ಸಮರ್ಥನೆಗಳು ಸುಳ್ಳಿಗೆ ಮಾತ್ರ : ಓಶೋ ವ್ಯಾಖ್ಯಾನ

ದೇವರ ಪರವಾಗಿ ವಾದಕ್ಕೆ ಸಮರ್ಥನೆಗೆ ಯಾರೂ ಇಲ್ಲ, ಪ್ರೇಮದ ಪರವಾಗಿ ಆರ್ಗ್ಯೂಮೆಂಟ್ ಗೆ ಯಾರೂ ಇಲ್ಲ. ಜನರಿಗೆ ಧ್ಯಾನದ ಪರವಾಗಿ ಸಮರ್ಥನೆ ಹೇಳುವುದು ಸಾಧ್ಯವಿಲ್ಲ. ನೀವೇನಾದರೂ ಸಮರ್ಥನೆಗೆ ಮಾಡಲು ಶುರು ಮಾಡುವಿರಾದರೆ, ತಪ್ಪು ದಾರಿಯಲ್ಲಿ ನಿಮ್ಮ ಪ್ರಯಾಣ ಆರಂಭವಾದಂತೆಯೇ… – ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಇದು ಯಾವಾಗಲೂ ನಿಮ್ಮ ನೆನಪಿನಲ್ಲಿರಲಿ, ಯಾವುದು ನಿಜವಾಗಿ ಸತ್ಯವೋ ಅದು ಸಮರ್ಥನೆಗಳನ್ನು ಮೀರಿದಂತಹದು, ಮತ್ತು ಇರುವ ಸಮರ್ಥನೆಗಳೆಲ್ಲವೂ ಸುಳ್ಳಿನ ಪರವಾಗಿ.

ಈ ಪ್ರಸಿದ್ಧ ಕಥೆಯನ್ನು ಕೇಳಿದ್ದೀರಾ?
ಸ್ವರ್ಗ ಮತ್ತು ನರಕದ ನಡುವೆ ಒಂದು ಗೋಡೆಯಿತ್ತು. ಅದು ಶತಮಾನಗಳಿಂದ ರಿಪೇರಿ ಕಾಣದೇ ಶಿಥಿಲವಾಗಿತ್ತು. ಎಲ್ಲ ನೆರೆಹೊರೆಯವರ ಜಗಳಗಳಂತೆ, ಈ ಗೋಡೆಯನ್ನ ಹಾಳುಮಾಡಿದ್ದು ನರಕದ ಜನ ಮತ್ತು ಅವರೇ ಇದನ್ನ ರಿಪೇರಿ ಮಾಡಬೇಕೆನ್ನುವುದು ದೇವರ ಬಯಕೆಯಾಗಿತ್ತು. ಆದರೆ ನರಕದ ಡೆವಿಲ್ ಗಳಿಗೆ ಸಹಜವಾಗಿ ಇದು ಒಪ್ಪಿಗೆಯಾಗಲಿಲ್ಲ, ಅವರ ನಡುವೆ ಬಿರುಸಿನ ವಾದ ವಿವಾದ ಶುರುವಾಯಿತು. ವಾದ ತಾರಕಕ್ಕೇರಿದಾದ, ಈ ವಿವಾದವನ್ನು ಕೋರ್ಟಿಗೆ ತೆಗೆದುಕೊಂಡು ಹೋಗುವುದಾಗಿ ದೇವರು ಬೆದರಿಕೆ ಹಾಕಿದ.

“ ನೀನು ಕೋರ್ಟಿಗೆ ಹೋಗುತ್ತಿಯಾ ಸರಿ, ಆದರೆ ನಿನ್ನ ಪರವಾಗಿ ವಾದ ಮಾಡುವ ವಕೀಲರು ಯಾರು? ಎಲ್ಲ ವಕೀಲರು ಇರುವುದು ನರಕದಲ್ಲಿ.” ದೇವರ ಮಾತು ಕೇಳಿ ಡೆವಿಲ್ ಜೋರಾಗಿ ನಕ್ಕು ಬಿಟ್ಟ.

ಹೌದು ದೇವರ ಪರವಾಗಿ ವಾದಕ್ಕೆ ಸಮರ್ಥನೆಗೆ ಯಾರೂ ಇಲ್ಲ, ಪ್ರೇಮದ ಪರವಾಗಿ ಆರ್ಗ್ಯೂಮೆಂಟ್ ಗೆ ಯಾರೂ ಇಲ್ಲ. ಜನರಿಗೆ ಧ್ಯಾನದ ಪರವಾಗಿ ಸಮರ್ಥನೆ ಹೇಳುವುದು ಸಾಧ್ಯವಿಲ್ಲ. ನೀವೇನಾದರೂ ಸಮರ್ಥನೆಗೆ ಮಾಡಲು ಶುರು ಮಾಡುವಿರಾದರೆ, ತಪ್ಪು ದಾರಿಯಲ್ಲಿ ನಿಮ್ಮ ಪ್ರಯಾಣ ಆರಂಭವಾದಂತೆಯೇ.

ನಸ್ರುದ್ದೀನ್ ದಂಪತಿಗಳ ವಿವಾಹ ವಿಚ್ಛೇದನ ಕೇಸ್ ವಹಿಸಿಕೊಂಡಿದ್ದ ವಕೀಲ, ನಸ್ರುದ್ದೀನ್ ನ ಹೆಂಡತಿಯ ಜೊತೆ ಮೊದಲ ಸುತ್ತಿನ ಮಾತುಕತೆಯ ನಂತರ ನಸ್ರುದ್ದೀನ್ ನನ್ನು ಭೇಟಿಯಾಗಿ ವಿಷಯ ತಿಳಿಸಿದ,

“ ಇಬ್ಬರಿಗೂ ಅನ್ಯಾಯವಾಗದಂತೆ ಒಂದು ಒಪ್ಪಂದಕ್ಕೆ ಬರಲು ನಿನ್ನ ಹೆಂಡತಿಯನ್ನು ಒಪ್ಪಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆ “

“ ಇಬ್ಬರಿಗೂ ಅನ್ಯಾಯವಾಗದ ಹಾಗೆ ? ಹೀಗಾದರೆ ನಾನೇ ಒಪ್ಪಿಸುತ್ತಿದ್ದೆ ನನ್ನ ಹೆಂಡತಿಯನ್ನು, ನಿನಗೆ ಯಾಕೆ ಈ ಕೇಸ್ ಕೊಟ್ಟಿದ್ದು. “

ನಸ್ರುದ್ದೀನ್, ವಕೀಲನನ್ನು ತರಾಟೆಗೆ ತೆಗೆದುಕೊಂಡ.

-As told by Osho in Dharshan Dairy: The 99 Names of Nothingness

Leave a Reply