ರಮಣ ಮಹರ್ಷಿಗಳು ಹೇಳಿದ ದೃಷ್ಟಾಂತ ಕತೆ

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ರಮಣ ಮಹರ್ಷಿಗಳು ಒಂದು ಕಥೆ ಹೇಳುತ್ತಿದ್ದರು.

ಒಮ್ಮೆ ಮದುವೆ ಮನೆಯಲ್ಲಿ ಒಬ್ಬ ಹೆಂಗಸು ತನ್ನ ಬಂಗಾರದ ನೆಕ್ಲೆಸ್ ಹುಡುಕಾಡುತ್ತಿದ್ದಳು. ತನ್ನ ಬ್ಯಾಗ್, ಸೂಟ್ ಕೇಸ್ ಎಲ್ಲ ಹುಡುಕಿಯಾದ ಮೇಲೆ ಆಕೆ ತನ್ನ ಬಂಧುಗಳನ್ನ ವಿಚಾರಿಸಹತ್ತಿದಳು. “ನಿಮ್ಮ ಕುತ್ತಿಗೆಯಲ್ಲೇ ಇದೆ ಅಲ್ವಾ ನೆಕ್ಲೆಸ್” ಎಂದು ಪುಟ್ಟ ಹುಡುಗಿಯೊಬ್ಬಳು ಪಾಯಿಂಟೌಟ್ ಮಾಡಿದಾಗ ಆಕೆ ಆಕೆ ತನ್ನ ಕುತ್ತಿಗೆ ಸವರಿಕೊಂಡು ನೋಡಿದಳು. ತನ್ನ ನೆಕ್ಲೆಸ್ ಅಲ್ಲೇ ಇರುವುದನ್ನು ಗಮನಿಸಿ ಆಕೆಗೆ ಪರಮಾನಂದವಾಯಿತು.

ಈ ಹೆಂಗಸಿನ ಗಾಬರಿಯನ್ನೆಲ್ಲ ಗಮನಿಸಿದ್ದ ಹಿರಿಯರೊಬ್ಬರು “ ನಿನ್ನ ನೆಕ್ಲೆಸ್ ಸಿಕ್ತಾ?” ಎಂದು ಕೇಳಿದಾಗ “ ಹೌದು ಸಿಕ್ತು” ಎಂದು ಆಕೆ ಖುಶಿಯಿಂದ ಉತ್ತರಿಸಿದಳು. ತನ್ನ ನೆಕ್ಲೆಸ್ ತನ್ನ ಕುತ್ತಿಗೆಯಲ್ಲೇ ಇರುವುದು ಗೊತ್ತಾದ ಮೇಲೆ ಆಕೆಗೆ ಕಳೆದುಕೊಂಡ ನೆಕ್ಲೆಸ್ ಮತ್ತೆ ಸಿಕ್ಕಷ್ಟೇ ಖುಶಿಯಾಗಿತ್ತು. ಹಾಗೆ ನೋಡಿದರೆ ಆಕೆ ನೆಕ್ಲೆಸ್ ಕಳೆದುಕೊಂಡಿರಲಿಲ್ಲ ಮತ್ತು ಅದು ಆಕೆಗೆ ಹೊಸದಾಗಿ ಏನೂ ಸಿಗಲಿಲ್ಲ, ಅದು ತಾನು ಇದ್ದ ಜಾಗದಲ್ಲಿಯೇ ಇತ್ತು. ಆದರೂ ಆಕೆ ಕೆಲ ಸಮಯದ ಹಿಂದೆ ಆತಂಕಭರಿತಳಾಗಿದ್ದಳು ಮತ್ತು ಈಗ ಬಹಳ ಖುಶಿಯಾಗಿದ್ದಾಳೆ.

ಆತ್ಮ ಸಾಕ್ಷಾತ್ಕಾರದ (self realisation) ವಿಷಯವೂ ಹೀಗೆಯೇ. ಸೆಲ್ಫ್ ಯಾವತ್ತಿಗೂ ಇದ್ದಲ್ಲಿಯೇ ಇದೆ, ಅದು ನಮ್ಮ ಗಮನದಿಂದ ಮರೆಯಾಗಿದೆ ಅಷ್ಟೇ. ಮತ್ತೇ ನಾವು ನಮ್ಮ ಸೆಲ್ಫ್ ನ್ನ ಕಂಡುಕೊಂಡಾಗ ನಮಗೆ ಖುಶಿಯಾಗುತ್ತದೆ, ಅದೊಂದು ಮಹಾ ಸಂತೋಷದ, ಸಾಧನೆಯ ವಿಷಯ ಅನಿಸುತ್ತದೆ. ಆದರೆ ಕಳೆದುಕೊಳ್ಳಲಿಕ್ಕೆ ಈ ಸೆಲ್ಫ್ ಎಲ್ಲಿ ಹೋಗಿತ್ತು? ಕಳೆದು ಹೋಗದ್ದು ಮತ್ತೆ ಸಿಗುವುದೆಂದರೇನು?

ಈಗ ನಮಗಿರುವ ಅಜ್ಞಾನವನ್ನು ಕಳೆದುಕೊಳ್ಳಲಿಕ್ಕೆ ಮನುಷ್ಯ ಏನು ಮಾಡಬೇಕು? ಜ್ಞಾನದ ಹುಡುಕಾಟವನ್ನು ಆರಂಭ ಮಾಡಬೇಕು. ಈ ಹುಟುಕಾಟ ಪೂರ್ಣಗೊಳ್ಳುತ್ತಿದ್ದಂತೆಯೇ ನಮ್ಮ ಮೇಲಿನ ಅಜ್ಞಾನದ ಪ್ರಭಾವ ಕಡಿಮೆಯಾಗುತ್ತ ಹೋಗಿ ಕೊನೆಗೊಮ್ಮೆ ಪೂರ್ತಿಯಾಗಿ ಅಜ್ಞಾನ ಕಾಣೆಯಾಗುತ್ತದೆ. ಸತ್ಯದ ಸಾಕ್ಷಾತ್ಕಾರಕ್ಕಾಗಿ ಹೊರಗೆಲ್ಲೂ ಹುಡುಕಾಡಬೇಕಿಲ್ಲ ನಮ್ಮ ಅಂತರಂಗ ಶೋಧಿಸಿ ಮತ್ತೇ ನಾವು ನಮ್ಮನ್ನು ಪರಿಚಯಮಾಡಿಕೊಳ್ಳಬೇಕು, ನಮ್ಮ ನಿಜವಾದ ವಿಳಾಸ ನಮಗೆ ಸಿಕ್ಕಾಗ ನಮ್ಮ ಹುಡುಕಾಟ ಪೂರ್ಣಗೊಳ್ಳುತ್ತದೆ.

ಒಮ್ಮೆ ಹೀಗಾಯಿತು. ತನ್ನ ಊರಿನಲ್ಲಿ ಜ್ಞಾನಿ ಎಂದು ಹೆಸರಾಗಿದ್ದ ಮುಲ್ಲಾ ನಸ್ರುದ್ದೀನ್ ನ ಹತ್ತಿರ ಒಬ್ಬ ಶ್ರೀಮಂತ ಬಂದ. “ ನನ್ನ ಬಳಿ ಎಲ್ಲ ಶ್ರೀಮಂತಿಕೆ ಇರುವಾಗಲೂ ನನ್ನ ಬದುಕಿನಲ್ಲಿ ಖುಶಿ ಇಲ್ಲ, ನಾನು ಯಾವಾಗಲೂ ದುಃಖಿತನಾಗಿರುತ್ತೇನೆ. ನನ್ನ ಬದುಕಿನಲ್ಲಿ ಖುಶಿಯನ್ನು ಮತ್ತೆ ಮರಳಿ ತಂದವರಿಗೆ ನನ್ನೆಲ್ಲ ಶ್ರೀಮಂತಿಕೆಯನ್ನು ಕೊಟ್ಟುಬಿಡುತ್ತೇನೆ” ಎನ್ನುತ್ತ ಆ ಶ್ರೀಮಂತ, ನಸ್ರುದ್ದೀನ್ ಗೆ ತನ್ನ ಬಳಿ ಇದ್ದ ಮುತ್ತು ರತ್ನ ಬಂಗಾರ, ವಜ್ರಗಳ ಚೀಲ ತೋರಿಸಿದ.

ನಸ್ರುದ್ದೀನ್, ಶ್ರೀಮಂತನಿಂದ ಆ ಚೀಲವನ್ನು ಕಸಿದುಕೊಂಡು ಓಡಹತ್ತಿದ. ಗಾಬರಿಗೊಂಡ ಶ್ರೀಮಂತ ನಸ್ರುದ್ದೀನ್ ನ ಹಿಂದೆ ಓಡಹತ್ತಿದ. ಸ್ವಲ್ಪ ದೂರ ಓಡಿದ ಮೇಲೆ ನಸ್ರುದ್ದೀನ್ ಆ ಚೀಲವನ್ನು ರಸ್ತೆಯ ಮೇಲೆ ಇಟ್ಟು, ಪಕ್ಕದ ಮರದ ಹಿಂದೆ ಅಡಗಿಕೊಂಡ.

ಹಿಂದೆ ಓಡಿಬಂದ ಶ್ರೀಮಂತನಿಗೆ ರಸ್ತೆಯ ಮೇಲೆ ಬಿದ್ದಿದ್ದ ತನ್ನ ಚೀಲ ನೋಡಿ ಬಹಳ ಸಂತೋಷವಾಗಿತ್ತು. ಅವನಿಗೆ ಯಾವತ್ತೂ ಇಷ್ಟು ಖುಶಿಯಾಗಿರಲಿಲ್ಲ. ಅವನ ಕಣ್ಣುಗಳಿಂದ ಆನಂದಭಾಷ್ಪ ಹರಿಯತೊಡಗಿತ್ತು.

ಮರೆಯಲ್ಲಿ ನಿಂತಿದ್ದ ನಸ್ರುದ್ದೀನ್ ಆ ಶ್ರೀಮಂತನ ಹತ್ತಿರ ಬಂದು ಕೇಳಿದ, “ಖುಶಿಯಾಗುತ್ತಿದೆಯಾ? ಈಗ ನನಗೆ ಈ ಚೀಲ ಕೊಟ್ಟುಬಿಡು.”

Leave a Reply