ದೈವತ್ವದ ಕುರಿತು : ಓಶೋ ವ್ಯಾಖ್ಯಾನ

ನಾವು ದೈವತ್ವದಲ್ಲಿಯೇ ಹುಟ್ಟಿರುವುದು, ದೈವತ್ವದಲ್ಲಿಯೇ ಬದುಕುತ್ತಿರುವುದು, ದೈವತ್ವದಲ್ಲಿಯೇ ಸಾವು ನಮಗೆ ಎದುರಾಗುತ್ತದೆ.
ನಾವು ಗಮನಿಸಬೇಕಾದದ್ದು ಏನೆಂದರೆ, ಇಂಥಹ ಒಂದು ಅದ್ಭುತ ಬದುಕಿನ ಅನುಭವವನ್ನ ನಾವು ನಿದ್ರಾವಸ್ಥೆಯಲ್ಲಿ ದಾಟುತ್ತಿದ್ದೇವೋ ಅಥವಾ ಸಂಪೂರ್ಣ ಪ್ರಜ್ಞೆಯಲ್ಲಿ ದಾಟುತ್ತಿದ್ದೇವೋ ಎನ್ನುವುದನ್ನ ಮಾತ್ರ…. ~ ಓಶೋ| ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ಪುರಾತನ ಕಥೆ ನೆನಪಾಗುತ್ತಿದೆ.

ಒಂದು ಹರೆಯದ ಫಿಲಾಸೊಫಿಕಲ್ ಮನಸ್ಸಿನ ಮೀನು, ತನ್ನ ಜೊತೆಯಿದ್ದ ಇನ್ನೊಂದು ಮೀನನ್ನು ಪ್ರಶ್ನೆ ಮಾಡಿತು, “ ನಾವು ಸಮುದ್ರದ ಬಗ್ಗೆ ಎಷ್ಟೆಲ್ಲ ಕೇಳಿದ್ದೇವೆ, ಎಲ್ಲಿದೆ ಈ ಸಮುದ್ರ?, ನಾನು ಒಮ್ಮೆ ನೋಡಬೇಕು ಈ ಸಮುದ್ರವನ್ನ.”

ಸುತ್ತಲಿನ ಎಲ್ಲ ಮೀನುಗಳು, “ ನಮಗೂ ಗೊತ್ತಿಲ್ಲ, ನಾವೂ ಒಮ್ಮೆ ನೋಡಬೇಕು ಈ ಸಮುದ್ರವನ್ನ” ಎಂದು ಉತ್ತರಿಸಿದವು.

ಈ ಯುವ ಮೀನುಗಳ ಮಾತುಕತೆಯನ್ನ ಗಮನಿಸಿದ ಒಂದು ವಯಸ್ಸಾದ ಮೀನು, ಆ ಫಿಲಾಸೊಫಿಕಲ್ ಮೀನನ್ನು ಪಕ್ಕಕ್ಕೆ ಕರೆದು ಹೇಳಿತು, “ ಸಮುದ್ರ ಬೇರೆಲ್ಲೂ ಇಲ್ಲ, ನಮ್ಮ ಸುತ್ತ ಇರುವುದೇ ಸಮುದ್ರ, ನಾವು ಈಗ ಇರೋದು ಅದರಲ್ಲಿಯೇ, ನಾವು ಹುಟ್ಟೋದು, ಬದುಕೋದು, ಸಾಯೋದು ಎಲ್ಲ ಈ ಸಮುದ್ರದಲ್ಲಿಯೇ, ಇದೇ ಸಮುದ್ರ.”

ನಾನು ನಿಮಗೆ ಹೇಳೋದು ಇದನ್ನೇ. ಇದು ನಮಗೂ ಅನ್ವಯಿಸುವ ಸತ್ಯ. ನಾವು ದೈವತ್ವದಲ್ಲಿಯೇ ಹುಟ್ಟಿರುವುದು, ದೈವತ್ವದಲ್ಲಿಯೇ ಬದುಕುತ್ತಿರುವುದು, ದೈವತ್ವದಲ್ಲಿಯೇ ಸಾವು ನಮಗೆ ಎದುರಾಗುತ್ತದೆ.
ನಾವು ಗಮನಿಸಬೇಕಾದದ್ದು ಏನೆಂದರೆ, ಇಂಥಹ ಒಂದು ಅದ್ಭುತ ಬದುಕಿನ ಅನುಭವವನ್ನ ನಾವು ನಿದ್ರಾವಸ್ಥೆಯಲ್ಲಿ ದಾಟುತ್ತಿದ್ದೇವೋ ಅಥವಾ ಸಂಪೂರ್ಣ ಪ್ರಜ್ಞೆಯಲ್ಲಿ ದಾಟುತ್ತಿದ್ದೇವೋ ಎನ್ನುವುದನ್ನ ಮಾತ್ರ.

ಇಂಥ ಒಂದು ಅರಿವನ್ನು ನಮಗೆ ಸಾಧ್ಯ ಮಾಡಿಕೊಡುವುದು ಧ್ಯಾನ. ಒಮ್ಮೆ ನಮಗೆ ಈ ಅರಿವು ಸಾಧ್ಯವಾದಾಗ, ನಮ್ಮ ಸುತ್ತ ಇರುವ ಎಲ್ಲವೂ ದೈವತ್ವದ ಸಮುದ್ರ. ಈ ಬದುಕು, ಈ ಪ್ರಜ್ಞೆ ಎಲ್ಲವೂ ಡಿವೈನ್. ಈ ದಿವ್ಯ ಎಲ್ಲ ರೂಪಗಳಲ್ಲೂ ಕಾಣಿಸಿಕೊಳುತ್ತದೆ, ಗುಲಾಬಿಗಳಲ್ಲಿ, ಕಮಲದ ಹೂಗಳಲ್ಲಿ, ಗಿಡ ಮರಗಳಲ್ಲಿ, ನದಿ ಸಾಗರ ಝರಿಗಳಲ್ಲಿ, ಪ್ರತಿಯೊಂದು ಪ್ರಾಣಿಯಲ್ಲಿ ದೈವತ್ವ ತುಂಬಿಕೊಂಡಿದೆ. ಬದುಕು ಎಲ್ಲಿದೆಯೋ ಅಲ್ಲೆಲ್ಲ ದೈವತ್ವ ಇದೆ.

ನಾವು ಬದುಕುತ್ತಿರುವುದೇ ದೈವತ್ವದ ಸಮುದ್ರದಲ್ಲಿ. ಆದ್ದರಿಂದ ದೈವತ್ವವನ್ನು ಬೇರೆಲ್ಲೂ ಹುಡುಕಲು ಹೋಗಬೇಡಿ. ನಿಮ್ಮ ಒಳಗನ್ನೊಮ್ಮೆ ಪ್ರಜ್ಞಾಪೂರ್ವಕವಾಗಿ ಗಮನಿಸಿ. ಅದು ದೈವತ್ವ ನಿಮಗೆ ಲಭ್ಯವಾಗಬಹುದಾದ ಅತ್ಯಂತ ಹತ್ತಿರದ ಜಾಗ.

ಒಬ್ಬ ಝೆನ್ ಮಾಸ್ಟರ್ ನದಿಯ ದಂಡೆಯ ಮೇಲೆ ಧ್ಯಾನ ಮಗ್ನನಾಗಿದ್ದಾಗ ಯುವಕನೊಬ್ಬ ಅವನ ಹತ್ತಿರ ಬಂದು ಕೇಳಿಕೊಂಡ.

ಯುವಕ : ಮಾಸ್ಟರ್, ನನ್ನನ್ನು ಶಿಷ್ಯನಾಗಿ ಸ್ವೀಕರಿಸಿ

ಮಾಸ್ಟರ್ : ಯಾಕೆ? ಏನು ವಿಷಯ?

ಯುವಕ : ನಾನು ದೇವರನ್ನು ಹುಡುಕಬೇಕು

ಈ ಮಾತನ್ನು ಕೇಳುತ್ತಿದ್ದಂತೆಯೇ, ಮಾಸ್ಟರ್ ತನ್ನ ಜಾಗದಿಂದ ಕೆಳಗೆ ಜಿಗಿದು, ಯುವಕನ ಅಂಗಿಯ ಕಾಲರ್ ಹಿಡಿದು, ಅವನನ್ನು ದರದರನೇ ಎಳೆದುಕೊಂಡು ನದಿಯ ಹತ್ತಿರ ಬಂದು, ಅವನ ತಲೆಯನ್ನು ನದಿಯಲ್ಲಿ ಮುಳುಗಿಸಿ ಹಾಗೇ ಹಿಡಿದುಕೊಂಡ.

ಕೆಲ ನಿಮಿಷಗಳಾಗುತ್ತಿದ್ದಂತೆಯೇ, ಯುವಕನಿಗೆ ಉಸಿರುಗಟ್ಟತೊಡಗಿತು, ಅವ ಒದ್ದಾಡತೊಡಗಿದ.
ಆಗ ಮಾಸ್ಟರ್, ಯುವಕನ ಮುಖವನ್ನು ನೀರಿನಿಂದ ಹೊರ ತೆಗೆದ. ಯುವಕ ಏದುಸಿರು ಬಿಡುತ್ತ ಜೋರು ಜೋರಾಗಿ ಕೆಮ್ಮತೊಡಗಿದ.

ಮಾಸ್ಟರ್ : ಈಗ ಹೇಳು, ನೀರಿನಲ್ಲಿ ನಿನ್ನ ಮುಖ ಮುಳುಗಿದ್ದಾಗ, ನಿನಗೇನು ಬೇಕೇ ಬೇಕು ಅನಿಸಿತ್ತು?

ಯುವಕ : ಗಾಳಿ, ಗಾಳಿ ಬೇಕನಿಸಿತ್ತು ಮಾಸ್ಟರ್.

ಮಾಸ್ಟರ್ : ಹಾಗಾದರೆ ಈಗ ವಾಪಸ್ ಹೋಗು, ಯಾವಾಗ ನಿನಗೆ ದೇವರ ಅವಶ್ಯಕತೆ ಗಾಳಿಯಷ್ಟೇ ಮುಖ್ಯ ಅನಿಸುತ್ತದೆಯೋ, ಆಗ ಬಾ. ದೇವರ ಬಗ್ಗೆ ಆಗ ಮಾತಾಡೋಣ.

Leave a Reply