ಝುಸಿಯಾನ ಅಂತಿಮ ದುಃಖ : ಒಂದು ಸೂಫಿ ಕಥೆ

ಸಾವಿನ ಹಾಸಿಗೆಯಲ್ಲಿ ಝುಸಿಯಾ ದುಃಖಿಸಿದ್ದೇಕೆ ಗೊತ್ತೆ? ಓದಿ ಈ ಸೂಫಿ ಕಥೆ । ಕನ್ನಡಕ್ಕೆ: ಚಿದಂಬರ ನರೇಂದ್ರ

ಸಾವಿನ ಹಾಸಿಗೆಯಲ್ಲಿದ್ದ ಅನುಭಾವಿ ಝುಸಿಯಾ ಪ್ರಾರ್ಥನೆ ಶುರು ಮಾಡುತ್ತಿದ್ದಂತೆಯೇ ಅವನ ಕಣ್ಣುಗಳಿಂದ ಕಣ್ಣೀರು ಧಾರಾಕಾರವಾಗಿ ಹರಿಯತೊಡಗಿತು. ಅವನು ಕಂಪಿಸತೊಡಗಿದ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಝುಸಿಯಾನನ್ನ ಪ್ರಶ್ನೆ ಮಾಡಿದ, “ ಯಾಕೆ ಏನಾಯ್ತು, ಯಾಕೆ ಅಳುತ್ತಿದ್ದೀಯ?”

“ ಇದು ನನ್ನ ಕೊನೆಯ ಕ್ಷಣಗಳು, ಇನ್ನೇನು ನಾನು ಸಾಯುವವನಿದ್ದೇನೆ. ದೇವರನ್ನು ಭೇಟಿ ಮಾಡುವ ಗಳಿಗೆ ಹತ್ತಿರವಾಗುತ್ತಿದೆ. ದೇವರು ನನ್ನ ಭೇಟಿ ಮಾಡಿದ ತಕ್ಷಣ ಪ್ರಶ್ನೆ ಮಾಡಬಹುದು, ಯಾಕೆ ಝುಸಿಯಾ ನೀನು ಮೋಸೆಸ್ ನಂತೆ ಆಗಲಿಲ್ಲ? “

“ ಭಗವಂತ, ನೀನು ನನಗೆ ಮೋಸೆಸ್ ನ ಸ್ವಭಾವ, ಗುಣ ಲಕ್ಷಣಗಳನ್ನು ಕೊಡಲಿಲ್ಲ, ಹಾಗಾಗಿ ನಾನು ಮೋಸೆಸ್ ಆಗಲು ಸಾಧ್ಯವಾಗಲಿಲ್ಲ ಎಂದು ದೇವರ ಈ ಪ್ರಶ್ನೆಗೇನೋ ನಾನು ಉತ್ತರಿಸಬಲ್ಲೆ, “

“ದೇವರು ಆಮೇಲೆ ನನ್ನ ಪ್ರಶ್ನೆ ಮಾಡಬಹುದು, ಯಾಕೆ ನಾನು ರಬ್ಬಿ ಅಕೀಬಾ ನಂತೆ ಆಗಲಿಲ್ಲ ಎಂದು. ಆಗಲೂ ನಾನು ದೇವರಿಗೆ ಇದೇ ಉತ್ತರ ಕೊಡಬಲ್ಲೆ, ನೀನು ನನಗೆ ಅಕೀಬಾನ ಗುಣ ಸ್ವಭಾವಗಳನ್ನು ಕೊಡದ ಕಾರಣಕ್ಕಾಗಿ ಎಂದು. “

“ ಆದರೆ ದೇವರು ಅಕಸ್ಮಾತ್ ಆಗಿ, ಯಾಕೆ ನೀನು ಝುಸಿಯಾನಂತೆ ಬದುಕಲಿಲ್ಲ ಎಂದು ಪ್ರಶ್ನೆ ಮಾಡಿದರೆ, ಏನು ಉತ್ತರ ಹೇಳಲಿ? ದೇವರ ಮುಂದೆ ನಾಚಿಕೆಯಿಂದ ತಲೆ ತಗ್ಗಿಸಿ ನಿಲ್ಲುವ ಹೊರತಾಗಿ ಬೇರೆ ದಾರಿ ಇಲ್ಲ ನನಗೆ. ಇಂಥದೊಂದು ಪರಿಸ್ಥಿತಿ ನೆನಸಿಕೊಡು ನಾನು ನಡುಗುತ್ತಿದ್ದೇನೆ. “

“ ನನ್ನ ಇಡೀ ಬದುಕಿನಲ್ಲಿ ನಾನು ಮೋಸೆಸ್ ನಂತೆ, ಅಕೀಬಾ ನಂತೆ ಬದುಕಲು ಪ್ರಯತ್ನ ಮಾಡಿದೆ, ಅವರನ್ನು ಅನುಸರಿಸುವ ವಿಫಲ ಪ್ರಯತ್ನ ಮಾಡಿದೆ. ಆದರೆ ದೇವರು ನನ್ನನ್ನು ಝುಸಿಯಾ ನಂತೆ ಬದುಕಲು ಸೃಷ್ಟಿ ಮಾಡಿದ್ದ. ನಾನು ದೇವರ ಈ ಕಾರಣವನ್ನು ಗಮನಿಸದೇ ಇಡೀ ಜೀವನವನ್ನು ಇನ್ನೊಬ್ಬರಂತೆ ಬದುಕಲು ಪ್ರಯತ್ನಿಸಿ ಹಾಳು ಮಾಡಿಕೊಂಡೆ. ದೇವರು ಈ ಬಗ್ಗೆ ನನ್ನ ಪ್ರಶ್ನೆ ಮಾಡಿದರೆ ನಾನು ಏನೆಂದು ಉತ್ತರಿಸಲಿ? “

“ ನಿನಗೆ ಝುಸಿಯಾನಂತೆ ಬದುಕುವ ಎಲ್ಲ ಗುಣ ಸ್ವಭಾವಗಳನ್ನು ಕೊಟ್ಚಿದ್ದೆ ಆದರೆ ಯಾಕೆ ನೀನು ಝುಸಿಯಾನಂತೆ ಬದುಕಲಿಲ್ಲ ಎಂದು ದೇವರು ಪ್ರಶ್ನೆ ಮಾಡಿದರೆ, ದೇವರಿಗೆ ಏನು ಉತ್ತರ ಹೇಳಲಿ?”

ಅನುಭಾವಿ ಝುಸಿಯಾ ಬಿದ್ದು ಬಿದ್ದು ಕಣ್ಣೀರು ಹಾಕತೊಡಗಿದ.

Leave a Reply