ಒಂದು Náhuatl ಪ್ರಾರ್ಥನೆ

ಈ ಪ್ರಾರ್ಥನೆ ನೀತಿ ಪಾಠವೂ, ತತ್ವಜ್ಞಾನವೂ ಆಗಿರುವ ಬಗೆಯೇ ಬೆರಗು ಹುಟ್ಟಿಸುತ್ತದೆ! Náhuatl ಸಮುದಾಯದ ಈ ಪ್ರಾರ್ಥನೆಯನ್ನು ಕನ್ನಡಕ್ಕೆ ತಂದವರು, ಚಿದಂಬರ ನರೇಂದ್ರ

ನನ್ನನ್ನು ಚೆನ್ನಾಗಿ ಬೆಳೆಸುವಲ್ಲಿ ಅವರು ವಿಫಲರಾದರು ಎನ್ನುವ ಭಾವನೆಯಿಂದ ನನ್ನ ತಂದೆ ತಾಯಿಯರನ್ನು ನಾನು ಬಿಡುಗಡೆಗೊಳಿಸುತ್ತೇನೆ.

ನನಗೆ ಹೆಮ್ಮೆ, ಗೌರವ ತರುವ ಹೊಣೆಯಿಂದ ನಾನು ನನ್ನ ಮಕ್ಕಳನ್ನ ಮುಕ್ತಗೊಳಿಸುತ್ತೇನೆ. ಅವರು ತಮ್ಮ ಹೃದಯದ ಮಾತು ಕೇಳಲಿ, ತಮ್ಮ ದಾರಿಯನ್ನ ತಾವು ಕಂಡುಕೊಳ್ಳಲಿ.

ನನ್ನನ್ನು ಪೂರ್ಣಗೊಳಿಸುವ ಬಾಧ್ಯತೆಯಿಂದ ನನ್ನ ಸಂಗಾತಿಯನ್ನ ನಾನು ಬಿಡುಗಡೆ ಮಾಡುತ್ತೇನೆ. ನನ್ನೊಳಗೆ ಯಾವುದರ ಕೊರತೆಯೂ ಇಲ್ಲ.

ನನ್ನ ಸುತ್ತ ಇರುವ ಎಲ್ಲ ಜೀವಿಗಳಿಂದ ನಾನು ಸದಾ ಕಾಲ ಕಲಿಯುತ್ತಲೇ ಇರುತ್ತೇನೆ.

ಈ ಬದುಕಿನಲ್ಲಿ ನಾನು ಉಸಿರಾಡುವುದಕ್ಕೆ ಕಾರಣರಾದ ನನ್ನ ಅಜ್ಜಿ-ಅಜ್ಜಿಗೆ ಮತ್ತು ಪೂರ್ವಿಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಿಂದೆ ಅವರು ಮಾಡಿದ ತಪ್ಪುಗಳಿಂದ, ಅವರಿಂದ ಪೂರೈಸಲು ಸಾಧ್ಯವಾಗದ ಆಶಯಗಳಿಂದ ಅವರನ್ನು ನಾನು ಮುಕ್ತಗೊಳಿಸುತ್ತೇನೆ. ಆ ಸಮಯದಲ್ಲಿ, ತಮಗೆ ಸಾಧ್ಯವಾದ ಪ್ರಜ್ಞೆಯ ಅವಕಾಶದಲ್ಲಿ, ತಮ್ಮ ಬಿಕ್ಕಟ್ಟುಗಳನ್ನ ಪರಿಹರಿಸಿಕೊಳ್ಳಲು ಅವರು ಮಾಡಿದ ಅತ್ಯುತ್ತಮ ಪ್ರಯತ್ನಗಳ ಬಗ್ಗೆ ನನಗೆ ಅರಿವಿದೆ.

ನಾನು ಅವರನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ ಮತ್ತು ಅವರ ಮುಗ್ಧತೆಯನ್ನ ಗುರುತಿಸುತ್ತೇನೆ.

ಅವರ ಕಣ್ಣೆದುರು ಆತ್ಮಸಾಕ್ಷಿಯಾಗಿ ನಡೆದುಕೊಳ್ಳುತ್ತಿರುವೆನಾದ್ದರಿಂದ, ಸ್ವತಃ ನನ್ನ ಮೇಲೆ, ನನ್ನ ಅಸ್ತಿತ್ವದ ಮೇಲೆ ನಂಬಿಕೆಯನ್ನಿಟ್ಟುಕೊಂಡು, ನನ್ನ ಹೃದಯದ ತಿಳುವಳಿಕೆಯ ಕೈಹಿಡಿದುಕೊಂಡು ನಡೆಯುವುದರ ಹೊರತಾಗಿ ನಾನು ಅವರಿಗೆ ಅರ್ಪಿಸುವುದು ಬೇರೇನೂ ಇಲ್ಲವೆಂದು ತಿಳಿದುಕೊಂಡಿದ್ದೇನೆ, ಅವರಿಂದ ನಾನು ಏನನ್ನೂ ಮುಚ್ಚಿಡುತ್ತಿಲ್ಲವೆಂದು ನಂಬಿದ್ದೇನೆ.

ಎಲ್ಲರನ್ನೂ ಉದ್ಧಾರ ಮಾಡುವ, ಒಂದುಗೂಡಿಸುವ, ಅವರ ನಿರೀಕ್ಷೆಗಳನ್ನು ಪೂರೈಸುವ ಪಾತ್ರದಿಂದ ನನ್ನನ್ನು ನಾನು ಮುಕ್ತಗೊಳಿಸಿಕೊಳ್ಳುತ್ತೇನೆ.

ಕೆಲವರಿಗೆ ನನ್ನನ್ನು ಅರ್ಥಮಾಡಿಕೊಳ್ಳುವುದು ಸಾಧ್ಯಾವಾಗದಿದ್ದರೂ, ನಾನು ಪ್ರೇಮದ ಮೂಲಕ ನನ್ನ ಕಲಿಕೆಯನ್ನ ಮುಂದುವರೆಸುತ್ತ, ನನ್ನ ರೀತಿಯ ಅಭಿವ್ಯಕ್ತಿಯನ್ನ ಮತ್ತು ನನ್ನೊಳಗಿನ ತಿರುಳನ್ನ ಹರಸುತ್ತ, ಗೌರವಿಸುತ್ತ ಮುನ್ನಡೆಯುತ್ತೇನೆ.

ನನಗೆ ನನ್ನ ಬಗ್ಗೆ ತಿಳುವಳಿಕೆ ಇದೆ, ಏಕೆಂದರೆ ನಾನು ನನ್ನ ಕಥೆಯನ್ನ ಬದುಕಿದ್ದೇನೆ ಮತ್ತು ಅನುಭವಿಸಿದ್ದೇನೆ. ನನಗೆ ನನ್ನ ಬಗ್ಗೆ ಗೊತ್ತಿದೆಯಾದ್ದರಿಂದ, ನಾನು ಯಾರು?, ನನ್ನ ಭಾವನೆಗಳೇನು, ಮತ್ತು ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ ಎನ್ನುವುದರ ಕುರಿತಾಗಿ ನನಗೆ ಸ್ಪಷ್ಟತೆ ಇದೆ.

ತುಂಬು ಹೃದಯದ ಗೌರವ ಮತ್ತು ಒಪ್ಪಿಗೆ

ನನಗೆ ನನ್ನೊಳಗಿನ ಮತ್ತು ನಿನ್ನೊಳಗಿನ ದೈವತ್ವದ ಬಗ್ಗೆ ಗೌರವ.

ನಾವು ಮುಕ್ತರು.

~A Traditional Náhuatl Prayer

Leave a Reply