ಪ್ರಜ್ಞೆಯನ್ನ ಹೊಂದಿದಾಗ, ಅಹಂ ತಾನಾಗಿಯೇ ಮಾಯವಾಗುತ್ತದೆ. ಅಹಂ ಇಲ್ಲದಾಗ ಪ್ರಜ್ಞೆ ಅವತರಿಸುತ್ತದೆ. ಪ್ರಜ್ಞೆ ಪೂರ್ಣರೂಪ ಪಡೆದುಕೊಂಡಾಗ, ಅಹಂನ ವಿಳಾಸವೇ ಅಳಿಸಿ ಹೋಗುತ್ತದೆ. ಪ್ರಜ್ಞೆ ಪೂರ್ಣಗೊಳ್ಳುವ ಪ್ರಕ್ರಿಯೆಯ ಇನ್ನೊಂದು ಹೆಸರೇ ದೈವತ್ವದ ಅನುಭವ… ~ ಓಶೋ| ಕನ್ನಡಕ್ಕೆ: ಚಿದಂಬರ ನರೇಂದ್ರ
ಒಂದು ಹಳೆಯ ದೃಷ್ಟಾಂತ ಕಥೆ.
ಎಷ್ಟೋ ಮಿಲಿಯನ್ ವರ್ಷಗಳ ನಂತರ ಕತ್ತಲು ದೇವರ ಹತ್ತಿರ ಬಂದು ದೂರು ಸಲ್ಲಿಸಿತು.
“ ಇದು ಅತಿಯಾಯಿತು ! ನಾನು ಎಷ್ಟು ಸಹನೆಯಿಂದ ಇದ್ದರೂ ನಿನ್ನ ಸೂರ್ಯ ಪ್ರತಿದಿನ ನನಗೆ ಹಿಂಸೆ ನೀಡುತ್ತಿದ್ದಾನೆ. ಯಾವ ಕಾರಣವೂ ಇಲ್ಲದೆ ದಿನಂಪ್ರತಿ ನನ್ನನ್ನು ಹಿಂಬಾಲಿಸುತ್ತ ಹಿಂಸೆಗೆ ಗುರಿಮಾಡುತ್ತಾನೆ. ಅವನು ನನಗೆ ವಿಶ್ರಾಂತಿ ಮಾಡಲು ಬಿಡುವುದಿಲ್ಲ, ಅವನು ಬರುತ್ತಿದ್ದಂತೆಯೇ ನಾನು ಓಡಬೇಕಾಗುತ್ತದೆ, ಅವನು ನನ್ನ ಬೆನ್ನು ಹತ್ತುತ್ತಾನೆ. ಈಗಂತೂ ಇದು ನನ್ನನ್ನು ತೀವ್ರ ಅಶಾಂತಿಗೆ ದೂಡುತ್ತಿದೆ. ನಾನು ಅವನಿಗೆ ಯಾವತ್ತೂ ಕೆಟ್ಟದನ್ನು ಬಯಸಿಲ್ಲ, ಕೆಟ್ಟದ್ದನ್ನು ಮಾಡಿಲ್ಲ ಆದರೂ ಅವನು ನನಗೆ ತೊಂದರೆ ಕೊಡುತ್ತಿದ್ದಾನೆ. ಯಾಕೆ ಅವನು ನನ್ನ ಹಿಂದೆ ಬಿದ್ದಿದ್ದಾನೆ? ಯಾಕೆ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾನೆ?”
ಕತ್ತಲೆಯ ದೂರನ್ನು ಕೇಳಿದ ಮೇಲೆ ದೇವರಿಗೂ ಇದು ಅನ್ಯಾಯ ಅನಿಸಿ, ಅವನು ಸೂರ್ಯನನ್ನು ಕರೆಸಿ ಕತ್ತಲೆಯ ಸಮಸ್ಯೆಯನ್ನು ಅವನಿಗೆ ವಿವರಿಸಿದ.
ದೇವರ ಮಾತು ಕೇಳಿ ಸೂರ್ಯನಿಗೆ ಆಶ್ಚರ್ಯವಾಯಿತು, “ ನೀನು ಏನು ಹೇಳುತ್ತಿದ್ದೀಯೋ ನನಗೆ ಅರ್ಥವಾಗುತ್ತಿಲ್ಲ. ನಿನಗೇನಾದಾರೂ ಹುಚ್ಚು ಹಿಡಿದಿದೆಯಾ? ಯಾವ ಕತ್ತಲೆ? ನನಗೆ ಯಾವ ಕತ್ತಲೆಯ ಬಗ್ಗೆಯೂ ಗೊತ್ತಿಲ್ಲ. ನಾನು ಯಾವತ್ತೂ ಈ ಕತ್ತಲೆಯನ್ನು ಭೇಟಿ ಮಾಡಿಲ್ಲ. ನನಗೆ ಈ ಕತ್ತಲೆಯ ಬಗ್ಗೆ ವಿಷಯವೇ ಗೊತ್ತಿಲ್ಲ, ನಾನ್ಯಾಕೆ ಅದನ್ನ ಹಿಂಬಾಲಿಸಬೇಕು ಹಿಂಸಿಸಬೇಕು? ಈ ಕತ್ತಲೆ ಇರುವುದಾದರೂ ಎಲ್ಲಿ? ಈ ಕತ್ತಲೆಯನ್ನು ನನ್ನ ಮುಂದೆ ಕರೆಸು. ನ್ಯಾಯದ ಮಾತಾಗುವಾಗ ವಾದಿ ಪ್ರತಿವಾದಿ ಇಬ್ಬರೂ ಇರಬೇಕು. ನನ್ನ ಮೇಲೆ ದೂರು ಸಲ್ಲಿಸಿರುವ ಈ ಕತ್ತಲೆಯ ಮುಖವನ್ನು ನಾನು ಒಮ್ಮೆ ನೋಡಬೇಕು. ಕರೆಸು ಕತ್ತಲೆಯನ್ನ, ಅದರ ಎದುರು ನಾನು ನನ್ನ ಉತ್ತರ ಕೊಡುತ್ತೇನೆ. ನೀನು ನನ್ನ ಸೃಷ್ಟಿ ಮಾಡಿ ಎಷ್ಟೋ ಮಿಲಿಯನ್ನ ವರ್ಷಗಳಾಯ್ತು, ನಾನು ನನ್ನ ಕೆಲಸವನ್ನ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ, ಆದರೆ ಯಾವತ್ತೂ ಈ ಕತ್ತಲೆಯ ಹೆಸರು ಕೇಳಿಲ್ಲ, ಭೇಟಿ ಮಾಡಿಲ್ಲ. ಹೀಗಿರುವಾಗ ಯಾರೋ ಅಜ್ಞಾತ ವ್ಯಕ್ತಿಯೊಂದು ಕೊಟ್ಟ ದೂರಿನ ಮೇಲೆ ನೀನು ನನ್ನ ದೂಷಿಸುವುದು ಸರಿ ಅಲ್ಲ.” ಸೂರ್ಯ ಕೊಂಚ ಸಿಟ್ಟಿನಿಂದಲೇ ಮಾತನಾಡಿದ.
“ ಹಾಗಾದರೆ ನಾನು ಕತ್ತಲೆಯನ್ನ ಕರೆಸುತ್ತೇನೆ. ಇಬ್ಬರನ್ನು ಮುಖಾಮುಖಿಯಾಗಿಸಿ ನ್ಯಾಯತೀರ್ಮಾನ ಮಾಡುತ್ತೇನೆ.” ದೇವರು ಸೂರ್ಯನನ್ನು ಸಮಾಧಾನ ಮಾಡಿದ.
ಇದಾದ ನಂತರ ಎಷ್ಟೋ ಮಿಲಿಯನ್ ವರ್ಷಗಳಾದವು. ದೇವರಿಗೆ ಸೂರ್ಯ ಮತ್ತು ಕತ್ತಲೆಯನ್ನ ಮುಖಾ ಮುಖಿಯಾಗಿಸುವುದು ಸಾಧ್ಯವಾಗಲೇ ಇಲ್ಲ. ದೇವರು ಸರ್ವಶಕ್ತ ಎಂಬ ಮಾತು ನೀವು ಕೇಳಿದ್ದೀರಿ ಆದರೆ ಇದು ಸುಳ್ಳು. ದೇವರಿಗೆ ಸೂರ್ಯ ಮತ್ತು ಕತ್ತಲನ್ನು ಎದುರುಬದುರು ನಿಲ್ಲಿಸುವುದು ಸಾಧ್ಯವಾಗಲೇ ಇಲ್ಲ. ಒಮ್ಮೆ ಕತ್ತಲು ಬಂದು ದೂರು ಹೇಳಿ ಹೋಗುತ್ತದೆ. ಒಮ್ಮ ಸೂರ್ಯ ಬಂದು, ಆ ಕತ್ತಲನ್ನು ನನ್ನ ಮುಂದೆ ನಿಲ್ಲಿಸು, ಉತ್ತರ ಕೊಡುತ್ತೇನೆ ಎಂದು ವಾದ ಮಾಡಿ ಹೋಗುತ್ತಾನೆ. ಈ ಒಂದು ದೂರಿನ ಬಗ್ಗೆ ಇನ್ನೂ ಯಾವ ತೀರ್ಮಾನವೂ ಆಗಿಲ್ಲ. ಈ ಜಗಳ ಮುಂದುವರೆದೇ ಇದೆ. ಈ ಕೇಸಿನ ಫೈಲನ್ನು ನಾನು ನೋಡುತ್ತಿದ್ದೆ. ಇದು ಯಾವತ್ತೂ ಮುಕ್ತಾಯಗೊಳ್ಳುವ ಕೇಸ್ ಅಲ್ಲ.
ಕತ್ತಲೆ ಮತ್ತು ಬೆಳಕು ಯಾವತ್ತೂ ಮುಖಾಮುಖಿಯಾಗುವ ಸಾಧ್ಯತೆ ಇಲ್ಲ. ಕತ್ತಲೆಯೆಂದರೆ ಅಹಂ ಹಾಗು ಬೆಳಕೆಂದರೆ ಪ್ರಜ್ಞೆ; ಪ್ರಜ್ಞೆಯ ಅನುಪಸ್ಥಿತಿಯೇ ಈ ಅಹಂ. ನೀವು ಪ್ರಜ್ಞೆಯನ್ನ ಹೊಂದಿದಾಗ, ಅಹಂ ತಾನಾಗಿಯೇ ಮಾಯವಾಗುತ್ತದೆ. ಅಹಂ ಇಲ್ಲದಾಗ ಪ್ರಜ್ಞೆ ಅವತರಿಸುತ್ತದೆ. ಪ್ರಜ್ಞೆ ಪೂರ್ಣರೂಪ ಪಡೆದುಕೊಂಡಾಗ, ಅಹಂನ ವಿಳಾಸವೇ ಅಳಿಸಿ ಹೋಗುತ್ತದೆ. ಪ್ರಜ್ಞೆ ಪೂರ್ಣಗೊಳ್ಳುವ ಪ್ರಕ್ರಿಯೆಯ ಇನ್ನೊಂದು ಹೆಸರೇ ದೈವತ್ವದ ಅನುಭವ.
ನಿಮಗೆ ಮತ್ತೆ ಮತ್ತೆ ಹೇಳುತ್ತೇನೆ, ದೇವರು ಎಂದರೆ ಒಬ್ಬ ನಿರ್ದಿಷ್ಟ ಪೂರ್ಣಾವತಾರಿ ವ್ಯಕ್ತಿಯಲ್ಲ, ದೇವರು ಎಂದರೆ ಸಂಪೂರ್ಣ ಅರಿವು ಮತ್ತು ಆತ್ಯಂತಿಕ ಆನಂದದ ಅನುಭವ ಮಾತ್ರ. ಆದ್ದರಿಂದಲೇ ನಾನು ಹೇಳುವುದು, ನಿಮ್ಮ ನಗು ಆಳವಾಗಿರಲಿ, ನಿಮ್ಮ ಪ್ರೇಮ ಆಳವಾಗಿರಲಿ, ನಿಮ್ಮ ಬದುಕು ಆಳವಾಗಿರಲಿ. ಆಗ ಮಾತ್ರ ದೈವತ್ವದ ಅನುಭವ ಸಾಧ್ಯ. ನಗುವಿಗಾಗಿ, ಪ್ರೇಮಕ್ಕಾಗಿ, ಬದುಕಿಗಾಗಿ ಎಲ್ಲವನ್ನೂ ಪಣಕ್ಕಿಡಿ. ನಿಮ್ಮ ಬದುಕು, ನಮಗೆ ಯಾವುದು ಗೊತ್ತಿಲ್ಲವೋ, ಯಾವುದು ಗೊತ್ತಾಗುವುದು ಸಾಧ್ಯವೇ ಇಲ್ಲವೋ, ಯಾವುದನ್ನ ನಾವು ಕೇವಲ ಅನುಭವಿಸಬಲ್ಲೆವೋ, ಆ ಹಾದಿಯಲ್ಲಿ ಮುನ್ನಡೆಯುವ ಮಹಾ ಹುಡುಕಾಟವಾಗಿ ಮುಂದುವರೆಯಲಿ.