ನೀವು ಅಂಗಡಿಯಲ್ಲಿ, ಮಾರುಕಟ್ಟೆಯಲ್ಲಿ, ಶಾಲೆಯಲ್ಲಿ ಜಾಗೃತವಾಗಿ ಇರದೇ ಇದ್ದರೆ, ಧಿಡೀರನೇ ದೇವಸ್ಥಾನದಲ್ಲಿ ಜಾಗೃತರಾಗಿರುವುದು ಹೇಗೆ ಸಾಧ್ಯ. ನಿಮ್ಮ ಅಂತರಂಗದ ಭಾಗವಾಗಿರದ ಹೊರತು ಧಿಡೀರ್ ನೇ ಯಾವುದೂ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಬುದ್ಧ ಹೇಳುವುದು, ನೀವು ದಿನದ ಇಪ್ಪತ್ನಾಲ್ಕು ಗಂಟೆಯೂ ಧ್ಯಾನ ಮಾಡುತ್ತೀರಿ ಅಥವಾ ನೀವು ಯಾವ ಧ್ಯಾನವನ್ನೂ ಮಾಡುತ್ತಿಲ್ಲ… ~ ಓಶೋ
ಶಿಷ್ಯನೊಬ್ಬ ಬುದ್ಧನನ್ನು ಪ್ರಶ್ನೆ ಮಾಡಿದ, “ ಧ್ಯಾನ ಮಾಡುವುದು ಹೇಗೆ?”
“ ನೀನು ಏನು ಮಾಡಿದರೂ ಪೂರ್ಣ ಅರಿವಿನಿಂದ ಮಾಡು, ಇದೇ ಧ್ಯಾನ.” ಬುದ್ಧ ಉತ್ತರಿಸಿದ. “ ವಾಕ್ ಮಾಡುವಾಗ ನಡೆದಾಡುವ ಕ್ರಿಯೆಯ ಮೇಲೆ ನಿನ್ನ ಪೂರ್ಣ ಧ್ಯಾನವಿರಲಿ. ಆ ಸಮಯದಲ್ಲಿ ವಾಕ್ ಮಾಡುವುದನ್ನೊಂದು ಬಿಟ್ಟರೆ ಬೇರೆ ಯಾವುದೂ ನಿನ್ನ ಯೋಚನೆಗೆ ಬಾರದಿರಲಿ. ಊಟ ಮಾಡುವಾಗಲೂ ಹಾಗೆಯೇ. ನೀನು ಊಟ ಮಾಡುತ್ತಿರುವುದು ಅತ್ಯಂತ ಪವಿತ್ರ ಕ್ರಿಯೆ ಎನ್ನುವ ಭಾವವೊಂದನ್ನು ಬಿಟ್ಟು ಬೇರೆ ಯಾವ ಯೋಚನೆಯೂ ನಿನ್ನತ್ತ ಸುಳಿಯದಿರಲಿ. ಪ್ರತಿಯೊಂದು ತುತ್ತನ್ನು ಉಣ್ಣುವಾಗಲೂ, ನೀನು ಪ್ರಜ್ಞಾಪೂರ್ವಕವಾಗಿ ಆ ತುತ್ತನ್ನು ಅನುಭವಿಸು. ಏಳುವಾಗ, ಕೂಡುವಾಗ, ತೋಟದಲ್ಲಿ ಕೆಲಸ ಮಾಡುವಾಗ, ಪ್ರತಿಯೊಂದು ಕೆಲಸ ಮಾಡುವಾಗಲೂ ಅರಿವು ನಿನ್ನನ್ನು ತುಂಬಿಕೊಳ್ಳಲಿ, ಮಾಡುತ್ತಿರುವ ಕೆಲಸವೊಂದನ್ನು ಬಿಟ್ಟು ಬೇರೆ ಯಾವ ಆಲೋಚನೆಗಳೂ ನಿನ್ನನ್ನು ಕಾಡದಿರುವುಂತೆ ಲಕ್ಷ ವಹಿಸು. ನಿನ್ನ ಪೂರ್ಣ ಮನಸ್ಸು ಆ ಒಂದು ಕ್ಷಣದಲ್ಲಿ ಮಗ್ನವಾಗಿರಲಿ, ಆ ಒಂದು ಕ್ಷಣವನ್ನು ಬಿಟ್ಟು ನಿನ್ನ ಮನಸ್ಸು ಮುಂದೆ ಅಥವಾ ಹಿಂದೆ ಪ್ರಯಾಣ ಮಾಡದಿರಲಿ, ನಿನ್ನ ಮನಸ್ಸು ಆ ಒಂದು ಕ್ಷಣದಲ್ಲಿ ಸ್ಥಿರವಾಗಿರಲಿ. ಇದೇ ಧ್ಯಾನ.” ಬುದ್ಧ ತನ್ನ ಮಾತನ್ನು ವಿಸ್ತರಿಸಿ ಶಿಷ್ಯನಿಗೆ ಧ್ಯಾನದ ವ್ಯಾಖ್ಯಾನ ಮಾಡಿದ.
ಧ್ಯಾನ ಒಂದು ಪ್ರತ್ಯೇಕ ಕ್ರಿಯೆಯಲ್ಲ. ಬೇರೆಲ್ಲ ಕೆಲಸಗಳನ್ನು ಬಿಟ್ಟು ಪ್ರತ್ಯೇಕವಾಗಿ ಕುಳಿತುಕೊಂಡು ಭಾಗವಹಿಸುವ ಕ್ರಿಯೆಯಲ್ಲ. ಬದುಕನ್ನು ಪೂರ್ಣ ಅರಿವಿನಿಂದ ಬದುಕುವ ಪ್ರಕ್ರಿಯೆಯೇ ಧ್ಯಾನ. ಪ್ರತಿದಿನ ಒಂದು ಗಂಟೆ ಪ್ರತ್ಯೇಕವಾಗಿ ಕಣ್ಣು ಮುಚ್ಚಿಕೊಂಡು ಕುಳಿತುಕೊಂಡು
ಮತ್ತೆ ಮರುದಿನಕ್ಕೆ ಕಾಯುವ ಕ್ರಿಯೆಯಲ್ಲ ಧ್ಯಾನ. ದಿನದ ಒಂದು ಗಂಟೆ ಧ್ಯಾನ ಮಾಡಿ, ಬೇರೆ ಇಪತ್ಮೂರು ಗಂಟೆಗಳನ್ನ ಗೊಂದಲದಲ್ಲಿ ಬದುಕಿದರೆ, ಆ ಇಪ್ಪತ್ಮೂರು ಗಂಟೆಗಳ ಗೊಂದಲ ನಿಮ್ಮ ಒಂದು ಗಂಟೆಯ ಧ್ಯಾನವನ್ನು ಸೋಲಿಸಿಬಿಡುತ್ತದೆ. ಇಪ್ಪತ್ಮೂರು ಗಂಟೆಗಳ ಪ್ರಜ್ಞೆಯ ಹೊರತಾದ ಬದುಕು ನಿಮ್ಮನ್ನು ಬುದ್ಧತ್ವದಿಂದ ದೂರಮಾಡುತ್ತದೆ.
ನೀವು ಅಂಗಡಿಯಲ್ಲಿ, ಮಾರುಕಟ್ಟೆಯಲ್ಲಿ, ಶಾಲೆಯಲ್ಲಿ ಜಾಗೃತವಾಗಿ ಇರದೇ ಇದ್ದರೆ, ಧಿಡೀರ್ ನೇ ದೇವಸ್ಥಾನದಲ್ಲಿ ಜಾಗೃತರಾಗಿರುವುದು ಹೇಗೆ ಸಾಧ್ಯ. ನಿಮ್ಮ ಅಂತರಂಗದ ಭಾಗವಾಗಿರದ ಹೊರತು ಧಿಡೀರ್ ನೇ ಯಾವುದೂ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಬುದ್ಧ ಹೇಳುವುದು, ನೀವು ದಿನದ ಇಪ್ಪತ್ನಾಲ್ಕು ಗಂಟೆಯೂ ಧ್ಯಾನ ಮಾಡುತ್ತೀರಿ ಅಥವಾ ನೀವು ಯಾವ ಧ್ಯಾನವನ್ನೂ ಮಾಡುತ್ತಿಲ್ಲ.
ಒಮ್ಮೆ ಒಬ್ಬ ಝೆನ್ ಮಾಸ್ಟರ್, ತನ್ನ ಐವರು ಶಿಷ್ಯರು ದಾರಿಯಲ್ಲಿ ಸೈಕಲ್ ಮೇಲೆ ಬರುತ್ತಿರುವುದನ್ನ ಗಮನಿಸಿದ. ಅವರು ಸೈಕಲ್ ನಿಂದ ಇಳಿದೊಡನೆ ನೇರವಾಗಿ ಅವರ ಹತ್ತಿರ ಹೋಗಿ ಪ್ರಶ್ನೆ ಮಾಡಿದ. “ ನೀವು ಯಾಕೆ ಸೈಕಲ್ ಮೇಲೆ ಪ್ರಯಾಣ ಮಾಡುತ್ತಿದ್ದೀರಿ? “
ಮೊದಲ ಶಿಷ್ಯ ಉತ್ತರಿಸಿದ. “ ಆಲೂಗಡ್ಡೆ ಮೂಟೆ ಬೆನ್ನ ಮೇಲೆ ಹೊತ್ತು ತರುವುದು ಕಷ್ಟ ಮಾಸ್ಟರ್ ಅದಕ್ಕೇ ಸೈಕಲ್ ಉಪಯೋಗ ಮಾಡುತ್ತಿದ್ದೀನಿ”
“ ಜಾಣ ನೀನು ವಯಸ್ಸಾದ ಮೇಲೆ, ನನ್ನ ಹಾಗೆ ಬೆನ್ನು ಬಾಗಿಸಿಕೊಂಡು ಓಡಾಡಬೇಕಿಲ್ಲ” ಮಾಸ್ಟರ್ ಉತ್ತರಿಸಿದರು.
ಎರಡನೇಯ ಶಿಷ್ಯ ಉತ್ತರಿಸಿದ “ ದಾರಿ ಬದಿಯ ಗಿಡ ಮರಗಳು, ಹೊಲ ಗದ್ದೆಗಳನ್ನು ನೋಡುವುದೆಂದರೆ ನನಗೆ ಖುಶಿ ಮಾಸ್ಟರ್, ಅದಕ್ಕೇ ಸೈಕಲ್ ಹತ್ತಿ ವಿಹಾರಕ್ಕೆ ಹೋಗಿದ್ದೆ”
“ ಒಳ್ಳೆಯ ವಿಷಯ, ನಿನಗೆ ಒಳ್ಳೆಯ ಕಣ್ಣಗಳಿವೆ, ತೆರೆದ ಕಣ್ಣುಗಳಿಂದ ಜಗತ್ತನ್ನ ಗಮನಿಸುತ್ತಿದ್ದೀಯಾ” ಮಾಸ್ಟರ್ ಉತ್ತರಿಸಿದರು.
“ ಸೈಕಲ್ ನ ಪೆಡಲ್ ತುಳಿಯುವಾಗಲೆಲ್ಲ ನಾನು ಮಂತ್ರ ಪಠಣ ಮಾಡುತ್ತೇನೆ ಮಾಸ್ಟರ್, ಸೈಕಲ್ ತುಳಿಯುವುದು ನನಗೆ ಮನಸ್ಸನ್ನು ಕೇಂದ್ರಿಕರಿಸುವ ಒಂದು ಸಾಧನ “ ಮೂರನೇಯ ಶಿಷ್ಯ ಉತ್ತರಿಸಿದ.
“ ಹೌದು, ನಿನ್ನ ಮನಸ್ಸು ಸೈಕಲ್ ನ ಗಾಲಿಯಂತೆ ಸರಾಗವಾಗಿ ಉರುಳುತ್ತದೆ” ಮಾಸ್ಟರ್ ಉತ್ತರಿಸಿದರು.
ನಾಲ್ಕನೇಯ ಶಿಷ್ಯ ಉತ್ತರಿಸಿದ “ ಸೈಕಲ್ ತುಳಿಯುವಾಗ ನಾನು ಸುತ್ತ ಮುತ್ತಲಿನ ಪ್ರಕೃತಿಯೊಂದಿಗೆ ಸಾಮರಸ್ಯದಲ್ಲಿ ಒಂದಾಗಿರುತ್ತೇನೆ ಮಾಸ್ಟರ್” ಈ ಉತ್ತರ ಕೇಳಿ ಮಾಸ್ಚರ್ ಗೆ ಖುಶಿಯಾಯಿತು “ ನೀನು ಯಾರೀಗೂ ಕೇಡಾಗದ ಸುವರ್ಣ ಮಾರ್ಗದಲ್ಲಿದ್ದೀಯ” ಮಾಸ್ಟರ್ ಉತ್ತರಿಸಿದರು.
“ ನಾನು ಸೈಕಲ್ ಸವಾರಿ ಮಾಡೋದು ಕೇವಲ ಸೈಕಲ್ ಸವಾರಿ ಮಾಡಲಿಕ್ಕೆ ಮಾಸ್ಟರ್ “ ಐದನೇಯ ಶಿಷ್ಯ ಉತ್ತರಿಸಿದ.
ತಕ್ಷಣ ಮಾಸ್ಟರ್ ಐದನೇಯ ಶಿಷ್ಯನ ಕಾಲ ಬಳಿ ಕುಳಿತುಕೊಂಡು ಕೇಳಿಕೊಂಡರು,
“ ದಯಮಾಡಿ ನನ್ನನ್ನು ಶಿಷ್ಯನಾಗಿ ಸ್ವೀಕರಿಸು.