ಗೊಬೆಗೆ ರಾತ್ರಿಯೆಂದರೆ ಹಗಲು, ಹಗಲು ಎಂದರೆ ರಾತ್ರಿ. ಹಾಗೆಯೇ ಹೊರಗಿನ ಬದುಕು ಬದುಕುತ್ತಿರುವವರಿಗೆ ಒಳಗಿನ ಬದುಕು ಕಾಣಿಸುವುದಿಲ್ಲ… – ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಂದು ದಿನ ಬಾದಾಮಿ ಗಿಡದ ಹತ್ತಿರ ನನಗೆ ಗೂಬೆಯೊಂದು ಮಾತನಾಡುವುದು ಕೇಳಿಸಿತು. ಆಗ ತಾನೆ ಬೆಳಗಾಗುತ್ತಿತ್ತು ಮೂಡಣದಲ್ಲಿ ಸೂರ್ಯ ನಿಧಾನವಾಗಿ ಕಾಣಿಸಿಕೊಳ್ಳುತ್ತಿದ್ದ. ಮರದಲ್ಲಿ ವಾಸವಾಗಿದ್ದ ಅಳಿಲು ಮುಂಜಾನೆಯ ತಾಜಾತನವನ್ನು ಅನುಭವಿಸುತ್ತ ಹೊಸದೊಂದು ದಿನಕ್ಕಾಗಿ ತಯಾರಾಗುತ್ತಿತ್ತು. ಇದೇ ಸಮಯದಲ್ಲಿ ಗೊಬೆ ಅಳಿಲನ್ನು ಪ್ರಶ್ನೆ ಮಾಡಿತು, “ ಅಳಿಲು ಮರಿ, ಕತ್ತಲೆಯಾಗುತ್ತಿದೆ ಈ ಗಿಡ ನಾನು ವಿಶ್ರಾಂತಿ ಮಾಡಲಿಕ್ಕೆ ಸುರಕ್ಷಿತವೆ?”
“ ಗೊಬೆ ರಾಜ, ಕತ್ತಲೆಯಲ್ಲ ಬೆಳಕಾಗುತ್ತಿದೆ”
ಅಳಿಲು ಉತ್ತರಿಸಿತು.
“ ಸುಮ್ಮನಿರು ಹುಚ್ಚನ ಹಾಗೆ ಮಾತನಾಡಬೇಡ, ನನಗೆ ಗೊತ್ತು ಕತ್ತಲು ಆವರಿಸಿಕೊಳ್ಳುತ್ತಿದೆ, ಈಗ ರಾತ್ರಿಯಾಗುತ್ತಿದೆ” ಗೊಬೆಗೆ ಸಿಟ್ಟು ಬಂತು.
ಯಾಕೆ ಗೂಬೆಯೊಂದಿಗೆ ವೃಥಾ ವಾದ ವಿವಾದ ಎಂದು ಅಳಿಲು “ಗೊಬೆರಾಜ ನೀನೇ ಸರಿ ಇರಬಹುದು” ಎಂದು ಸುಮ್ಮನಾಯಿತು. ಗೂಬೆ ಬೇರೆ ಮರಕ್ಕೆ ಹಾರಿ ಹೋದ ಮೇಲೆ ಅಳಿಲು ಧೈರ್ಯದಿಂದ ಹೇಳಿಕೊಂಡಿತು, “ ಕತ್ತಲು ಬರುವುದು ಸೂರ್ಯ ಮುಳುಗಿದಾಗ ಕಣ್ಣು ಮುಚ್ಚಿಕೊಂಡಾಗಲ್ಲ. ದಡ್ಡ ಗೂಬೆ ತಾನು ಕಣ್ಣು ಮುಚ್ಚಿಕೊಂಡು ನನಗೆ ಪಾಠ ಮಾಡುತ್ತಿದೆ. ಕಣ್ಣು ತೆರೆದು ನೋಡಿದರೆ ಸೂರ್ಯ ಕಾಣಿಸುತ್ತಾನೆ.”
ಆದರೆ ಗೂಬೆಗೆ, ಅಳಿಲಿನ ಮಾತನ್ನ ಅರ್ಥಮಾಡಿಕೊಳ್ಳುವುದು ಹೇಗೆ ಸಾಧ್ಯ? ಗೊಬೆಗೆ ರಾತ್ರಿಯೆಂದರೆ ಹಗಲು, ಹಗಲು ಎಂದರೆ ರಾತ್ರಿ. ಹಾಗೆಯೇ ಹೊರಗಿನ ಬದುಕು ಬದುಕುತ್ತಿರುವವರಿಗೆ ಒಳಗಿನ ಬದುಕು ಕಾಣಿಸುವುದಿಲ್ಲ. ಒಳಗಣ್ಣಿನಿಂದ ಒಳಗಿನ ಅಸ್ತಿತ್ವವನ್ನು ಗಮನಿಸಿದಾಗ ಮಾತ್ರ ನಿಜದ ಒಳಗು ಕಾಣಿಸುತ್ತದೆ. ಆದ್ದರಿಂದ ವಾದ ವಿವಾದಕ್ಕೆ ಸಮಯವನ್ನು ವ್ಯರ್ಥ ಮಾಡದೇ ಆ ಸಮಯವನ್ನ ಧ್ಯಾನಕ್ಕೆ ಮೀಸಲಾಗಿಡಿ.