ಬದುಕಿನ ಮೂರು ಆಯಾಮಗಳು : ಓಶೋ ವ್ಯಾಖ್ಯಾನ

ಬುದ್ಧ ಒಂದು ತುದಿಯಾದರೆ ಲಾವೋತ್ಸೇ ಇನ್ನೂಂದು ತುದಿ. ಅವನು ಪೂರ್ಣ ಬದುಕನ್ನ ಅನುಭವಿಸಿದವನು, ಬದುಕಿನ ಮೂರೂ ಆಯಾಮಗಳನ್ನು ಬದುಕಿದವನು… | ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ನಿನ್ನ ದುಃಖಕ್ಕೆ
ಪರಿಹಾರವೇ ಇಲ್ಲ ಎನ್ನುವುದನ್ನ ಕಂಡುಕೊಂಡಾಗಲೇ
ನೀನು ಪರಮ ಸುಖಿ.

ತಲೆಬಾಗಿ ಹೂಂ ಗುಡುವುದಕ್ಕೂ ,
ತಲೆಯೆತ್ತಿ ಹೂಂ ಗುಡುವುದಕ್ಕೂ ಏನು ವ್ಯತ್ಯಾಸ?
ಗೆಲುವು, ಸೋಲುಗಳ ನಡುವೆ?
ಅವರ ಹೂಂ, ನಿನ್ನ ಹೂಂ ಆಗಲೇಬೇಕೆ?
ಅವರು ಉಹೂಂ ಎಂದರೆ, ನೀನೂ ?
ಎಂಥ ನಗೆಪಾಟಲಿನ ಸಂಗತಿ.

ಅವರು ಯುದ್ಧಕ್ಕೆ ಹೊರಟವರಂತೆ ಉತ್ತೇಜಿತರು
ನನಗೆ ಆ ಸಂಭ್ರಮವಿಲ್ಲ
ನಿರ್ಲಿಪ್ತ ನಾನು
ಇನ್ನೂ ನಗು ಕಲಿಯದ ಹಸುಗೂಸು.

ಬೇಕಾದದ್ದು ಇದ್ದೇ ಇದೆ ಎಲ್ಲರ ಬಳಿ
ನಾನೊಬ್ಬನೇ ಬರಿಗೈ ದೊರೆ
ನೂಕಿದಂತೆ ನೂಕಿಸಿಕೊಳ್ಳುವವನು
ಅಪ್ಪಟ ದಡ್ಡ, ಪೂರ್ತಿ ಖಾಲಿ.

ಅವರು ಖಚಿತಮತಿಗಳು, ನಾನು ಮಹಾ ಗೊಂದಲದ ಮನುಷ್ಯ
ಅವರು ಚುರುಕು, ನಾನು ಮಬ್ಬು
ಅವರಿಗೋ ಒಂದು ಉದ್ದೇಶ
ನಾನು ಕಣ್ಣಿಗೆ ಪಟ್ಟಿ ಕಟ್ಟಿಕೊಂಡವನು
ಅಲೆ ಕರೆದುಕೊಂಡು ಹೋದಲ್ಲಿ, ಗಾಳಿ ಬೀಸಿದ ದಿಕ್ಕಿನಲ್ಲಿ
ಹರಿದು ಹೋಗುವವನು

ಎಲ್ಲರಂಥವನಲ್ಲ ನಾನು
ಸೀದಾ ಮಹಾ ಮಾಯಿಯ ಮೊಲೆಗೆ ಬಾಯಿಟ್ಟವನು.

~ ಲಾವೋತ್ಸೇ

ಸ್ವರ್ಗದ ಅತ್ಯಂತ ಪ್ರಸಿದ್ಧ ಕೆಫೆಯಲ್ಲಿ ಒಂದು ಮಧ್ಯಾಹ್ನ, ಬುದ್ಧ, ಕನ್ಫ್ಯೂಷಿಯಸ್ ಮತ್ತು ಲಾವೋತ್ಸೇ ಹರಟುತ್ತ ಕುಳಿತಿದ್ದರು. ಅಷ್ಟರಲ್ಲಿಯೇ ಸರ್ವರ್ ಅಲ್ಲಿಗೆ ಮೂರು ಗ್ಲಾಸ್ ‘ಲೈಫ್ ಜ್ಯೂಸ್’ ತೆಗೆದುಕೊಂಡುಬಂದು ಆ ಮೂವರು ತತ್ವಜ್ಞಾನಿಗಳಿಗೂ ಆಫರ್ ಮಾಡಿದ.

ಬುದ್ಧ ಕೂಡಲೇ ಕಣ್ಣು ಮುಚ್ಚಿಕೊಂಡು ಲೈಫ್ ಒಂದು ವಿಪತ್ತು ಎನ್ನುತ್ತ ಲೈಫ್ ಜ್ಯೂಸ್ ಕುಡಿಯಲು ನಿರಾಕರಿಸಿದ.

ಯೋಚನೆಯಲ್ಲಿ ಬಿದ್ದ ಕನ್ಫ್ಯೂಷಿಯಸ್ ಅರ್ಧ ಕಣ್ಣು ಮುಚ್ಚಿ ಲೈಫ್ ಜ್ಯೂಸ್ ನ ಗ್ಲಾಸ್ ಎತ್ತಿಕೊಂಡು ಒಂದು ಗುಟಕು ಜ್ಯೂಸ್ ಕುಡಿದು ಘೋಷಿಸಿದ, ಬುದ್ಧ ಹೇಳಿದ್ದು ನಿಜ, ಲೈಫ್ ಒಂದು ವಿಪತ್ತು. ಕನ್ಫ್ಯೂಷಿಯಸ್ ಮಧ್ಯಮಮಾರ್ಗಿ, ಸೈಂಟಿಫಿಕ್ ಮನೋಭಾವದ ಮನುಷ್ಯ, ಯಾವುದನ್ನು ಪರೀಕ್ಷೆ ಮಾಡದೇ ಒಪ್ಪಿಕೊಳ್ಳುವವನಲ್ಲ. ಆದ್ದರಿಂದಲೇ ಅವನು ಲೈಫ್ ಜ್ಯೂಸ್ ನ ಒಂದು ಗುಟುಕು ಕುಡಿದ ಮೇಲಷ್ಟೇ ತನ್ನ ತೀರ್ಮಾನ ಘೋಷಿಸಿದ.

ಸರ್ವರ್, ಲಾವೋತ್ಸೇ ಯ ಮುಂದೆ ಗ್ಲಾಸ್ ತಂದು ಇಟ್ಟಾಗ, ಲಾವೋತ್ಸೇ ಮೂರು ಗ್ಲಾಸ್ ಲೈಫ್ ಜ್ಯೂಸ್ ಕುಡಿದು ಮುಗಿಸಿ, ಕುಣಿಯಲು ಶುರು ಮಾಡಿದ. ಪೂರ್ತಿ ಕುಡಿದು ಅನುಭವಿಸದೇ ಯಾವ ತೀರ್ಮಾನವನ್ನೂ ಹೇಳಲಿಕ್ಕಾಗದು ಎನ್ನುವುದು ಅವನ ತಿಳುವಳಿಕೆಯಾಗಿತ್ತು. “ ನೀನು ಏನು ಹೇಳುತ್ತೀಯ ಲಾವೋತ್ಸೇ ?” ಬುದ್ಧ ಮತ್ತು ಕನ್ಫ್ಯೂಷಿಯಸ್ ಕುತೂಹಲದಿಂದ ಲಾವೋತ್ಸೇಯನ್ನು ಪ್ರಶ್ನೆ ಮಾಡಿದರು.

“ ನಾನು ಹಾಡುತ್ತಿರುವುದು, ಕುಣಿಯುತ್ತಿರುವುದೇ ನನ್ನ ಉತ್ತರ. ಯಾವುದೇ ಒಂದು ಸಂಗತಿಯನ್ನ ಪೂರ್ಣವಾಗಿ ಅನುಭವಿಸದೇ ಯಾವ ತೀರ್ಮಾನವನ್ನೂ ಮಾಡಬಾರದು. ಹಾಗೇ ನೋಡಿದರೆ ಪೂರ್ತಿಯಾಗಿ ಅನುಭವಿಸಿದ ಮೇಲೂ ಏನೂ ಹೇಳಲಿಕ್ಕಾಗುವುದಿಲ್ಲ, ಏಕೆಂದರೆ ನಿಮ್ಮ ಅನುಭವವನ್ನ ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ.

ಬುದ್ಧ ಒಂದು ತುದಿಯಾದರೆ ಲಾವೋತ್ಸೇ ಇನ್ನೂಂದು ತುದಿ. ಅವನು ಪೂರ್ಣ ಬದುಕನ್ನ ಅನುಭವಿಸಿದವನು, ಬದುಕಿನ ಮೂರೂ ಆಯಾಮಗಳನ್ನು ಬದುಕಿದವನು.


Source: The Book of Understanding” by Osho

Leave a Reply