ರಾಮಕೃಷ್ಣರೊಡನೆ ಒಂದು ಸಂವಾದ

ಮನುಷ್ಯ ತನ್ನ ಸಮಸ್ತ ಬುದ್ಧಿ ಮನಸ್ಸುಗಳನ್ನು ಭಗವಂತನಿಗೆ ಅರ್ಪಿಸದೇ ಹೋದರೆ, ಅವನಲ್ಲಿ ಇನ್ವೆಸ್ಟ್ ಮಾಡದೇ ಹೋದರೆ ಅವನನ್ನು ಸಾಧಿಸಿಕೊಳ್ಳುವುದು ಸಾಧ್ಯವಿಲ್ಲ… | ರಾಮಕೃಷ್ಣ ಪರಮಹಂಸ; ಕನ್ನಡಕ್ಕೆ: ಚಿದಂಬರ ನರೇಂದ್ರ

ನಟ : ಕಾಮ ಮತ್ತು ಬಯಕೆಗಳ ನಡುವಿನ ವ್ಯತ್ಯಾಸವೇನು?

ಮಾಸ್ಟರ್ : ಕಾಮ ಮರದ ಬೇರುಗಳಂತೆಯಾದರೆ, ಬಯಕೆಗಳು ಮರದ ರೆಂಬೆ ಕೊಂಬೆಗಳಂತೆ.
ಈ ಆರು ಉತ್ಕಟತೆಗಳಿಂದ ಸಂಪೂರ್ಣವಾಗಿ ಹೊರತಾಗುವುದು ಮನುಷ್ಯನಿಗೆ ಸಾಧ್ಯವಾಗುವುದಿಲ್ಲ : ಕಾಮ, ಕ್ರೋಧ, ಲೋಭ , ಮೋಹ, ಮದ, ಮಾತ್ಸರ್ಯ ಗಳೇ ಮನುಷ್ಯನ ಮನಸ್ಸನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳುವ ಅರಿಷಡ್ವರ್ಗಗಳು. ಮನುಷ್ಯರಿಗೆ ಇವುಗಳಿಂದ ಪೂರ್ತಿಯಾಗಿ ಹೊರತಾಗುವುದು ಸಾಧ್ಯವಿಲ್ಲ ಆದ್ದರಿಂದ ಇವುಗಳನ್ನೆಲ್ಲ ಭಗವಂತನ ದಾರಿ ಮುನ್ನಡೆಸಬೇಕು. ನಿಮ್ಮೊಳಗೆ ಮೋಹ ಮತ್ತು ಲೋಭ ತುಂಬಿ ತುಳುಕುತ್ತಿದ್ದರೆ, ನಿಮ್ಮ ಮೋಹ ಭಗವಂತನ ಕುರಿತಾಗಿರಲಿ ಅವನನ್ನು ಪಡೆದುಕೊಳ್ಳಲು ನಿಮ್ಮ ಲೋಭ ಮೀಸಲಾಗಿರಲಿ. ನಿಮ್ಮೊಳಗೆ ಮದ, ಅಹಂ ಅಪಾರವಾಗಿದ್ದರೆ, ನಿಮ್ಮನ್ನು ನೀವು ಭಗವಂತನ ಸೇವಕ ಎಂದುಕೊಳ್ಳಿ, ಅವನ ಮಗು ಎಂದು ತಿಳಿದುಕೊಳ್ಳಿ.

ಮನುಷ್ಯ ತನ್ನ ಸಮಸ್ತ ಬುದ್ಧಿ ಮನಸ್ಸುಗಳನ್ನು ಭಗವಂತನಿಗೆ ಅರ್ಪಿಸದೇ ಹೋದರೆ, ಅವನಲ್ಲಿ ಇನ್ವೆಸ್ಟ್ ಮಾಡದೇ ಹೋದರೆ ಅವನನ್ನು ಸಾಧಿಸಿಕೊಳ್ಳುವುದು ಸಾಧ್ಯವಿಲ್ಲ. ಮನುಷ್ಯನ ಮನಸ್ಸನ್ನ ಹೆಣ್ಣು ಮತ್ತು ಹೊನ್ನು ಆವರಿಸಿಕೊಂಡುಬಿಟ್ಟಿದೆ. ನಿನ್ನ ಉದಾಹರಣೆಯನ್ನೆ ತೆಗೆದುಕೊಳ್ಳುವುದಾದರೆ, ಒಂದು ಕಡೆ ನಿನಗೆ ನಿನ್ನ ಹೆಂಡತಿ ಮಕ್ಕಳ ಮೇಲೆ ಪ್ರಾಣ ಮತ್ತು ಇನ್ನೊಂದೆಡೆ ನಿನಗೆ ರಂಗಮಂಚದ (Theater) ಮೇಲೆ ಮೋಹ. ಮೋಹ ಬೇರೆ ಪ್ರೀತಿ ಬೇರೆ. ಹಾಗಾಗಿ ಭಗವಂತನ ಮೇಲೆ ನಿನ್ನ ಪೂರ್ಣ ಮನಸ್ಸನ್ನು ಕೇಂದ್ರಿಕರಿಸುವುದು ನಿನಗೆ ಸಾಧ್ಯವಾಗುತ್ತಿಲ್ಲ.

ಎಲ್ಲಿಯವರೆಗೆ ಭೋಗ ನಿಮ್ಮನ್ನು ಕಾಡುತ್ತಿದೆಯೇ ಅಲ್ಲಿಯವರೆಗೆ ನೀವು ಯೋಗದಿಂದ ಹೊರತಾಗಿರುತ್ತೀರಿ, ಮುಂದುವರೆದು ಭೋಗದಿಂದ ಸಂಕಟಗಳು ಹುಟ್ಟಿಕೊಳ್ಳುತ್ತವೆ. ಅವಧೂತರು ತಮ್ಮ 24 ಗುರುಗಳಲ್ಲಿ ಒಂದು ಗುರುವಾಗಿ ಹದ್ದನ್ನು ಸ್ವೀಕರಿಸಿದರು ಎನ್ನುವು ಮಾತು ಭಾಗವತದಲ್ಲಿ ಬರುತ್ತದೆ. ಆ ಹದ್ದಿನ ಕೊಕ್ಕಿನಲ್ಲಿ ಒಂದು ಮೀನು ಇರುವಾಗ ನೂರಾರು ಕಾಗೆಗಳು ಕಾವ್ ಕಾವ್ ಎನ್ನುತ್ತ ಹದ್ದನ್ನು ಸುತ್ತುವರೆದಿರುತ್ತವೆ. ಹದ್ದಿನ ಕೊಕ್ಕಿನಿಂದ ಮೀನು ಕೆಳಗೆ ಬಿದ್ದ ಕಷ್ಣದಲ್ಲಿಯೇ ಕಾಗೆಗಳು ಹದ್ದನ್ನು ಬಿಟ್ಟು ಮೀನಿನತ್ತ ಹಾರಿ ಹೋಗುತ್ತವೆ.

ಮೀನು ಒಂದು ಭೋಗವಾದರೆ, ಕಾಗೆಗಳು ಆತಂಕಗಳು, ಚಿಂತೆಗಳಂತೆ. ಯಾವಾಗಲೂ ಭೋಗದ ಜೊತೆ ಆತಂಕ ಮತ್ತು ಚಿಂತೆಗಳು ಅಂಟಿಕೊಂಡಿರುತ್ತವೆ. ಭೋಗವನ್ನು ತ್ಯಜಿಸಿದಾಗಲಷ್ಟೇ ಶಾಂತಿ ಹುಡುಕಿಕೊಂಡು ಬರುವುದು.


Source – The Gospel of Sri Ramakrishna.

Leave a Reply