ಮಹಾ ವಾಗ್ದಾನ, ಅದರ ವೈಫಲ್ಯತೆ ಮತ್ತು ಹೊಸ ಪರ್ಯಾಯಗಳು : To have or To be #1

ಅನಿಯಮಿತ ಪ್ರಗತಿಯ ಮಹಾ ವಾಗ್ದಾನದ ಭವ್ಯತೆ ಮತ್ತು ಕೈಗಾರಿಕಾ ಯುಗದ ಅದ್ಭುತ ಭೌತಿಕ ಮತ್ತು ಬೌದ್ಧಿಕ ಸಾಧನೆಗಳನ್ನ ನಾವು ಇಂದು, ಇದರ ವೈಫಲ್ಯ ಉಂಟುಮಾಡಿರುವ ಆಘಾತವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಸ್ಪಷ್ಟವಾಗಿ ಗುರುತಿಸಿಕೊಳ್ಳಬೇಕು. ಕೈಗಾರಿಕಾ ಯುಗ ತನ್ನ ಮಹಾ ವಾಗ್ದಾನಗಳನ್ನು ಈಡೇರಿಸುವಲ್ಲಿ ಖಂಡಿತವಾಗಿ ವಿಫಲವಾಗಿದೆ ಮತ್ತು, “ಎಲ್ಲ ಬಯಕೆಗಳ ಅನಿಯಂತ್ರಿತ ತೃಪ್ತಿ ತಮ್ಮ ಆರೋಗ್ಯಪೂರ್ಣ ಬದುಕಿಗೆ ಪೂರಕವಲ್ಲ, ಮತ್ತು ಈ ರೀತಿಯ ದಾರಿ ಸುಖದ ಮತ್ತು ಪರಮ ಆನಂದದ ಮಾರ್ಗವಲ್ಲ” ಅನ್ನುವ ಅರಿವು ಸಾಕಷ್ಟು ಜನರಲ್ಲಿ ಮೂಡಿದೆ… । ಎರಿಕ್ ಫ್ರಾಂ; ಕನ್ನಡಕ್ಕೆ: ಚಿದಂಬರ ನರೇಂದ್ರ

ಭ್ರಮೆಯ ಕೊನೆ ( The end of an illusion )

ಅನಿಯಮಿತ ಪ್ರಗತಿಯ ಮಹಾ ವಾಗ್ದಾನ – ಪ್ರಕೃತಿಯ ಪ್ರಾಬಲ್ಯದ, ವಸ್ತು ವಿಶೇಷಗಳ ಸಮೃದ್ಧಿಯ, ಸಾಕಷ್ಟು ಸಂಖ್ಯೆಗೆ ಪರಮ ಖುಶಿಯನ್ನು ಒದಗಿಸುವ ಕುರಿತಾದ, ಮತ್ತು ಯಾವ ಅಡತಡೆಯೂ ಇಲ್ಲದಂಥ ವೈಯಕ್ತಿಕ ಸ್ವಾತಂತ್ರ್ಯದ ಭರವಸೆ, ಕೈಗಾರಿಕಾ ಯುಗದ ಆರಂಭ ಕಾಲದಿಂದಲೂ ಹಲವಾರು ಪೀಳಿಗೆಯ ನಿರೀಕ್ಷೆ ಮತ್ತು ನಂಬಿಕೆಗೆ ಕಾರಣವಾಗಿದೆ. ನಮ್ಮ ನಾಗರೀಕತೆ ಶುರುವಾಗಿದ್ದು ಮಾನವ ಜನಾಂಗ ಪ್ರಕೃತಿಯನ್ನು ಕ್ರಿಯಾತ್ಮಕವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆರಂಭ ಮಾಡಿದಮೇಲೆ; ಆದರೆ ಆ ನಿಯಂತ್ರಣ ಕೈಗಾರಿಕಾ ಯುಗದ ಆಗಮನದವರೆಗೂ ಕೇವಲ ಸೀಮಿತ ಹತೋಟಿಯ ಸ್ವರೂಪದ್ದಾಗಿತ್ತು. ಕೈಗಾರಿಕಾ ಪ್ರಗತಿ ವಿಕಾಸಗೊಂಡಂತೆಲ್ಲ, ಮೊದಲು ಯಾಂತ್ರಿಕ ಶಕ್ತಿ ನಂತರ ಪರಮಾಣು ಶಕ್ತಿ, ಪ್ರಾಣಿ ಶಕ್ತಿ ಮತ್ತು ಮಾನವ ಶಕ್ತಿಯನ್ನೂ ಹಾಗು ಕಂಪ್ಯೂಟರ್, ಮನುಷ್ಯರ ಬುದ್ಧಿಶಕ್ತಿಯ ಜಾಗವನ್ನು ಆಕ್ರಮಿಸಿಕೊಂಡಿದ್ದು, ಅನಿಯಮಿತ (unlimited) ಉತ್ಪಾದನೆಯ ಮಾರ್ಗದಲ್ಲಿ ಮತ್ತು ಹಾಗಾಗಿ ಅನಿಯಮಿತ ಬಳಕೆಯ ದಾರಿಯಲ್ಲೂ ನಾವು ಮುಂದುವರೆದಿರುವ ಭಾವನೆಯನ್ನು ನಮ್ಮಲ್ಲಿ ಹುಟ್ಟಿಸಿದೆ; ಈ ಒಂದು ಭಾವ ನಮ್ಮನ್ನು ಸರ್ವಶಕ್ತರೆಂದೂ ಮತ್ತು ವಿಜ್ಞಾನ ನಮ್ಮನ್ನು ಸರ್ವಜ್ಞರನ್ನಾಗಿಸಿದೆ ಎಂದೂ ಒಪ್ಪಿಸಿದೆ. ನಾವು ದೇವರಾಗುವ ದಿಕ್ಕಿನಲ್ಲಿ ಮುಂದುವರೆದಿದ್ದೆವು, ಸುತ್ತಲಿನ ಸಹಜ ನಿಸರ್ಗವನ್ನು ಕಟ್ಟುವ ಸಲಕರಣೆಗಳಂತೆ (building blocks) ಬಳಸುತ್ತ ಇನ್ನೊಂದು ಹೊಸ ಜಗತ್ತನ್ನು ಸೃಷ್ಟಿ ಮಾಡುವ ದಾರಿಯಲ್ಲಿ ನಾವು ಧಾವಿಸುತ್ತಿದ್ದೆವು.

ಗಂಡಸರು ಮತ್ತು ಹೆಚ್ಚು ಹೆಚ್ಚು ಹೆಂಗಸರು ಕೂಡ ಸ್ವಾತಂತ್ರ್ಯದ ಹೊಸ ಭಾವವೊಂದನ್ನ ಅನುಭವಿಸುತ್ತಿದ್ದಾರೆ; ಅವರು ತಮ್ಮ ತಮ್ಮ ಬದುಕಿನ ಮಾಸ್ಟರ್ ಗಳಾಗಿದ್ದಾರೆ: ಬಲವಂತದ-ಹತೋಟಿಯ (feudal) ಸರಪಳಿಗಳು ಕಳಚಿಕೊಂಡಿವೆ, ತಮ್ಮನ್ನು ಕಟ್ಟಿ ಹಾಕಿದ್ದ ಎಲ್ಲ ಬಂಧಗಳಿಂದ ಬಿಡಿಸಿಕೊಂಡು ಜನ, ತಾವು ಬಯಸಿದಂತೆ ಬದುಕುತ್ತಿದ್ದಾರೆ. ಅಥವಾ ಹಾಗೆಂದು ಅವರು ತಿಳಿದುಕೊಂಡಿದ್ದಾರೆ. ಇದು ಕೇವಲ ಮದ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದ ವಿಷಯದಲ್ಲಿ ನಿಜವಾದರೂ, ಕೈಗಾರಿಕರಣದ ವೇಗ ಇದೇ ರೀತಿಯಲ್ಲಿ ಮುಂದುವರೆದಿದ್ದಾರೆ, ಅವರ ಸಾಧನೆಗಳು ಕೊನೆಗೆ ಸಮಾಜದ ಎಲ್ಲ ವರ್ಗಗಳಿಗೂ ಹೊಸ ಸ್ವತಂತ್ರ್ಯವನ್ನು ಸಾಧ್ಯಮಾಡುತ್ತವೆ ಎನ್ನುವ ವಿಶ್ವಾಸವನ್ನ ಬಾಕಿ ಎಲ್ಲರಲ್ಲೂ ಮೂಡಿಸಿವೆ. ಸಮಾಜವಾದ ಮತ್ತು ಕಮ್ಯೂನಿಸಂ, ಯಾವ ಚಳುವಳಿಗಳ ಮೂಲ ಉದ್ದೇಶ ಹೊಸ ಸಮಾಜವನ್ನ, ಹೊಸ ಮನುಷ್ಯರನ್ನ ರೂಪಿಸುವುದಾಗಿತ್ತೋ ಅವು ಬಹು ಬೇಗನೇ ಎಲ್ಲರಿಗೂ ಬೂರ್ಜ್ವಾ ( ತಮ್ಮ ಸಂಪ್ರದಾಯ, ಮೌಲ್ಯಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿರುವ ಅಥವಾ, ಹಣ ಮತ್ತು ಅಧಿಕಾರ ಹೊಂದುವಲ್ಲಿ ತೀವ್ರವಾಗಿ ಆಸಕ್ತರಾಗಿರುವ ಬಹುತೇಕ ಮಧ್ಯಮ ವರ್ಗದ ಜನ) ಬದುಕೊಂದನ್ನ, ಹಾಗು ಭವಿಷ್ಯದ ಸರ್ವ ಸಾಧಾರಣ ಬೂರ್ಜಾ ಗಂಡು ಹೆಣ್ಣುಗಳನ್ನ ರೂಪಿಸುವ ಚಳುವಳಿಗಳಂತೆ ಮಾರ್ಪಾಡುಗೊಂಡವು. ಜನರ ಸುಖ, ಸಂಪತ್ತು, ಸಮಾಧಾನಗಳ ಸಾಧನೆ, ಎಲ್ಲರಿಗೂ ಅನಿಯಂತ್ರಿತ ಸ್ವಾತಂತ್ರ್ಯವನ್ನ ಸಾಧ್ಯ ಮಾಡಬೇಕಿತ್ತು. ಅನಿಯಮಿತ ಉತ್ಪಾದನೆ, ಸಂಪೂರ್ಣ ಸ್ವಾತಂತ್ರ್ಯ ಮತ್ತು ಅಸೀಮ ಸುಖಗಳ ತ್ರಿವಳಿ ಕೂಟ, ಹೊಸ ಮನುಷ್ಯ ಧರ್ಮದ ಕೇಂದ್ರವಾಗಿ (nucleus) ಸ್ಥಾಪಿತವಾದವು, ಪ್ರಗತಿ ಮತ್ತು ಹೊಸ ಐಹಿಕ ನಗರಗಳ ( Earthly city) ವಿಕಾಸ, ಭಗವಂತನ ನಾಡನ್ನು ( City of God) ರಿಪ್ಲೇಸ್ ಮಾಡಬೇಕಿತ್ತು. ಈ ಹೊಸ ಧರ್ಮ ತನ್ನಲ್ಲಿ ನಂಬಿಕೆ ಹೊಂದಿದವರಿಗಾಗಿ ಸಾಮರ್ಥ್ಯ, ಜೀವಶಕ್ತಿ ಮತ್ತು ಭರವಸೆಯನ್ನು ಮೂಡಿಸಿದ್ದು ಅಂಥ ಆಶ್ಚರ್ಯದ ಸಂಗತಿಯೇನಲ್ಲ.

ಈ ಮಹಾ ವಾಗ್ದಾನದ ಭವ್ಯತೆ ಮತ್ತು ಕೈಗಾರಿಕಾ ಯುಗದ ಅದ್ಭುತ ಭೌತಿಕ ಮತ್ತು ಬೌದ್ಧಿಕ ಸಾಧನೆಗಳನ್ನ ನಾವು ಇಂದು, ಇದರ ವೈಫಲ್ಯ ಉಂಟುಮಾಡಿರುವ ಆಘಾತವನ್ನು ಅರ್ಥಮಾಡಿಕೊಳ್ಳಲಿಕ್ಕೆ ಸ್ಪಷ್ಟವಾಗಿ ಗುರುತಿಸಿಕೊಳ್ಳಬೇಕು. ಕೈಗಾರಿಕಾ ಯುಗ ತನ್ನ ಮಹಾ ವಾಗ್ದಾನಗಳನ್ನು ಈಡೇರಿಸುವಲ್ಲಿ ಖಂಡಿತವಾಗಿ ವಿಫಲವಾಗಿದೆ ಮತ್ತು ಹೆಚ್ಚು ಹೆಚ್ಚು ಜನರು ಕೆಳಗಿನ ಈ ಕೆಲವು ಸಂಗತಿಗಳ ಬಗ್ಗೆ ಅರಿವು ಹೊಂದತೊಡಗಿದ್ದಾರೆ :

  • ಎಲ್ಲ ಬಯಕೆಗಳ ಅನಿಯಂತ್ರಿತ ತೃಪ್ತಿ ತಮ್ಮ ಆರೋಗ್ಯಪೂರ್ಣ ಬದುಕಿಗೆ ಪೂರಕವಲ್ಲ, ಮತ್ತು ಈ ರೀತಿಯ ದಾರಿ ಸುಖದ ಮತ್ತು ಪರಮ ಆನಂದದ ಮಾರ್ಗವಲ್ಲ.
  • ನಾವು ಅಧಿಕಾರಶಾಹಿ ಯಂತ್ರದ ಪುಟ್ಟ
    ಪುಟ್ಟ ಭಾಗಗಳು ಮಾತ್ರ, ನಮ್ಮ ವಿಚಾರಗಳು,
    ಆಲೋಚನೆಗಳು, ಭಾವನೆಗಳು, ಆಸಕ್ತಿಗಳು
    ಎಲ್ಲವನ್ನೂ ಸರ್ಕಾರ ಮತ್ತು ಕೈಗಾರಿಕೆಗಳು ಹಾಗು
    ಅವುಗಳ ಹತೋಟಿಯಲ್ಲಿರುವ ಸಮೂಹ
    ಮಾಧ್ಯಮಗಳು ಮ್ಯಾನಿಪುಲೇಟ್ ಮಾಡುತ್ತಿವೆ
    ಎನ್ನುವ ತಿಳುವಳಿಕೆ ಬಂದ ಮೇಲೆ, ನಮ್ಮ ನಮ್ಮ
    ಬದುಕಿನ ಸ್ವತಂತ್ರ ನಿರ್ಧಾರಕವಾಗುವ ನಮ್ಮ
    ಕನಸು ಕೊನೆಗೊಂಡಿದೆ.
  • ಆರ್ಥಿಕ ಪ್ರಗತಿ ಕೇವಲ ಶ್ರೀಮಂತ ದೇಶಗಳಿಗೆ
    ಮಾತ್ರ ಸೀಮಿತವಾಗಿದೆ ಮತ್ತು ಶ್ರೀಮಂತ ಹಾಗು
    ಬಡ ದೇಶಗಳ ನಡುವಿನ ಅಂತರ ಹೆಚ್ಚಾಗುತ್ತಲೇ
    ಇದೆ.
  • ತಾಂತ್ರಿಕ ಪ್ರಗತಿಯೇ ಪರಿಸರದ ನಾಶಕ್ಕೆ
    ಮತ್ತು ನ್ಯೂಕ್ಲಿಯರ್ ಯುದ್ಧದ ಅಪಾಯಕ್ಕೆ
    ಕಾರಣವಾಗತೊಡಗಿದೆ, ಇವುಗಳಲ್ಲಿ ಒಂದು
    ಅಥವಾ ಈ ಎರಡೂ ಸೇರಿ, ನಮ್ಮ ನಾಗರೀಕತೆಯ
    ಕೊನೆಗೆ ಹಾಗು ಬಹುತೇಕ ಎಲ್ಲ ಬದುಕಿನ
    ವಿನಾಶಕ್ಕೆ ಕಾರಣ ಆಗಲಿವೆ.

1952 ರಲ್ಲಿ ನೋಬೆಲ್ ಶಾಂತಿ ಪುರಸ್ಕಾರ ಸ್ವೀಕಾರ ಮಾಡಲಿಕ್ಕೆ ಓಸ್ಲೋ ಗೆ ಬಂದ Albert Schweitzer ಜಗತ್ತಿಗೆ ಸವಾಲು ಹಾಕಿದ, “ ಧೈರ್ಯದಿಂದ ಇಂಥದೊಂದು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಿ…….. ಮನುಷ್ಯ ಸೂಪರ್ ಮ್ಯಾನ್ ಆಗಿದ್ದಾನೆ…….. ಆದರೆ ಈ ಸೂಪರ್ ಮ್ಯಾನ್ ಗೆ ತನ್ನ ಅತಿಮಾನುಷ (superhuman) ಶಕ್ತಿ ಸಾಮರ್ಥ್ಯಗಳೊಂದಿಗೆ, ಅದಕ್ಕೆ ಸರಿಸಾಟಿಯಾದಂಥ ವಿವೇಕದ ಮಟ್ಟವನ್ನು ಮುಟ್ಟುವುದು ಸಾಧ್ಯವಾಗಿಲ್ಲ. ಅವನ ಸಾಮರ್ಥ್ಯದ ಮಟ್ಟ ಏರುತ್ತ ಹೋದಂತೆಲ್ಲ ಅವನು ಹೆಚ್ಚು ಹೆಚ್ಚು ಪಾಪದ ಮನುಷ್ಯನಾಗತೊಡಗಿದ್ದಾನೆ (poor man)…….. ನಾವು ಸೂಪರ್ ಮ್ಯಾನ್ ಗಳಾಗುತ್ತಿದ್ದಂತೆಯೇ ಹೆಚ್ಚು ಹೆಚ್ಚು ಅಮಾನುಷರಾಗುತ್ತಿರುವ ಇಂಥದೊಂದು ಪರಿಸ್ಥಿತಿ ನಮ್ಮ ಆತ್ಮಸಾಕ್ಷಿಯನ್ನು ಅಲ್ಲಾಡಿಸಬೇಕಿದೆ.”

(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )

1 Comment

Leave a Reply