂದುವರೆದರೂ, ಮುಂದೆ ಬರಲಿರುವ ಪೀಳಿಗೆ ಈ ಮಾನವೀಯ ಗುಣಗಳನ್ನು ಗಮನಿಸದೇ ಹೋದರೆ, ಐದು ಸಾವಿರ ವರ್ಷ ಇತಿಹಾಸದ ಮನುಷ್ಯ ಸಂಸ್ಕೃತಿ ಒಡೆದು ಹೋಗುತ್ತದೆ.

ಇಲ್ಲಿಯವರೆಗೆ ನಾನು, ಯಾವುದೇ ಕಲೆಯ ಅಭ್ಯಾಸಕ್ಕೆ ಬೇಕಾದ ಸಂಗತಿಗಳ ಕುರಿತಾಗಿ ಚರ್ಚಿಸಿದೆ. ಈಗ ಪ್ರೀತಿಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅವಶ್ಯಕವಾಗಿರುವ ಕೆಲ ನಿರ್ದಿಷ್ಟ ಪ್ರಮುಖ ಸಂಗತಿಗಳ ಬಗ್ಗೆ ಚರ್ಚಿಸುವೆ. ಪ್ರೀತಿಯ ಸ್ವಭಾವವನ್ನು ಕುರಿತು ನಾನು ಈಗಾಗಲೇ ಹೇಳಿದ ಹಾಗೆ, ಪ್ರೀತಿಯನ್ನು ಸಾಧಿಸಿಕೊಳ್ಳಲು ನಮಗೆ ಅತ್ಯಂತ ಅವಶ್ಯಕವಾಗಿರುವುದು, ನಮ್ಮೊಳಗಿನ ಸ್ವರತಿಯನ್ನ (narcissism) ಮೀರುವುದು. ನಾರ್ಸಿಸ್ಟಕ್ ದೃಷ್ಟಿಕೋನದಲ್ಲಿ ವ್ಯಕ್ತಿ, ತನ್ನೊಳಗೆ ಇರುವುದರ ಹೊರತಾಗಿ ಬೇರೆ ಯಾವುದನ್ನೂ ವಾಸ್ತವ ಎಂದು ಪರಿಗಣಿಸುವುದಿಲ್ಲ, ಮತ್ತು ಹೊರಗಿನ ಸಂಗತಿಗಳನ್ನು ಅವರು, ಅವು ತಮಗೆ ಎಷ್ಟು ಉಪಯೋಗ ಆಗಬಲ್ಲವು ಅಥವಾ ಎಷ್ಟು ಅಪಾಯ ಮಾಡಬಲ್ಲವು ಎನ್ನುವ ದೃಷ್ಟಿಯಲ್ಲಿ ಮಾತ್ರ ನೋಡುತ್ತಾರೆ. ವಸ್ತು ನಿಷ್ಠತೆ (objectivity), ನಾರ್ಸಿಸಿಸಂ ಗೆ ವಿರುದ್ಧವಾದುದು ಮತ್ತು ಇದು, ವ್ಯಕ್ತಿಗಳನ್ನ ಹಾಗು ಸಂಗತಿಗಳನ್ನ ವಸ್ತು ನಿಷ್ಠವಾಗಿ ಅವು ಇದ್ದ ಹಾಗೆಯೇ ನೋಡಲು ಮತ್ತು, ಭಯ, ಬಯಕೆ ಮುಂತಾದವುಗಳಿಂದ ನಾವು ಕಟ್ಟಿಕೊಂಡಿರುವ ಚಿತ್ರವನ್ನ ವಾಸ್ತವದ ಚಿತ್ರದಿಂದ ವಸ್ತು ನಿಷ್ಠವಾಗಿ ಪ್ರತ್ಯೇಕಿಸಿ ನೋಡಲು ಸಹಾಯ ಮಾಡುವಂಥದು. ಎಲ್ಲ ಬಗೆಯ ಮನೋರೋಗಗಳಲ್ಲಿ ಪ್ರಮುಖವಾಗಿ ವಸ್ತುನಿಷ್ಠತೆಯ ಅಭಾವ ತೀವ್ರವಾಗಿರುತ್ತದೆ. ಮಾನಸಿಕ ಆರೋಗ್ಯದಿಂದ ವಂಚಿತನಾದವನಿಗೆ ತನ್ನೊಳಗಿರುವುದು ಮಾತ್ರ ನಿಜವಾದ ವಾಸ್ತವ, ಅದನ್ನು ಅವನು ತನ್ನ ಭಯ ಮತ್ತು ಬಯಕೆಗಳಿಂದ ಕಟ್ಟಿಕೊಂಡಿದ್ದರೂ. ಅವನು ಹೊರ ಜಗತ್ತನ್ನು ತನ್ನ ಒಳ ಜಗತ್ತಿನ ಸಂಕೇತದಂತೆ, ತನ್ನದೇ ಸೃಷ್ಟಿಯೆಂಬಂತೆ ನೋಡುತ್ತಾನೆ. ಕನಸು ಕಾಣುವಾಗ ನಾವೆಲ್ಲ ಮಾಡುವುದು ಹೀಗೆಯೇ. ನಮ್ಮ ಕನಸುಗಳಲ್ಲಿ ನಾವು, ನಮ್ಮ ಭಯ, ಬಯಕೆಗಳ ಅಭಿವ್ಯಕ್ತಿ ಎನ್ನುವಂತೆ (ಕೆಲವೊಮ್ಮೆ ಅವು ನಮ್ಮ ವಿವೇಚನೆ ಮತ್ತು ಕಾಣ್ಕೆಗಳು ಕೂಡ), ಸನ್ನಿವೇಶಗಳನ್ನ ನಿರ್ಮಿಸಿಕೊಳ್ಳುತ್ತೇವೆ, ನಾಟಕಗಳನ್ನು ಆಡುತ್ತೇವೆ, ಮತ್ತು ನಾವು ನಿದ್ದೆಯಲ್ಲಿರುವಾಗ ನಮ್ಮ ಕನಸಿನ ಪ್ರಾಡಕ್ಟಗಳನ್ನು ನಮ್ಮ ಎಚ್ಚರದ ಜಗತ್ತಿನ ವಾಸ್ತವದಂತೆ ನಿಜ ಎಂದು ಖಚಿತವಾಗಿ ಅಂದುಕೊಂಡಿರುತ್ತೇವೆ.

***************************

1 Comment

Leave a Reply