ಪೂರ್ಣವಾದ ಬದುಕು ಮತ್ತು ಪೂರ್ಣವಾದ ಸಾವು… : ಓಶೋ ವ್ಯಾಖ್ಯಾನ

ಯಾವಾಗ ನೀವು, ನಿಮ್ಮ ಒಳಗಿನ ತಿರುಳಿಗೆ ಹತ್ತಿರವಾಗುತ್ತೀರೋ ಆಗ ನಿಮಗೆ ಗೊತ್ತಾಗುತ್ತದೆ ಇಷ್ಟು ದಿನಗಳ ನಿಮ್ಮ ಬಯಕೆಗಳೆಲ್ಲ ವ್ಯರ್ಥವೆಂದು, ನಿಮಗೆ ನಿಜವಾಗಿ ಬೇಕಾದದ್ದು, ನಿಮ್ಮ ಪೋಷಣೆಗೆ ನಿಜವಾಗಿ ಆಗತ್ಯವಾದದ್ದು, ನಿಮ್ನೊಳಗೆ ನಿಮಗಾಗಿ ಕಾಯುತ್ತಿದೆ ಎಂದು. ಹಾಗಾಗಿ ನಿಮ್ಮ ಹುಡುಕಾಟ ಅಂತರ್ಮುಖಿಯಾಗಿರಬೇಕೇ ಹೊರತು ಬಹಿರ್ಮುಖಿಯಾಗಿದ್ದರೆ ಪ್ರಯೋಜನವಿಲ್ಲ… ~ ಓಶೋ| ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ

ಇಡೀ ಜಗತ್ತನ್ನು ಆಳುವುದಕ್ಕಿಂತ ಸ್ವತಃ ನಮ್ಮನ್ನು ನಾವು ಆಳುವುದು ಬಹಳ ಮುಖ್ಯವಾದದ್ದು. ಬುದ್ಧ ತನ್ನ ಪೂರ್ಣ ಬದುಕನ್ನ ಬದುಕಿದ ಮತ್ತು ಪೂರ್ಣವಾಗಿ ಸಾವನ್ನು ಅನುಭವಿಸಿದ ಆದರೆ ಅಲೆಕ್ಸಾಂಡರ್ ದಿ ಗ್ರೇಟ್ ಇಡೀ ಜಗತ್ತಿನ ಮೇಲೆ ಹಕ್ಕನ್ನೇನೋ ಸ್ಥಾಪಿಸಿದ ಆದರೆ ಅವನ ಬದುಕು ಖಾಲಿಯಾಗಿತ್ತು ಅವನು ಸಾವು ಕೂಡ.

“ ನಾನು ಸತ್ತಾಗ ನನ್ನ ಕೈ ಶವ ಪೆಟ್ಟಿಗೆಯಿಂದ ಹೊರಗೆ ಎಲ್ಲರಿಗೂ ಕಾಣುವಂತೆ ಇರಲಿ “ ಎಂದು ತನ್ನ ಜನರಲ್ ಗಳಿಗೆ ಅಲೆಕ್ಸಾಂಡರ್ ಆಜ್ಞೆ ಮಾಡಿದ್ದ. ಹಾಗೆ ಕೈಗಳನ್ನು ಶವ ಪೆಟ್ಟಿಗೆಯಿಂದ ಹೊರಗೆ ಕಾಣುವಂತೆ ಮಾಡುವುದು ಸಂಪ್ರದಾಯವಲ್ಲವಾದ್ದರಿಂದ ಅಲೆಕ್ಸಾಂಡರ್ ನ ಜನರಲ್ ಗಳು ಹಾಗೆ ಮಾಡಲು ಹಿಂಜರಿದಾಗ ಅವರಿಗೆ ಅಲೆಕ್ಸಾಂಡರ್ ಹೇಳಿದ್ದು; “ ಹಾಗೆ ಮಾಡುವುದು ಸಂಪ್ರದಾಯಕ್ಕೆ ವಿರುದ್ಧವಾಗಿರಬಹುದು ಆದರೆ ನಾನು ಸತ್ತಾಗ ನನ್ನ ಕೈಗಳು ಖಾಲಿ ಇರುವುದನ್ನ ಜನ ನೋಡಬೇಕು ಎನ್ನುವುದು ನನ್ನ ಬಯಕೆ.”

ಅಲೆಕ್ಸಾಂಡರ್ ನ ಬಯಕೆಯಂತೆ ಅವನ ಖಾಲೀ ಕೈಗಳನ್ನು ಶವ ಪೆಟ್ಟಿಗೆಯಿಂದ ಹೊರಗೆ ಕಾಣುವಂತೆ ಇರಿಸಿ ಶವಯಾತ್ರೆ ಮಾಡಲಾಯಿತು. ಅವನ ಕೊನೆಯ ದರ್ಶನಕ್ಕಾಗಿ ಸೇರಿದ್ದ ಲಕ್ಷಾಂತರ ಜನ ಶವ ಪೆಟ್ಟಿಗೆಯಿಂದ ಹೊರ ಚಾಚಿದ್ದ ಅಲೆಕ್ಸಾಂಡರ್ ನ ಕೈಗಳನ್ನು ಕಂಡು ಆಶ್ಚರ್ಯಚಕಿತರಾದರು. ನಿಧಾನಾವಾಗಿ ಜನರ ನಡುವೆ ಅಲೆಕ್ಸಾಂಡರ್ ನ ಕೊನೆಯ ಬಯಕೆಯ ವಿಷಯ ಹಬ್ಬತೊಡಗಿತು. ತಾನು ಸತ್ತಾಗ ತನ್ನ ಕೈಗಳು ಖಾಲೀಯಾಗಿದ್ದವು ಎನ್ನುವದನ್ನ ಜನ ನೋಡಲಿ, ತನ್ನ ಬದುಕು ಪೂರ್ತಿ ವ್ಯರ್ಥವಾದದ್ದನ್ನ ಜನ ತಿಳಿದುಕೊಳ್ಳಲಿ ಎನ್ನುವ ಅಲೆಕ್ಸಾಂಡರ್ ನ ಬಯಕೆಯ ಬಗ್ಗೆ ಜನ ಪರಿಚಿತರಾದರು.

ಯಾವಾಗ ನೀವು, ನಿಮ್ಮ ಒಳಗಿನ ತಿರುಳಿಗೆ ಹತ್ತಿರವಾಗುತ್ತೀರೋ ಆಗ ನಿಮಗೆ ಗೊತ್ತಾಗುತ್ತದೆ ಇಷ್ಟು ದಿನಗಳ ನಿಮ್ಮ ಬಯಕೆಗಳೆಲ್ಲ ವ್ಯರ್ಥವೆಂದು, ನಿಮಗೆ ನಿಜವಾಗಿ ಬೇಕಾದದ್ದು, ನಿಮ್ಮ ಪೋಷಣೆಗೆ ನಿಜವಾಗಿ ಆಗತ್ಯವಾದದ್ದು, ನಿಮ್ನೊಳಗೆ ನಿಮಗಾಗಿ ಕಾಯುತ್ತಿದೆ ಎಂದು. ಹಾಗಾಗಿ ನಿಮ್ಮ ಹುಡುಕಾಟ ಅಂತರ್ಮುಖಿಯಾಗಿರಬೇಕೇ ಹೊರತು ಬಹಿರ್ಮುಖಿಯಾಗಿದ್ದರೆ ಪ್ರಯೋಜನವಿಲ್ಲ. ನೀವು ಹೊರ ಜಗತ್ತನ್ನು ಗೆದ್ದು ಅಲೆಕ್ಸಾಂಡರ್ ದಿ ಗ್ರೇಟ್ ಆಗಬಹುದು ಆದರೆ ನೀವು ಸತ್ತಾಗ ನಿಮ್ಮ ಕೈಗಳು ಖಾಲೀ ಆಗಿರುವುದನ್ನ ತಪ್ಪಿಸಲಾರಿರಿ. ಆದ್ದರಿಂದ ನಿಮ್ಮೊಳಗಿನ ಪ್ರಯಾಣವನ್ನ ತಪ್ಪಿಸಿಕೊಳ್ಳಬೇಡಿ, ಬುದ್ಧನ ಹಾಗೆ ಪೂರ್ಣವಾದ ಬದುಕನ್ನ ಬದುಕಿ ಪೂರ್ಣವಾದ ಸಾವನ್ನು ಅನುಭವಿಸಿ.

ಒಬ್ಬ ಝೆನ್ ಮಾಸ್ಟರ್ ಗೆ ಒಬ್ಬ ಅತೃಪ್ತ ಶಿಷ್ಯನಿದ್ದ. ಆತ ಒಂದಿಲ್ಲೊಂದು ಕಾರಣದಿಂದ ಸದಾ ದುಃಖಿಯಾಗಿರುತ್ತಿದ್ದ. ಒಂದು ದಿನ ಶಿಷ್ಯ, ಮಾಸ್ಟರ್ ಹತ್ತಿರ ಹೋಗಿ ಕೇಳಿಕೊಂಡ.

“ಮಾಸ್ಟರ್, ನನ್ನ ಮೇಲೆ ನಿಮ್ಮ ಆಶೀರ್ವಾದವಿರಲಿ, ನನಗೂ ನಿಮ್ಮ ತಿಳಿವನ್ನು ದಯಪಾಲಿಸಿ, ನನಗೆ ದುಃಖದಿಂದ ಮುಕ್ತಿ ಬೇಕು, ಆನಂದವನ್ನು ಹುಡುಕಬೇಕು ನಾನು”

ಮಾಸ್ಟರ್, ಆ ಅತೃಪ್ತ ಶಿಷ್ಯನಿಗೆ ಒಂದು ಮುಷ್ಟಿ ಉಪ್ಪನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ, ಕರಗಿಸಿ, ಕುಡಿಯಲು ಹೇಳಿದರು.

ಒಂದು ಗುಟುಕು ಉಪ್ಪಿನ ನೀರು ಬಾಯಿಗೆ ಬೀಳುತ್ತಲೇ ಶಿಷ್ಯ, ವ್ಯಾಕ್ ಎನ್ನುತ್ತ ಎಲ್ಲ ಉಗಳಿ ಬಿಟ್ಟ.

“ ಯಾಕೆ? ಹೇಗಿದೆ ರುಚಿ ?” ಕೇಳಿದರು ಮಾಸ್ಟರ್. “

“ ದರಿದ್ರವಾಗಿದೆ” ಎಂದ ಶಿಷ್ಯ.

ಮಾಸ್ಟರ್, ಶಿಷ್ಯನ ಕೈ ಹಿಡಿದುಕೊಂಡು ದರದರನೇ ಎಳೆದುಕೊಂಡು ಸಮೀಪದ ಕೊಳದ ಹತ್ತಿರ ಬಂದರು.

“ ಈ ಕೊಳದಲ್ಲಿ ಒಂದು ಮುಷ್ಟಿ ಉಪ್ಪು ಹಾಕು ನೋಡೋಣ ” ಎಂದರು.

ಶಿಷ್ಯ, ಮಾಸ್ಟರ್ ಹೇಳಿದಂತೆ ಮಾಡಿದ.

“ ಈಗ ಕೊಳದ ನೀರು ಕುಡಿದು ಹೇಳು, ರುಚಿ ಹೇಗಿದೆ? ಮೊದಲಿನ ಹಾಗೆ ಉಪ್ಪು ಉಪ್ಪಾಗಿದೆಯಾ?”

ಶಿಷ್ಯ, ಕೊಳದಿಂದ ಒಂದು ಬೊಗಸೆ ನೀರು ಕುಡಿದು ಹೇಳಿದ “ ಇಲ್ಲ ಮಾಸ್ಟರ್, ರುಚಿಯಾಗಿದೆ ”

ಶಿಷ್ಯನನ್ನು ಕೊಳದ ದಂಡೆಯ ಮೇಲೆ ಕೂರಿಸಿ, ಕೈ ಹಿಡಿದುಕೊಂಡು ಮಾಸ್ಟರ್ ಹೇಳಿದರು.

“ ಬದುಕಿನಲ್ಲಿ ದುಃಖದ ಪ್ರಮಾಣ, ಕಷ್ಟಗಳ ಪ್ರಮಾಣ ಒಂದು ಮುಷ್ಟಿ ಉಪ್ಪಿನಷ್ಟೇ. ಆದರೆ ಅದನ್ನು ಅನುಭವಿಸುವಾಗ, ನೀನು ಗ್ಲಾಸಿನಷ್ಟಾಗಬೇಡ, ಕೊಳದಷ್ಟಾಗು. ದುಃಖವನ್ನು, ಕಷ್ಟಗಳನ್ನು ಭರಿಸುವ ನಿನ್ನ ಅರಿವಿನ ವ್ಯಾಪ್ತಿ ಕೊಳದಷ್ಟು ವಿಶಾಲವಾಗಲಿ. ಆಗ ನಿನಗೆ ಕೊಳದ ನೀರಿನಂತೆ ಎಲ್ಲ ರುಚಿಯಾಗೇ ಇರುವುದು. ಆಗ ಪೂರ್ಣ ಬದುಕನ್ನು ಬದುಕಲು ನಿನಗೆ ಸಾಧ್ಯವಾಗುತ್ತದೆ. ನಿನ್ನ ಅರಿವನ್ನು ವಿಸ್ತಾರ ಮಾಡಿಕೋ ಆಗ ನಿನ್ನ ಸಾವು ಕೂಡ ಸಮೃದ್ಧವಾಗಿರುತ್ತದೆ.”

Leave a Reply