ಝೆನ್ ಧ್ಯಾನಿಗಳ ಪುಟ್ಟ ಕತೆಗಳು… ~ From “Being Peace” by Thitch Nhat Hahn | ಕನ್ನಡಕ್ಕೆ: ಚಿದಂಬರ ನರೇಂದ್ರ
ಒಬ್ಬ ಹೆಣ್ಣು ಮಗಳು ಪ್ರತಿದಿನ ಬುದ್ಧ ಮಂತ್ರ ಪಠಣ ಮಾಡುತ್ತಿದ್ದಳು. ದಿನದ ಮೂರು ಹೊತ್ತು ಆಕೆ “ ನಮೋ ಅಮಿತಾಭ ಬುದ್ಧ “ ಎನ್ನುತ್ತ ಜೋರಾಗಿ ಬುದ್ಧನ ಮಂತ್ರ ಹೇಳುತ್ತಿದ್ದಳು. ಊರಲೆಲ್ಲ ಘಟವಾಣಿ ಎಂದು ಹೆಸರಾಗಿದ್ದ ಆಕೆಯ ಬಾಯಿಗೆ ಸಿಲುಕದವರಾರೂ ಆ ಹಳ್ಳಿಯಲ್ಲಿರಲಿಲ್ಲ. ಹತ್ತು ವರ್ಷಗಳಿಂದ ಆಕೆ ಬುದ್ಧ ಮಂತ್ರ ಪಠಣದ ಪ್ರ್ಯಾಕ್ಟೀಸ್ ಮಾಡುತ್ತಿದ್ದರೂ ಆಕೆಯ ಸಿಟ್ಟು, ಸೆಡವು, ಹೊಟ್ಟೆಕಿಚ್ಚಿನಲ್ಲಿ ಕೊಂಚವೂ ವ್ಯತ್ಯಾಸವಾಗಿರಲಿಲ್ಲ.
ಪರಿಸ್ಥಿತಿ ಹೀಗಿರುವಾಗ ಆಕೆಯ ಪಕ್ಕದ ಮನೆಯವನೊಬ್ಬ ಆಕೆಗೆ ಬುದ್ದಿ ಕಲಿಸಲು ತೀರ್ಮಾನಿಸಿದ.
ಒಂದು ಮುಂಜಾನೆ ಆ ಹೆಂಗಸು, ಕರ್ಪೂರ, ಅಗರಬತ್ತಿ ಹೊತ್ತಿಸಿ, ಗಂಟೆ ಬಾರಿಸುತ್ತ “ ನಮೋ ಅಮಿತಾಭ ಬುದ್ಧ “ ಎನ್ನುತ್ತ ಜೋರಾಗಿ ಬುದ್ಧ ಮಂತ್ರದ ಪಠಣ ಶುರು ಮಾಡಿದಳು. ಆಕೆಯ ಮಂತ್ರ ಪಠಣ ತಾರಕಕ್ಕೇರುತ್ತಿದ್ದಂತೆಯೇ, ಪಕ್ಕದ ಮನೆಯ ವ್ಯಕ್ತಿ ಆಕೆಯ ಮನೆಯ ಕಿಟಕಿಯಲ್ಲಿ ನಿಂತು ಅವಳ ಹೆಸರು ಹಿಡಿದು ಕೂಗಹತ್ತಿದ, “ ನ್ಯೂಯನ್….. ನ್ಯೂಯನ್…. ನ್ಯೂಯನ್ “ ಪಕ್ಕದ ಮನೆಯವನ ದನಿ ಕೇಳಿ ಅವಳಿಗೆ ಸಿಟ್ಟು ಬಂದಿತಾದರೂ, ಮಂತ್ರ ಪಠಣ ಮಾಡುವಾಗ ತಾನು ತಾಳ್ಮೆ ಕಳೆದುಕೊಳ್ಳಬಾರದು ಎಂದುಕೊಂಡು ಆಕೆ “ ನಮೋ ಅಮಿತಾಭ ಬುದ್ಧ …ನಮೋ ಅಮಿತಾಭ ಬುದ್ಧ ….. ನಮೋ ಅಮಿತಾಭ ಬುದ್ಧ “ ಎಂದು ಮತ್ತೆ ಜೋರಾಗಿ ತನ್ನ ಮಂತ್ರ ಪಠಣ ಮುಂದುವರೆಸಿದಳು.
ಆದರೆ ಪಕ್ಕದ ಮನೆಯ ವ್ಯಕ್ತಿ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅವನು ಆಕೆಯ ಹೆಸರು ಕೂಗುವುದನ್ನ ಮುಂದುವರೆಸಿದ. ಆ ಹೆಂಗಸಿನ ಕೋಪ ಹೆಚ್ಚಾಗುತ್ತಲೇ ಹೋಯಿತು. ಒಂದು ಕ್ಷಣ ಆ ವ್ಯಕ್ತಿಗೆ ತಕ್ಕ ಪಾಠ ಕಲಿಸಬೇಕೆಂಬ ವಿಚಾರ ಆಕೆಯ ತಲೆಯಲ್ಲಿ ಸುಳಿಯಿತಾದರೂ ಆಕೆ ಮನಸ್ಸು ಗಟ್ಟಿ ಮಾಡಿಕೊಂಡು “ ನಮೋ ಅಮಿತಾಭ ಬುದ್ಧ …. ನಮೋ ಅಮಿತಾಭ ಬುದ್ಧ …. ನಮೋ ಅಮಿತಾಭ ಬುದ್ಧ “ ಎನ್ನುತ್ತ ತನ್ನ ಮಂತ್ರ ಪಠಣವನ್ನು ಇನ್ನಷ್ಟು ತೀವ್ರವಾಗಿಸಿದಳು. ಆದರೆ ಪಕ್ಕದ ಮನೆಯ ವ್ಯಕ್ತಿ ಕೂಡ ಸುಮ್ಮನಾಗಲಿಲ್ಲ, ಅವನೂ “ ನ್ಯೂಯನ್…. ನ್ಯೂಯನ್…. ನ್ಯೂಯನ್…. “ ಎಂದು ಅವಳ ಹೆಸರು ಕೂಗುವುದನ್ನ ಮುಂದುವರೆಸಿದ.
ಕೊನೆಗೆ ಆ ಹೆಂಗಸಿಗೆ ಸಿಟ್ಟು ತಡೆದುಕೊಳ್ಳಲಾಗಲಿಲ್ಲ. ಆಕೆ ತನ್ನ ಮಂತ್ರ ಪಠಣ ನಿಲ್ಲಿಸಿ ಒಂದು ಕೋಲು ಕೈಗೆತ್ತಿಕೊಂಡು ಜೋರಾಗಿ ಬಾಗಿಲು ತೆರೆದು ಪಕ್ಕದ ಮನೆಯ ಮನುಷ್ಯ ನಿಂತಿದ್ದ ಕಿಟಕಿಯತ್ತ ಧಾವಿಸಿದಳು. “ ನಾನು ಮಂತ್ರ ಪಠಣ ಮಾಡುತ್ತ ಬುದ್ಧನ ಪೂಜೆ ಮಾಡುತ್ತಿದ್ದೇನೆ, ನೀನು ಯಾಕೆ ಕತ್ತೆಯ ಹಾಗೆ ನನ್ನ ಹೆಸರು ಕೂಗುತ್ತಿದ್ದೀಯ? ಏನಾಗಿದೆ ನಿನಗೆ? “ ಆಕೆ ಆ ಮನುಷ್ಯನನ್ನು ತರಾಟೆಗೆ ತೆಗೆದುಕೊಂಡಳು.
“ ನಾನು ಮೂರು ನಾಲ್ಕು ಬಾರಿ ನಿನ್ನ ಹೆಸರು ಕೂಗಿದ್ದಕ್ಕೆ ನಿನಗೆ ಇಷ್ಟು ಸಿಟ್ಟು ಬಂದಿದೆಯಲ್ಲ, ಕಳೆದ ಹತ್ತು ವರ್ಷಗಳಿಂದ ನೀನು ಸತತವಾಗಿ ಅಮಿತಾಭ ಬುದ್ಧನ ಹೆಸರು ಕೂಗುತ್ತಿದ್ದೀಯ ಅವನಿಗೆಷ್ಟು ಕೋಪ ಬಂದಿರಬಹುದು. ನೀನು ಹೀಗೆ ಕೂಗುವುದರಿಂದ ಧ್ಯಾನಮಗ್ನನಾದ ಬುದ್ಧನಿಗೆ ಎಷ್ಟು ತೊಂದರೆಯಾಗಿರಬಹುದು.” ನಗುತ್ತ ಪಕ್ಕದ ಮನೆಯ ಮನುಷ್ಯ ಆಕೆಯ ಸಿಟ್ಟನ್ನು ಎದುರಿಸಿದ.
ಒಮ್ಮೆ ಹೀಗಾಯಿತು….
ಶಿಷ್ಯನೊಬ್ಬ ಝೆನ್ ಮಾಸ್ಟರ್ ಹತ್ತಿರ, ಒಂದು ದೂರು ತೆಗೆದುಕೊಂಡು ಬಂದ.
“ಮಾಸ್ಟರ್, ನನಗೆ ಧ್ಯಾನದಲ್ಲಿ ತುಂಬ ತೊಂದರೆಗಳಾಗುತ್ತಿವೆ. ಧ್ಯಾನಕ್ಕೆ ಕೂತಾಗಲೆಲ್ಲ ವಿಪರೀತ ಕಾಲು ನೋಯುತ್ತದೆ, ನಿದ್ದೆ ಬಂದ ಹಾಗಾಗುತ್ತದೆ. ಬಹಳ ಚಿಂತೆಯಾಗುತ್ತಿದೆ. ಏನು ಮಾಡಲಿ? “
“ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ” ಮಾಸ್ಟರ್ ಉತ್ತರಿಸಿದ.
ಎರಡು ಮೂರು ತಿಂಗಳುಗಳ ನಂತರ ಶಿಷ್ಯ ವಾಪಸ್ ಬಂದ,
“ ಮಾಸ್ಟರ್, ಈಗ ಧ್ಯಾನದಲ್ಲಿ ಅದ್ಭುತ ಅನುಭವಗಳಾಗುತ್ತಿವೆ, ತುಂಬ ಎಚ್ಚರದ ಸ್ಥಿತಿ ಅನಿಸುತ್ತಿದೆ. ಎಷ್ಟು ಶಾಂತ, ಎಷ್ಟು ಜೀವಂತಿಕೆಯ ಸ್ಥಿತಿ ಇದು “
ಮಾಸ್ಟರ್ ಸಾವಧಾನವಾಗಿ ಉತ್ತರಿಸಿದ “ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ”