ನೀವು ಸಂತೋಷವಾಗಿದ್ದೀರೋ ಇಲ್ಲವೋ? : ‘ಜಿಡ್ಡು’ ಉತ್ತರ

ಅದಾಗಲೇ ನಮ್ಮೊಳಗೆ ಇರುವ ಸಂತೋಷವನ್ನು ಹೊರಗೆ ಅರಸುವ ನಾವು, ಯಾವ ಕ್ಷಣವಾದರೂ ದುಃಖವಾಗಿ ಬದಲಾಗಬಲ್ಲ ಸಂಗತಿಯನ್ನೇ ಸಂತೋಷ ಅಂದುಕೊಳ್ಳುತ್ತೇವೆ. ಆದರೆ ಅದು ಸಂತೋಷವಲ್ಲ ಅನ್ನುವುದು, ನಾವು ಸಂತೋಷ ಎಂದು ಭ್ರಮಿಸಿದ್ದನ್ನು ಕಂಡ ಕೂಡಲೇ ನಮ್ಮ ಅಂತಃ ಪ್ರಜ್ಞೆಗೆ ತಿಳಿದುಬಿಡುತ್ತದೆ. ಆದ್ದರಿಂದಲೇ ನಾವು ಸಹಜತೆಗೆ ಮರಳೋದು. ನಾವು ಸಂತೋಷ ಪಡೆಯಬೇಕು ಅಂದುಕೊಂಡ ಕೂಡಲೇ ನಮ್ಮ ಸಂತೋಷ ಕೈತಪ್ಪುತ್ತದೆ… | ಜಿಡ್ಡು ಕೃಷ್ಣಮೂರ್ತಿ; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ಸಂದರ್ಶಕ: ಜೆಕೆ, ನೀವು ಸಂತೋಷವಾಗಿದ್ದೀರೋ ಇಲ್ಲವೋ?

ಜಿಡ್ಡು ಕೃಷ್ಣಮೂರ್ತಿ: ನನಗದು ಗೊತ್ತಿಲ್ಲ. ನಾನು ಸಂತೋಷವಾಗಿದ್ದೀನೋ ಇಲ್ಲವೋ ನನಗೆ ಗೊತ್ತಿಲ್ಲ, ಯಾಕೆಂದರೆ ಈ ವರೆಗೂ ನಾನು ಅದರ ಬಗ್ಗೆ ಆಲೋಚನೆಯನ್ನೇ ಮಾಡಿಲ್ಲ.

ನೀವು ಯಾವ ಕ್ಷಣ ನೀವು ಸಂತೋಷವಾಗಿದ್ದೀರೆಂದು ಭಾವಿಸುತ್ತೀರೋ ಆ ಕ್ಷಣದಿಂದ ನಿಮ್ಮ ಸಂತೋಷ ನಿಮ್ಮ ಕೈಜಾರತೊಡಗುತ್ತದೆ. ಗಮನಿಸಿದ್ದೀರಾ? ನೀವು ಆಟ ಆಡುವಾಗ ಅಥವಾ ನೋಡುವಾಗ ಸಂತೋಷದಿಂದ ಕೂಗಾಡುತ್ತಾ ಚಪ್ಪಾಳೆ ತಟ್ಟುತ್ತಾ ಇರುತ್ತಾರೆ, ಯಾವ ಕ್ಷಣ ನಿಮಗೆ ನಿಮ್ಮ ಸಂತೋಷ, ನಿಮ್ಮ ಪ್ರತಿಕ್ರಿಯೆ ಕಡೆ ಗಮನ ಹೋಗುತ್ತದೋ ಆ ಕ್ಷಣವೇ ನಿಮ್ಮ ಸಂತೋಷದ ಉದ್ವೇಗವನ್ನು ಕಡಿಮೆ ಮಾಡಿಕೊಳ್ಳುತ್ತೀರಿ. ನಿಮ್ಮ ಕೂಗಾಟದ ದನಿ ತಗ್ಗುತ್ತದೆ, ನಿಮ್ಮ ಚಪ್ಪಾಳೆ ನಿಲ್ಲುತ್ತದೆ, ನಿಮ್ಮ ಅರಳಿದ ಮುಖ ಸಂಕುಚಿತವಾಗುತ್ತದೆ, ನೀವು ಸಹಜವಾಗುತ್ತೀರಿ.

ಯಾಕೆ ಗೊತ್ತೆ? ಯಾಕೆಂದರೆ ಹೊರಗಿಂದ ಪಡೆಯುವ ಸಂತೋಷಕ್ಕೆ ನಮ್ಮ ಅಂತಃ ಪ್ರಜ್ಞೆಯ ವ್ಯಾಪ್ತಿಯಲ್ಲಿ ಜಾಗವಿಲ್ಲ. ನೀವು ಯಾವಾಗ ಅದನ್ನು ಹೊರಗೆ ಅರಸುತ್ತೀರೋ, ಹೊರಗೆ ಕಂಡೆವೆಂದು ಭಾವಿಸುತ್ತೀರೋ, ಆ ಕ್ಷಣವೇ ಅದು ನಮ್ಮ ಮನಸ್ಸಿನ ಕಿಟಕಿಯಿಂದ ಹಾರಿಹೋಗುತ್ತದೆ.

ಅದಾಗಲೇ ನಮ್ಮೊಳಗೆ ಇರುವ ಸಂತೋಷವನ್ನು ಹೊರಗೆ ಅರಸುವ ನಾವು, ಯಾವ ಕ್ಷಣವಾದರೂ ದುಃಖವಾಗಿ ಬದಲಾಗಬಲ್ಲ ಸಂಗತಿಯನ್ನೇ ಸಂತೋಷ ಅಂದುಕೊಳ್ಳುತ್ತೇವೆ. ಆದರೆ ಅದು ಸಂತೋಷವಲ್ಲ ಅನ್ನುವುದು, ನಾವು ಸಂತೋಷ ಎಂದು ಭ್ರಮಿಸಿದ್ದನ್ನು ಕಂಡ ಕೂಡಲೇ ನಮ್ಮ ಅಂತಃ ಪ್ರಜ್ಞೆಗೆ ತಿಳಿದುಬಿಡುತ್ತದೆ. ಆದ್ದರಿಂದಲೇ ನಾವು ಸಹಜತೆಗೆ ಮರಳೋದು. ನಾವು ಸಂತೋಷ ಪಡೆಯಬೇಕು ಅಂದುಕೊಂಡ ಕೂಡಲೇ ನಮ್ಮ ಸಂತೋಷ ಕೈತಪ್ಪುತ್ತದೆ.

ಈಗ, ನಾವು ಒಳ್ಳೆಯವರಾಗಬೇಕು ಅಂದುಕೊಂಡರೆ, ನಾವು ಒಳ್ಳೆಯವರಾಗಿ ಉಳಿಯುತ್ತೇವೆಯೇ? ಸಹಜತೆ ಕಳೆದುಕೊಳ್ಳುತ್ತೇವೆ! ನಾವು ಅದಾಗಲೇ ಒಳ್ಳೆಯವರು. ನಮ್ಮ ಒಳ್ಲೆಯತನ ಕಂಡುಕೊಂಡು ವರ್ತಿಸುವುದಷ್ಟೆ ನಮ್ಮ ಪಾಲಿಗೆ ಉಳಿದಿರೋದು. ಅದು ಬಿಟ್ಟು ನಾವು ಹೊಸತಾಗಿ ಒಳ್ಳೆಯವರಾಗುತ್ತೀವೆಂದು ಭಾವಿಸಿದರೆ, ಅದು ಕೃತಕವಾಗಿಬಿಡುತ್ತದೆ. ಆಗ ನಾವು ಒಳ್ಳೆಯವರಾಗಿ ಉಳಿಯಲು ಸಾಧ್ಯವಿಲ್ಲ.

ಸಂತೋಷವೂ ಹಾಗೆಯೇ. ಅದನ್ನು ಹೊರಗಿನ ಸಂಗತಿಗಳಲ್ಲಿ ಅರಸುತ್ತಾ ಸಂತೋಷವಾಗಿದ್ದೀವೋ ಇಲ್ಲವೋ ಎಂದು ಅಳೆಯುತ್ತ ಕುಳಿತರೆ, ನಾವು ನಮ್ಮ ಸಹಜ ಸಂತೋಷವನ್ನು ಕಳೆದುಕೊಳ್ಳುತ್ತೇವಷ್ಟೇ.

Leave a Reply