ನಿಮ್ಮ ಬದುಕು ಸಹಜವಾಗಿಬಿಟ್ಟರೆ ಪ್ರಕೃತಿಗೆ ಹತ್ತಿರವಾಗಿಬಿಟ್ಟರೆ, ಸಂತೋಷದ ಬದುಕು ಸದಾ ನಿಮ್ಮದಾಗುತ್ತದೆ, ನೀವು ಹಕ್ಕಿಗಳಂತೆ, ಮರಗಳಂತೆ, ನದಿಗಳಂತೆ ನಿರಾತಂಕವಾಗಿ ಬದುಕುತ್ತೀರಿ.ಈ ಯಾವುದು ಕೂಡ ದೇವರನ್ನು ಪೂಜಿಸುವುದಿಲ್ಲ, ಮಂದಿರ ಮಸಿದಿ, ಚರ್ಚ್ ಗೆ ಹೋಗುವುದಿಲ್ಲ, ಅವುಗಳಿಗೆ ಯಾವ ಧರ್ಮವೂ ಇಲ್ಲ. ಅವುಗಳಲ್ಲಿ ಯಾವ ಆತಂಕ, ಯಾವ ಗಿಲ್ಟ್ ಕೂಡ ಇಲ್ಲ! ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ
ಬಹುತೇಕ ಎಲ್ಲ ಧರ್ಮಗಳು ಹೇಳುವುದು ದೇವರು ಸದಾ ಕೆಡುಕಿನ ವಿರುದ್ಧ, ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಅನಾವರಣವಾಗುವ ವಾಸ್ತವ ಏನೆಂದರೆ ದೇವರು ಇರುವುದು ಕೆಡುಕಿನ ವಿರುದ್ಧವಲ್ಲ, ದೇವರು ಇರುವುದು ಪ್ರಕೃತಿಯ ವಿರುದ್ಧ, ನಿಸರ್ಗದ ವಿರುದ್ಧ.
ಆಳದಲ್ಲಿ ಎಲ್ಲ ಧರ್ಮಗಳು ಪ್ರಕೃತಿಗೆ ವಿರುದ್ಧವಾದವು, ಯಾಕೆ ಹೀಗೆ? ಇದರ ಹಿಂದೆ ಇರುವುದು ಒಂದು ಮಹಾ ಮನೋವೈಜ್ಞಾನಿಕ ತಂತ್ರ. ಈ ತಂತ್ರ ಏನೆಂದರೆ, ಒಮ್ಮೆ ನಿಮ್ಮನ್ನ ಪ್ರಕೃತಿಗೆ ವಿರುದ್ಧವಾಗಿ ಪ್ರೋಗ್ರಾಂ ಮಾಡಿಬಿಟ್ಟರೆ, ನೀವು ಸದಾ ಶೋಚನೀಯವಾದ ಬದುಕನ್ನ ಬದುಕುತ್ತೀರಿ. ಆತಂಕ, ವೇದನೆ, ವಿಕೃತಿ, ಅಪರಾಧಿ ಮನೋಭಾವದ ಬದುಕನ್ನ ಬಾಳುತ್ತೀರಿ.
ನಿಮ್ಮ ಬದುಕು ಸಹಜವಾಗಿಬಿಟ್ಟರೆ ಪ್ರಕೃತಿಗೆ ಹತ್ತಿರವಾಗಿಬಿಟ್ಟರೆ, ಸಂತೋಷದ ಬದುಕು ಸದಾ ನಿಮ್ಮದಾಗುತ್ತದೆ, ನೀವು ಹಕ್ಕಿಗಳಂತೆ, ಮರಗಳಂತೆ, ನದಿಗಳಂತೆ ನಿರಾತಂಕವಾಗಿ ಬದುಕುತ್ತೀರಿ.ಈ ಯಾವುದು ಕೂಡ ದೇವರನ್ನು ಪೂಜಿಸುವುದಿಲ್ಲ, ಮಂದಿರ ಮಸಿದಿ, ಚರ್ಚ್ ಗೆ ಹೋಗುವುದಿಲ್ಲ, ಅವುಗಳಿಗೆ ಯಾವ ಧರ್ಮವೂ ಇಲ್ಲ. ಅವುಗಳಲ್ಲಿ ಯಾವ ಆತಂಕ, ಯಾವ ಗಿಲ್ಟ್ ಕೂಡ ಇಲ್ಲ. ಅವು ಸಹಜವಾಗಿ ಬದುಕುತ್ತಿವೆ. ಆದರೆ ನಿಮ್ಮನ್ನ ಪ್ರಕೃತಿಗೆ ವಿರುದ್ಧವಾಗಿ ಪ್ರೋಗ್ರಾಂ ಮಾಡಿಬಿಟ್ಟರೆ ನಿಮ್ಮ ಬದುಕನ್ನ ಬೇರೆಯವರು ಹತೋಟಿಗೆ ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ, ಆಗ ನೀವು ಅವರ ದಬ್ಬಾಳಿಕೆಯಲ್ಲಿ ಬದುಕಬೇಕಾಗುತ್ತದೆ. ಆಗ ನೀವು ಸ್ಕಿಜೋಫ್ರೇನಿಕ್ ಆಗುತ್ತೀರಿ.
ನಿಮ್ಮ ದೇಹ ಪ್ರಕೃತಿಯ ಪರವಾಗಿದ್ದರೆ ನಿಮ್ಮ ಮೈಂಡ್ ಪ್ರಕೃತಿಗೆ ವಿರುದ್ಧವಾಗಿರುತ್ತದೆ. ಏಕೆಂದರೆ ಮೈಂಡ್ ನ್ನು ಪ್ರೋಗ್ರಾಂ ಮಾಡಬಹುದೇ ಹೊರತು ದೇಹವನ್ನಲ್ಲ. ಉದಾಹರಣೆಗೆ, ನೀವು ಬ್ರಹ್ಮಚರ್ಯದ ದೀಕ್ಷೆ ತೆಗೆದುಕೊಂಡರೂ, ನಿಮ್ಮ ದೇಹದ ಬಯಾಲಜಿ ಬದಲಾಗುವುದಿಲ್ಲ, ನಿಮ್ಮ ದೇಹದ ಸ್ವಭಾವ ಬದಲಾಗುವುದಿಲ್ಲ. ಬ್ರಹ್ಮಚರ್ಯ ಎನ್ನುವುದು ಕೇವಲ ನಿಮ್ಮ ಮನಸಿನ ವಿಚಾರ ಮಾತ್ರ, ಕೇವಲ ಪದಗಳ ಚಮತ್ಕಾರ ಮಾತ್ರ, ಇದರಿಂದ ದೇಹ ಪ್ರಭಾವಿತವಾಗುವುದಿಲ್ಲ. ನಿಮ್ಮ ರಕ್ತ ಲೈಂಗಿಕ ಶಕ್ತಿಯನ್ನು ಸೃಷ್ಟಿಮಾಡುತ್ತಲೇ ಹೋಗುತ್ತದೆ, ನಿಮ್ಮೊಳಗೆ ಸೆಕ್ಷುವಲ್ ಹಾರ್ಮೋನುಗಳು ಹುಟ್ಟಿಕೊಳ್ಳುತ್ತಲೇ ಹೋಗುತ್ತವೆ. ಆಗ ನಿಮ್ಮೊಳಗೆ ಉಂಟಾಗುವ ದ್ವಂದ್ವ ನಿಮ್ಮ ಶೋಚನೀಯ ಬದುಕಿಗೆ ಕಾರಣವಾಗುತ್ತದೆ. ನಿಮ್ಮ ವಿಕೃತಿಗೆ ಕಾರಣವಾಗುತ್ತದೆ. ನಿಮ್ಮೊಳಗಿನ ಇಂಥ ದ್ವಂದ್ವಗಳನ್ನೇ ಧರ್ಮ ಮತ್ತು ರಾಜಕಾರಣಗಳು ತಮ್ಮ ಬೆಳವಣಿಗೆಗೆ ಬಳಸಿಕೊಳ್ಳುತ್ತವೆ.
Source: Osho| God is Dead, Now Zen is the Only Living Truth