ಹಾಡುವ ಯೋಗ : ಓಶೋ ವ್ಯಾಖ್ಯಾನ

ಆರ್ತವಾಗಿ ಹಾಡುತ್ತಲೇ ನಾನಕ್ ದೇವರನ್ನು ಸಾಕ್ಷಾತ್ಕರಿಸಿಕೊಂಡ. ನಾನಕ್ ನ ಹುಡುಕಾಟ ಬಹಳ ಅಪರೂಪದ್ದು. ಈ ದಾರಿಯಲ್ಲಿ ನಿಮಗೆ ಕಾಣುವುದು ಕೇವಲ ಅವನ ಹಾಡುಗಳು. ~ ಓಶೋ; ಕನ್ನಡಕ್ಕೆ : ಚಿದಂಬರ ನರೇಂದ್ರ

ಇಲ್ಲೊಂದು ಹುಳು
ದ್ರಾಕ್ಷಿಯ ಎಲೆಗಳನ್ನು ತಿನ್ನುವ ಚಟ.

ಅದೆನಾಯಿತೋ !
ಹುಳುವಿಗೆ ಎಚ್ಚರವಾಯಿತು.
ಬೆಡಗು ಎನ್ನಿ, ಅನುಗ್ರಹ ಎನ್ನಿ
ಯಾವುದೋ ಒಂದು
ಮಾಯೆ ಮುಟ್ಟಿ ಎಚ್ಚರಿಸಿತು ಎನ್ನಿ,
ಈಗ ಅದು ಹುಳುವಲ್ಲ,

ದ್ರಾಕ್ಷಿಯ ಹಣ್ಣು
ಇಡೀ ದ್ರಾಕ್ಷಿಯ ಬಳ್ಳಿ
ಸಮಸ್ತ ದ್ರಾಕ್ಷಿಯ ತೋಟ
ಉಕ್ಕಿ ಹರಿಯುತ್ತಿರುವ ಆನಂದ
ನಿಂತು ನೋಡುತ್ತಿರುವ ಅರಿವು

ಯಾವ ಹಸಿವೆ
ಯಾವ ಅವಸರವೂ ಇಲ್ಲ.

ಮನುಷ್ಯನಾಗುವುದು ಎಂದರೆ ಹೀಗೆ

~ ರೂಮಿ

ಅದು ಆಕಾಶದಲ್ಲಿ ಚಂದ್ರನಿರದ ಕಗ್ಗತ್ತಲ ರಾತ್ರಿ. ಮಳೆ ತುಂಬಿಕೊಂಡ ಮೋಡಗಳು ಖಾಲಿಯಾಗಲು ಕಾಯುತ್ತಿರುವ ಮಾನ್ಸೂನ್ ನ ಸಮಯ. ಧಿಡೀರ್ ನೇ ಸಿಡಿಲಿನ ಸದ್ದು, ಮಿಂಚು ಆಕಾಶವನ್ನು ಕತ್ತರಿಸಿದ ಚಿತ್ರ, ಮಳೆ ಹನಿಯಲಿಕ್ಕೆ ಶುರುವಾಯ್ತು. ಇಡೀ ಹಳ್ಳಿ ನಿದ್ದೆಯಲ್ಲಿತ್ತು. ಕೇವಲ ನಾನಕ್ ಮಾತ್ರ ಎಚ್ಚರವಾಗಿದ್ದ, ಅವನ ಹಾಡಿನ ಧ್ವನಿ ಹಳ್ಳಿಯ ತುಂಬ ಪ್ರತಿಧ್ವನಿಸುತ್ತಿತ್ತು.

ನಡುರಾತ್ರಿ ಕಳೆದು ಹೋದರೂ, ಮಗ ಇನ್ನೂ ನಿದ್ದೆಗೆ ಜಾರಿಲ್ಲ ಎಂದು ಅವನ ಅವ್ವನ ಕಾಳಜಿ. ನಾನಕ್ ಹಾಡುತ್ತ ಕುಳಿತಿದ್ದ, ಅವನ ಖೋಲಿಯಲ್ಲಿ ದೀಪ ಇನ್ನೂ ಸಣ್ಣಗೆ ಉರಿಯುತ್ತಿರುವುದನ್ನ ನೋಡಿದ ತಾಯಿ, “ ನಿದ್ದೆ ಮಾಡು ನಾನಕ್, ಇನ್ನೇನು ಬೆಳಗಾಗುವ ಸಮಯ “ ಎಂದು ಗದರಿಸಿದಳು. ನಾನಕ್ ಸುಮ್ಮನಾದ. ಕತ್ತಲೆಯೊಳಗಿಂದ ಹಕ್ಕಿಯೊಂದರ ಸದ್ದು ಅವನಿಗೆ ಕೇಳಿಸುತ್ತಿತ್ತು. ಮನೆಯ ಮುಂದಿನ ಮರದ ಮೇಲೆ ಕುಳಿತಿದ್ದ ಹಕ್ಕಿ “ ಪಿಯೂ ಪಿಯೂ ಪಿಯೂ ಪಿಯೂ “ ಎಂದು ಒಂದೇ ಸವನೇ ಕೂಗುತ್ತಿತ್ತು.

“ ಕೇಳಿದೆಯಾ ಅವ್ವ, ಆ ಹಕ್ಕಿ ತನ್ನ ಪ್ರೇಮಿಗಾಗಿ ಹೇಗೆ ಅಸರಂತ ಕೂಗುತ್ತಿದ್ದೆ ನೋಡು. ಅದರ ಪ್ರೇಮಿ ಬಹುಶಃ ಅಲ್ಲೇ ಎಲ್ಲೂ ಸುತ್ತಲಿನ ಮರದಲ್ಲಿರಬೇಕು. ಆದರೂ ಆ ಹಕ್ಕಿಯ ಚಡಪಡಿಕೆ ನೋಡು. ನನ್ನ ದೇವರು ಎಷ್ಟು ದೂರ ಇದ್ದಾನೋ, ಅವನನ್ನು ಮುಟ್ಟಲು ನಾನು ಹಾಡಲೇ ಬೇಕು , ಇನ್ನೂ ಜೋರಾಗಿ ಹಾಡಬೇಕು.” ಎನ್ನುತ್ತ ನಾನಕ್ ಮತ್ತೆ ಹಾಡಲು ಶುರು ಮಾಡಿದ.

ಹೀಗೆ ಆರ್ತವಾಗಿ ಹಾಡುತ್ತಲೇ ನಾನಕ್ ದೇವರನ್ನು ಸಾಕ್ಷಾತ್ಕರಿಸಿಕೊಂಡ. ನಾನಕ್ ನ ಹುಡುಕಾಟ ಬಹಳ ಅಪರೂಪದ್ದು. ಈ ದಾರಿಯಲ್ಲಿ ನಿಮಗೆ ಕಾಣುವುದು ಕೇವಲ ಅವನ ಹಾಡುಗಳು. ನಾನಕ್ ಯಾವ ವ್ರತ, ಯಾವ ತಪಸ್ಸುಗಳನ್ನೂ ಮಾಡಲಿಲ್ಲ, ಯಾವ ಯೋಗ, ಯಾವ ಧ್ಯಾನವನ್ನೂ ಮಾಡಲಿಲ್ಲ. ಅವನು ಕೇವಲ ಹಾಡುತ್ತಲೇ ಹೋದ. ಹಾಡುತ್ತಲೇ ಅವನು ದೇವರನ್ನು ಕಂಡುಕೊಂಡ. ಅವನು ತನ್ನ ಇಡಿ ಹೃದಯ, ಆತ್ಮ, ಅಸ್ತಿತ್ವ ಎಲ್ಲವನ್ನೂ ಒಂದಾಗಿಸಿಕೊಂಡು ಎಷ್ಟು ದೀನನಾಗಿ ಹಾಡುತ್ತಿದ್ದನೆಂದರೆ, ಆ ಹಾಡುವಿಕೆಯೇ ಅವನ ಧ್ಯಾನವಾಯಿತು. ಆ ಹಾಡುವಿಕೆಯೇ ಅವನ ಶುದ್ಧೀಕರಣ, ಅವನ ಯೋಗವಾಯ್ತು.

ಯಾವಾಗ ಮನುಷ್ಯ ತನ್ನ ಹೃದಯ, ಆತ್ಮವನ್ನು ಒಂದಾಗಿಸಿಕೊಂಡು ಯಾವುದೇ ಕ್ರಿಯೆಯಲ್ಲಿ ಭಾಗವಹಿಸುತ್ತಾನಾದರೆ, ಆ ಕ್ರಿಯೆ ಅವನ ಬಿಡುಗಡೆಯ ದಾರಿಯಾಗುತ್ತದೆ. ಅರ್ಧಮನಸ್ಸಿನಿಂದ ನೀವು ಯಾವ ಧ್ಯಾನವನ್ನು ಮಾಡಿದರೂ ಅದು ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ. ನೀವು ಮತ್ತಷ್ಟು ಆತಂಕಿತರಾಗುತ್ತೀರಿ, ಮತ್ತಷ್ಟು ಉದ್ವಿಗ್ನರಾಗುತ್ತೀರಿ. ಆದರೆ ಕೇವಲ ಒಂದು ಸರಳ ಹಾಡನ್ನು ನಿಮ್ಮ ಸಮಸ್ತ ಅಸ್ತಿತ್ವವನ್ನು ಒಂದಾಗಿಸಿಕೊಂಡು ಮೈದುಂಬಿ ಹಾಡುವಿರಾದರೆ, ಅಥವಾ ಮೈ ಮನಸ್ಸುಗಳನ್ನೆಲ್ಲ ಒಂದಾಗಿಸಿಕೊಂಡು ಕುಣಿಯುವಿರಾದರೆ, ನಿಮಗೆ ಭಗವಂತನ ದಾರಿ ತೆರೆದುಕೊಳ್ಳುತ್ತದೆ. ಪ್ರಶ್ನೆ ನೀವು ಏನು ಮಾಡುತ್ತೀರಿ ಎನ್ನುವುದಲ್ಲ, ಆ ಕ್ರಿಯೆಯಲ್ಲಿ ನೀವು ಎಷ್ಟು ಒಂದಾಗಿದ್ದೀರಿ ಎನ್ನುವುದು.

ಪರಮ ಸತ್ಯದ, ಭಗವಂತನ ಸಾಕ್ಷಾತ್ಕಾರದ ದಾರಿಯಲ್ಲಿ ನಾನಕ್ ನ ಪ್ರಯಾಣ ಹಾಡುಗಳಿಂದ ತುಂಬಿಕೊಂಡಿರುವಂಥದು, ಹೂವಿನ ಪರಿಮಳದಿಂದ ತುಂಬಿಕೊಂಡಿರುವಂಥದು. ಅವನು ತಾನು ಹೇಳಬೇಕಾದ್ದನ್ನೆಲ್ಲ ಸರಳ ಹಾಡುಗಳಲ್ಲಿ ಹೇಳಿದ್ದಾನೆ. ಅವನ ಭಕ್ತಿ, ಅವನ ತಾದಾತ್ಮ್ಯ ಆ ಹಾಡುಗಳನ್ನ ಮಂತ್ರಗಳನ್ನಾಗಿಸಿದೆ. ಹಾಗಾಗಿ ಅವನ ದಾರಿ ಮಾಧುರ್ಯ, ಮೃದುತ್ವ ಮತ್ತು ಅಮೃತದ ರುಚಿಯಿಂದ ಸಂಪನ್ನವಾಗಿರುವಂಥದು.

Leave a Reply