ಸೌಂದರ್ಯ ನೋಡುಗರ ಕಣ್ಣಲ್ಲಿದೆ! : ಓಶೋ ವ್ಯಾಖ್ಯಾನ

ಚೆಲುವನ್ನು ಸವಿಯಲು ನಮ್ಮ ಕಣ್ಣುಗಳಲ್ಲಿ, ಪ್ರಜ್ಞೆಯಲ್ಲಿ ಸೆನ್ಸ್ ಆಫ್ ಬ್ಯೂಟಿ ಇರಬೇಕಷ್ಟೇ. ಅದು ಇರದೇ ಹೋದಾಗ ನಮಗೆ ಯಾವ ಚೆಲುವನ್ನ ಕಾಣಲಾಗುವುದಿಲ್ಲ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

“ಈ ದೇವದಾರು ಮರಗಳ ಚೆಲುವು ನೋಡು “ ಎಂದು ನಾನು ಹೇಳಿದಾಗ, “ ಅದು ಕೇವಲ ಒಂದು ಮರ, ನನಗೇನೋ ಆ ಮರದಲ್ಲಿ ಯಾವ ಚೆಲುವೂ ಕಾಣಿಸುತ್ತಿಲ್ಲ. ಆ ಮರದ ಚೆಲುವನ್ನು ಪ್ರೂವ್ ಮಾಡು “ ಎಂದು ನೀನು ಹೇಳುತ್ತೀಯಾದರೆ, ನಾನೇನು ಮಾಡುವುದು ಸಾಧ್ಯ? ಮರಗಳ ಚೆಲುವನ್ನು ಪ್ರೂವ್ ಮಾಡೋದು ಹೇಗೆ? ಚೆಲುವನ್ನು ಸವಿಯಲು ನಮ್ಮ ಕಣ್ಣುಗಳಲ್ಲಿ, ಪ್ರಜ್ಞೆಯಲ್ಲಿ ಸೆನ್ಸ್ ಆಫ್ ಬ್ಯೂಟಿ ಇರಬೇಕಷ್ಟೇ. ಅದು ಇರದೇ ಹೋದಾಗ ನಮಗೆ ಯಾವ ಚೆಲುವನ್ನ ಕಾಣಲಾಗುವುದಿಲ್ಲ. ಸೆನ್ಸ್ ಆಫ್ ಬ್ಯೂಟಿ ಯನ್ನ ಸಾಧಿಸಿಕೊಳ್ಳದ ಹೊರತು ಚೆಲುವನ್ನ ಆಸ್ವಾದಿಸುವ ಬೇರೆ ದಾರಿಯೇ ಇಲ್ಲ.

ಪ್ರೇಮಿ ಮಜ್ನೂ ಹೇಳಿದ ಮಾತು ನೆನಪಾಗುತ್ತಿದೆ, “ ಲೈಲಾಳ ಚೆಲುವನ್ನ ನೋಡಲು ಮಜ್ನೂನ ಕಣ್ಣುಗಳು ಬೇಕು.” ಇದು ಸತ್ಯ, ನಮಗೆ ಮಜ್ನೂನ ಕಣ್ಣುಗಳು ಇರದೇ ಹೋದರೆ ನಮಗೆ ಲೈಲಾಳನ್ನು ನೋಡುವುದು ಸಾಧ್ಯವೇ ಇಲ್ಲ. ಮಜ್ನೂ ನ ಕಣ್ಣುಗಳನ್ನ ಹೊಂದುವ ಹೊರತಾಗಿ ನಮಗೆ ಲೈಲಾಳನ್ನು ನೋಡುವ ಬೇರೆ ದಾರಿಯೇ ಇಲ್ಲ.

ಮಜ್ನೂನ ಕಷ್ಟ ನೋಡಲಾಗದೇ, ಆ ರಾಜ್ಯದ ರಾಜ, ಮಜ್ನೂ ಗೆ ಹೇಳಿದನಂತೆ, “ ನೀನೊಬ್ಬ ಹುಚ್ಚ, ಲೈಲಾ ಒಬ್ಬಳು ಅತೀ ಸಾಧಾರಾಣ ಹುಡುಗಿ. ನಾನು ನೋಡಿದ್ದೇನೆ ಅವಳನ್ನ, ಅವಳಲ್ಲಿ ಅಂಥ ಯಾವ ವಿಶೇಷತೆಯೂ ಇಲ್ಲ. ನನ್ನ ಅರಮನೆಯಲ್ಲಿ ಹನ್ನೆರಡು ಜನ ಅಪ್ರತಿಮ ಚೆಲುವೆಯರಿದ್ದಾರೆ, ನೀನು ಬೇಕಾದರೆ ಯಾರನ್ನಾದರೂ ಆಯ್ಕೆ ಮಾಡಿಕೋ. ನೀನು ಲೈಲಾಳಿಗಾಗಿ ಕಷ್ಟಪಡುವುದನ್ನ ನನಗೆ ನೋಡಲಾಗುತ್ತಿಲ್ಲ.”

“ ನಾನು ನಿನ್ನ ಅರಮನೆಯ ಚೆಲುವೆಯರನ್ನ ನೋಡಿದ್ದೇನೆ. ಲೈಲಾಳಿಗೆ ಹೋಲಿಸಬಹುದಾದ ಯಾರನ್ನೂ ನಾನು ಅವರಲ್ಲಿ ಕಾಣಲಿಲ್ಲ. ಅವರಲ್ಲಿ ಒಬ್ಬರೂ ಲೈಲಾಳ ಕಾಲಿನ ಧೂಳಿಗೆ ಸಮ ಇಲ್ಲ.” ಮಜ್ನೂ ಖಡಾ ಖಂಡಿತವಾಗಿ ರಾಜನಿಗೆ ಉತ್ತರಿಸಿದ.

“ ನೀನೊಬ್ಬ ದೊಡ್ಡ ಹುಚ್ಚ “ ರಾಜ, ಮಜ್ನೂನ ವರ್ತನೆಗೆ ಅಪ್ರತಿಭನಾದ.

“ ಇರಬಹುದು, ಆದರೆ ಲೈಲಾಳನ್ನು ನೋಡಲು ಮಜ್ನೂನ ಕಣ್ಣುಗಳು ಇರಬೇಕು” ಮಜ್ನೂ ತನ್ನ ಪಟ್ಟು ಸಡಿಲಿಸಲಿಲ್ಲ.

ಹೌದು, ಮಜ್ನೂ ಹೇಳುವುದು ಸರಿ. ಮರಗಳ ಸೌಂದರ್ಯ ನೋಡಲು, ಚೆಲುವನ್ನು ಗುರುತಿಸುವ ಕಲಾವಿದನ ಕಣ್ಣುಗಳು ಬೇಕು. ಚೆಲುವಿಗೆ ಬೇರೆ ಯಾವ ಸಾಕ್ಷಿಯನ್ನು ಕೊಡುವುದೂ ಅಸಾಧ್ಯ. ಪ್ರೇವನ್ನು ತಿಳಿದುಕೊಳ್ಳಬೇಕಾದರೆ ಪ್ರೇಮಿಯ ಹೃದಯ ಇರಬೇಕು. ಪ್ರೇಮಕ್ಕೆ ಕೂಡ ಸಾಕ್ಷಿಯನ್ನು ಕೊಟ್ಟು ಪ್ರೂವ್ ಮಾಡುವುದು ಸಾಧ್ಯವಿಲ್ಲ. ಹಾಗೆಯೇ ದೈವತ್ವ. ದೈವತ್ವ, ಚೆಲುವು, ಪ್ರೇಮ ಮತ್ತು ಸತ್ಯಗಳ ಒಟ್ಟು ಮೊತ್ತ. ದೈವತ್ವವನ್ನು ಅನುಭವಿಸಲು ಅಚಲವಾದ ಪ್ರಜ್ಞೆಯ ಅವಶ್ಯಕತೆಯಿದೆ. ನಮ್ಮ ಪ್ರಜ್ಞೆ, ಮಾತುಗಳಿಂದ, ನ್ಯಾಯ ನಿರ್ಣಯಗಳಿಂದ, ಆಲೋಚನೆಗಳ ಹೊಂಡದಿಂದ ಮುಕ್ತವಾದಾಗ ಹೊರತಾದಾಗ ಮಾತ್ರ ಅದಕ್ಕೆ ಕನ್ನಡಿಯ ಗುಣ ಪ್ರಾಪ್ತವಾಗುತ್ತದೆ ಆಗ ಮಾತ್ರ ನಮಗೆ ದೈವತ್ವ ಸ್ಪಷ್ಟವಾಗುತ್ತದೆ.

ಈ ಜಗತ್ತಿನಲ್ಲಿ ಹೀಗೆ ಸಾಕ್ಷಿಕೊಟ್ಟು ಪ್ರೂವ್ ಮಾಡಲಾಗದಂಥ ಹಲವಾರು ಸಂಗತಿಗಳಿವೆ. ದೈವತ್ವಕ್ಕೆ ಸಾಕ್ಷಿ ಇಲ್ಲ, ಆದರೆ ದೈವತ್ವ ಇದೆ, ಪ್ರೇಮಕ್ಕೆ ಸಾಕ್ಷಿ ಇಲ್ಲ ಆದರೆ ಪ್ರೇಮ ಇದೆ, ಹಾಗೆಯೇ ಚೆಲುವಿಗೆ ಕೂಡ ಸಾಕ್ಷಿ ಇಲ್ಲ , ಆದರೆ ಚೆಲುವು ಇದೆ.

ಒಮ್ನೆ, ಊರಿನಲ್ಲಿ ಜ್ಞಾನಿ ಎಂದು ಹೆಸರುವಾಸಿಯಾಗಿದ್ದ ನಸ್ರುದ್ದೀನ್ ನ ಹತ್ತಿರ ಒಬ್ಬಳು ಯುವತಿ ಬಂದು ತನ್ನ ತಳಮಳವನ್ನು ಹೇಳಿಕೊಂಡಳು.

“ ಮಾನ್ಯರೇ, ನಿನ್ನೆ ನೀವು ಪ್ರವಚನದಲ್ಲಿ ಅಹಂಕಾರ ಬಹಳ ಕೆಟ್ಟದ್ದು ಅದು ನಮ್ಮನ್ನು ನಾಶ ಮಾಡುತ್ತದೆ ಎಂದು ಹೇಳಿದಿರಿ. ಆದರೆ ನಾನು ಕನ್ನಡಿಯ ಮುಂದೆ ನಿಂತಾಗಲೆಲ್ಲ ನನ್ನ ಸೌಂದರ್ಯವನ್ನು ಕಂಡು, ಈ ಊರಿನಲ್ಲಿ ನನ್ನಷ್ಟು ಚೆಲುವೆ ಯಾರೂ ಇಲ್ಲ ಎನ್ನುವ ಸೊಕ್ಕು ನನ್ನನ್ನು ಆವರಿಸಿಕೊಂಡುಬಿಡುತ್ತದೆ. ಈ ಅಹಂಕಾರವನ್ನು ದೂರಮಾಡಿಕೊಳ್ಳುವ ಉಪಾಯ ಸೂಚಿಸಿರಿ “

“ ಮಗಳೇ, ನಿಜವಾದ ಅಹಂಕಾರವಿದ್ದರೆ ಏನಾದರೂ ಉಪಾಯ ಹೇಳಬಹುದೇ ಹೊರತು ತಪ್ಪು ತಿಳುವಳಿಕೆಗಲ್ಲ “

ನಸ್ರುದ್ದೀನ್ ಗಂಭೀರವಾಗಿ ಉತ್ತರಿಸಿದ.

Leave a Reply