ಧ್ಯಾನ ಎಂದರೆ… । ಓಶೋ ವ್ಯಾಖ್ಯಾನ

ಜ್ಞಾನೋದಯವನ್ನು ಹೊಂದಿದ ವ್ಯಕ್ತಿಗೆ, ಅಸ್ತಿತ್ವದೊಂದಿಗೆ ಒಂದಾಗಿರುವ ವ್ಯಕ್ತಿಗೆ, ನೈತಿಕತೆಯ ಅವಶ್ಯಕತೆಯಿಲ್ಲ, ತತ್ವ ಸಿದ್ಧಾಂತಗಳ ಬಂಧನವಿಲ್ಲ, ಸರಿ ತಪ್ಪುಗಳ ತಿಳುವಳಿಕೆಯ ಪಾಠಗಳ ಒತ್ತಾಯವಿಲ್ಲ, ಅವನು ಅಸ್ತಿತ್ವದೊಂದಿಗೆ ಎಷ್ಟು ಟ್ಯೂನ್ ಆಗಿದ್ದಾನೆಂದರೆ, ಅವನ ಮೂಲಕ ಆಗುತ್ತಿರುವ ಯಾವುದರಲ್ಲೂ, ಯಾವುದೇ ತಪ್ಪಾಗುವ ಸಾಧ್ಯತೆಯೇ ಇಲ್ಲ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಜ್ಞಾನೋದಯ ನಿರ್ವಾಣ, ಪರಮಾನಂದದ ಸ್ಥಿತಿ ಅಲ್ಲ, ಇದು ಪರಮಾನಂದದ ಆಚೆಗಿನ ಸ್ಥಿತಿ. ಜ್ಞಾನೋದಯದಲ್ಲಿ ಯಾವ ಸಂಭ್ರಮ, ಯಾವ ಭಾವೋದ್ವೇಗವೂ ಸಾಧ್ಯವಾಗುವುದಿಲ್ಲ; ಪರಮಾನಂದ (ecstasy) ಒಂದು ಮನಸ್ಥಿತಿ (state of mind), ಒಂದು ಅತ್ಯಂತ ಸುಂದರವಾದ ಮನಸ್ಥಿತಿ, ಆದರೆ ಕೊನೆಗೂ ಕೇವಲ ಒಂದು ಮನಸ್ಥಿತಿ ಮಾತ್ರ. ಪರಮಾನಂದದ ಸ್ಥಿತಿ ಒಂದು ಅನುಭವ ಆದರೆ ಜ್ಞಾನೋದಯ ಅನುಭವಿಸಬಹುದಾದ ಸ್ಥಿತಿ ಅಲ್ಲ, ಏಕೆಂದರೆ ಅನುಭವಿಸಲು ಅಲ್ಲಿ ಯಾರೂ ಉಳಿದಿಲ್ಲ. ಪರಮಾನಂದದ ಸ್ಥಿತಿ ಅಹಂ ನ ವ್ಯಾಪ್ತಿಯಲ್ಲಿಯೇ ಬರುವಂಥದು ಆದರೆ ಜ್ಞಾನೋದಯದ ಸ್ಥಿತಿ, ಅಹಂ ದಾಟಿ ಹೋದಾಗ ಮಾತ್ರ ಸಾಧ್ಯವಾಗುವಂಥದು. ಜ್ಞಾನೋದಯ ಸಾಧಿಸುವಂಥದಲ್ಲ, ಸಂಭವಿಸುವಂಥದ್ದು. ಬಿಡುಗಡೆ ನಿಮಗೆ ಸಾಧ್ಯವಿಲ್ಲ, ಸದಾ ನೀವು ಬಿಡುಗಡೆಯ ಸ್ಥಿತಿಯಲ್ಲಿ ಇರುವುದು ಸಾಧ್ಯವಿಲ್ಲ, ಬಿಡುಗಡೆ ಆಗುತ್ತಲೇ ಇರುವಂಥದು. ನಿಮ್ಮಿಂದ ನೀವು ಬಿಡುಗಡೆ ಹೊಂದುತ್ತಲೇ ಇರುವಂಥದು.

ಯಾವಾಗ ಧ್ಯಾನ ನಿಮಗೆ ಸಹಜವಾಗಿ ಸಾಧ್ಯವಾಗುತ್ತದೆಯೋ ಆಗ ಮಾತ್ರ ನೀವು ಧ್ಯಾನದ ಸ್ಥಿತಿಯನ್ನು ತಲುಪುತ್ತೀರಿ. ಧ್ಯಾನ ಎಂದರೆ ದಿನದ ಕೆಲ ಹೊತ್ತು ಧ್ಯಾನ ಮಾಡುತ್ತ ಕೂಡುವುದಲ್ಲ, ದಿನದ ಕೆಲ ಸಮಯವನ್ನ ಧ್ಯಾನಕ್ಕೆ ಮೀಸಲಾಗಿಡುವುದಲ್ಲ, ನಿಮ್ಮ ಪ್ರತಿ ಗಳಿಗೆಯೂ ಧ್ಯಾನದಿಂದ ತುಂಬಿರುವಂಥದು. ಆಗ ನಿಮಗೆ ನಡೆದಾಡುವುದು ಧ್ಯಾನ, ಮಾತನಾಡುವುದು ಧ್ಯಾನ, ಊಟ ಮಾಡುವುದು ಧ್ಯಾನ, ಪ್ರೀತಿ ಮಾಡುವುದು ಧ್ಯಾನ, ವ್ಯಾಪಾರ ವ್ಯವಹಾರ ಎಲ್ಲವೂ ಧ್ಯಾನವೇ. ನಿಮ್ಮ ಸಂಪೂರ್ಣ ಬದುಕು ಒಂದು ವಿಶಿಷ್ಟ ಎನರ್ಜಿಯಿಂದ ಸುತ್ತುವರೆಯಲ್ಪಟ್ಟಿರುತ್ತದೆ. ಹೀಗಾಗಲೇಬೇಕೆಂದೇನೂ ಇಲ್ಲ ಆದರೆ ಹೀಗಾಗುವುದು ಬಹಳ ಸಹಜ.

ಜ್ಞಾನೋದಯವನ್ನು ಹೊಂದಿದ ವ್ಯಕ್ತಿಗೆ, ಅಸ್ತಿತ್ವದೊಂದಿಗೆ ಒಂದಾಗಿರುವ ವ್ಯಕ್ತಿಗೆ, ನೈತಿಕತೆಯ ಅವಶ್ಯಕತೆಯಿಲ್ಲ, ತತ್ವ ಸಿದ್ಧಾಂತಗಳ ಬಂಧನವಿಲ್ಲ, ಸರಿ ತಪ್ಪುಗಳ ತಿಳುವಳಿಕೆಯ ಪಾಠಗಳ ಒತ್ತಾಯವಿಲ್ಲ, ಅವನು ಅಸ್ತಿತ್ವದೊಂದಿಗೆ ಎಷ್ಟು ಟ್ಯೂನ್ ಆಗಿದ್ದಾನೆಂದರೆ, ಅವನ ಮೂಲಕ ಆಗುತ್ತಿರುವ ಯಾವುದರಲ್ಲೂ, ಯಾವುದೇ ತಪ್ಪಾಗುವ ಸಾಧ್ಯತೆಯೇ ಇಲ್ಲ.

ಧ್ಯಾನ ಎಂದರೆ ಅಸ್ತಿತ್ವದ ಹೃದಯದ ಮಿಡಿತಕ್ಕೆ ನಿಮ್ಮನ್ನ ಹತ್ತಿರವಾಗಿಸುವ ಕಲೆ. ಧ್ಯಾನದಲ್ಲಿ ಎಷ್ಟು ಆಳಕ್ಕೆ ಪ್ರವೇಶ ಮಾಡುತ್ತೀರೋ, ಅಷ್ಟು ಅಸ್ತಿತ್ವದ ಎದೆ ಬಡಿತಕ್ಕೆ ಹತ್ತಿರವಾಗುತ್ತೀರಿ. ಆಗ ನೀವು ನೈತಿಕತೆ ಅನೈತಿಕತೆಯ ಪ್ರಶ್ನೆಯನ್ನೇ ಎದುರಿಸುವುದಿಲ್ಲ. ನೀವು ಮಾಡುತ್ತಿರುವುದೆಲ್ಲ ಸುಂದರ. ನಿಮಗೆ ಒಂದು ಕ್ಷಣದಲ್ಲಿ ಸಂಪೂರ್ಣ ನಿರಾಳತೆ ಸಾಧ್ಯವಾಗುವುದಾದರೆ, ನಿಮಗೆ ನಿಮ್ಮ ಮೈಂಡ್ ನ ಬದಿಗಿಟ್ಟು ಕೇವಲ ನೀವಾಗಿರುವುದಕ್ಕೆ ಸಾಧ್ಯವಾಗುವುದಾದರೆ, ಸಂಪೂರ್ಣ ಮೌನ, ಪೂರ್ಣ ಅರಿವು ಸಾಧ್ಯವಾಗುವುದಾದರೆ, ಬದುಕಿನ ಕೊನೆಯ ಗಳಿಗೆಯಲ್ಲೂ ನಿಮಗೆ ಆತ್ಮ ಸಾಕ್ಷಾತ್ಕಾರ ( self realisation) ಸಾಧ್ಯವಾಗಬಲ್ಲದು. ಆತ್ಮ ಸಾಕ್ಷಾತ್ಕಾರ ಕಷ್ಟ ಅನಿಸುವುದಕ್ಕೆ ಕಾರಣ, ನಾವು ಅಸ್ತಿತ್ವದೊಂದಿಗೆ ಟ್ಯೂನಿಂಗ್ ಸಾಧಿಸುವಲ್ಲಿ ಅಸಮರ್ಥರಾಗಿರುವುದು. ಅಸ್ತಿತ್ವದ ಶ್ರುತಿಯಲ್ಲಿ ಒಂದಾಗುವ ಭಾಷೆಯನ್ನೇ ನಾವು ಮರೆತುಬಿಟ್ಟಿದ್ದೇವೆ, ಆದರೆ ಈ ಭಾಷೆಯನ್ನ ಮತ್ತೆ ನೆನಪಿಸಿಕೊಳ್ಳುವುದು ಸಾಧ್ಯ.

ಮೈಂಡ್ ತನ್ನ ವ್ಯವಹಾರವನ್ನ ನಿಲ್ಲಿಸಿದಾಗ, ಸಾಧ್ಯವಾಗುವ ಏಕೈಕ ಸ್ಥಿತಿಯೆಂದರೆ, ಸತ್ಯ. ಇದೇ ಜ್ಞಾನೋದಯದ ವಾಸ್ತವ. ನೀವು ಪರಿಪೂರ್ಣ ಮೌನದಲ್ಲಿರುವಾಗ, ನಿಮ್ಮೊಳಗೆ ಒಂದೇ ಒಂದು ಥಾಟ್ ನ ಅಲೆಯೂ ಸಾಧ್ಯವಾಗದಾಗ, ನಿಮ್ಮ ಪ್ರಜ್ಞೆ ಕನ್ನಡಿಯ ಸ್ವಭಾವವನ್ನ ಧರಿಸುವುದು. ಆಗ ಇಡೀ ಅಸ್ತಿತ್ವ ನಿಮ್ಮ ಮೂಲಕ ಪ್ರತಿಫಲಿಸುತ್ತದೆ. ಇದೇ ಜ್ಞಾನೋದಯದ ಸತ್ಯ. ಬೋಧಿ ಮರದ ಕೆಳಗೆ ಬುದ್ಧನಿಗಾದದ್ದು ಇದೇ, ಜೀಸಸ್ ಕಿಂಗಡಮ್ ಅಫ್ ಗಾಡ್ ಎಂದು ಹೇಳುವುದು ಇದನ್ನೇ.

ಒಬ್ಬ ಝೆನ್ ಮಾಸ್ಟರ್ ಗೆ ಇಬ್ಬರು ಶಿಷ್ಯರಿದ್ದರು. ಪ್ರತಿದಿನ ಅವರಿಬ್ಬರೂ ಮಾಸ್ಟರ್ ಮನೆಯ ಮುಂದಿನ ಗಾರ್ಡನ್ ಲ್ಲಿ ‘ವಾಕಿಂಗ್ ಮೆಡಿಟೇಶನ್’ ಮಾಡುತ್ತಿದ್ದರು.

ಝೆನ್ ಸಂಪ್ರದಾಯದಲ್ಲಿ ಪ್ರತಿ ಕ್ರಿಯೆಯೂ ಧ್ಯಾನವೇ. ಸದಾ 24 ಗಂಟೆ ಕುಳಿತು ಧ್ಯಾನ ಮಾಡುವುದು ಕಷ್ಟ. ಕಾಲುಗಳು ಮರಗಟ್ಟುತ್ತವೆ, ರಕ್ತದ ಚಲನೆಗೆ ತೊಂದರೆಯಾಗುತ್ತದೆ. ಆದ್ದರಿಂದ ಝೆನ್ ಸನ್ಯಾಸಿಗಳು ಸ್ವಲ್ಪ ಹೊತ್ತು ಕೂತು ಧ್ಯಾನ ಮಾಡುತ್ತಾರೆ ಆಮೇಲೆ ಸ್ವಲ್ಪ ಹೊತ್ತು ನಡೆದಾಡುತ್ತ ಧ್ಯಾನ ಮಾಡುತ್ತಾರೆ.

ಮಾಸ್ಟರ್ ನ ಈ ಶಿಷ್ಯರಿಬ್ಬರಿಗೂ ಹೊಗೆಸೊಪ್ಪು ಸೇದುವ ಚಟ ಆದರೆ ಅವರಿಬ್ಬರೂ ಮಾಸ್ಟರ್ ಗೆ ಹೆದರಿ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತಿರಲಿಲ್ಲ.

ಒಂದು ದಿನ ಶಿಷ್ಯರಿಬ್ಬರೂ ಪ್ರತ್ಯೇಕವಾಗಿ ಮಾಸ್ಟರ್ ಬಳಿ ಹೋಗಿ ಗಾರ್ಡನ್ ಲ್ಲಿ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆ ಸೊಪ್ಪು ಸೇದಲು ಮಾಸ್ಟರ್ ನ ಅನುಮತಿ ಕೇಳಲು ನಿರ್ಧರಿಸಿದರು.

ಮರುದಿನ ಒಬ್ಬ ಶಿಷ್ಯ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತ ನಡೆದಾಡುತ್ತಿರುವುದನ್ನು ಕಂಡು ಇನ್ನೊಬ್ಬ ಶಿಷ್ಯನಿಗೆ ಸಿಟ್ಟು ಬಂತು.

“ ನಾನೂ ಅನುಮತಿ ಕೇಳಿದೆ ಆದರೆ ಮಾಸ್ಟರ್ ನಿರಾಕರಿಸಿಬಿಟ್ಟರು. ನಿನಗೆ ಹೇಗೆ ಒಪ್ಪಿಗೆ ಕೊಟ್ಟರು? ನಾನು ಈಗಲೇ ಮಾಸ್ಟರ್ ಬಳಿ ಹೋಗುತ್ತೇನೆ “ ಅವ ಸಿಟ್ಟಿನಿಂದ ಮಾತಾಡಿದ.

“ ನಿಲ್ಲು ನಿಲ್ಲು, ನೀನು ಮಾಸ್ಟರ್ ನ ಏನಂತ ಕೇಳಿದೆ? “ ಮೊದಲ ಶಿಷ್ಯ ಕೇಳಿದ.

“ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆಸೊಪ್ಪು ಸೇದಲೆ? ಎಂದು ಕೇಳಿದೆ “ ಎರಡನೇಯವ ಉತ್ತರಿಸಿದ.

“ ಅದೇ ನೋಡು ನೀನು ಮಾಡಿದ ತಪ್ಪು. ಹಾಗಲ್ಲ ಕೇಳೋದು. ಹೊಗೆಸೊಪ್ಪು ಸೇದುವಾಗ ವಾಕಿಂಗ್ ಮೆಡಿಟೇಶನ್ ಮಾಡಬಹುದಾ ಅಂತ ಕೇಳಬೇಕಿತ್ತು. ನಾನು ಹಾಗೆ ಕೇಳಿದೆ “
ಮೊದಲ ಶಿಷ್ಯ ನಕ್ಕು ಬಿಟ್ಟ.

Leave a Reply