ಮನುಷ್ಯ ಸ್ವಭಾವದ ಆವರಣದಲ್ಲಿ, ತಾರ್ಕಿಕ ಸುಖ-ವಾದ ಮನುಷ್ಯರನ್ನು ಸುಖದ ಬದುಕಿನತ್ತ ಕರೆದೊಯ್ಯಲಾರದು ಮತ್ತು ಯಾಕೆ ಇದು ಅಸಾಧ್ಯ ಎನ್ನುವುದನ್ನ ಸೈದ್ಧಾಂತಿಕ ಪರಿಶೀಲನೆ ತೋರಿಸಿಕೊಡುತ್ತದೆ. ಆದರೆ ಇಂಥ ಆಳವಾದ ಸೈದ್ಧಾಂತಿಕ ವಿಶ್ಲೇಷಣೆಯ ಹೊರತಾಗಿಯೂ, ನಮ್ಮ ಕಣ್ಣಿಗೆ ಕಾಣುವ ವಿವರಗಳೇ ಸ್ಪಷ್ಟವಾಗಿ ನಾವು ಬಯಸುವ ರೀತಿಯ “ ಸುಖದ ಅನ್ವೇಷಣೆ” ಒಂದು ಆರೋಗ್ಯಪೂರ್ಣ ಬದುಕಿಗೆ ಪೂರಕವಾಗಿಲ್ಲ ಎನ್ನುವುದನ್ನ ಸಾರಿ ಹೇಳುತ್ತವೆ. ನಮ್ಮದು ಕುಖ್ಯಾತ ಅಸಂತೋಷಿ ಜನರ ಸಮಾಜ : ಆತಂಕಿತ, ಖಿನ್ನ, ವಿನಾಶಕಾರಿ, ಪರಾವಲಂಬಿ ಜನರಿಗೆ ಖುಶಿಯಾಗುತ್ತದೆ ನಾವು ಕಷ್ಟುಪಟ್ಟು ಉಳಿಸ ಬಯಸುವ ಸಮಯವನ್ನು ನಾವೇ ಪೋಲು ಮಾಡುವಾಗ ~ ಎರಿಕ್ ಫ್ರಾಂ; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ…. https://aralimara.com/2023/02/19/tohave/
ಹದಿನೆಂಟನೇಯ ಶತಮಾನದ ತರುವಾಯ, ಹಲವಾರು ನೈತಿಕ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನ ಮಾಡಲಾಯಿತು. ಅವುಗಳಲ್ಲಿ ಕೆಲವು ಸುಖ-ವಾದ ದ ಗೌರವಾನ್ವಿತ ರೂಪಗಳಾಗಿದ್ದವು, ಉದಾಹರಣೆಗೆ “ಉಪಯುಕ್ತತಾ ವಾದ” (Utilitarianism) ; ಬಾಕಿ ಉಳಿದವು ಸುಖ-ವಾದಕ್ಕೆ ಖಡಾಖಂಡಿತವಾಗಿ ವಿರುದ್ಧವಾಗಿರುವಂಥವು (anti hedonistic), ಇವುಗಳಲ್ಲಿ ಪ್ರಮುಖವಾಗಿ ಕ್ಯಾಂಟ್, ಮಾರ್ಕ್ಸ್, ಥೋರೋ ಮತ್ತು Schweitzer ರ ಸಿದ್ಧಾಂತಗಳನ್ನು ಹೆಸರಿಸಬಹುದು. ಆದರೂ ಸಮಕಾಲೀನ ಪರಿಸ್ಥಿತಿಯಲ್ಲಿ, ಬಹುತೇಕ ಮೊದಲನೇಯ ಮಹಾಯುದ್ಧದ ನಂತರದ ಕಾಲದಲ್ಲಿ, ತಾರ್ಕಿಕ ಸುಖವಾದದ ಸಿದ್ಧಾಂತವನ್ನೇ ಪ್ರ್ಯಾಕ್ಟೀಸ್ ಮಾಡಲಾಗುತ್ತಿದೆ. ಅನಿಯಮಿತ ಸುಖದ ಪರಿಕಲ್ಪನೆ, “ಶಿಸ್ತುಬದ್ಧ ಕೆಲಸದ ಆದರ್ಶ” ದ ( ideal of disciplined work) ಜೊತೆ ವಿಚಿತ್ರ ವಿರೋಧಾಭಾಸವನ್ನು ಹೊಂದಿದೆ, ಥೇಟ್ ನಾವು ಒಪ್ಪಿಕೊಂಡಿರುವ ಅತೀ ಕೆಲಸದ ಗೀಳು ಮತ್ತು ದಿನದ ಬಾಕಿ ಸಮಯದಲ್ಲಿ ಹಾಗು ರಜಾ ಕಾಲದಲ್ಲಿ ಸಂಪೂರ್ಣ ಸೋಮಾರಿತನಕ್ಕೆ ಶರಣಾಗುವ ತಾತ್ವಿಕತೆಯ ನಡುವಿನ ವಿರೋಧಾಭಾಸದಂತೆ. ಕೊನೆಯಿಲ್ಲದಂತೆ ತಿರುಗುತ್ತಲೇ ಇರುವ ಅಸೆಂಬ್ಲಿ ಲೈನ್ ನ ಬೆಲ್ಟ್ ಹಾಗು ಅಧಿಕಾರಶಾಹಿಯ ರೂಟೀನ್ ಒಂದು ಕಡೆ, ಮತ್ತು ಟೆಲಿವಿಜನ್ ಗಳು, ಅಟೋಮೋಬೈಲ್ ಗಳು ಹಾಗು ಸೆಕ್ಸ್ ಇನ್ನೊಂದು ಕಡೆ ಸೇರಿಕೊಂಡು ವೈರುಧ್ಯದ ಸಂಯೋಜನೆಯೊಂದನ್ನು ಸೃಷ್ಟಿಸಿವೆ. ಅತೀ ಕೆಲಸದ ಗೀಳು ಒಂದೇ, ಸಂಪೂರ್ಣ ಸೋಮಾರಿತನದಷ್ಟೇ ತೀವ್ರವಾಗಿ ಮನುಷ್ಯರನ್ನು ಉನ್ಮತ್ತರನ್ನಾಗಿಸುತ್ತದೆ. ಈ ವಿಚಿತ್ರ ಸಂಯೋಜನೆಯೊಂದಿಗೆ ಮನುಷ್ಯರು ಜೀವಿಸಬಲ್ಲರು. ಮತ್ತು ಈ ಎರಡೂ ವಿರೋಧಾಭಾಸದ ಮನೋಭಾವಗಳು ಆರ್ಥಿಕ ಬೆಳವಣಿಗೆಯ ಅವಶ್ಯಕತೆಗಳಿಗೆ ಪೂರಕ ಎನ್ನುವಂತೆ ಬಳಕೆಯಾಗುತ್ತವೆ : ಇಪ್ಪತ್ತನೇಯ ಶತಮಾನದ ಬಂಡವಾಳಶಾಹಿ ವ್ಯವಸ್ಥೆಯ ಆಧಾರ, ಅತೀ ಹೆಚ್ಚಿನ ವಸ್ತು ಮತ್ತು ಸೇವೆಗಳ ಬಳಕೆ ಮತ್ತು ರೂಟೀನ್ ಟೀಮ್ ವರ್ಕ್ ನ ಒಳಗೊಳ್ಳುವಿಕೆ.
ಮನುಷ್ಯ ಸ್ವಭಾವದ ಆವರಣದಲ್ಲಿ, ತಾರ್ಕಿಕ ಸುಖ-ವಾದ ಮನುಷ್ಯರನ್ನು ಸುಖದ ಬದುಕಿನತ್ತ ಕರೆದೊಯ್ಯಲಾರದು ಮತ್ತು ಯಾಕೆ ಇದು ಅಸಾಧ್ಯ ಎನ್ನುವುದನ್ನ ಸೈದ್ಧಾಂತಿಕ ಪರಿಶೀಲನೆ ತೋರಿಸಿಕೊಡುತ್ತದೆ. ಆದರೆ ಇಂಥ ಆಳವಾದ ಸೈದ್ಧಾಂತಿಕ ವಿಶ್ಲೇಷಣೆಯ ಹೊರತಾಗಿಯೂ, ನಮ್ಮ ಕಣ್ಣಿಗೆ ಕಾಣುವ ವಿವರಗಳೇ ಸ್ಪಷ್ಟವಾಗಿ ನಾವು ಬಯಸುವ ರೀತಿಯ “ ಸುಖದ ಅನ್ವೇಷಣೆ” ಒಂದು ಆರೋಗ್ಯಪೂರ್ಣ ಬದುಕಿಗೆ ಪೂರಕವಾಗಿಲ್ಲ ಎನ್ನುವುದನ್ನ ಸಾರಿ ಹೇಳುತ್ತವೆ. ನಮ್ಮದು ಕುಖ್ಯಾತ ಅಸಂತೋಷಿ ಜನರ ಸಮಾಜ : ಆತಂಕಿತ, ಖಿನ್ನ, ವಿನಾಶಕಾರಿ, ಪರಾವಲಂಬಿ ಜನರಿಗೆ ಖುಶಿಯಾಗುತ್ತದೆ ನಾವು ಕಷ್ಟುಪಟ್ಟು ಉಳಿಸ ಬಯಸುವ ಸಮಯವನ್ನು ನಾವೇ ಪೋಲು ಮಾಡುವಾಗ.
ನಮ್ಮದು, ಮಾನವ ಅಸ್ತಿತ್ವದ ಸಮಸ್ಯೆಗಳಿಗೆ, “ಸುಖ” ( ಆರೋಗ್ಯಪೂರ್ಣ ಬದುಕು ಮತ್ತು ಖುಶಿಗೆ ಕ್ರಿಯಾತ್ಮಕವಲ್ಲದ, ಬದಲಾಗಿ ನಿಷ್ಕ್ರೀಯ ಪರಿಣಾಮ ಸಾಧ್ಯ ಮಾಡುವ ) ಒಂದು ತೃಪ್ತಿದಾಯಕ ಉತ್ತರ ಒದಗಿಸಬಲ್ಲದೇ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವ, ಹಿಂದೆ ಯಾರೂ ಮಾಡಿರದಂಥ ಒಂದು ವಿಶಿಷ್ಟ ಸಾಮಾಜಿಕ ಪ್ರಯೋಗ. ಈ ಸುಖ ತೃಪ್ತಿಯ ಚಳುವಳಿ, ಇತಿಹಾಸದಲ್ಲಿ ಮೊದಲ ಬಾರಿಗೆ ಕೇವಲ ಮೈನಾರಿಟಿಗೆ ವಿಶೇಷ ಸವಲತ್ತಿನ (privilege) ವಿಷಯವಾಗಿರದೇ, ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಗೆ ಸಾಧ್ಯವಾಗುವಂಥ ಸಂಗತಿಯಾಗಿತ್ತು. ಈ ಪ್ರಯೋಗ ಈಗಾಗಲೇ ಸಮಸ್ಯೆಯ ಈ ರೀತಿಯ ಪರಿಹಾರಕ್ಕೆ ನಕಾರಾತ್ಮಕವಾಗಿ ಉತ್ತರಿಸಿದೆ.
ಕೈಗಾರಿಕಾ ಯುಗದ ಎರಡನೇಯ ಮನೋವೈಜ್ಞಾನಿಕ ಭೂಮಿಕೆ, ವೈಯಕ್ತಿಕ ಅಹಂಭಾವದ (individual egoism) ಅನ್ನೇಷಣೆ, ಸಮಾಧಾನ ಮತ್ತು ಸೌಹಾರ್ದಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಪ್ರತಿಯೊಬ್ಬರ ಕಲ್ಯಾಣದ ಬೆಳವಣಿಗೆಗೆ ಕಾರಣವಾಗುತ್ತದೆ ಎನ್ನುವುದು ಕೂಡ ಥಿಯಾರಿಟಿಕಲೀ ಅಷ್ಟೇ ತಪ್ಪು ಹಾಗು ನಮ್ಮ ಕಣ್ಣಿಗೆ ಕಾಣುವ ವಿವರಗಳೇ ಇದರ ಮಿಥ್ಯೆಯನ್ನ ಸಿದ್ಧ ಮಾಡಿ ತೋರಿಸುತ್ತವೆ. ಜಗತ್ತಿನ ಶ್ರೇಷ್ಠ ಶಾಸ್ತ್ರೀಯ ಅರ್ಥಶಾಸ್ತ್ರಜ್ಞ ಡೇವಿಡ್ ರಿಕಾರ್ಡೋ ಈ ತತ್ವವನ್ನು ತಿರಸ್ಕರಿಸಿದ್ದು ಎಷ್ಟು ಸರಿ? ಸರಿ ಏಕೆಂದರೆ ಅಹಂ ಹೊಂದುವುದು (egoist ಆಗುವುದು) ಕೇವಲ ನಮ್ಮ ವರ್ತನೆಗೆ ಅಷ್ಟೇ ಸಂಬಂಧಪಟ್ಟದಲ್ಲ ಅದು ನಮ್ಮ ಸ್ವಭಾವಕ್ಕೂ ಸಂಬಂಧಪಟ್ಟದ್ದು. ಹಾಗೆಂದರೆ, ನಮಗೇ ಎಲ್ಲ ಬೇಕು ; ಹಂಚಿಕೊಳ್ಳುವುದಲ್ಲ ಸ್ವಾಧೀನಪಡಿಸಿಕೊಳ್ಳುವುದು ನಮಗೆ ಖುಶಿ ನೀಡುವ ಸಂಗತಿ ; ಹೊಂದುವುದೇ ನಮ್ಮ ಉದ್ದೇಶವಾಗಿರುವಾಗ ನಾವು ಅತೀ ಆಸೆಯವರಾಗಲೇಬೇಕು (greedy), ಹೆಚ್ಚು ಹೆಚ್ಚು ಸ್ವಾಧೀನಪಡಿಸಿಕೊಂಡಂತೆ ಹೆಚ್ಚು ಹೆಚ್ಚು ಆಸೆಬುರುಕರು; ನಾವು ಬೇರೆ ಎಲ್ಲರಿಗೂ ವಿರೋಧಿಯಾಗಬೇಕು (antagonistic). ನಾವು ಮೋಸ ಮಾಡಬಯಸುವ ನಮ್ಮ ಗ್ರಾಹಕರನ್ನು, ನಾವು ನಾಶ ಮಾಡ ಬಯಸುವ ನಮ್ಮ ಸ್ಪರ್ಧಿಗಳನ್ನ ಹಾಗು ನಾವು ಶೋಷಣೆ ಮಾಡಬಯಸುವ ನಮ್ಮ ಕೆಲಸಗಾರರನ್ನ ನಾವು ನಮ್ಮ ವಿರೋಧಿಗಳೆಂದು ತಿಳಿದು ಅವರೊಡನೆ ಹಾಗೆ ವರ್ತಿಸಬೇಕು. ನಾವು ತೃಪ್ತಿಯನ್ನು ಹೊಂದುವುದು ಸಾಧ್ಯವೇ ಇಲ್ಲ, ಏಕೆಂದರೆ ನಮ್ಮ ಬಯಕೆಗಳಿಗೆ ಕೊನೆಯೇ ಇಲ್ಲ ; ನಾವು ನಮಗಿಂತ ಹೆಚ್ಚು ಹೊಂದಿರುವವರ ಬಗ್ಗೆ ಅಸೂಯಾಪರರಾಗಿರಬೇಕು ಹಾಗು ಕಡಿಮೆ ಹೊಂದಿದವರ ಬಗ್ಗೆ ಭಯಗ್ರಸ್ತರಾಗಿರಬೇಕು. ಆದರೆ ನಮ್ಮ ಈ ಎಲ್ಲ ಭಾವನಗಳನ್ನ ನಾವು ಅದುಮಿಟ್ಟುಕೊಳ್ಳಲೇ ಬೇಕು, ನಮ್ಮನ್ನು ನಾವು ( ಇತರರ ಎದುರು ಮತ್ತು ಸ್ವತಃ ನಮ್ಮ ಎದುರು) ನಗು ಮುಖದ, ತರ್ಕಬದ್ಧ, ಪ್ರಾಮಾಣಿಕ, ಅಂತಃಕರಣದ ಮನುಷ್ಯರು ಎಂದು ತೋರಿಸಿಕೊಳ್ಳಲಾದರೂ ಬೇರೆ ಎಲ್ಲರೂ ತೋರಿಸಿಕೊಳ್ಳುವಂತೆ.
(ಮುಂದುವರೆಯುತ್ತದೆ…)
(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )
1 Comment