ಸಮಾಜವಾದ ಮತ್ತು ಅಧ್ಯಾತ್ಮ: ಸ್ವಾಮಿ ರಾಮತೀರ್ಥರ

ಜನರ ಎಲ್ಲಾ ವ್ಯಾಧಿ ವಿಕಾರಗಳಿಗೂ ಉಪದ್ರವಗೆಳಿಗೂ ಮನೋರೋಗಗಳಿಗೂ ಚಿಂತಾವ್ಯಾಕುಲಗಳಿಗೂ ಇರುವ ಒಂದೇ ಒಂದು ಚಿಕಿತ್ಸೆ ಮತ್ತು ಪರಿಹಾರವೆಂದರೆ, ಅದು – “ಸ್ವಂತ ಆಸ್ತಿಯನ್ನು ಮಾಡಿಕೊಳ್ಳಬೇಕೆಂಬ ಭ್ರಾಂತಿಯನ್ನು ನಿರಾಕರಿಸುವುದು”. ಈ ಸತ್ಯವನ್ನು ಜನರು ಅರಿಯುವಂತೆ ಮಾಡುವುದೇ ನಮ್ಮ ಸರ್ವ ಸಾಹಸವಾಗಿದೆ. ಬಹು ಸಂಖ್ಯಾತ ಜನರು ಇದೊಂದು ವಿಚಾರವನ್ನು ಒಮ್ಮೆ ಚೆನ್ನಾಗಿ ಮನಗಂಡರಾದರೆ, ಸಮಾಜವಾದವು ಪ್ರಪಂಚದ ಉದ್ದಗಲಕ್ಕೂ ಕಾಡ್ಗಿಚ್ಚಿನಂತೆ ಹಬ್ಬುತ್ತದೆ. ಅಧ್ಯಾತ್ಮ ಸಾರಿ ಸಾರಿ ಹೇಳುವುದೂ ಇದನ್ನೇ… । ಸ್ವಾಮಿ ರಾಮತೀರ್ಥ; ಕನ್ನಡಕ್ಕೆ: ಶ್ರೀ ಮೂರ್ತಿ (ಪರಮಾತ್ಮಾನುಭವದ ಮಹಾರಣ್ಯಗಳಲ್ಲಿ ಕೃತಿಯಿಂದ ಆಯ್ದ ಭಾಗ)

ಅಧ್ಯಾತ್ಮ – ವೇದಾಂತದ ಉದ್ದೇಶ ನಿಮ್ಮ ಎಲ್ಲಾ ಸ್ವಾಮಿತ್ವದ ಭಾವನೆಯನ್ನೂ ನಿಮ್ಮಿಂದ ಕಳಚುವದೇ, ಸುಲಿಯುವದೇ ಆಗಿದೆ; ಅದು ನಿಮ್ಮ ಎಲ್ಲಾ ಆಸ್ತಿಪಾಸ್ತಿಗಳ, ಸಂಗ್ರಹಗಳ ಸ್ವಾರ್ಥಪರವಾದ ಸಂಪತ್ತಿನ ಭಾವನೆಯನ್ನೂ ಗಾಳಿಗೆ ತೂರಿ ನಿಮ್ಮನ್ನು (ಬರಿ ಬೆತ್ತಲೆ) ನಿಸ್ವಾರ್ಥಿಗಳನ್ನಾಗಿ ಮಾಡುವದಾಗಿದೆ. ಇದೇ ವೇದಾಂತ, ಇದೇ ಸಮಾಜವಾದ. ಎರಡರ ಗುರಿಗಳೂ ಒಂದೇ.

ಅಧ್ಯಾತ್ಮವು ಸಮತೆಯನ್ನೂ ಸಮಾನತೆಯನ್ನೂ ಉಪದೇಶಿಸುತ್ತವೆ. ನಿಜವಾದ ಸಮಾಜವಾದದ ಗುರಿಯೂ ಇದೇ ಇರಬೇಕು. ಅದರಲ್ಲಿ ಹೊರಗಿನ ಯಾವ ಆಸ್ತಿಗೂ ಸ್ವತ್ತಿಗೂ ಸ್ವಾಮಿತ್ವಕ್ಕೂ ಆದರವಾಗಲೀ ಗೌರವವಾಗಲೀ ಗಣನೆಯಾಗಲೀ ಇರಬಾರದು. ಇದು ನಿಜವಾಗಿಯೂ ಭಯಂಕರವಾಗಿಯೂ ಬಹಳ ಉಗ್ರವಾಗಿಯೂ
ತೋರುತ್ತದೆ. ಅದರೆ, ಒಬ್ಬ ಮನುಷ್ಯನು ಸ್ವತ್ತು, ಸಂಪತ್ತು. ಸ್ವಾಮಿತ್ವ, ಒಡೆತನ, ಆಸ್ತಿ ಸಂಗ್ರಹಣೆ ಮೊದಲಾದ ಎಲ್ಲಾ ಭಾವನೆಗಳನ್ನೂ, ಅವಕ್ಕೆ ಅಂಟಿಕೊಂಡಿರುವದನ್ನೂ, ಆಸಕ್ತಿಯನ್ನೂ ಬಿಟ್ಟಹೊರತು ಅವನು ಭೂಮಿಯ ಮೇಲೆ ಎಂದೂ ಸುಖವನ್ನು ಕಾಣುವದು ಸಾಧ್ಯವಿಲ್ಲ.

ಮನುಷ್ಯನು ಇದನ್ನೆಲ್ಲಾ ಸುಮ್ಮನೆ ಬಿಟ್ಟುಬಿಡಬೇಕೆಂದು ಸಮಾಜವಾದವು ಹೇಳುತ್ತದೆ. ಆದರೆ ಹೀಗೆ ಮಾಡುವದಕ್ಕೆ ಕಾರಣವೇನು? ಅಗತ್ಯವೇನು? ಪ್ರಯೋಜನವೇನು? ಎನ್ನುವದನ್ನು ವೇದಾಂತವು ಮಹತ್ತಾದ ವಿಚಾರಪೂರ್ವಕವಾಗಿ ಬೋಧಿಸುತ್ತದೆ.

ಸಮಾಜವಾದವೆನ್ನುವದು ಪ್ರಪಂಚ ವಸ್ತು-ವಿದ್ಯಮಾನ-ವ್ಯವಹಾರಗಳ ಕೇವಲ ಮೇಲ್ಮೈಯ ವ್ಯಾಸಂಗವಾಗಿದೆ. ಇದು ಮಾನವ ಜನಾಂಗವು ಪರಸ್ಪರ ಸಮಾನ ಭಾವ, ಸಹೋದರಭಾವ ಮತ್ತು ಪ್ರೇಮಭಾವ ಇವುಗಳಿಂದ ಜೀವಿಸಬೇಕು – ಎಂದು ಸಾರುತ್ತದೆ. ವೇದಾಂತವು ಪ್ರಪಂಚ ವಿಲಾಸವನ್ನು ಸ್ವಾಭಾವಿಕವೂ ಸ್ಥಳೀಯವೂ ಆದ ದೃಷ್ಟಿಯಿಂದ ಪರಿಶೀಲಿಸುತ್ತದೆ. ವೇದಾಂತದ ಪ್ರಕಾರ ವೈಯಕ್ತಿಕವಾಗಿ ಯಾವುದೇ ಆಸ್ತಿಯ ಮೇಲೆ ಒಡೆತನ ಸಾಧಿಸುವುದು ಆತ್ಮಸಾಕ್ಷಿಯ ವಿರುದ್ಧ ನಡೆಸುವ ಭಯಂಕರ ಭ್ರಷ್ಟಾಚಾರವೇ ಆಗಿದೆ. ವೇದಾಂತದ ದೃಷ್ಟಿಯಿಂದ ಮನುಷ್ಯನಿಗಿರುವ ಒಂದೇ ಅಧಿಕಾರವೆಂದರೆ ಕೊಡುವದು, ಕೊಡುತ್ತಿರುವದು, ಅಷ್ಟೇ.

ಜನರ ಎಲ್ಲಾ ವ್ಯಾಧಿ ವಿಕಾರಗಳಿಗೂ ಉಪದ್ರವಗೆಳಿಗೂ ಮನೋರೋಗಗಳಿಗೂ ಚಿಂತಾವ್ಯಾಕುಲಗಳಿಗೂ ಇರುವ ಒಂದೇ ಒಂದು ಚಿಕಿತ್ಸೆ ಮತ್ತು ಪರಿಹಾರವೆಂದರೆ, ಅದು – “ಸ್ವಂತ ಆಸ್ತಿಯನ್ನು ಮಾಡಿಕೊಳ್ಳಬೇಕೆಂಬ ಭ್ರಾಂತಿಯನ್ನು ನಿರಾಕರಿಸುವುದು”. ಈ ಸತ್ಯವನ್ನು ಜನರು ಅರಿಯುವಂತೆ ಮಾಡುವುದೇ ನಮ್ಮ ಸರ್ವ ಸಾಹಸವಾಗಿದೆ. ಬಹು ಸಂಖ್ಯಾತ ಜನರು ಇದೊಂದು ವಿಚಾರವನ್ನು ಒಮ್ಮೆ ಚೆನ್ನಾಗಿ ಮನಗಂಡರಾದರೆ, ಸಮಾಜವಾದವು ಪ್ರಪಂಚದ ಉದ್ದಗಲಕ್ಕೂ ಕಾಡ್ಗಿಚ್ಚಿನಂತೆ ಹಬ್ಬುತ್ತದೆ. ಅಧ್ಯಾತ್ಮ ಸಾರಿ ಸಾರಿ ಹೇಳುವುದೂ ಇದನ್ನೇ.

ಜನರ ಎಲ್ಲ ಕೇಡುಗಳಿಗೂ ಕ್ಲೇಶಗಳಿಗೂ ಅಸ್ವಸ್ಥತೆಗಳಿಗೂ ಅಶಾಂತಿಗಳಿಗೂ ವೇದಾಂತ – ಸಮಾಜವಾದ ಮಾತ್ರವೇ ಪರಿಹಾರ. ಈ ವೇದಾಂತ… ಈ ಸಮಾಜವಾದವನ್ನು ಜನರು ಅರ್ಥಮಾಡಿಕೊಂಡು ಒಮ್ಮೆ ಒಪ್ಪಿಕೊಂಡರೆಂದರೆ, ಈ ಪ್ರಪಂಚದಲ್ಲಿ ಸಹಸ್ರಾವಧಿವರ್ಷಗಳ ಧರ್ಮಯುಗವೇ ಪ್ರಾರಂಭವಾಗುತ್ತದೆ; ರಾಮರಾಜ್ಯವೇ ಸ್ಥಾಪನೆಯಾಗುತ್ತದೆ; ಇದರಲ್ಲಿ ಸಂಶಯವಿಲ್ಲ.

ಈ ಸಮಾಜವಾದದಲ್ಲಿ ರಾಜರು,(ಪ್ರೆಸಿಡೆಂಟರು) ಅಧ್ಯಕ್ಷರು, ಪುರೋಹಿತರು ಯಾರೂ ಬೇಕಾಗಿಲ್ಲ; ಸೈನ್ಮಗಳ ಆವಶ್ಯಕತೆಯೂ ಇಲ್ಲ. ಪ್ರತಿಯೊಬ್ಬನೂ ತನಗೆ ತಾನೇ ವಿಶ್ವವಿದ್ಯಾನಿಲಯವಾಗುವದರಿಂದ ಎಂದೂ ಯಾವ ಸಂಸ್ಥೆಯ ಆವಶ್ಯಕತೆಯೂ ಇರುವದಿಲ್ಲ. ಯಾರು ಬೇಕಾದರೂ ಬಂದು ಓದಬಹುದಾದಂಥ ಪುಸ್ತಕ ಭಂಡಾರಗಳು ಇರುತ್ತವೆ.

ಅಧ್ಯಾತ್ಮ ಮತ್ತು ಸಮಾಜವಾದ ಹೇಳುವಂತೆ ಪ್ರಕೃತಿಸಹಜವಾದ ಜೀವನವನ್ನು ನಡೆಸುವುದರಿಂದ ನೀವೆಂದೂ ಕಾಯಿಲೆ ಬೀಳುವುದಿಲ್ಲ. ತಮಗೆ ಬೇಕಾದುದನ್ನು ಮಾಡಬಹುದು. ಪ್ರಪಂಚದಲ್ಲಿ ಈಗಿನಂತೆ ತಮ್ಮ ಸಹೋದರರ ಭಯವಿಲ್ಲದೆ ಯಾವ ದೇಶಕ್ಕೆ ಬೇಕಾದರೂ ಹೋಗಿ ಬರಬಹುದು. ಆದರೆ ಎಲ್ಲರೂ ಒಳ್ಳೆಯವರಾಗಿ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಾ, ಉಪಯುಕ್ತವಾದ ಜೀವನ ನಡೆಸಬಹುದು.

Leave a Reply