ಅನುಸರಿಸದೇ ಇರುವುದೇ ಸರಿಯಾದ ಅನುಸರಣೆ:

ಬುದ್ಧ ಯಾರನ್ನೂ ಅನುಸರಿಸಲಿಲ್ಲ, ತನ್ನ ಹಿಂದಿನ ಎಲ್ಲವನ್ನೂ ಅನುಸರಿಸುವುದನ್ನ ಬಿಟ್ಟ ಗಳಿಗೆಯಲ್ಲಿಯೇ ಅವನಿಗೆ ಜ್ಞಾನೋದಯವಾಯಿತು ~ ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ಝೆನ್ ಮಾಸ್ಟರ್ ಬೋಕುಜು ನ ಗುರು ತುಂಬಾ ಪ್ರಸಿದ್ಧ ವ್ಯಕ್ತಿ, ಸುತ್ತಮುತ್ತಲಿನ ಪರಿಸರದಲ್ಲಿ ಅವನಷ್ಟು ಹೆಸರುವಾಸಿಯಾಗಿದ್ದ ಮನುಷ್ಯ ಬೇರೆ ಯಾರೂ ಇರಲಿಲ್ಲ. ಒಮ್ಮೆ ಆಶ್ರಮಕ್ಕೆ ಬಂದ ವ್ಯಕ್ತಿಯೊಬ್ಬ ಬೋಕುಜು ನ ಪ್ರಶ್ನೆಮಾಡಿದ, “ ನೀನು ನಿನ್ನ ಗುರುವನ್ನ ಸಂಪೂರ್ಣವಾಗಿ ಫಾಲೋ ಮಾಡುತ್ತೀಯ? “

“ ಹೌದು ನಾನು ನನ್ನ ಗುರುವನ್ನ ಪೂರ್ಣವಾಗಿ ಫಾಲೋ ಮಾಡುತ್ತೇನೆ “ ಬೋಕುಜು ಉತ್ತರಿಸಿದ.

ಬೋಕುಜು ನ ಉತ್ತರ ಕೇಳಿ ಆ ವ್ಯಕ್ತಿಗೆ ಬಹಳ ಆಶ್ಚರ್ಯವಾಯಿತು, ಏಕೆಂದರೆ ಬೋಕುಜು ತನ್ನ ಗುರುವನ್ನ ಯಾವ ರೀತಿಯಲ್ಲೂ ಅನುಸರಿಸದ ವಿಷಯದ ಬಗ್ಗೆ ಅಲ್ಲಿ ಎಲ್ಲರಿಗೂ ಗೊತ್ತಿತ್ತು.

“ ನನಗೆ ಸುಳ್ಳು ಹೇಳುತ್ತಿದ್ದೀಯ? ನೀನು ನಿನ್ನ ಗುರುವನ್ನ ಯಾವರೀತಿಯಲ್ಲೂ ಅನುಸರಿಸುವುದಿಲ್ಲ ಎನ್ನುವ ವಿಷಯ ಎಲ್ಲರಿಗೂ ಗೊತ್ತು, ಆದರೂ ನೀನು, ನನಗೆ ಸುಳ್ಳು ಹೇಳುತ್ತಿರುವುದು ಯಾಕೆ? “ ಆ ವ್ಯಕ್ತಿ ಬೋಕುಜು ನನ್ನು ತರಾಟೆಗೆ ತೆಗೆದುಕೊಂಡ.

“ ನನ್ನ ಗುರು ಯಾವತ್ತೂ ಯಾರನ್ನೂ ಫಾಲೋ ಮಾಡಲಿಲ್ಲ, ತನ್ನ ಗುರುವನ್ನು ಕೂಡ. ನಾನು ನನ್ನ ಗುರುವಿನ ಈ ತತ್ವವನ್ನ ಚಾಚೂತಪ್ಪದೇ ಅನುಸರಿಸುತ್ತಿದ್ದೇನೆ. ನಾನು ಕೂಡ ಯಾರನ್ನೂ ಅನುಸರಿಸುವುದಿಲ್ಲ, ನನ್ನ ಗುರುವನ್ನು ಕೂಡ. ಇದನ್ನೇ ನಾನು ನನ್ನ ಗುರುವಿನಿಂದ ಕಲಿತಿದ್ದು. ಆದ್ದರಿಂದ ನನ್ನ ಉತ್ತರದಲ್ಲಿ ಯಾವ ಸುಳ್ಳೂ ಇಲ್ಲ. “ ಬೋಕುಜು ಆ ವ್ಯಕ್ತಿಗೆ ತನ್ನ ಸಮಜಾಯಿಷಿ ಹೇಳಿದ.

ಬುದ್ಧ ಯಾರನ್ನೂ ಅನುಸರಿಸಲಿಲ್ಲ, ತನ್ನ ಹಿಂದಿನ ಎಲ್ಲವನ್ನೂ ಅನುಸರಿಸುವುದನ್ನ ಬಿಟ್ಟ ಗಳಿಗೆಯಲ್ಲಿಯೇ ಅವನಿಗೆ ಜ್ಞಾನೋದಯವಾಯಿತು. ಅವನು ತನ್ನತನವನ್ನ ಕಂಡುಕೊಂಡಾಗ, ಎಲ್ಲ ದಾರಿಗಳನ್ನ, ಎಲ್ಲ ಸಿದ್ಧಾಂತಗಳನ್ನ, ಎಲ್ಲ ಕಲಿಕೆಯನ್ನ ತ್ಯಜಿಸಿದಾಗ ಅವನಿಗೆ ಬುದ್ಧತ್ವ ಪ್ರಾಪ್ತಿಯಾಯಿತು. ನೀವು ಬುದ್ಧನನ್ನು ಅನುಸರಿಸುತ್ತಿರುವಿರಾದರೆ, ನೀವು ಅವನಿಂದ ದೂರ ಹೋಗುತ್ತಿರುವಿರಿ ಎಂದರ್ಥ. ಇದು ದ್ವಂದ್ವ ಅನಿಸಬಹುದು ಆದರೆ ಅನಿಸುತ್ತದೆ ಅಷ್ಟೇ. ಬುದ್ಧ ಯಾರ ಹಿಂದೆಯೂ ಹೋಗಲಿಲ್ಲ ಆದ್ದರಿಂದಲೇ ಅವನಿಗೆ ಶಿಖರವನ್ನು ಮುಟ್ಟುವುದು ಸಾಧ್ಯವಾಯಿತು. ಬುದ್ಧನನ್ನ ಅನುಸರಿಸಬೇಡಿ ಅವನನ್ನ ಅರ್ಥ ಮಾಡಿಕೊಳ್ಳಿ ಆಗ ಮಾತ್ರ ಒಂದು ಸೂಕ್ಷ್ಮ ಸಂಭವಿಸುತ್ತದೆ ಮತ್ತು ಅದು ನಿಮ್ಮ ಅಂತರಂಗಕ್ಕೆ ಸಂಬಂಧಿಸಿದ್ದಾಗಿರುತ್ತದೆ.

ಸೂಫೀ ಅನುಭಾವಿ ಝೂಸಿಯಾ ಸಾವಿನ ಹಾಸಿಗೆಯಲ್ಲಿದ್ದ. ಒಂದು ಮುಂಜಾನೆ ಆತ ಭಗವಂತನನ್ನು ಪ್ರಾರ್ಥಿಸತೊಡಗಿದ. ಅವನ ಕಣ್ಣುಗಳಲ್ಲಿ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಆತ ಕಂಪಿಸುತ್ತಿದ್ದ.
ಈ ದೃಶ್ಯವನ್ನು ನೋಡಿದ ಶಿಷ್ಯನೊಬ್ಬ ಪ್ರಶ್ನೆ ಮಾಡಿದ.

“ ಯಾಕೆ? ಏನಾಯ್ತು ? ಯಾಕಿಷ್ಟು ತೀವ್ರವಾಗಿ ಕಂಪಿಸುತ್ತಿದ್ದೀರಿ? “

ಝೂಸಿಯಾ ಉತ್ತರಿಸಿದ.

“ ನನ್ನ ಈ ಪರಿಸ್ಥಿತಿಗೆ ಕಾರಣವಿದೆ, ನಾನು ಸಾವಿಗೆ ಹತ್ತಿರವಾಗಿದ್ದೇನೆ. ಇನ್ನೇನು ಕೆಲವೇ ಕೆಲವು ಕ್ಷಣಗಳಲ್ಲಿ ನಾನು ಸಾಯಬಹುದು. ನಾನು ಸತ್ತು, ಭಗವಂತನ ಮುಂದೆ ಹೋಗಿ ನಿಂತಾಗ ಅವ, “ ಯಾಕೆ ಝೂಸಿಯಾ, ನೀನು ಮೋಸೆಸ್ ನ ಹಾಗೆ ಬದುಕಲಿಲ್ಲ ? “ ಅಂತ ಪ್ರಶ್ನೆ ಕೇಳಿದರೆ, ನನ್ನ ಹತ್ತಿರ ಉತ್ತರವಿದೆ.
“ ಭಗವಂತಾ, ನೀನು ನನಗೆ ಮೋಸೆಸ್ ನ ಗುಣ ವಿಶೇಷಣಗಳನ್ನು ದಯಪಾಲಿಸಲಿಲ್ಲ” ಎಂದು ಉತ್ತರಿಸುತ್ತೇನೆ.

ಅಕಸ್ಮಾತ್ ಭಗವಂತ “ ಯಾಕೆ ನೀನು ಅಕೀಬಾನ ಥರ ಬಾಳಲಿಲ್ಲ ? “ ಎಂದರೆ ಅದಕ್ಕೂ ನನ್ನ ಹತ್ತಿರ ಉತ್ತರವಿದೆ. ಭಗವಂತ ನನಗೆ ಅಕೀಬಾನ ಸ್ವಭಾವಗಳನ್ನೂ ದಯಪಾಲಿಸಿಲ್ಲ.

ಆದರೆ ಅವನೇನಾದರೂ ನನಗೆ “ ಝೂಸಿಯಾ, ಯಾಕೆ ನೀನು ಝೂಸಿಯಾನ ಹಾಗೆ ಬದುಕಲಿಲ್ಲ” ಎಂದು ಕೇಳಿದರೆ, ಏನು ಉತ್ತರ ಕೊಡಲಿ? ಅದಕ್ಕೇ ನನ್ನ ಕಣ್ಣಲ್ಲಿ ನೀರು, ಅದಕ್ಕೇ ನಾನು ನಡಗುತ್ತಿದ್ದೇನೆ. ನನ್ನ ಜೀವನವಿಡೀ ನಾನು ಮೋಸೆಸ್ ಥರ, ಅಕೀಬಾ ಥರ ಬದುಕಲು ಪ್ರಯತ್ನ ಮಾಡಿದೆ. ಆದರೆ ಭಗವಂತ ನನ್ನನ್ನು ಝೂಸಿಯಾ ಥರ ಬಾಳಲು ಹುಟ್ಟಿಸಿದ್ದಾನೆ, ಝೂಸಿಯಾನ ಎಲ್ಲ ಗುಣ ವಿಶೇಷಣಗಳನ್ನೂ ದಯಪಾಲಿಸಿ ಆಶೀರ್ವದಿಸಿದ್ದಾನೆ ಎನ್ನುವುದು ಮರೆತೇ ಹೋಗಿತ್ತು. ಹೇಗೆ ಅವನ ಮುಂದೆ ಹೋಗಿ ನಿಲ್ಲಲಿ? ಹೇಗೆ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಲಿ? ಭಯವಾಗುತ್ತಿದೆ ನನಗೆ. “

Leave a Reply