ಭಗವದ್ಗೀತೆಯಲ್ಲಿ ಇರುವುದೇನು?

ಭಗವದ್ಗೀತೆಯ ಯಾವ ಅಧ್ಯಾಯದಲ್ಲಿ ಏನಿದೆ ಅನ್ನುವುದರ ಸಾರಾಂಶ, ಪ್ರತಿನಿತ್ಯ ಚುಟುಕಾಗಿ ಇದೇ ಅಂಕಣದಲ್ಲಿ ನೋಡೋಣ...

ಗೀತೆ ಕೇವಲ ಒಂದು ಸಮುದಾಯ ಅಥವಾ ಸಂಸ್ಕೃತಿಗೆ ಸಂಬಂಧಿಸಿದ್ದಲ್ಲ. ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ. ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಷ್ಟೆ ಅಲ್ಲ. ಅದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ಮಹಾಭಾರತ ಐತಿಹಾಸಿಕ, ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮೂರು ಬಗೆಯಿಂದ ತೆರೆದುಕೊಳ್ಳುತ್ತದೆ. ಭಗವದ್ಗೀತೆಯಲ್ಲಿ ನಾವು ಹೆಚ್ಚು ಆಸ್ಥೆಯಿಂದ ಗಮನಿಸಬೇಕಾದ್ದು ಅದರ ಇತಿಹಾಸವನ್ನಲ್ಲ; ಮನಃಶಾಸ್ತ್ರ ಮತ್ತು ಅಧ್ಯಾತ್ಮವನ್ನು.

ಭಗವದ್ಗೀತೆ ಹೇಳಲ್ಪಟ್ಟ ಸಂದರ್ಭ ನಾವು ಪ್ರತಿ ದಿನವೂ ಎದುರಿಸುತ್ತ ಇರುವಂಥದ್ದೇ ಆಗಿದೆ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಹಾಗೆ ಆಗಗೊಡದೆ, ನಮ್ಮೊಳಗೂ ಒಳಿತನ್ನೇ ಗೆಲ್ಲಿಸಲು ಕೆಲವು ಸೂತ್ರಗಳನ್ನು ಅನುಸರಿಸಬೇಕು. ಈ ನಿಟ್ಟಿನಲ್ಲಿ ಅಗತ್ಯವಾದ ಸಂದೇಶ ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು ಕೃಷ್ಣನು ಭಗವದ್ಗೀತೆಯಲ್ಲಿ ಕಟ್ಟಿಕೊಡುತ್ತಾನೆ.

ಭಗವದ್ಗೀತೆಯ ಯಾವ ಅಧ್ಯಾಯದಲ್ಲಿ ಏನಿದೆ ಅನ್ನುವುದರ ಸಾರಾಂಶ, ಪ್ರತಿನಿತ್ಯ ಚುಟುಕಾಗಿ ಇದೇ ಅಂಕಣದಲ್ಲಿ ನೋಡೋಣ.

ಮೊದಲನೆ ಅಧ್ಯಾಯ

ಭಗವದ್ಗೀತೆಯ ಮೊದಲನೆ ಅಧ್ಯಾಯದಲ್ಲಿ ಧೃತರಾಷ್ಟ್ರನಿಗೆ ಸಂಜಯನು ಕುರುಕ್ಷೇತ್ರದ ಸನ್ನಿವೇಶವನ್ನು ವಿವರಿಸುತ್ತಾನೆ. ಅನಂತರದಲ್ಲಿ ಅರ್ಜುನನ ಅಳಲು ಆರಂಭವಾಗುತ್ತದೆ.

ಧೃತರಾಷ್ಟ್ರನು ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನನ್ನವರು ಮತ್ತು ಪಾಂಡಡವರು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸುವ ಮೂಲಕ ಗೀತೆ ಆರಂಭವಾಗುತ್ತದೆ. ನಮ್ಮ ಹೃದಯವೇ ಧರ್ಮಕ್ಷೇತ್ರ. ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ ಮಾಡುವ ಮನಸ್ಸು ಕುರುಕ್ಷೇತ್ರ. ಮನಸ್ಸಿನ ಸಂಘರ್ಷಣೆಯೇ ಭಾರತ ಯುದ್ಧ. ಆದ್ದರಿಂದ ಈ ಪ್ರಶ್ನೆ ನಮ್ಮೆಲ್ಲರ ಜೀವನದ ಪ್ರಶ್ನೆಯೂ ಹೌದು.

ಈ ಅಧ್ಯಾಯದ ನಡುವಲ್ಲಿ ಅರ್ಜುನನ ವಿಷಾದ ಪ್ರಲಾಪ ಆರಂಭವಾಗುತ್ತದೆ. ರಣಾಂಗಣಕ್ಕೆ ಕಾಲಿಡುವಾಗಲೇ ಅರ್ಜುನ ಅತೀವ ವಿಶ್ವಾಸದಲ್ಲಿರುತ್ತಾನೆ. ಸಾರಥ್ಯ ವಹಿಸಿದ್ದ ಕೃಷ್ಣನನ್ನು ಕೇವಲ ಸಾರಥಿಯಂತೆಯೇ ನಡೆಸಿಕೊಳ್ಳುತ್ತ, “ಎರಡು ಸೇನೆಗಳ ನಡುವೆ ನನ್ನ ರಥವನ್ನು ನಿಲ್ಲಿಸು” ಎಂದು ಆದೇಶಿಸುತ್ತಾನೆ. ಇಲ್ಲಿ ಆತನ ಅಹಂಕಾರವು ಸ್ಪಷ್ಟವಾಗಿ ತೋರುತ್ತದೆ. ಮುಮದೆ ಶತ್ರು ಪಾಳಯದಲ್ಲಿ ತನ್ನ ಪ್ರೀತಿಪಾತ್ರರನ್ನು ಕಂಡು ಇವರೊಂದಿಗೆ ಕಾದಾಡಬೇಕಲ್ಲ ಎಂದು ನೊಂದುಕೊಳ್ಳುವಾಗಲೂ ಆತನಲ್ಲಿ ಇರುವುದು ಅಹಂಕಾರವೇ. ಮೊದಲು ನಾನು ಅನ್ನುವ ಅಹಂಕಾರ, ಅನಂತರ ನನ್ನದು ಅನ್ನುವ ಅಹಂಕಾರ. ಹೀಗೆ ನೊಂದುಕೊಳ್ಳುತ್ತ ನಾನು ಯುದ್ಧ ಮಾಡುವುದಿಲ್ಲ ಎಂದು ಕೃಷ್ಣನೆದುರು ಘೋಷಿಸಿ ಕೈಚೆಲ್ಲಿ ಕುಳಿತುಕೊಳ್ಳುತ್ತಾನೆ ಅರ್ಜುನ. ತನ್ನ ಈ ನಿರ್ಧಾರ ಪ್ರಕಟಿಸುವ ವೇಳೆಗೆ ಅರ್ಜುನ ವಿನೀತನಾಗಿ, ಕೃಷ್ಣನಲ್ಲಿ ಶರಣಾಗತನಾಗಿರುತ್ತಾನೆ. ಅಲ್ಪಕಾಲಾವಧಿಯಲ್ಲಿ ವ್ಯಕ್ತಿಯೊಬ್ಬನ ಭಾವ ಪಲ್ಲಟಗಳನ್ನು ಈ ಅಧ್ಯಾಯದಲ್ಲಿ ನಾವು ಕಾಣಬಹುದು. ಚಾಂಚಲ್ಯ, ಧೃಢ ನಿರ್ಧಾರದ ಕೊರತೆ, ಅತಿ ವಿಶ್ವಾಸ. ಮಮಕಾರ ಮತ್ತು ದೌರ್ಬಲ್ಯಗಳು ಇಲ್ಲಿ ಚಿತ್ರಿತವಾಗಿವೆ. 

1 Comment

Leave a Reply