ಇದು ಬರೀ ಬೆಳಗಲ್ಲೋ ಅಣ್ಣಾ… : ಓಶೋ ವ್ಯಾಖ್ಯಾನ

ಜನ ತಾವು ಆಲೋಚನೆಗಳಿಂದ ಮುಕ್ತರಾಗಬೇಕು ಎಂದು ಬಯಸುತ್ತಾರೇನೋ ನಿಜ, ಆದರೆ ಅವರಿಗೆ ತಿಳಿಯದ ಸಂಗತಿ ಏನೆಂದರೆ ಯಾವ ಆಲೋಚನೆಯೂ ನೀವು ಆಮಂತ್ರಣ ನೀಡದೆ ನಿಮ್ಮ ಹತ್ತಿರ ಸುಳಿಯುವುದಿಲ್ಲ… ~ ಓಶೋ

ಝೆನ್ ಮಾಸ್ಟರ್ ತನ್ನ ಒಬ್ಬ ಶಿಷ್ಯನಿಗೆ ಒಂದು ಕೋಆನ್ (koan) ಕೊಟ್ಟು ಅದಕ್ಕೆ ಉತ್ತರ ಕಂಡುಕೊಳ್ಳುವಂತೆ ಆದೇಶಿಸಿದ. ಕೋಆನ್ ಎಂದರೆ ಒಂದು ವಿಶೇಷ ಝೆನ್ ಸಂಗತಿ, ನಿಮ್ಮ ಆಲೋಚನೆಗಳಿಂದ ಮುಕ್ತರಾಗಲು ಸಹಾಯ ಮಾಡುವ ಸಂಗತಿ. ಈ ಕೋಆನ್ ಗಳು ಎಷ್ಟು ಅಸಂಗತವಾಗಿರುತ್ತವೆ ಎಂದರೆ ಇವುಗಳಿಗೆ ನೇರ ಉತ್ತರ ಕಂಡುಕೊಳ್ಳುವುದು ಸಾಧ್ಯವೇ ಇಲ್ಲ. ಹಲವಾರು ಕೋಆನ್ ಗಳು ಪ್ರಸಿದ್ಧವಾಗಿವೆಯಾದರೂ ಈ ಕೋಆನ್ ಎಲ್ಲಕ್ಕಿಂತಲೂ ಪ್ರಸಿದ್ದವಾದದ್ದು, “ ಒಂದು ಕೈಯ ಚಪ್ಪಾಳೆ ಸದ್ದು”

ಒಂದು ಕೈಯ ಚಪ್ಪಾಳೆ ಸದ್ದು ಕೇಳುವುದು, ಒಂದು ಶುದ್ಧ ಮೂರ್ಖ ಪ್ರಯತ್ನ. ಒಂದು ಕೈ ಚಪ್ಪಾಳೆ ಸದ್ದನ್ನು ಸೃಷ್ಟಿ ಮಾಡುವುದು ಸಾಧ್ಯವೇ ಇಲ್ಲ. ಚಪ್ಪಾಳೆ ಸದ್ದು ಹುಟ್ಟಿಕೊಳ್ಳಲು ಕನಿಷ್ಟ ಎರಡು ವಸ್ತುಗಳಾದರೂ ಬೇಕು, ಎರಡು ಕೈಗಳಾದರೂ ಬೇಕು. ಝೆನ್ ಮಾಸ್ಟರ್ ತನ್ನ ಶಿಷ್ಯನಿಗೆ, ಯಾವಾಗ ನಿನಗೆ ಒಂದು ಕೈಯ ಚಪ್ಪಾಳೆ ಸದ್ದು ಕೇಳಿಸುವುದೋ ಆಗ ನನ್ನ ಹತ್ತಿರ ಬಾ ಎಂದು ಹೇಳಿ ವಾಪಸ್ ಕಳಿಸಿಬಿಟ್ಟ.

ಒಂದು ಕೈಯ ಚಪ್ಪಾಳೆ ಸದ್ದು ಕೇಳಿಸಿಕೊಳ್ಳಲು ಶಿಷ್ಯ ತುಂಬ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲು ಶುರು ಮಾಡಿದ, ಧ್ಯಾನ ಮಗ್ನನಾದ. ಆಗ ಅವನಿಗೆ ಪೈನ್ ಮರಗಳ ಒಳಗಿಂದ ಗಾಳಿ ಹಾಯ್ದು ಹೋಗುವ ಸದ್ದು ಕೇಳಿಸಿತು. ಬಹುಶಃ ಮಾಸ್ಟರ್ ಹೇಳಿದ ಸದ್ದು ಇದೇ ಇರಬೇಕೆಂದು ಶಿಷ್ಯ, ಬೆಳಕು ಹರಿಯುವ ಮುನ್ನವೇ ಲಗುಬಗೆಯಿಂದ ಮಾಸ್ಟರ್ ನ ಆಶ್ರಮಕ್ಕೆ ಹೋಗಿ, ಇನ್ನೂ ನಿದ್ದೆ ಮಾಡುತ್ತಿದ್ದ ಮಾಸ್ಟರನ್ನು ಎಬ್ಬಿಸಿ ಹೇಳಿದ, “ ನನಗೆ ಒಂದು ಕೈಯ ಚಪ್ಪಾಳೆ ಸದ್ದು ಕೇಳಿಸಿತು.”

ಯಾವ ಸದ್ದು ಕೇಳಿದೆ? ಏನು ವಿಷಯ? ಏನನ್ನೂ ಕೇಳದೆ ಮಾಸ್ಟರ್, ಶಿಷ್ಯನ ಕಪಾಳಕ್ಕೆ ಬಾರಿಸಿದ. “ ಆ ಸದ್ದು ನಿನಗೆ ಕೇಳಿಸಿದ್ದು ನನಗೆ ಗೊತ್ತಾಗುತ್ತದೆ, ಇಲ್ಲಿಂದ ಹೊರಟು ಹೋಗು” ಮಾಸ್ಟರ್ ಶಿಷ್ಯನನ್ನು ಗದರಿಸಿ ತನ್ನ ಆಶ್ರಮದಿಂದ ಕಳಿಸಿಬಿಟ್ಟ.

ತಾನು ಯಾವ ಸದ್ದು ಕೇಳಿದೆ ಎನ್ನುವುದನ್ನ ಹೇಳಲೂ ಅವಕಾಶ ನೀಡದ ಮಾಸ್ಟರ್ ನ ವರ್ತನೆ ಶಿಷ್ಯನಿಗೆ ವಿಚಿತ್ರ ಅನಿಸಿತು.

ಮಾಮರದ ನಡುವೆ ಒಂದು ಹಕ್ಕಿಯ ಕುಹೂ ಕೇಳಿದಾಗ, ನಡು ರಾತ್ರಿ ಕೋಗಿಲೆಯ ದನಿಯೊಂದನ್ನು ಕೇಳಿದಾಗ, ನೀರು ಬಂಡೆಗಲ್ಲಿಗೆ ಅಪ್ಪಳಿಸುವ ಸದ್ದು ಕೇಳಿದಾಗ, ಹೀಗೆ ಹಲವಾರು ಬಾರಿ ವಿಶೇಷ ಸದ್ದುಗಳನ್ನು ಕೇಳಿದಾಗ ಶಿಷ್ಯ , ಮಾಸ್ಟರ್ ಗೆ ವಿಷಯ ತಿಳಿಸಲು ಹೋದ. ಪ್ರತಿ ಬಾರಿಯೂ ಅವನು ಮಾಸ್ಟರ್ ನಿಂದ ಕಪಾಳಕ್ಕೆ ಹೊಡೆತ ತಿನ್ನುಬೇಕಾಯಿತು.

“ ನಾನು ಯಾವ ಸದ್ದು ಕೇಳಿದೆ ಎನ್ನುವುದನ್ನ ಹೇಳುವ ಅವಕಾಶವನ್ನಾದರೂ ಕೊಡು” ಶಿಷ್ಯ ಅಂಲಾಚಿದ. “ ನೀನು ಆ ಸದ್ದು ಕೇಳಿದ ವಿಷಯ ನಿನಗಿಂತ ಮೊದಲು ನನಗೆ ಗೊತ್ತಾಗುತ್ತದೆ. ಹೋಗು ಹುಡುಕು ಆ ಸದ್ದನ್ನ, ಧ್ಯಾನ ಮಾಡು.” ಮಾಸ್ಟರ್ ಶಿಷ್ಯನನ್ನು ತನ್ನ ಆಶ್ರಮದಿಂದ ಹೊರಗೆ ನೂಕಿಬಿಟ್ಟ.

ಶಿಷ್ಯ ಈ ಸದ್ದನ್ನು ಕೇಳುವ ಸಲುವಾಗಿ ತನ್ನ ಎಲ್ಲ ಗಮನವನ್ನ ಕೇಂದ್ರೀಕರಿಸಿದ, ನಿಧಾನವಾಗಿ ಬೇರೆ ಎಲ್ಲ ಆಲೋಚನೆಗಳು ಅವನ ಮೈಂಡ್ ನಲ್ಲಿ ಬರುವುದು ಕಡಿಮೆಯಾಗತೊಡಿತು. ಈಗ ಅವನು ಆಮಂತ್ರಣ ನೀಡದೆ ಯಾವ ಆಲೋಚನೆಯೂ ಅವನ ಹತ್ತಿರ ಸುಳಿಯುತ್ತಿರಲಿಲ್ಲ.

ಜನ ತಾವು ಆಲೋಚನೆಗಳಿಂದ ಮುಕ್ತರಾಗಬೇಕು ಎಂದು ಬಯಸುತ್ತಾರೇನೋ ನಿಜ, ಆದರೆ ಅವರಿಗೆ ತಿಳಿಯದ ಸಂಗತಿ ಏನೆಂದರೆ ಯಾವ ಆಲೋಚನೆಯೂ ನೀವು ಆಮಂತ್ರಣ ನೀಡದೆ ನಿಮ್ಮ ಹತ್ತಿರ ಸುಳಿಯುವುದಿಲ್ಲ. ನೀವು ಸದಾ ಆಲೋಚನೆಗಳಿಗೆ ಆಮಂತ್ರಣ ನೀಡುತ್ತಲೇ ಇರುತ್ತೀರಿ. ನಿಮ್ಮ ಒಂದು ಭಾಗ ಆಲೋಚನೆಗಳಿಗೆ ಆಮಂತ್ರಣ ನೀಡುತ್ತಿದ್ದರೆ, ಇನ್ನೊಂದು ಭಾಗ ಆ ಆಲೋಚನೆಗಳಿಂದ ಮುಕ್ತವಾಗಲು ಬಯಸುತ್ತಿರುತ್ತದೆ. ಹಾಗಾಗಿ ಆಲೋಚನೆಗಳಿಂದ ಮುಕ್ತರಾಗಬಯಸುವ ನಿಮ್ಮ ಪ್ರಯತ್ನ ಯಾವತ್ತೂ ಸಫಲವಾಗುವುದಿಲ್ಲ.

ಈಗ ಶಿಷ್ಯನ ಸಂಪೂರ್ಣ ಅಸ್ತಿತ್ವ ಆ ಒಂದು ಸಂಗತಿಯ ಸುತ್ತ ಕೇಂದ್ರೀಕೃತವಾಗಿತ್ತು. ಒಂದು ಕೈಯ ಚಪ್ಪಾಳೆ ಸದ್ದು ಕೇಳಿಸಿಕೊಳ್ಳಲಾಗದಿರುವುದು ಅವನಿಗೆ ಸವಾಲಿನ ವಿಷಯವಾಗಿತ್ತು. ನಿಧನವಾಗಿ ಅವನ ಎಲ್ಲ ಆಲೋಚನೆಗಳೂ ನಿಂತು ಹೋದವು, ಒಂದು ಅಪರಿಮಿತ ಮೌನ ಅವನಲ್ಲಿ ನೆಲೆಯಾಯಿತು. ಶಿಷ್ಯನಿಗೆ ಮಾಸ್ಟರ್ ಕೇಳಿದ ಪ್ರಶ್ನೆಯ ಉತ್ತರ ಗೊತ್ತಾಯಿತು. ಆದರೆ ಈ ಬಾರಿ ಶಿಷ್ಯ ಉತ್ತರ ಹೇಳಲು ಮಾಸ್ಟರ್ ನತ್ತ ಧಾವಿಸಲಿಲ್ಲ.

ಪ್ರತಿ ಬಾರಿ ಒಂದು ಉತ್ತರದೊಡನೆ ತನ್ನ ಬಳಿ ಬರುತ್ತಿದ್ದ ಶಿಷ್ಯ ಬಹಳ ದಿನ ಕಾಣೆಯಾದಾಗ ಮಾಸ್ಟರ್ ಗೆ ಅನುಮಾನ ಬಂತು. “ ಅವನಿಗೆ ಒಂದು ಕೈಯ ಚಪ್ಪಾಳೆಯ ಸದ್ದು ಕೇಳಿಸಿತಾ? ಕೇಳಿಸಿದವರಾರೂ ಹಾಗೆ ಕೇಳಿಸಿತು ಎಂದು ಹೇಳಲು ಬರುವುದಿಲ್ಲ. ಕೇಳಿಸಿದ್ದಕ್ಕೆ ಯಾರೂ ಯಾವ ಸಾಕ್ಷಿಯನ್ನೂ ನೀಡಬೇಕಿಲ್ಲ.”

ವಿಷಯ ಏನುಂಬುದನ್ನ ಪತ್ತೆ ಮಾಡಲು ಮಾಸ್ಟರ್ ಸ್ವತಃ ಶಿಷ್ಯನನ್ನು ಹುಡುಕಿಕೊಂಡು ಹೊರಟ. ಕಾಡಿನ ಆಳದಲ್ಲಿ, ನದಿಯೊಂದರ ದಂಡೆಯ ಮೇಲೆ, ಮರದ ಕೆಳಗೆ ಶಾಂತ ಸ್ಥಿತಿಯಲ್ಲಿ ಕುಳಿತಿದ್ದ ಶಿಷ್ಯ, ಮಾಸ್ಟರ್ ನ ಕಣ್ಣಿಗೆ ಬಿದ್ದ. ಅವನು ಅಲ್ಲಿ ಕುಳಿತಿರುವುದು ಯಾವ ಜೀವಕ್ಕೂ ಗೊತ್ತಾಗುವಂತಿರಲಿಲ್ಲ. ಅಷ್ಟು ಮೌನ, ಅಷ್ಟು ಖಾಲೀತನ ಅವನಲ್ಲಿ ತುಂಬಿಕೊಂಡಿತ್ತು. ಮಾಸ್ಟರ್ ಬಂದದ್ದು ಕೂಡ ಶಿಷ್ಯನಿಗೆ ಗೊತ್ತಾಗಲಿಲ್ಲ. ಮಾಸ್ಟರ್ ಹೋಗಿ ಶಿಷ್ಯನ ಎದುರು ಕುಳಿತ.

ಎಷ್ಟು ಹೊತ್ತಾದರೂ ಶಿಷ್ಯನಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ . ಕೊನೆಗೆ ಮಾಸ್ಟರ್ ತಾನೇ ಮೌನ ಮುರಿದ, “ ನನಗೆ ನಿನ್ನ ಸ್ಥಿತಿ ಗೊತ್ತಾಗುತ್ತಿದೆ, ನೀನು ಏನೂ ಹೇಳುವ ಸ್ಥಿತಿಯಲ್ಲಿಲ್ಲ, ಹೇಳುವುದು ನಿನಗೆ ಸಾಧ್ಯವೂ ಇಲ್ಲ, ಕೊನೆಪಕ್ಷ ನನ್ನ ಕಪಾಳಕ್ಕಾದರೂ ಬಾರಿಸು. ನಿನಗೀಗ ಒಂದು ಕೈ ಚಪ್ಪಾಳೆಯ ಸದ್ದು ಕೇಳಿಸಿದೆ. ಆದರೆ ನಿನಗೆ ಹಾಗೆ ಹೇಳುವುದು ಸಾಧ್ಯವಿಲ್ಲ. ನಾನು ನಿನ್ನ ಕಪಾಳಕ್ಕೆ ಬೇಕಾದಷ್ಟು ಬಾರಿ ಹೊಡೆದಿರುವೆ. ಈಗ ಕನಿಷ್ಟ ಒಂದು ಬಾರಿಯಾದರೂ ನೀನು ನನ್ನ ಕಪಾಳಕ್ಕೆ ಹೊಡೆಯಲೇ ಬೇಕು.” ಮಾಸ್ಟರ್ ಗದ್ಗದಿತನಾದ.

ಕೆಲವೊಂದು ಅನುಭವಗಳು ಅನುಭವಗಳಾಗಿಯೇ ಉಳಿದುಕೊಳ್ಳುತ್ತವೆ, ಅವುಗಳನ್ನು ಅಭಿವ್ಯಕ್ತಿಸುವುದು ಸಾಧ್ಯವಿಲ್ಲ. ಮತ್ತು ಅವುಗಳಿಗೆ ಅಭಿವ್ಯಕ್ತಿ ನೀಡುವ ಪ್ರಯತ್ನವನ್ನು ಕೂಡ ಯಾರೂ ಮಾಡಬಾರದು, ಇಂಥ ಪ್ರಯತ್ನಗಳು ಸಾಧ್ಯವೂ ಆಗುವುದಿಲ್ಲ. ಆದರೆ ಇಂಥ ಅಲೌಕಿಕ ಅನುಭವವನ್ನು ಹಂಚಿಕೊಳ್ಳುವ ಬಯಕೆಯಂತೂ ಮನುಷ್ಯರಲ್ಲಿ ಇದ್ದೇ ಇರುತ್ತದೆ. ಇದು ಅನುಭಾವ, ಇದರ ಆನಂದವನ್ನು ಯಾರೂ ತಮ್ಮೊಳಗೇ ಇಟ್ಟುಕೊಳುವುದು ಸಾಧ್ಯವಿಲ್ಲ. ಹೂವುಗಳು ಹುಟ್ಟುವ ಕಾರಣವೂ ಇದೆ, ಸಂಗೀತ ಹುಟ್ಟುವ ಕಾರಣವೂ ಇದೇ, ಕವಿತೆ ಹುಟ್ಟುವುದಕ್ಕೂ ಬೇರೆ ಕಾರಣವಿಲ್ಲ. ಇದು ಬರೀ ಬೆಳಗಲ್ಲೋ ಅಣ್ಣಾ, ಶಾಂತಿರಸವೇ ಮೈದೋರಿತಣ್ಣ.

Leave a Reply