ನಾವು ದೈವತ್ವದ ನೆರಳು ಮಾತ್ರ : ಓಶೋ ವ್ಯಾಖ್ಯಾನ

ಮನುಷ್ಯ ಕೇವಲ ಪವಿತ್ರ ನೆರಳಾಗುವ ಬಯಕೆಯನ್ನು ಹೊಂದಬೇಕು. ಈಗ ಮನುಷ್ಯ ಕೇಂದ್ರನಲ್ಲ, ದೇವರು ಅವನ ಕೇಂದ್ರ, ಅವನು ಕೇವಲ ನೆರಳು ಮಾತ್ರ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ಒಂದಾನೊಂದು ಕಾಲದಲ್ಲಿ ಒಬ್ಬ ಸಂತನಿದ್ದ. ಅವನು ಎಷ್ಟು ಸರಳ, ಎಷ್ಟು ಒಳ್ಳೆಯ ಮನುಷ್ಯನಾಗಿದ್ದನೆಂದರೆ, ದೇವದೊತರಿಗೆ ಒಬ್ಬ ಮನುಷ್ಯ ಇಷ್ಟು ಒಳ್ಳೆಯವನಾಗಿರುವುದು ಹೇಗೆ ಸಾಧ್ಯ ಎಂದು ಆಶ್ಚರ್ಯವಾಗುತ್ತಿತ್ತು. ಆ ಸಂತನ ಬದುಕು ನಕ್ಷತ್ರಗಳು ಬೆಳಕು ಹರಿಸುವಂತೆ, ಹೂವುಗಳು ಸುಗಂಧ ಸೂಸುವಂತೆ ಅತ್ಯಂತ ಸಹಜವಾಗಿತ್ತು. ಸಂತನಿಗೆ ತನ್ನ ಒಳ್ಳೆಯತನದ ಬಗ್ಗೆ ಯಾವ ಅಭಿಮಾನವೂ ಇರಲಿಲ್ಲ ಮತ್ತು ಆ ಕುರಿತಾಗಿ ಅವನಿಗೆ ಯಾವ ತಿಳುವಳಿಕೆಯೂ ಇರಲಿಲ್ಲ. ಅವನ ಬದುಕನ್ನ ಎರಡು ಶಬ್ದಗಳಲ್ಲಿ ಹೇಳಬಹುದಾದರೆ ಅದನ್ನ “ ಕೊಡುವುದು ಮತ್ತು ಕ್ಷಮಿಸುವುದು” ಎಂದು ಸಂಕ್ಷೇಪಿಸಬಹುದಾಗಿತ್ತು. ಆದರೂ ಈ ಎರಡೂ ಶಬ್ದಗಳು ಎಂದೂ ಅವನ ತುಟಿಯ ಮೇಲೆ ಎಂದೂ ಬರುತ್ತಿರಲಿಲ್ಲ. ಅವನ ಬದುಕೇ ಈ ಎಲ್ಲವನ್ನೂ ವ್ಯಕ್ತ ಮಾಡುತ್ತಿತ್ತು.

ದೇವದೂತರು ದೇವರ ಬಳಿ ಹೋಗಿ ಆ ಸಂತನಿಗೆ ಪವಾಡಗಳನ್ನು ಮಾಡುವ ವರ ಕೊಡುವಂತೆ ಬೇಡಿಕೊಂಡರು. ಒಮ್ಮೆ ಸಂತನಿಗೆ ಈ ವರ ದೊರಕಿತೆಂದರೆ ಅವನ ಒಳ್ಳೆಯತನ ಕಾರಣವಾಗಿ ಅವನಿಂದ ಜನರಿಗೆ ಇನ್ನೂ ಹೆಚ್ಚು ಒಳ್ಳೆಯದಾಗುತ್ತದೆ ಎನ್ನುವುದು ದೇವದೂತರ ಅಭಿಮತವಾಗಿತ್ತು. ದೇವದೂತರ ಬೇಡಿಕೆಗೆ ಒಪ್ಪಿಕೊಂಡ ದೇವರು, ಸಂತನಿಗೆ ಎಂಥ ಪವಾಡಗಳನ್ನು ಮಾಡುವ ವರ ಬೇಕೆಂದು ಕೇಳಿಕೊಂಡು ಬನ್ನಿ ಎಂದು ಅವರನ್ನು ಸಂತನ ಬಳಿ ಕಳುಹಿಸಿದ.

ದೇವದೂತರು ಸಂತನ ಬಳಿ ಬಂದು ಅವನಿಗೆ ದೇವರ ಇಚ್ಛೆಯನ್ನು ತಿಳಿಸಿ, “ ನಿನಗೆ ಸ್ಪರ್ಶ ಮಾತ್ರದಿಂದ ಮನುಷ್ಯರ ಕಾಯಿಲೆ ಗುಣಪಡಿಸುವ ವರ ಬೇಕಾ? “ ಎಂದು ಕೇಳಿದರು. “ ಬೇಡ ಅದು ದೇವರ ಕೆಲಸ ಅವನೇ ಮಾಡಲಿ” ಎಂದು ಸಂತ ನಿರಾಕರಿಸಿದ. ಹಾಗಾದರೆ ‘ತಪ್ಪು ಮಾಡಿದವರ ಮನ ಪರಿವರ್ತನೆ ಮಾಡಿ ಅವರನ್ನು ಸರಿ ದಾರಿಗೆ ತರುವ’ ವರ ತೆಗೆದುಕೋ ಎಂದು ದೇವದೂತರು ಸಂತನನ್ನು ಒತ್ತಾಯಿಸಿದರು. “ ಬೇಡ ಅದು ದೇವದೂತರ ಕೆಲಸ, ನಾನು ಅವರ ಕೆಲಸದಲ್ಲಿ ಮಧ್ಯ ಪ್ರವೇಶಿಸಲು ಇಷ್ಟಪಡುವುದಿಲ್ಲ” ಎಂದು ಸಂತ, ದೇವದೂತರ ಈ ಪ್ರಸ್ತಾವವನ್ನೂ ತಿರಸ್ಕರಿಸಿಬಿಟ್ಟ. ಹಾಗಾದರೆ “ ತ್ಯಾಗ, ಸಹನೆ, ಕಾಳಜಿ, ಧೈರ್ಯದ ಮಾದರಿ ಎನ್ನುವಂಥ ಆಕರ್ಷಕ ತೇಜಸ್ಸನ್ನಾದರೂ ಒಪ್ಪಿಕೋ, ಆಗ ಜನ ನಿನ್ನ ವ್ಯಕ್ತಿತ್ವದಿಂದ ಆಕರ್ಷಿತರಾಗುವರು, ನಿನ್ನ ಒಳ್ಳೆಯತನದ ಪರಿಣಾಮ ಅವರ ಮೇಲಾಗುವುದು” ಎಂದು ದೇವದೂತರು ಪಟ್ಟು ಹಿಡಿದರು. “ ಈ ವರವಂತೂ ಬೇಡವೇ ಬೇಡ, ಆಗ ಜನ ದೇವರನ್ನು ಮರೆತುಬಿಡುತ್ತಾರೆ” ಎಂದು ಸಂತ ತನ್ನ ಹಟ ಮುಂದುವರೆಸಿದ.

ಹಾಗಾದರೆ ನಿನಗೇನು ಬೇಕು? ನಿನಗೇನಾದರೂ ಕೊಡಲೇಬೇಕು ಎನ್ನುವದು ನಮ್ಮ ಬಯಕೆ, ದೇವದೂತರು ಸಂತನನ್ನು ಬೇಡಿಕೊಂಡರು. “ ನನಗೆ ದೇವರ ಆಶೀರ್ವಾದ ಸಾಕು ಅದು ಎಲ್ಲ ಪವಾಡಗಳಿಗೂ ಸಮ ಅಲ್ಲವೆ” ಎನ್ನುತ್ತ ಸಂತ ಯಾವ ಪವಾಡದ ವರ ಸ್ವೀಕರಿಸಲು ಇಚ್ಛಿಸಲಿಲ್ಲ. ಆಗ ದೇವದೂತರಿಗೆ ಸಿಟ್ಟು ಬಂತು, “ ನೀನು ಒಂದು ಪವಾಡದ ವರವನ್ನಾದರು ಕೇಳಲೇ ಬೇಕು, ಇಲ್ಲವಾದರೆ ನಿನಗೆ ನಾವೇ ಒಂದು ವರವನ್ನು ಒತ್ತಾಯಪೂರ್ವಕವಾಗಿ ಕೊಡುತ್ತೇವೆ” ಎಂದು ಜಿದ್ದಿಗೆ ಇಳಿದರು. “ ಹಾಗಾದರೆ ನನ್ನಿಂದ ಜನರಿಗೆ ಆಗುವ ಯಾವ ಒಳ್ಳೆಯದೂ ನನಗೆ ಗೊತ್ತಾಗದಿರುವ ವರ ಕೊಡಿಸಿ” ಎಂದು ಸಂತ ದೇವದೂತರನ್ನು ಕೇಳಿಕೊಂಡ.

ಇದು ಹೇಗೆ ಸಾಧ್ಯವಾಗಬಹುದು ಎಂದು ದೇವದೂತರು ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡರು. ಕೊನೆಗೆ ಬಹಳ ವಿಚಾರ ಮಾಡಿದ ಮೇಲೆ ಒಂದು ಉಪಾಯ ಕಂಡುಕೊಂಡರು. ಸಂತನ ಹಿಂದೆ ಬೀಳುವ ಅವನ ನೆರಳಿಗೆ ಜನರ ರೋಗಗಳನ್ನ, ನೋವನ್ನ, ದುಃಖವನ್ನ, ನಿವಾರಿಸುವ ಶಕ್ತಿಯನ್ನು ತುಂಬಿದರು.

ಸಂತ ಸುಮ್ಮನೇ ಅಲೆದಾಡುತ್ತಿದ್ದಾಗ ಅವನ ಹಿಂದೆ ಬಿದ್ದ ಅವನ ನೆರಳು ತಾಕಿದ ಬಾಡಿದ ಗಿಡ ಮರಗಳು ಮತ್ತೆ ಹಸಿರಾದವು, ಬರಡಾದ ಕೆರೆಗಳು ಮತ್ತೆ ನೀರು ತುಂಬಿಕೊಂಡವು. ಆ ನೆರಳು ತಾಕಿದ ಜನರ ನೋವು ಮಾಯವಾಯಿತು, ಬಡಮಕ್ಕಳ ಹಸಿವು ದೂರವಾಯಿತು. ಜನ ಸಂತನ ಒಳ್ಳೆಯತನವನ್ನು ಗಮನಿಸಿ ಸುಮ್ಮನೇ ಅವನನ್ನು ಹಿಂಬಾಲಿಸತೊಡಗಿದರು. ಈ ಪವಾಡ ಅವನಿಂದಾಗಿ ಸಂಭವಿಸುತ್ತಿದೆ ಎನ್ನುವುದು ಅವರಿಗೂ ಗೊತ್ತಾಗಲಿಲ್ಲ. ಕೊನೆಗೆ ಜನರಿಗೆ ಅವನ ಹೆಸರೇ ಮರೆತುಹೋಯಿತು. ಅವನನ್ನು ಜನ “ಪವಿತ್ರ ನೆರಳು” ಗುರುತಿಸತೊಡಗಿದರು.

ಇದು ಒಂದು ಶ್ರೇಷ್ಠ ಘಟನೆ. ಮಾನವ ಜನಾಂಗದಲ್ಲಿ ಸಂಭವಿಸಬಹುದಾದ ಅದ್ಭುತ ಕ್ರಾಂತಿ. ಮನುಷ್ಯ ಕೇವಲ ಪವಿತ್ರ ನೆರಳಾಗುವ ಬಯಕೆಯನ್ನು ಹೊಂದಬೇಕು. ಈಗ ಮನುಷ್ಯ ಕೇಂದ್ರನಲ್ಲ, ದೇವರು ಅವನ ಕೇಂದ್ರ, ಅವನು ಕೇವಲ ನೆರಳು ಮಾತ್ರ. ಆಗ ನೀವು ಶಕ್ತಿಶಾಲಿಗಳಲ್ಲ, ಮೌಲ್ಯಗಳನ್ನು ಹೊಂದಿದವರಲ್ಲ, ನೀವು ಧಾರ್ಮಿಕರಲ್ಲ. ಏಕೆಂದರೆ ಆ ಎಲ್ಲವನ್ನೂ ಹಿಡಿದಿಟ್ಟುಕೊಳ್ಳುವ ಕೇಂದ್ರ ನಿಮ್ಮೊಳಗಿಲ್ಲ. ಈಗ ನಿಮ್ಮೊಳಗೆ ಮಹಾ ಖಾಲೀ ತುಂಬಿಕೊಂಡಿದೆ. ಈಗ ನಿಮ್ಮೊಳಗೆ ದೈವತ್ವ ಹರಿದಾಡಲು ಯಾವ ನಿರ್ಬಂಧ ಯಾವ ಅಡತಡೆಯೂ ಇಲ್ಲ. ಈಗ ದೈವತ್ವ ತನ್ನ ಶುದ್ಧ ರೂಪದಲ್ಲಿ ನಿಮ್ಮೊಳಗೆ ತುಂಬಿಕೊಳ್ಳುತ್ತದೆ ನೀವು ಬಯಸಿದ ರೂಪದಲ್ಲಿ ಅಲ್ಲ, ಏಕೆಂದರೆ ನಿಮ್ಮೊಳಗೆ ಯಾವ ಕೇಂದ್ರವೂ ಇಲ್ಲ. ನೀವು ಕೇವಲ ದೈವತ್ವದ ನೆರಳು ಮಾತ್ರ.

ಈ ಸೂತ್ರದ ಅರ್ಥ ಇದೇ, ಕೇಂದ್ರವನ್ನು ತ್ಯಾಗ ಮಾಡುವುದು, ಇದು ಮನುಷ್ಯನ ಅತ್ಯಂತ ದೊಡ್ಡ ಸಾಧನೆ. ಆಗ ನಿಮ್ಮೊಳಗೆ ಅಹಂಗೆ ಜಾಗವಿಲ್ಲ, “ನಾನು” ನಿಮ್ಮೊಳಗಿಂದ ಮಾಯವಾಗುತ್ತದೆ. ಆಗ ಯಾವುದೂ ನಿಮ್ಮದಲ್ಲ, ನೀವು ದೇವರ ಭಾಗ, ದೇವರ ಪವಿತ್ರ ನೆರಳು ಹಾಗಾಗಿ ಎಲ್ಲವೂ ನಿಮ್ಮದು.


As told by Osho in Yoga the Alpha and Omega Vol-9

Leave a Reply