ನಮ್ಮದು ಒಂದು ವಿಚಿತ್ರ ಜಗತ್ತು, ಇಲ್ಲಿ ಇಂಥ ಮಹತ್ ಸಾಧನೆಗಳನ್ನ ಎಂದೂ ಯಾರೂ ಗುರುತಿಸುವುದಿಲ್ಲ. ಯಾರೂ ಮೆಹರ್ ಬಾಬಾ ಅವರ ಸಾಧನೆಗಳನ್ನ ಮುಂದುವರೆಸಲಿಲ್ಲ ಕೂಡ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹುಚ್ಚುತನ ಒಂದು ಅನುಗ್ರಹ ಅಂತ ಹೇಳ್ತಾನೆ ನಿಷೆ. ಅಕಸ್ಮಾತ್ ಈ ಹುಚ್ಚು ಹೊಂದಿರುವ ವ್ಯಕ್ತಿಗಳೇನಾದರೂ enlightened ವ್ಯಕ್ತಿಗಳ ಸಂಪರ್ಕಕ್ಕೆ ಬಂದಿದ್ದಾರೆ ಅವರು, ಈ ಸೋ ಕಾಲ್ಡ್ ಬುದ್ದಿವಂತರಿಗಿಂತ ಬೇಗ enlightened ಆಗುವುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ. ಪೂರ್ವದಲ್ಲಿ ಈ ರೀತಿಯ ಒಂದು ದೊಡ್ಡ ಸಂಪ್ರದಾಯವೇ ಇದೆ ಮತ್ತು ಈ ಶತಮಾನದಲ್ಲಿ ಈ ಸಂಪ್ರದಾಯವನ್ನ ಮತ್ತೆ ಚಾಲ್ತಿಗೆ ತಂದವರು ಒಬ್ಬರೇ ಒಬ್ಬರು, ಅವರ ಹೆಸರು ಮೆಹರ್ ಬಾಬಾ. ಮೆಹರ್ ಬಾಬಾ ದೇಶಾದ್ಯಂತ ಸಂಚಾರ ಮಾಡಿ ಹುಚ್ಚರು ಎಂದು ಸಮಾಜ ತಿರಸ್ಕರಿಸಿದ ಈ ರೀತಿಯ ಎಲ್ಲ ವ್ಯಕ್ತಿಗಳನ್ನ ಹುಡುಕಿಕೊಂಡು ಓಡಾಡಿದರು. ಪ್ರತಿ ಹುಚ್ಚಾಸ್ಪತ್ರೆಯಲ್ಲಿ ಪ್ರತಿ ಊರಿನಲ್ಲಿ ಹುಚ್ಚರು ಎನ್ನುವ ಸಮಾಜ ಬಹಿಷ್ಕ್ರತರನ್ನು ಹುಡುಕುತ್ತ ತಮ್ಮ ಇಡೀ ಜೀವಮಾನವನ್ನ ಅವರ ಬಿಡುಗಡೆಗಾಗಿ ಮೀಸಲಿಟ್ಟರು.
“ ಯಾಕೆ ಬಾಬಾ ಈ ಹುಚ್ಚರಿಗಾಗಿ ನಿಮ್ಮ ಸಮಯವನ್ನ ವ್ಯರ್ಥ ಮಾಡಿಕೊಳ್ಳುತ್ತೀರಿ? ಎಷ್ಟೋ ಜನ ಬುದ್ಧಿವಂತರು, ಸಾಧಕರು ನಿಮ್ಮ ಸಮಯಕ್ಕಾಗಿ ಕಾಯುತ್ತಿದ್ದಾರೆ.” ಶಿಷ್ಯರು ಮೆಹರ್ ಬಾಬಾ ಅವರನ್ನ ಪ್ರಶ್ನೆ ಮಾಡುತ್ತಾರೆ.
“ ನಿಮಗಿದು ಅರ್ಥವಾಗುವುದಿಲ್ಲ. ಈ ಬುದ್ಧಿವಂತರನ್ನು ಅವರ ಸೋಕಾಲ್ಡ್ ಬುದ್ಧಿವಂತಿಕೆಯಿಂದ ಬಿಡಿಸಿ ಬಿಡುಗಡೆಯ ದಾರಿಗೆ ತರೆದೊಯ್ಯುವುದು ತುಂಬ ಕಷ್ಟದ ಕೆಲಸ. ಆದರೆ ಈ ಹುಚ್ಚುತನ ಎನ್ನುವ ಶಾಪಕ್ಕೆ ವಿನಾಕಾರಣ ತುತ್ತಾಗಿ ಹಿಂಸೆ ಅನುಭವಿಸುತ್ತಿರುವ ಜನರನ್ನ ಬಿಡುಗಡೆಯ ದಾರಿಯಲ್ಲಿ ಅನಾಯಾಸವಾಗಿ ಮುನ್ನಡೆಸಬಹುದು, ಏಕೆಂದರೆ ಈಗಾಗಲೇ ಅವರು ಬಂಧನಗಳನ್ನು ಕಳಚಿಕೊಂಡು ಹೊರಬಂದಿದ್ದಾರೆ ಆದರೆ ತಪ್ಪು ಬಾಗಿಲಿನ ಮೂಲಕ. ಈ ಜಗತ್ತಿನಿಂದ ಹೊರತಾದ ರುಚಿಯೊಂದರ ಪರಿಚಯ ಈಗಾಗಲೇ ಅವರಿಗಾಗಿದೆ, ನಾನು ಕೇವಲ ಅವರಿಗೆ ಸರಿಯಾದ ಬಾಗಿಲನ್ನ ಮಾತ್ರ ತೋರಿಸಬೇಕಾಗಿದೆ ಮತ್ತು ಆ ತಪ್ಪು ಬಾಗಿಲಿನಿಂದ ಹೋಗಬೇಡಿ, ಈ ಸರಿಯಾದ ಬಾಗಿಲನ್ನು ದಾಟಿ ಎಂದು ಎಚ್ಚರಿಸಬೇಕಾಗಿದೆ. “ ಮೆಹರ್ ಬಾಬಾ ತಮ್ಮ ಶಿಷ್ಯರಿಗೆ ತಿಳಿಸಿ ಹೇಳುತ್ತಾರೆ. ಎಷ್ಟೋ ಜನ ಸಮಾಜದ ದೃಷ್ಟಿಯಲ್ಲಿ ಹುಚ್ಚರು ಎಂದು ಅವಮಾನಿತರಾದವರನ್ನ ಬಾಬಾ ಅಧ್ಯಾತ್ಮದ ಹಾದಿಯಲ್ಲಿ ಮುನ್ನಡೆಸಿದ್ದಾರೆ.
ನಮ್ಮದು ಒಂದು ವಿಚಿತ್ರ ಜಗತ್ತು, ಇಲ್ಲಿ ಇಂಥ ಮಹತ್ ಸಾಧನೆಗಳನ್ನ ಎಂದೂ ಯಾರೂ ಗುರುತಿಸುವುದಿಲ್ಲ. ಯಾರೂ ಮೆಹರ್ ಬಾಬಾ ಅವರ ಸಾಧನೆಗಳನ್ನ ಮುಂದುವರೆಸಲಿಲ್ಲ ಕೂಡ.
ಹಿಂದೊಮ್ಮೆ ವಯಸ್ಸಾಗಿದ್ದ ಝೆನ್ ಮಾಸ್ಟರ್ ತೀರಿಕೊಂಡಿದ್ದ. ಅವನು ಹುಚ್ಚ ಎಂದೇ ಅವನ ಶಿಷ್ಯರು ಪ್ರಚಾರ ಮಾಡುತ್ತಿದ್ದರು. ಅವನ ಕೆಲವು ಶಿಷ್ಯರು ಮಾಸ್ಟರ್ ನ ಅವಗುಣಗಳ ಬಗ್ಗೆ , ಅವನಿಗೆ ಹೆಂಗಸರ ಚಟ ಇತ್ತು, ಕುಡಿಯುತ್ತಿದ್ದ, ಸೇದುತ್ತಿದ್ದ ಹೀಗೆಲ್ಲ ಗಾಸಿಪ್ ಮಾಡುತ್ತಿದ್ದರು.
ಒಂದು ದಿನ ತುಂಬಾ ಜ್ಞಾನಿ ಎಂದು ಖ್ಯಾತಳಾಗಿದ್ದ ಒಬ್ಬಳು ಝೆನ್ ಮಾಸ್ಟರ್ ಆ ಆಶ್ರಮಕ್ಕೆ ಬಂದಳು. ಅವಳೆದುರು ಶಿಷ್ಯರು ತೀರಿಹೋಗಿದ್ದ ತಮ್ಮ ಮಾಸ್ಟರ್ ನ ಅವಗುಣಗಳನ್ನು ಬಣ್ಣಿಸಿ ಹೇಳಿದರು.
“ ಹೌದಾ? ಆದರೆ ಅವನಿಗೆ ಜ್ಞಾನೋದಯವಾಗಿದ್ದು ನಿಮಗೆ ಗೊತ್ತಾ? “ ಆಕೆ ಶಿಷ್ಯರನ್ನು ಕೇಳಿದಳು.
“ ಇಲ್ಲ, ಗೊತ್ತಿಲ್ಲ. ನಿಮಗೆ ಹೇಗೆ ಗೊತ್ತು? “ ಶಿಷ್ಯರು ಅವಳನ್ನು ಪ್ರಶ್ನೆ ಮಾಡಿದರು.
“ ನಿಮ್ಮ ನಡುವೆ ಅವನು ಬದುಕಿದ್ದ ಎಂದರೆ ಬೇರೆ ಯಾವ ಸಾಧ್ಯತೆಯನ್ನೂ ನನಗೆ ಊಹಿಸಲಿಕ್ಕೆ ಆಗದು” ಆಕೆ ಉತ್ತರಿಸಿದಳು.
Source: Osho, From Personality to Individuality, Ch 7, Q 1