ನಮ್ಮ ನಮ್ಮ ಪ್ರಕೃತಿಯ ಅನುಸರಣೆ: ಓಶೋ ವ್ಯಾಖ್ಯಾನ

ಬುದ್ಧ ಹೇಳುತ್ತಾನೆ, “ಯಾರಾದರೂ ನನಗೆ ಅಪಮಾನ ಮಾಡಿದರೆ ಅದು ಕೂಡ ಇಂಥ ಆಕಸ್ಮಿಕವೇ. ಆ ಮನುಷ್ಯನಿಗೆ ಸಿಟ್ಟು ಬಂದಾಗ, ನಾನು ಅವನ ಎದುರಿಗಿದ್ದ ಆಕಸ್ಮಿಕ. ನಾನು ಅವನ ಎದುರು ಇರದಿದ್ದ ಪಕ್ಷದಲ್ಲಿ ಅವನು ಇನ್ನಾರ ಮೇಲೋ ಸಿಟ್ಟು ಮಾಡಿಕೊಳ್ಳುತ್ತಿದ್ದ. ಸಿಟ್ಟು ಅವನ ಪ್ರಕೃತಿ, ಪ್ರಶಾಂತತೆ ನನ್ನ ಪ್ರಕೃತಿ, ನಾವಿಬ್ಬರೂ ನಮ್ಮನಮ್ಮ ಪ್ರಕೃತಿಗಳನ್ನು ಅನುಸರಿಸುತ್ತಿದ್ದೇವೆ ಅಷ್ಟೇ. ಇದರಲ್ಲಿ ಒಳ್ಳೆಯದು ಕೆಟ್ಟದ್ದು, ಮೇಲು ಕೀಳು ಯಾವ ವ್ಯತ್ಯಾಸವೂ ಇಲ್ಲ.” ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮ್ಮೆ ಒಬ್ಬ ಮನುಷ್ಯ ಬುದ್ಧನಿರುವಲ್ಲಿಗೆ ಬಂದು ಅವನನ್ನು ಸತತವಾಗಿ ನಿಂದಿಸಲು ಶುರು ಮಾಡುತ್ತಾನೆ. ಆದರೆ ಬುದ್ಧ ಅವನ ನಿಂದನೆಯನ್ನು ಪ್ರಶಾಂತವಾಗಿ ಕೇಳಿಸಿಕೊಳ್ಳುತ್ತಾನೆ. ಆ ವ್ಯಕ್ತಿ ಅಲ್ಲಿಂದ ಹೊರಟುಹೋದ ಮೇಲೆ ಬುದ್ಧನ ಶಿಷ್ಯರು ಅವನನ್ನು ಪ್ರಶ್ನೆ ಮಾಡುತ್ತಾರೆ, “ ಅವನು ಅಷ್ಟು ನಿಂದಿಸುತ್ತಿದ್ದರೂ ನೀವು ಒಂದು ಪ್ರತಿ ಮಾತನ್ನೂ ಆಡದೆ ಬಹಳ ಪ್ರಶಾಂತವಾಗಿ ಅವನ ಮಾತುಗಳನ್ನ ಕೇಳುತ್ತಿದ್ದಿರಲ್ಲ, ಇದರ ಕಾರಣ ಏನು?”

ಬುದ್ಧ ಉತ್ತರಿಸುತ್ತಾನೆ, “ಅದು ಅವನ ನಿಜವಾದ ಪ್ರಕೃತಿ (suchness) ಹಾಗಾಗಿ ಅವನು ಹಾಗೆ ವರ್ತಿಸಿದ. ಪ್ರಶಾಂತತೆ ನನ್ನ ಪ್ರಕೃತಿ ಆದ್ದರಿಂದ ನಾನು ನನ್ನ ಸಮಾಧಾನ ಕಳೆದುಕೊಳ್ಳಲಿಲ್ಲ. ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನೂ ಇಲ್ಲ. ಇದು ನನ್ನನ್ನು ಆ ಮನುಷ್ಯನಿಗಿಂತ ಶ್ರೇಷ್ಠನನ್ನಾಗಿಸುವುದಿಲ್ಲ, ಪವಿತ್ರವಾಗಿಸುವುದಿಲ್ಲ. ಕೇವಲ ನಮ್ಮ ಪ್ರಕೃತಿಗಳು ಬೇರೆ ಬೇರೆಯಾಗಿವೆ ಅಷ್ಟೇ, ಬೇರೆ ವ್ಯತ್ಯಾಸವೇನಿಲ್ಲ.”

ತಥಾಗಥ ಎನ್ನುವ ಪದ ತುಂಬ ಘನವಾದದ್ದು. ಯಾರಿಗೆ ಈ ಪದದ ಅರ್ಥವನ್ನು ಮನನ ಮಾಡಿಕೊಳ್ಳಲು ಸಾಧ್ಯವಾಗಿದೆಯೋ ಅವರು, ಯಾವ ಕಾರಣಕ್ಕೂ ಯಾವ ಸನ್ನಿವೇಶದಲ್ಲೂ ವಿಚಲಿತರಾಗುವುದಿಲ್ಲ. ಅವರನ್ನು ಯಾರೂ ಡಿಸ್ಟರ್ಬ್ ಮಾಡುವುದು ಸಾಧ್ಯವಿಲ್ಲ. ತಥಾಗಥ ಎನ್ನುವ ಸುಂದರ ಪದ ಬೇರೆ ಯಾವ ಭಾಷೆಯಲ್ಲೂ ಇಲ್ಲ. ತಥಾಗಥ ಎಂದರೆ ಪ್ರತಿ ಕ್ಷಣದಲ್ಲಿ ಬದುಕುತ್ತಿರುವವನು, ತನ್ನ ಪ್ರಕೃತಿಗನುಗುಣವಾಗಿ ಬೇರೆ ಯಾರ ಪ್ರಕೃತಿಗೂ ವಿಚಲಿತನಾಗದಂತೆ ಬದುಕುತ್ತಿರುವವನು. ದ್ವೇಷ ಅಸೂಯೆ, ಭ್ರಮೆಗಳಿಂದ ಹೊರತಾದವನು.

ಬುದ್ಧ ತನ್ನ ಶಿಷ್ಯರಿಗೆ ಆಗಾಗ ಈ ಮಾತು ಹೇಳುತ್ತಿದ್ದ, “ ಒಮ್ಮೆ ನಾನು ಕಾಡಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ, ಮರದ ರೆಂಬೆಯೊಂದು ಮುರಿದುಕೊಂಡು ನನ್ನ ಮೇಲೆ ಬಿದ್ದು ನನಗೆ ಗಾಯ ಮಾಡಿತು. ಇಂಥ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕು? ನಾನೂ ಪ್ರತಿಯಾಗಿ ಆ ಮರದ ರೆಂಬೆಗೆ ಹೊಡೆಯಬೇಕೆ, ನಿಂದಿಸಬೇಕೆ? ಈ ಪ್ರಶ್ನೆ ನಮ್ನೊಳಗೆ ಹುಟ್ಟಿಕೊಳ್ಳುವುದಿಲ್ಲ ಅಲ್ಲವೆ? ಆ ಮರಕ್ಕೆ ನನಗೆ ಗಾಯ ಮಾಡುವ ಯಾವ ಇಚ್ಛೆಯೂ ಇರಲಿಲ್ಲ, ನನ್ನ ಮೇಲೆ ಮುರಿದು ಬೀಳುವ ಯಾವ ಬಯಕೆಯೂ ಇರಲಿಲ್ಲ. ಇದು ಒಂದು ನೈಸರ್ಗಿಕ ಪ್ರಕ್ರಿಯೆ, ಅಪಘಾತ. ಆ ಮರದ ರೆಂಬೆ ಮುರಿದು ಬೀಳುವ ಸಮಯದಲ್ಲಿ ನಾನು ಆ ಮರದ ಕೆಳಗೆ ದಾಟಿ ಹೋಗುತ್ತಿದ್ದುದು ಒಂದು ಆಕಸ್ಮಿಕ.”

ಬುದ್ಧ ತನ್ನ ಮಾತು ಮುಂದುವರೆಸುತ್ತ, “ಯಾರಾದರೂ ನನಗೆ ಅಪಮಾನ ಮಾಡಿದರೆ ಅದು ಕೂಡ ಇಂಥ ಆಕಸ್ಮಿಕವೇ. ಆ ಮನುಷ್ಯನಿಗೆ ಸಿಟ್ಟು ಬಂದಾಗ, ನಾನು ಅವನ ಎದುರಿಗಿದ್ದ ಆಕಸ್ಮಿಕ. ನಾನು ಅವನ ಎದುರು ಇರದಿದ್ದ ಪಕ್ಷದಲ್ಲಿ ಅವನು ಇನ್ನಾರ ಮೇಲೋ ಸಿಟ್ಟು ಮಾಡಿಕೊಳ್ಳುತ್ತಿದ್ದ. ಸಿಟ್ಟು ಅವನ ಪ್ರಕೃತಿ, ಪ್ರಶಾಂತತೆ ನನ್ನ ಪ್ರಕೃತಿ, ನಾವಿಬ್ಬರೂ ನಮ್ಮನಮ್ಮ ಪ್ರಕೃತಿಗಳನ್ನು ಅನುಸರಿಸುತ್ತಿದ್ದೇವೆ ಅಷ್ಟೇ. ಇದರಲ್ಲಿ ಒಳ್ಳೆಯದು ಕೆಟ್ಟದ್ದು, ಮೇಲು ಕೀಳು ಯಾವ ವ್ಯತ್ಯಾಸವೂ ಇಲ್ಲ.”

ಒಮ್ಮೆ ಇಬ್ಬರು ಝೆನ್ ಸನ್ಯಾಸಿಗಳು ನದಿಯಲ್ಲಿ ತಮ್ಮ ಊಟದ ತಟ್ಚೆ ತೊಳೆಯುತ್ತಿದ್ದಾಗ ಒಂದು ಚೇಳು ನದಿಯಲ್ಲಿ ಕೊಚ್ಚಿಕೊಂಡು ಹೋಗುವುದನ್ನು ಕಂಡರು.
ತಟ್ಚನೆ ಒಬ್ಬ ಸನ್ಯಾಸಿ ಅದನ್ನು ನದಿಯಿಂದ ಹೊರ ತೆಗೆದು ದಂಡೆಯ ಮೇಲೆ ಬಿಟ್ಟ. ಹೀಗೆ ಮಾಡುವಾಗ ಚೇಳು ಸನ್ಯಾಸಿಯ ಬೆರಳಿಗೆ ಕಚ್ಚಿಬಿಟ್ಟಿತು. ಸನ್ಯಾಸಿ ತಲೆ ಕೆಡಿಸಿಕೊಳ್ಳದೆ ಮತ್ತೆ ತಟ್ಟೆ ತೊಳೆಯುವುದನ್ನು ಮುಂದುವರೆಸಿದ.

ಸ್ವಲ್ಪ ಹೊತ್ತಿನ ನಂತರ ಚೇಳು ಮತ್ತೆ ಜಾರಿ ನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗತೊಡಗಿತು. ಸನ್ಯಾಸಿ ಮತ್ತೆ ಆ ಚೇಳನ್ನು ಎತ್ತಿ ದಂಡೆಯ ಮೇಲೆ ಬಿಟ್ಟ. ಚೇಳು ಮತ್ತೆ ಸನ್ಯಾಸಿಯ ಬೆರಳನ್ನು ಕಚ್ಚಿತು.

ಇದನ್ನೆಲ್ಲ ಗಮನಿಸುತ್ತಿದ್ದ ಇನ್ನೊಬ್ಬ ಸನ್ಯಾಸಿ ಕೇಳಿದ,

“ ಗೆಳೆಯಾ, ಕಚ್ಚುವುದು ಚೇಳಿನ ಸಹಜ ಧರ್ಮ, ಅದನ್ನು ಕಾಪಾಡಿ ಏನು ಪ್ರಯೋಜನ?

ಮೊದಲ ಸನ್ಯಾಸಿ ಉತ್ತರಿಸಿದ

“ ಗೆಳೆಯಾ, ನಾನು ಚೇಳನ್ನು ಕಾಪಾಡುತ್ತಿಲ್ಲ, ನನ್ನ ಸಹಜ ಧರ್ಮವನ್ನು ಕಾಪಾಡುತ್ತಿದ್ದೇನೆ”

Leave a Reply