ಪೂರ್ಣವಾಗಬೇಕೆಂದರೆ ಚೂರುಚೂರಾಗು: ಓಶೋ ವ್ಯಾಖ್ಯಾನ

ನಮಗೆಲ್ಲರಿಗೂ ಗಾಢವಾದ ನಿದ್ದೆ ಬೇಕು. ಹೀಗೆ ಬಯಕೆ ಇರುವ ಎಲ್ಲರಿಗೂ ವಿಶ್ರಾಂತಿ ಎಂದರೆ ಬಹಳ ಪ್ರೀತಿ. ಆದರೆ ಪರಿಶ್ರಮ ಮಾಡದೇ ವಿಶ್ರಾಂತಿಯನ್ನ ಸಾಧಿಸುವಹಾಗಿಲ್ಲ, ಗಾಢವಾದ ನಿದ್ದೆ ಸಾಧ್ಯವಿಲ್ಲ… – ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಪೂರ್ಣವಾಗಬೇಕಾದರೆ, ಚೂರುಚೂರಾಗು.
ನೇರವಾಗಬೇಕಾದರೆ, ಬಾಗು, ಮಣಿ.
ತುಂಬಿಕೊಳ್ಳಬೇಕಾದರೆ, ಖಾಲಿಯಾಗು.
ಮತ್ತೆ ಹುಟ್ಟಬೇಕಾದರೆ ಮೂದಲು ಸತ್ತು ನೋಡು
ಕಳೆದುಕೊಂಡವ ಶ್ರೀಮಂತ,
ಕೂಡಿಟ್ಟವ ತಬ್ಬಿಬ್ಬು.

ಅಂತೆಯೇ ಸಂತ
ಒಂದನ್ನು ಮುಂದಿಟ್ಟುಕೊಂಡು
ಇನ್ನೊಂದನ್ನು ಒರೆಗೆ ಹಚ್ಚುತ್ತಾನೆ.

ಅವ ಪರದೆಯ ಹಿಂದೆ ಇರುವುದರಿಂದ
ಜನ ಅವನ ಬೆಳಕನ್ನು ಮಾತ್ರ ಕಾಣುತ್ತಾರೆ.
ಸ್ವಂತ ಸಮರ್ಥನೆಗೆ ಇಳಿಯುವದಿಲ್ಲವಾದ್ದರಿಂದ
ತಾನೇ ಸ್ವತಃ ಪ್ರಮಾಣವಾಗಿದ್ದಾನೆ.
ತನ್ನ ಬಗ್ಗೆ ಮಾತಾಡುವದಿಲ್ಲವಾದ್ದರಿಂದ
ಜನರ ದನಿಯಾಗಿದ್ದಾನೆ.
ಸ್ಪರ್ಧೆಗಳಿಂದ ದೂರವಿರುವುದರಿಂದ
ಸೋಲು ಗೆಲುವುಗಳಿಂದ ಮುಕ್ತನಾಗಿದ್ದಾನೆ.

“ ಪೂರ್ಣವಾಗಬೇಕಾದರೆ ಚೂರುಚೂರಾಗು “
ಎಂಬ ಪುರಾತನ ಸೂರಿಗಳ ನುಡಿ
ಬರೀ ಒಣ ಉಪದೇಶವಲ್ಲ.

ಪೂರ್ಣವಾಗುವುದೆಂದರೆ
ತಾವೋಗೆ ಮರಳುವುದು

~ ಲಾವೋತ್ಸೇ

********************

ಒಂದು ಹಳೆಯ ಕಥೆ.
ಒಮ್ಮೆ ಲಾವೋತ್ಸೆಯ 90 ವರ್ಷ ವಯಸ್ಸಿನ ಹಳೆಯ ಶಿಷ್ಯನೊಬ್ಬ ತನ್ನ ಮಗನ ಜೊತೆಗೂಡಿ ಬಾವಿಯಿಂದ ನೀರು ಸೇದುತ್ತಿದ್ದ. ಇದನ್ನು ಗಮನಿಸಿದ ಬಾವಿಯ ಪಕ್ಕದ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದ ಕನ್ಫ್ಯೂಷಿಯಸ್ ವೃದ್ಧನನ್ನು ಮಾತನಾಡಿಸಲು ಬಾವಿಯ ಹತ್ತಿರ ಬಂದ.

ಕನ್ಫ್ಯೂಷಿಯಸ್ ಮತ್ತು ಲಾವೋತ್ಸೇ ಸಮಕಾಲೀನರು, ಆದರೂ ಅವರ ನಡುವಿನ ಭಿನ್ನತೆ ಅಪಾರ. ಕನ್ಫ್ಯೂಷಿಯಸ್ ನದು ಆರಿಸ್ಟಾಟಲ್ ನ ಹಾದಿ, ಆದ್ದರಿಂದಲೇ ಪಶ್ಚಿಮ ಜಗತ್ತು ಕನ್ಫ್ಯೂಷಿಯಸ್ ನನ್ನು ಮೊದಲಿನಿಂದಲೂ ಗೌರವಿಸುತ್ತಿದೆ. ಈಗ ಕೆಲ ನೂರು ವರ್ಷಗಳಿಂದಷ್ಟೇ ಲಾವೋತ್ಸೇಯ ಮಹತ್ವವನ್ನ ಪಾಶ್ಚಿಮಾತ್ಯರು ಗುರುತಿಸಲು ಶುರು ಮಾಡಿದ್ದಾರೆ.

ಕಥೆಯನ್ನು ಮುಂದುವರೆಸುವುದಾದರೆ, ಬಾವಿಯಿಂದ ನೀರು ಸೇದುತ್ತಿದ್ದ ವೃದ್ಧನ ಬಳಿ ಬಂದ ಕನ್ಫ್ಯೂಷಿಯಸ್ ಅಂತಃಕರಣದಿಂದ ಅವನನ್ನು ಮಾತನಾಡಿಸಿದ. “ ನಿನಗೆ ವಯಸ್ಸಾಗಿದೆ, ನಿನ್ನ ಮಗ ಇನ್ನೂ ಚಿಕ್ಕವನು, ಯಾಕೆ ನೀವು ಇಷ್ಟು ಕಷ್ಟಪಡುತ್ತಿದ್ದೀರಾ? ಬಾವಿಯಿಂದ ನೀರು ಸೇದಲು ಕುದುರೆಯನ್ನು ಏಕೆ ಬಳಸಬಾರದು?”

“ ಈಗ ಆ ಮಾತು ಬೇಡ, ನನ್ನ ಮಗ ಇಲ್ಲಿಂದ ಹೋದ ಮೇಲೆ ಈ ವಿಷಯ ಮಾತನಾಡೋಣ” ಕನ್ಫ್ಯೂಷಿಯಸ್ ನ ಮಾತನ್ನ ಅರ್ಧದಲ್ಲಿಯೇ ತಡೆದ ವೃದ್ಧ. ವೃದ್ಧನ ಮಾತಿನಿಂದ ಕನ್ಫ್ಯೂಷಿಯಸ್ ಗೆ ಆಶ್ಚರ್ಯವಾಯಿತು. ಅಲ್ಲಿಯೇ ಕಾದಿದ್ದ ಕನ್ಫ್ಯೂಷಿಯಸ್, ವೃದ್ಧನ ಮಗ ಅಲ್ಲಿಂದ ಹೊರಡುತ್ತಲೇ ಮತ್ತೆ ಅಲ್ಲಿಗೆ ಬಂದ. “ ಯಾಕೆ ನನ್ನ ಮಾತುಗಳನ್ನ ನಿನ್ನ ಮಗ ಕೇಳಿಸಿಕೊಂಡರೆ ಏನು ತಪ್ಪು? “ ಕನ್ಫ್ಯೂಷಿಯಸ್ ಮತ್ತೆ ವೃದ್ಧನನ್ನು ಪ್ರಶ್ನೆ ಮಾಡಿದ.

“ ಈಗ ನನಗೆ 90 ವರ್ಷ ವಯಸ್ಸು, ಆದರೂ ಹರೆಯದ ಹುಡುಗನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಬಲ್ಲೆ. ಈ ಕೆಲಸವನ್ನ ನಾನು ಕುದುರೆಯಿಂದ ಮಾಡಿಸಿದರೆ ನನ್ನ ಮಗನ ಆರೋಗ್ಯ ಏನಾಗಬೇಕು? ಅವನು ನನ್ನ ಹಾಗೆ ಮುದುಕನಾದ ಮೇಲೂ ಆರೋಗ್ಯದಿಂದ ಇರಬೇಡವೆ? ಶಹರಗಳಲ್ಲಿ ಬಾವಿಯಿಂದ ನೀರು ಸೇದಲು ಕುದುರೆಗಳನ್ನ, ಎತ್ತುಗಳನ್ನ, ಯಂತ್ರಗಳನ್ನ ಬಳಸುವುದು ನನಗೆ ಗೊತ್ತು, ಆದರೆ ನನ್ನ ಮಗನಿಗೆ ಮಾಡಲು ಏನಾದರೂ ಕೆಲಸ ಬೇಕಲ್ಲ” ವೃದ್ಧ, ಕನ್ಫ್ಯೂಷಿಯಸ್ ನ ಪ್ರಶ್ನೆಗೆ ಉತ್ತರಿಸಿದ.

ನಮಗೆಲ್ಲರಿಗೂ ಗಾಢವಾದ ನಿದ್ದೆ ಬೇಕು. ಹೀಗೆ ಬಯಕೆ ಇರುವ ಎಲ್ಲರಿಗೂ ವಿಶ್ರಾಂತಿ ಎಂದರೆ ಬಹಳ ಪ್ರೀತಿ. ಆದರೆ ಪರಿಶ್ರಮ ಮಾಡದೇ ವಿಶ್ರಾಂತಿಯನ್ನ ಸಾಧಿಸುವಹಾಗಿಲ್ಲ, ಗಾಢವಾದ ನಿದ್ದೆ ಸಾಧ್ಯವಿಲ್ಲ. ಲಾವೋತ್ಸೇಯ ಪ್ರಕಾರ, ಪರಿಶ್ರಮ ಮತ್ತು ವಿಶ್ರಾಂತಿ ಬೇರೆ ಬೇರೆ ಅಲ್ಲ, ಅವುಗಳ ನಡುವೆ ಗಾಢ ಸಂಬಂಧ. ನೀವು ಒಂದು ಅದ್ಭುತ ವಿಶ್ರಾಂತಿಯನ್ನ ಬಯಸುತ್ತೀರಾದರೆ, ಪರಿಶ್ರಮದ ಹೊರತಾಗಿ ನಿಮಗೆ ಬೇರೆ ದಾರಿಯೇ ಇಲ್ಲ. ಆದರೆ ಆರಿಸ್ಟಾಟಲನ್ ಪ್ರಕಾರ ಪರಿಶ್ರಮ ಮತ್ತು ವಿಶ್ರಾಂತಿ ಎರಡೂ ಬೇರೆ ಬೇರೆ, ಪರಸ್ಪರ ವಿರುದ್ಧ ಸಂಗತಿಗಳು. ನಾನು ವಿಶ್ರಾಂತಿಯನ್ನ ಇಷ್ಟಪಡುತ್ತೇನಾದರೆ, ಗಾಢ ನಿದ್ದೆಯನ್ನು ಬಯಸುತ್ತೇನಾದರೆ ಆರಿಸ್ಟಾಟಲನ್ ಪ್ರಕಾರ ದಿನವಿಡಿ ಯಾವ ಕೆಲಸವನ್ನೂ ಕೈಗೆತ್ತಿಕೊಳ್ಳದೆ ಆರಾಮಾಗಿ ಇದ್ದುಬಿಡಬೇಕು. ನೀವು ಹೀಗೇನಾದರೂ ಮಾಡಿದರೆ ರಾತ್ರಿಯ ನಿದ್ದೆಯಿಂದ ವಂಚಿರಾಗಬೇಕಾಗುತ್ತದೆ. Law of reverse Effects ಕೆಲಸ ಮಾಡುವುದೇ ಹೀಗೆ. ನೀವು ವಿಶ್ರಾಂತಿಯನ್ನು ಇಷ್ಟಪಡುವಿರಾದರೆ, ಪರಿಶ್ರಮದಿಂದ ದೂರ ಓಡಿ ಹೋಗುವುದು, ವಿಶ್ರಾಂತಿಯಿಂದಲೂ ನಿಮ್ಮನ್ನು ದೂರ ಮಾಡುತ್ತದೆ.


~ Osho – “The way of Tao”

Leave a Reply