ಪ್ರೇಮ ತನಗೆ ತಾನೇ ಒಂದು ಕಟ್ಟಳೆ: ಓಶೋ ವ್ಯಾಖ್ಯಾನ

ದೇವರು ಮೋಸೆಸ್ ಅನ್ನು ತರಾಟೆಗೆ ತೆಗೆದುಕೊಂಡಾಗ…| ಓಶೋ, ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮ್ಮೆ ಮೋಸೆಸ್ ಮರುಭೂಮಿಯೊಂದರಲ್ಲಿ ಪ್ರಯಾಣ ಮಾಡುತ್ತಿದ್ದಾಗ, ಪ್ರಾರ್ಥನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಂಡ. ಆ ವ್ಯಕ್ತಿ ಮಾಡುತ್ತಿದ್ದ ಪ್ರಾರ್ಥನೆ ಎಷ್ಟು ವಿಚಿತ್ರವಾಗಿತ್ತೆಂದರೆ (ವಿಚಿತ್ರ ಅಷ್ಟೇ ಅಲ್ಲ ದೇವರಿಗೆ ಅಪಮಾನಕಾರಿ ಕೂಡ) ಅದನ್ನು ಗಮನಿಸಿದ ಮೋಸೆಸ್ ದಿಗಿಲುಗೊಂಡ. ಆ ಪ್ರಾರ್ಥನೆಯಲ್ಲಿ ಧರ್ಮದ ಯಾವ ನಿಬಂಧನೆಗಳನ್ನೂ ಅವನು ಪಾಲಿಸುತ್ತಿರಲಿಲ್ಲ. ಹೀಗೆ ಪ್ರಾರ್ಥನೆ ಮಾಡುವುದಕ್ಕಿಂತ ಮಾಡದಿರುವುದೇ ಒಳ್ಳೆಯದಿತ್ತು. ಏಕೆಂದರೆ ಆ ಮನುಷ್ಯನ ಮಾತುಗಳು ನಂಬಲು ಅಷ್ಟು ಆಸಾಧ್ಯವಾಗಿದ್ದವು. ಆ ಮನುಷ್ಯನ ಪ್ರಾರ್ಥನೆ ಹೀಗಿತ್ತು……

“ ಓ ದೇವರೇ ! ನಿನ್ನ ಹತ್ತಿರ ಬರಲು ನನಗೆ ಅವಕಾಶ ಮಾಡಿಕೊಡು. ನಿನ್ನ ದೇಹ ಕೊಳೆಯಾದಾಗ ನಾನು ನಿನ್ನ ದೇಹವನ್ನು ಸ್ವಚ್ಛ ಮಾಡುತ್ತೇನೆ. ನಿನ್ನ ತಲೆಗೂದಿಲಿನಲ್ಲಿ ಹೇನುಗಳಾಗಿ ನೀನು ತೊಂದರೆ ಅನುಭವಿಸುತ್ತಿದ್ದರೆ ನಾನು ನಿನ್ನ ಕೂದಲನ್ನು ಸ್ವಚ್ಛ ಮಾಡುವೆ. ನಿನ್ನ ಚಪ್ಪಲಿಗಳು ಎಷ್ಟು ಹಳೆಯವು, ನಾನು ನಿನಗೆ ಹೊಸ ಚಪ್ಪಲಿ ಹೊಲಿದುಕೊಡುವೆ. ನಿನಗೆ ಕಾಯಿಲೆಯಾದಾಗ ನಿನ್ನನ್ನು ನೋಡಿಕೊಳ್ಳುವೆ, ಕಾಲಕಾಲಕ್ಕೆ ಸರಿಯಾಗಿ ನಿನಗೆ ಔಷಧಿ ಕೊಡುವೆ. ನಾನು ಒಳ್ಳೆಯ ಅಡುಗೆ ಮಾಡುತ್ತೇನೆ, ನಿನಗೆ ಸ್ವಾದಿಷ್ಟ ಊಟದ ವ್ಯವಸ್ಥೆ ಮಾಡುವೆ. ಓ ದೇವರೇ! ನನ್ನನ್ನು ಹತ್ತಿರ ಕರೆದುಕೋ ನಾನು ನಿನಗೆ ಯಾವ ತೊಂದರೆಯೂ ಆಗದ ಹಾಗೆ ನೋಡಿಕೊಳ್ಳುತ್ತೇನೆ.”

“ ನಿಲ್ಲಿಸು ಇಂಥ ಪ್ರಾರ್ಥನೆಯನ್ನ” ಮೋಸೆಸ್ ಕೂಗಿಕೊಂಡ. “ಏನು ದೇವರ ದೇಹ ಕೊಳೆಯಾಗುತ್ತದೆಯೇ? ಅವನ ತಲೆಯಲ್ಲಿ ಹೇನುಗಳಾಗುತ್ತವೆಯೇ? ಅವನ ಚಪ್ಪಲಿ ಹರಿದು ಹೋಗಿದೆಯೇ? ಅವನು ಕಾಯಿಲೆ ಬೀಳುತ್ತಾನೆಯೇ? ಅವನಿಗೆ ಹಸಿವಾಗುತ್ತದೆಯೇ? ಅವನಿಗೆ ನೀನು ಅಡುಗೆ ಮಾಡಿಕೊಡುತ್ತಾಯಾ? ಎಲ್ಲಿಂದ ಕಲಿತೆ ಇದನ್ನೆಲ್ಲ? ಯಾರು ಹೇಳಿಕೊಟ್ಟರು ನಿನಗೆ ಹೀಗೆ ಪ್ರಾರ್ಥನೆ ಮಾಡುವುದನ್ನ? “ ಮೋಸೆಸ್ ಆ ಮನುಷ್ಯನ ಪ್ರಾರ್ಥನೆಯನ್ನ ತಡೆದ.

“ನಾನು ಯಾವ ಧರ್ಮ ಶಾಸ್ತ್ರವನ್ನೂ ಓದಿಲ್ಲ. ನಾನೊಬ್ಬ ಬಡ ಅಶಿಕ್ಷಿತ ಮನುಷ್ಯ. ನನಗೆ ಸರಿಯಾದ ಪ್ರಾರ್ಥನೆ ಎಂದರೇನು ಎನ್ನುವುದು ಗೊತ್ತಿಲ್ಲ. ಈ ಪ್ರಾರ್ಥನೆಯನ್ನ ನಾನೇ ಕಟ್ಟಿದ್ದು. ನಾನು ಅನುಭವಿಸುವ ತೊಂದರೆಗಳ ಬಗ್ಗೆ ಮಾತ್ರ ನನಗೆ ಗೊತ್ತು. ತಲೆಯಲ್ಲಿ ಹೇನುಗಳಾದರೆ ಅವು ಎಷ್ಟು ಕಾಟ ಕೊಡುತ್ತವೆ ಎನ್ನುವುದನ್ನ ನಾನು ಬಲ್ಲೆ, ಚಪ್ಪಲಿ ಹರಿದಾಗ ನಾನು ಅನುಭವಿಸಿದ ತೊಂದರೆ ನನಗೆ ಗೊತ್ತು, ಕಾಯಿಲೆಯಾದಾಗ ಆಗುವ ನೋವು ನನ್ನ ಅನುಭವಕ್ಕೆ ಬಂದಿದೆ. ನನ್ನ ಹೆಂಡತಿಗೆ ಅಡುಗೆ ಮಾಡಲು ಬರುವುದಿಲ್ಲ, ಇದರಿಂದ ನಾನು ಎಷ್ಟು ಕಷ್ಟಪಟ್ಟಿದ್ದೇನೆ ಎನ್ನುವುದು ನನಗೆ ಮಾತ್ರ ಗೊತ್ತು. ನಾನು ಅನುಭವಿಸುವ ಕಷ್ಟಗಳನ್ನ ನನ್ನ ದೇವರು ಅನುಭವಿಸಬಾರದು ಎನ್ನುವುದು ನನ್ನ ಆಸೆ. ನಿನಗೆ ಸರಿಯಾದ ದೇವರ ಪ್ರಾರ್ಥನೆ ಗೊತ್ತಿದ್ದರೆ ಹೇಳಿಕೊಡು, ನಾನು, ಇನ್ನು ಮುಂದೆ ನೀನು ಹೇಳಿಕೊಟ್ಟ ಹಾಗೆ ಪ್ರಾರ್ಥನೆ ಮಾಡುತ್ತೇನೆ.” ಆ ವ್ಯಕ್ತಿ ದೀನನಾಗಿ ಮೋಸೆಸ್ ನ ಕೇಳಿಕೊಂಡ.

ಆ ವ್ಯಕ್ತಿಯ ಬೇಡಿಕೆಯನ್ನು ಮನ್ನಿಸಿ ಮೋಸೆಸ್ ಅವನಿಗೆ ಸರಿಯಾದ ದೇವರ ಪ್ರಾರ್ಥನೆ ಹೇಳಿಕೊಟ್ಟ. ಆ ವ್ಯಕ್ತಿ, ಮೋಸೆಸ್ ಗೆ ಧನ್ಯವಾದಗಳನ್ನು ಅರ್ಪಿಸಿದ. ಅವನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಮೋಸೆಸ್ ಗೆ ತಾನು ಒಂದು ಒಳ್ಳೆಯ ಕೆಲಸ ಮಾಡಿದ ಬಗ್ಗೆ ಖುಶಿಯಾಯ್ತು. ಆ ವ್ಯಕ್ತಿ ಅಲ್ಲಿಂದ ಹೊರಟು ಹೋದ ಮೇಲೆ ದೇವರು ತನ್ನ ಈ ಕೆಲಸದ ಬಗ್ಗೆ ಏನನ್ನುತ್ತಾನೆ ಎನ್ನುವುದನ್ನ ತಿಳಿದುಕೊಳ್ಳಲು ಮೋಸೆಸ್ ಆಕಾಶದತ್ತ ತಲೆ ಎತ್ತಿ ನೋಡಿದ.

ದೇವರಿಗೆ ಬಹಳ ಸಿಟ್ಟು ಬಂದಿತ್ತು. ಮೋಸೆಸ್ ನ ಕೆಲಸವನ್ನು ನೋಡಿ ದೇವರು ಕೆಂಡಾಮಂಡಲನಾಗಿದ್ದ. “ ನಾನು ನಿನ್ನ ಭೂಮಿಗೆ ಕಳಿಸಿದ್ದು, ಜನರನ್ನ ನೀನು ನನಗೆ ಹತ್ತಿರವಾಗುವಂತೆ ಮಾಡು ಎಂದು. ಆದರೆ ನೀನು ನನ್ನ ಒಬ್ಬ ಮಹಾ ಪ್ರೇಮಿಯನ್ನ ನನ್ನಿಂದ ದೂರ ಮಾಡಿದೆ. ಈಗ ಅವನು ನೀನು ಕಲಿಸಿದ ಪ್ರಾರ್ಥನೆ ಮಾಡುತ್ತಾನೆ, ಅದರಲ್ಲಿ ಅವನಿಗೆ ಯಾವ ನಂಬಿಕೆ, ಆತ್ಮೀಯತೆ ಇರುವುದಿಲ್ಲ. ಪ್ರಾರ್ಥನೆಗೆ ಯಾವ ಕಟ್ಟಳೆಗಳಿಲ್ಲ. ಪ್ರೇಮ ತನಗೆ ತಾನೇ ಒಂದು ಕಟ್ಟಳೆ ಅದಕ್ಕೆ ಬೇರೆ ಯಾವ ಕಟ್ಟಳೆಯೂ ಬೇಕಿಲ್ಲ. ನೀನು ನನ್ನ ಒಬ್ಬ ಪ್ರೇಮಿಯನ್ನ ನನ್ನಿಂದ ದೂರ ಮಾಡಿಬಿಟ್ಟೆ.” ದೇವರು ಮೋಸೆಸ್ ನನ್ನು ತರಾಟೆಗೆ ತೆಗೆದುಕೊಂಡ.

Leave a Reply