ಎಲ್ಲವೂ ಭಗವಂತನೇ ಆಗಿರುವಾಗ ಮೇಲು ಕೀಳಿನ ದೋಷವೆಲ್ಲಿಯದು? : ರಾಮತೀರ್ಥರ ವಿಚಾರ ಧಾರೆ

ದುಃಖಿತರೂ ದರಿದ್ರರೂ ಧನಿಕರೂ ಆದ ಜನರಿಂದ ದೇವರು ಬೇರೆಯಾಗಿದ್ದರೆ ಈ ತೋರಿಕೆಯ ಭೇದವೂ ವಿರೋಧವೂ ದೇವರ ಮುಖದ ಮೇಲೆ ದೋಷವೂ ದೂಷಣೆಯೂ ಕಳಂಕವೂ ಆಗಬಹುದಾಗಿತ್ತು ; ಆದರೆ ಆ ಎಲ್ಲರೂ ದೇವರೇ ಆಗಿದ್ದಾನೆ, ಆದ್ದರಿಂದ ಅವನಿಗೆ ಯಾವ ದೋಷವೂ ಇಲ್ಲ ಎಂದು ವೇದಾಂತವು ಹೇಳುತ್ತದೆ... । ಸ್ವಾಮಿ ರಾಮತೀರ್ಥ; ಕನ್ನಡಕ್ಕೆ: ಶ್ರೀ ಮೂರ್ತಿ (ಪರಮಾತ್ಮಾನುಭವದ ಮಹಾರಣ್ಯಗಳಲ್ಲಿ ಕೃತಿಯಿಂದ…)

ನಾನು ಹೇಳುವುದು, ಉಪದೇಶಿಸುವುದು ಐಕ್ಯವನ್ನು, ಏಕತೆಯನ್ನು, ಅಖಂಡತೆಯನ್ನು… ಆ ದೃಷ್ಟಿಯಿಂದಲೇ ನಿಲುಮೆಯಿಂದಲೇ ತೋರಿಕೆಯ ಭೇದಗಳಿಗೆ ಸಮಾಧಾನ ಕೊಡುತ್ತೇನೆ.

ಉದಾಹರಣೆಗಾಗಿ, ಕ್ರೂರಿಯೂ ಪ್ರಜಾಪೀಡಿತನೂ ಆದ ಒಬ್ಬ ನಿರಂಕುಶ ರಾಜನಿದ್ದಾನೆಂದು ಇಟ್ಟುಕೊಳ್ಳೋಣ. ಅವನು ದೇವರ ಸ್ಥಾನದಲ್ಲಿದ್ದಾನೆಂದೂ ಭಾವಿ ಸೋಣ. ಅವನು ತನ್ನಿಂದ ಬೇರೆಯಾದ ಐದು ಜನರನ್ನು ಸೃಷ್ಟಿಮಾಡಿ, ಅವರನ್ನು ತನಗಿಂತಲೂ ದುರ್ಬಲರನ್ನಾಗಿಯೂ ತನ್ನ ದಾಸರನ್ನಾಗಿಯೂ ಮಾಡಿಕೊಂಡು ಅವರಲ್ಲಿ ಒಬ್ಬನನ್ನು ಕಾರಾಗೃಹದಲ್ಲಿಯೂ ಎರಡನೆಯವನನ್ನು ಸುಂದರವಾದ ನಂದನವನದಲ್ಲಿಯೂ ಮೂರನೆಯವನನ್ನು ಒಂದು ಭವ್ಯವಾದ ಅರಮನೆಯಲ್ಲಿಯೂ ನಾಲ್ಕನೆಯವನನ್ನು ವಸ್ತ್ರಾಲಂಕಾರಗಳ ಕೋಣೆಯಲ್ಲಿಯೂ ಐದನೆಯವನ ಎದೆಯ ಮೇಲೆ ಹಿಮಾಲಯಭಾರವನ್ನೂ ಇಟ್ಟರೆ, ಅಂಥಾ ಪ್ರಭುವು ಎಂಥವನು ಎನ್ನುತ್ತೀರಿ? ಅವನು ನಿಶ್ಚಯವಾಗಿ ಕ್ರೂರಿಯೂ ಕಠೋರ ಸ್ವಭಾವದವನೂ ಆದ ಪ್ರಭು. ಪರಮ ಅನ್ಯಾಯ-ದೌರ್ಜನ್ಯಗಳ ದೈತ್ಯನೇ ಸರಿ.

ಸೃಷ್ಟಿಕರ್ತನೆನಿಸಿಕೊಂಡಿರುವ ದೇವರು ಅವನು ಸೃಷ್ಟಿಮಾಡಿರುವ ಪ್ರಾಣಿಗಳಿಗಿಂತಲೂ ಪ್ರಪಂಚಕ್ಕಿಂತಲೂ ಬೇರೆಯಿದ್ದು, ಒಂದು ದೇಶವನ್ನು ಬಹಳ ಸುಖಿಯಾಗಿಯೂ ಇನ್ನೊಂದನ್ನು ಬಹಳ ದುಃಖಿಯಾಗಿಯೂ ದೀನಹೀನವಾಗಿಯೂ ಒಬ್ಬ ಮಷ್ಕನನ್ನು ಧನಿಕನನ್ನಾಗಿಯೂ ಇನ್ನೂಬ್ಬನನ್ನು ದರಿದ್ರನನ್ನಾಗಿಯೂ ಮಾಡಿದ್ದರೆ ಬಹಳ ಕ್ರೂರಿಯೆಂದೂ ಅನ್ಯಾಯದವನೆಂದೂ ಹೇಳಬಹುದಾಗಿತ್ತು. ದೇವರು ಮನುಷ್ಯನಿಂದ ಬೇರೆಯವನೆಂದು ತಿಳಿದಿರುವ ಜನರು ಈ ಪ್ರಶ್ನೆಗೆ ಉತ್ತರ ಕೊಡಬೇಕು.

ದೇವರು ಎಲ್ಲಿಯೋ ದೂರವಿದ್ದಾನೆಂದು ವೇದಾಂತವು ಹೇಳುವುದಿಲ್ಲ “ನಿಮ್ಮ ಕಣ್ಣಗಳನ್ನು ಮುಚ್ಚಿಕೊಂಡು ನಿಮ್ಮೊಳಗೇ ಅವನನ್ನು ನೋಡಿ” ಎಂದು ವೇದಾಂತವು ಹೇಳುತ್ತದೆ. ಈಗ ನೋಡಿ, ಹೀಗೆ ಯೋಚನೆಮಾಡಿ. ಇಲ್ಲಿ ಒಬ್ಬ ರಾಜನಿದ್ದಾನೆ. ಅವನು ತನ್ನ ತೋಟದೊಳಗೆ ಒಮ್ಮೆ ಹೋಗುತ್ತಾನೆ, ಇನ್ನೊಂದು ಸಮಯದಲ್ಲಿ ತನ್ನ ಅರಮನೆಯೊಳೆಗೆ ಹೋಗುತ್ತಾನೆ, ಮತ್ತೊಂದು ಕಾಲದಲ್ಲಿ ಅವನ ಮನೆಯ ಕತ್ತಲು ಗವಿಯಲ್ಲಿ ಹೋಗುತ್ತಾನೆ, ಒಮ್ಮೆ ತಾನೇ ಭಾರವಾದ ಹೊರೆಯನ್ನು ಹೊತ್ತುಕೊಳ್ಳುತ್ತಾನೆ ; ವೇಷಭೂಷಣಗಳ ಕೋಣೆಯೊಳಗೂ ಹೋಗುತ್ತಾನೆ. ಇಂಥವನ ವರ್ತನೆಯು ಅನ್ಯಾಯವಾಗಬಹುದೆ? ಎಂದಿಗೂ ಇಲ್ಲ. ಆ ಬೇರೆ ಬೇರೆ ಸ್ಥಳಗಳಲ್ಲಿದ್ಡವರು ಅವನಿಂದ ಬೇರೆಯಾಗಿದ್ದರೆ, ಅವನು ಅವರನ್ನು ಹಾಗೆ ಇಟ್ಟಿದ್ದರೆ ಅವನದು ಅನ್ಯಾಯವಾಗುತ್ತಿತ್ತು. ಅವನು ತಾನೇ ಸ್ವೇಚ್ಛೆಯಾಗಿ ಆ ಬೇರೆ ಬೇರೆ ಸ್ಥಳಗಳಲ್ಲಿರುವದರಿಂದ ಅದರಲ್ಲಿ ಅನ್ಯಾಯವೇನೂ ಇಲ್ಲ. ಎಲ್ಲಾ ಆಕ್ಷೇಪಣೆಯೂ ದೂಷಣೆಯೂ ಪರಿಹಾರವಾಗುತ್ತವೆ.

ದುಃಖಿತರೂ ದರಿದ್ರರೂ ಧನಿಕರೂ ಆದ ಜನರಿಂದ ದೇವರು ಬೇರೆಯಾಗಿದ್ದರೆ ಈ ತೋರಿಕೆಯ ಭೇದವೂ ವಿರೋಧವೂ ದೇವರ ಮುಖದ ಮೇಲೆ ದೋಷವೂ ದೂಷಣೆಯೂ ಕಳಂಕವೂ ಆಗಬಹುದಾಗಿತ್ತು ; ಆದರೆ ಆ ಎಲ್ಲರೂ ದೇವರೇ ಆಗಿದ್ದಾನೆ, ಆದ್ದರಿಂದ ಅವನಿಗೆ ಯಾವ ದೋಷವೂ ಇಲ್ಲ ಎಂದು ವೇದಾಂತವು ಹೇಳುತ್ತದೆ.

ಎಲ್ಲವೂ ರಾಮನೇ ಆಗಿದ್ದಾನೆ. ಒಂದು ಸ್ಥಳದಲ್ಲಿ ನಾನೇ ಐಶ್ಚರ್ಯವಂತನಾಗಿದ್ದೇನೆ; ನಾನೇ ಕಾರಾಗೃಹದಲ್ಲಿಯೂ ಇದ್ದೇನೆ. ಸುರೂಪಿಯೂ ನಾನೇ, ಕುರೂಪಿಯೂ ನಾನೆ, ಉದ್ಯಾನವನದಲ್ಲಿಯೂ ನಾನೇ ಸ್ಮಶಾನದಲ್ಲಿಯೂ ನಾನೇ. ಯಾರನ್ನು ಬೈಯುತ್ತೀರಿ? ಹಾಗೂ ಬೈದರೆ, ಆ ಬೈಯುವವನೂ ನಾನೇ. ವೇದಾಂತ ಹೇಳುವುದು ಇದನ್ನೇ.

Leave a Reply