ನೀವು ಖಿನ್ನತೆಯಲ್ಲಿ ಸಿಕ್ಕಿಹಾಕಿಕೊಂಡಾಗ, ಬಹಳ ಖುಶಿಯಿಂದ ಈ ಖಿನ್ನತೆ ನಿಮ್ಮನ್ನ ಆವರಿಸಿಕೊಳ್ಳಲು ಅವಕಾಶ ಮಾಡಿಕೊಡಿ. ಖಿನ್ನತೆ ತನ್ನ ಪೂರ್ಣತೆಯನ್ನು ಸಾಧಿಸಿದಾಗ ಒಮ್ಮೆಲೆ ಥಟ್ಟನೆ ಮಾಯವಾಗುತ್ತದೆ! ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ
ಖಿನ್ನತೆ ನಿಮ್ಮನ್ನ ಆವರಿಸಿಕೊಂಡಿರುವಾಗ, ಅದರ ಜೊತೆ ಯುದ್ಧ ಮಾಡಲು ಹೋಗಬೇಡಿ. ಆ ಕಾರಣವಾಗಿ ದುಃಖಿಗಳಾಗಬೇಡಿ. ಎಷ್ಟು ಬೇಗ ಈ ಖಿನ್ನತೆಯನ್ನ ನೀವ ಹೊರ ಹಾಕ ಬಯಸುತ್ತೀರೋ ಅಷ್ಟು ಆಳಕ್ಕೆ ಖಿನ್ನತೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಈ ಖಿನ್ನತೆಯಂದಿಗೆ ನೀವು ಸಂಘರ್ಷಕ್ಕೆ ಇಳಿಯುವಿರಾದರೆ, ನೀವು ಸೆಕೆಂಡರಿ ಖಿನ್ನತೆಯನ್ನು ಸೃಷ್ಟಿ ಮಾಡಿಕೊಳ್ಳುತ್ತೀರಿ, ಇದು ತುಂಬ ಅಪಾಯಕಾರಿ. ಮೊದಲ ಖಿನ್ನತೆ ನಿಮಗೆ ದೇವರು ದಯಪಾಲಿಸಿದ್ದು, ಇದು ಬಹಳ ಸುಂದರ ಆದರೆ ಸೆಕೆಂಡರಿ ಖಿನ್ನತೆಯನ್ನ ಸೃಷ್ಟಿ ಮಾಡಿಕೊಂಡಿದ್ದು ನೀವು, ಇದು ಮಾನಸಿಕ. ಒಮ್ಮೆ ನೀವು ಮಾನಸಿಕ ಖಿನ್ನತೆಯ ಜಾಲದಲ್ಲಿ ಸಿಲುಕಿಬಿಟ್ಟರೆ, ಎಂದೂ ತೀರದ ಸಮಸ್ಯೆಯೊಂದರಲ್ಲಿ ನೀವು ಸಿಲುಕಿಕೊಳ್ಳುತ್ತೀರಿ ಏಕೆಂದರೆ ಮನಸ್ಸಿಗೆ ಅಸಂಖ್ಯ ಒಳ ಹಾದಿಗಳು, ಇದರಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟರೆ ತಪ್ಪಿಸಿಕೊಳ್ಳುವುದು ಕಷ್ಟ ಸಾಧ್ಯ.
ನೀವು ಖಿನ್ನತೆಯಲ್ಲಿ ಸಿಕ್ಕಿಹಾಕಿಕೊಂಡಾಗ, ಬಹಳ ಖುಶಿಯಿಂದ ಈ ಖಿನ್ನತೆ ನಿಮ್ಮನ್ನ ಆವರಿಸಿಕೊಳ್ಳಲು ಅವಕಾಶ ಮಾಡಿಕೊಡಿ. ಖಿನ್ನತೆ ತನ್ನ ಪೂರ್ಣತೆಯನ್ನು ಸಾಧಿಸಿದಾಗ ಒಮ್ಮೆಲೆ ಥಟ್ಟನೆ ಮಾಯವಾಗುತ್ತದೆ. ಮನಸ್ಸಿನ ಆಕಾಶದಲ್ಲಿನ ಎಲ್ಲ ಮೋಡಗಳು ಮಾಯವಾಗಿ, ಬಿಸಿಲು ಕಾಣಿಸಿಕೊಳ್ಳುತ್ತದೆ, ಆಕಾಶ ತಿಳಿಯಾಗುತ್ತದೆ. ಒಂದೇ ಒಂದು ಕ್ಷಣದಲ್ಲಿ ಸ್ವರ್ಗದ ಬಾಗಿಲು ನಿಮಗಾಗಿ ತೆರೆದುಕೊಳ್ಳುತ್ತದೆ. ಖಿನ್ನತೆಯ ಕಾರಣಕ್ಕಾಗಿ ನೀವು ಖಿನ್ನರಾಗದಿದ್ದರೆ, ನೀವು ಈ ಸ್ವರ್ಗವನ್ನು ಸಂಪರ್ಕಿಸಬಹುದು, ತೆರೆದುಕೊಂಡಿರುವ ಸ್ವರ್ಗದ ಬಾಗಿಲನ್ನು ದಾಟಬಹುದು. ಇದು ನಿಮಗೆ ಸಾಧ್ಯವಾಗುವುದಾದರೆ ನೀವು ಬದುಕಿನ ಅಲ್ಟಿಮೇಟ್ ನಿಯಮವೊಂದನ್ನ ಕಲಿತುಕೊಳ್ಳುತ್ತೀರಿ. ಬದುಕು ವೈರುಧ್ಯವನ್ನ ತನ್ನ ಟೀಚರ್ ಆಗಿ, ತನ್ನ ಏಣಿಯಾಗಿ ಬಳಸಿಕೊಳ್ಳುತ್ತದೆ ಸಮಸ್ಯೆಗಳಿಂದ ಪಾರಾಗಲು.
ಒಮ್ಮೆ ಶಿಷ್ಯನೊಬ್ಬ ಝೆನ್ ಮಾಸ್ಟರ್ ಬಳಿ ಹೋಗಿ ಅವರ ಸಲಹೆ ಕೇಳಿದ.
“ಮಾಸ್ಟರ್, ನನ್ನ ಸಿಟ್ಟು ಹತೋಟಿಗೆ ಸಿಗುತ್ತಿಲ್ಲ, ಏನಾದರೂ ಉಪಾಯ ಹೇಳಿ “
ಮಾಸ್ಟರ್ : ಹಂ, ಇದೇನೋ ವಿಚಿತ್ರವಾಗಿದೆಯಲ್ಲ, ಎಲ್ಲಿ ಒಮ್ಮೆ ನಿನ್ನ ಸಿಟ್ಟು ತೋರಿಸು, ಹೇಗಿದೆ ನೋಡೋಣ.
ಶಿಷ್ಯ : ಆದರೆ ಮಾಸ್ಟರ್, ನನಗೀಗ ಸಿಟ್ಟು ಬಂದಿಲ್ಲ, ಹೇಗೆ ತೋರಿಸಲಿ?
ಮಾಸ್ಟರ್ : ಹಾಗಾದ್ರೆ ಯಾವಾಗ ತೋರಸ್ತೀಯಾ?
ಶಿಷ್ಯ : ಅಯ್ಯೋ ಅದು ಹಾಗೆ ಹೇಳಕ್ಕಾಗಲ್ಲ, ಅಚಾನಕ್ ಆಗಿ ಬರತ್ತೆ.
ಮಾಸ್ಟರ್ : ಹಾಗಾದ್ರೆ ಅದು ನಿನ್ನ ಸ್ವಂತದ್ದಲ್ಲ. ಸ್ವಂತದ್ದಾಗಿದ್ರೆ ಕೇಳಿದಾಗೆಲ್ಲ ನೀನು ಅದನ್ನ ನನಗೆ ತೋರಿಸಬಹುದಾಗಿತ್ತು. ಅದು ಹುಟ್ಟಿನಿಂದ ಬಂದದ್ದಲ್ಲ, ಅಪ್ಪ ಅಮ್ಮ ಕೊಟ್ಟಿದ್ದಲ್ಲ.
ನಿನ್ನದಲ್ಲ ಅಂದ ಮೇಲೆ ನಿನ್ನ ಹತೋಟಿಗೆ ಹೇಗೆ ಬರತ್ತೆ ಆ ಸಿಟ್ಟು?
ಈ ಸಮಜಾಯಿಶಿ ಕೇಳಿ ಶಿಷ್ಯ ಕುಣಿದು ಕುಪ್ಪಳಿಸಿಬಿಟ್ಟ.