ತಾರ್ಕಿಕ ಸುಖ-ವಾದ ಮತ್ತು ಅನಿಯಮಿತ ಅಹಂಭಾವ : To have or To be #4

ಈ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯನ್ನು ನಿರ್ಧರಿಸುವುದಕ್ಕೆ ಈಗ “ ಮನುಷ್ಯರಿಗೆ ಯಾವುದು ಒಳ್ಳೆಯದು ? “ ಎನ್ನುವ ಪ್ರಶ್ನೆ ಕಾರಣವಲ್ಲ ಬದಲಾಗಿ, “ ವ್ಯವಸ್ಥೆಯ ಬೆಳವಣಿಗೆಗೆ ಯಾವುದು ಒಳ್ಳೆಯದು? “ ಎನ್ನುವ ತೀರ್ಮಾನ ಮುಖ್ಯವಾಗಿದೆ. ಈ ಬಿಕ್ಕಟ್ಟಿನ ಹರಿತ-ತನ (sharpness) ಮುಚ್ಚಿಡುವುದಕ್ಕೆ, ಯಾವುದು ವ್ಯವಸ್ಥೆಯ ಬೆಳವಣಿಗೆಗೆ ಒಳ್ಳೆಯದೋ ( ಕೇವಲ ಒಂದು ಬೃಹತ್ ಉದ್ಯಮದ ಬೆಳವಣಿಗೆಗಾದರೂ ಸರಿ) ಅದೇ ಮನುಷ್ಯರ ಬೆಳವಣಿಗೆಗೂ ಒಳ್ಳೆಯದು ಎನ್ನುವ ವಿಚಾರವನ್ನು ಪ್ರಚಾರ ಮಾಡಲು ಪ್ರಯತ್ನಿಸಲಾಗುತ್ತಿದೆ… | ಎರಿಕ್ ಫ್ರಾಂ ; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2023/02/25/erich/

ವಸ್ತುಗಳನ್ನ, ಭಾವನೆಗಳನ್ನ ಹೆಚ್ಚು ಹೆಚ್ಚು “ಹೊಂದುವ” ಉತ್ಕಟತೆ, ಎಂದೂ ಕೊನೆಯಾಗದ ವರ್ಗ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ. ವರ್ಗಗಳನ್ನು ನಿರ್ಮೂಲನ ಮಾಡುವ ಅವರ ಸಿದ್ಧಾಂತ, ಅವರ ವ್ಯವಸ್ಥೆ, ವರ್ಗ ಸಂಘರ್ಷಕ್ಕೆ ಕೊನೆ ಹಾಡುತ್ತದೆ ಎನ್ನುವ ಕಮ್ಯುನಿಸ್ಟರ ಘೋಷಣೆಗಳು ಕೇವಲ ಕಾಲ್ಪನಿಕ. ಏಕೆಂದರೆ ಅವರ ವ್ಯವಸ್ಥೆ ಹುಟ್ಟಿರುವುದು “ಅನಿಯಮಿತ ಬಳಕೆ, ಬದುಕಿನ ಉದ್ದೇಶ” ಎನ್ನುವ ತತ್ವದ ಆಧಾರದ ಮೇಲೆ. ಎಲ್ಲಿಯವರೆಗೆ ಎಲ್ಲರೂ ಹೆಚ್ಚು ಹೆಚ್ಚು ಸಂಗತಿಗಳನ್ನ ಹೊಂದುವುದನ್ನ ಬಯಸುತ್ತಾರೋ ಅಲ್ಲಿಯವರೆಗೆ ವರ್ಗಗಳ ಹುಟ್ಟುವಿಕೆಯನ್ನ, ಮತ್ತು ಈ ವರ್ಗಗಳ ಕಾರಣವಾಗಿ ಹುಟ್ಟುವ ವರ್ಗ ಸಂಘರ್ಷಗಳನ್ನ, ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಾ ಯುದ್ಧಗಳನ್ನ ತಡೆಯುವುದು ಅಸಾಧ್ಯ. ಅತಿಯಾಸೆ ಮತ್ತು ಸಮಾಧಾನ ಒಂದು ಇನ್ನೊಂದರ ದಾರಿಯನ್ನು ತಡೆಯುತ್ತ ಹೋಗುತ್ತವೆ.

ಹದಿನೆಂಟನೇಯ ಶತಮಾನದಲ್ಲಿ ತೀವ್ರ ಬದಲಾವಣೆಗಳಾಗದೇ ಹೋಗಿದ್ದರೆ, ತಾರ್ಕಿಕ ಸುಖ-ವಾದ ಮತ್ತು ಅನಿಯಮಿತ ಅಹಂಭಾವ, ಮನುಷ್ಯರ ಆರ್ಥಿಕ ನಡವಳಿಕೆಯ ಮಾರ್ಗದರ್ಶಿ ತತ್ವಗಳಾಗಿ ಹೊರಹೊಮ್ಮುತ್ತಿರಲಿಲ್ಲ. ಬಹುತೇಕ ಪ್ರಗತಿಹೊಂದಿದ ಮತ್ತು ಪ್ರಾಚೀನ ಸಮಾಜಗಳಲ್ಲಿಯಂತೆ, ಮಧ್ಯಯುಗದ ಸಮಾಜದಲ್ಲಿ ಕೂಡ ಮನುಷ್ಯ ಬದುಕಿನ ಆರ್ಥಿಕ ಸಿದ್ಧಾಂತ, ನೈತಿಕ ತತ್ವಗಳ ಆಧಾರದ ಮೇಲೆ ರೂಪಿತವಾಗಿತ್ತು. ಆದ್ದರಿಂದ ತಾರ್ಕಿಕ ಧರ್ಮಶಾಸ್ತ್ರಜ್ಞರಿಗೆ (scholastic theologians) ಬೆಲೆ, ಖಾಸಗಿ ಆಸ್ತಿ ಮುಂತಾದ ಆರ್ಥಿಕ ಕ್ಯಾಟಗರಿಗಳು ನೈತಿಕ ಧರ್ಮಶಾಸ್ತ್ರದ ಅಂಶಗಳು. ಹೊಸ ಆರ್ಥಿಕ ಬೇಡಿಕೆಗಳ ( for instance Thomas Aquino’s’ qualification to the concept of “just price” )ಮೇಲೆ ತಮ್ಮ ನೈತಿಕ ಸಂಹಿತೆಯನ್ನ ಆರೋಪಿಸಲು ಧರ್ಮಶಾಸ್ತ್ರಜ್ಞರು ಹೊಸ ಸೂತ್ರಗಳನ್ನು ಸಿದ್ಧಪಡಿಸಿದರೂ, ಆರ್ಥಿಕ ನಡವಳಿಕೆ ಮಾನವ ನಡುವಳಿಕೆಯಾಗಿಯೇ ಉಳಿದುಕೊಂಡಿತು, ಮತ್ತು ಹಾಗಾಗಿ ಮಾನವೀಯ ನೈತಿಕತೆಯ ತತ್ವಗಳ ಪ್ರಭಾವವನ್ನು ತನ್ನ ಮೇಲೆ ಉಳಿಸಿಕೊಂಡಿತು. ಹದಿನೆಂಟನೇಯ ಶತಮಾನದ ಬಂಡವಾಳಶಾಹಿ, ಹಲವಾರು ಮೆಟ್ಟಲುಗಳ ತೀವ್ರ ಬದಲಾವಣೆಗೆ ಒಳಪಟ್ಟಿತು ಮತ್ತು ಆರ್ಥಿಕ ನಡವಳಿಕೆ, ನೈತಿಕತೆ ಮತ್ತು ಮಾನವಿಯ ಮೌಲ್ಯಗಳಿಂದ ಪ್ರತ್ಯೇಕವಾಗಿ ಹೋದವು. ಹೌದು, ಆರ್ಥಿಕ ಯಂತ್ರ ಒಂದು ಸ್ವಾಯತ್ತ ಘಟಕವಾಗಿ, ಮನುಷ್ಯ ಬೇಡಿಕೆಗಳಿಂದ, ಮಾನವ ಸಂಕಲ್ಪಗಳಿಂದ ಸ್ವತಂತ್ರವಾಗಿ ಉಳಿಯಲೇ ಬೇಕಿತ್ತು. ಅದು ತನ್ನ ಸ್ವಂತದ ನಿಯಮಗಳ ಪ್ರಕಾರ, ತಾನೇ ಸ್ವತಂತ್ರವಾಗಿ ಕೆಲಸ ಮಾಡಬೇಕಾದಂಥ ವ್ಯವಸ್ಥೆ. ಕಾರ್ಮಿಕರ ಬವಣೆ ಮತ್ತು ದೊಡ್ಡ ಕಾರ್ಪೋರೇಷನ್ ಗಳ ಅಭಿವೃದ್ಧಿಗಾಗಿ ಎಂಬಂತೆ ಸದಾ ಹೆಚ್ಚಾಗುತ್ತಲೇ ಇರುವ ಸಣ್ಣ ಸಣ್ಣ ಉದ್ಯಮಗಳ ನಾಶದಂಥ ಆರ್ಥಿಕ ಅಗತ್ಯ, ಅತ್ಯಂತ ವಿಷಾದದ ಸಂಗತಿಯಾದರೂ, ಇದನ್ನ ಒಂದು ಸಹಜ ಧರ್ಮದಂತೆ (natural law) ಒಪ್ಪಿಕೊಳ್ಳಲಾಗುತ್ತದೆ.

ಈ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯನ್ನು ನಿರ್ಧರಿಸುವುದಕ್ಕೆ ಈಗ “ ಮನುಷ್ಯರಿಗೆ ಯಾವುದು ಒಳ್ಳೆಯದು ? “ ಎನ್ನುವ ಪ್ರಶ್ನೆ ಕಾರಣವಲ್ಲ ಬದಲಾಗಿ, “ ವ್ಯವಸ್ಥೆಯ ಬೆಳವಣಿಗೆಗೆ ಯಾವುದು ಒಳ್ಳೆಯದು? “ ಎನ್ನುವ ತೀರ್ಮಾನ ಮುಖ್ಯವಾಗಿದೆ. ಈ ಬಿಕ್ಕಟ್ಟಿನ ಹರಿತ-ತನ (sharpness) ಮುಚ್ಚಿಡುವುದಕ್ಕೆ, ಯಾವುದು ವ್ಯವಸ್ಥೆಯ ಬೆಳವಣಿಗೆಗೆ ಒಳ್ಳೆಯದೋ ( ಕೇವಲ ಒಂದು ಬೃಹತ್ ಉದ್ಯಮದ ಬೆಳವಣಿಗೆಗಾದರೂ ಸರಿ) ಅದೇ ಮನುಷ್ಯರ ಬೆಳವಣಿಗೆಗೂ ಒಳ್ಳೆಯದು ಎನ್ನುವ ವಿಚಾರವನ್ನು ಪ್ರಚಾರ ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ನಿರ್ಮಿತಿಯನ್ನ ಇನ್ನೊಂದು ನಿರ್ಮಿತಿಯಿಂದ ಪುಷ್ಟೀಕರಿಸಲಾಯಿತು. ಅದೇನೆಂದರೆ, ಕೈಗಾರಿಕಾ ವ್ಯವಸ್ಥೆಯ ಮತ್ತು ಆರ್ಥಿಕ ವ್ಯವಸ್ಥೆಯ ಬೆಳವಣಿಗೆಗೆ ಅಗತ್ಯ ಮನುಷ್ಯ ಗುಣಲಕ್ಷಣಗಳು ಎಂದು ತಿಳಿಯಲಾಗಿರುವ, ಅಹಂ (egotism), ಸ್ವಾರ್ಥ (selfishness) ಮತ್ತು ಅತಿಯಾಸೆಗಳನ್ನ (greed) ಮನುಷ್ಯ ಸ್ವಭಾವ ಸಹಜವಾಗಿ ಒಳಗೊಂಡಿದೆ ಎನ್ನುವುದು ; ಹಾಗಾಗಿ ಕೇವಲ ವ್ಯವಸ್ಥೆ ಮಾತ್ರ ಅಲ್ಲ ಮನುಷ್ಯ ಪ್ರಕೃತಿಯೇ ಇವನ್ನ ಪೋಷಿಸುತ್ತವೆ ಎನ್ನುವುದು. ಅಹಂ, ಸ್ವಾರ್ಥ, ಅತಿಯಾಸೆಯಿಂದ ಹೊರತಾಗಿರುವ ಸಮಾಜಗಳನ್ನ “ ಪುರಾತನ “ ಎಂದೂ “ ಶೈಶವ ಸ್ಥಿತಿ” ಯವೆಂದೂ ತಿಳಿಯಲಾಗುತ್ತದೆ. ಕೈಗಾರಿಕಾ ವ್ಯವಸ್ಥೆಯ ಅಸ್ತಿತ್ವಕ್ಕೆ ಈ ಗುಣಲಕ್ಷಣಗಳು ಅಸಹಜ ಮತ್ತು ಇವು ಸಾಮಾಜಿಕ ಸಂದರ್ಭದ ಕಾರಣವಾಗಿ ಹುಟ್ಟಿಕೊಂಡಿರುವಂಥವು ಎನ್ನುವುದನ್ನ ಗುರುತಿಸಲು ಜನ ನಿರಾಕರಿಸುತ್ತಾರೆ.

ಅಷ್ಟೇನೂ ಕಡಿಮೆ ಮಹತ್ವದಲ್ಲದ ಇನ್ನೊಂದು ಅಂಶವೆಂದರೆ ; ಪ್ರಕೃತಿಯ ಜೊತೆಗಿನ ಜನರ ಸಂಬಂಧ ಆಳವಾಗಿ ನಶಿಸತೊಡಗಿದ್ದು. ನಮ್ಮ ಅಸ್ತಿತ್ವದ ಕರಾರುಗಳ ಕಾರಣವಾಗಿ, ಪ್ರಕೃತಿಯ ಭಾಗವಾಗಿದ್ದ ಅಪ್ಪಟ ಪ್ರಕೃತಿ ಪ್ರೇಮಿ ಜನ, ತಾವು ಗಳಿಸಿದ ವಿವೇಕದ ಕಾರಣವಾಗಿ ಪ್ರಕೃತಿಯನ್ನ ಮೀರಲು ಮುಂದಾದರು. ಮನುಷ್ಯರು ತಮ್ಮ ಅಸ್ತಿತ್ವದ ಸಮಸ್ಯೆಗಳನ್ನು ನೀಗಿಸಿಕೊಳ್ಳಲು, ಪ್ರಕೃತಿ ಮತ್ತು ಮಾನವ ಜನಾಂಗದ ನಡುವಿನ ದೈವಿಕ ಸೌಹಾರ್ದವನ್ನ , ಪ್ರಕೃತಿಯನ್ನ ತಮ್ಮ ಬಳಕೆಗೆ ಉಪಯೋಗ ಮಾಡಿಕೊಳ್ಳುವ ಮೂಲಕ, ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುವ ಮೂಲಕ, ಕೊನೆಗೆ ಈ ಸ್ವಾಧೀನದ ಪ್ರಕ್ರಿಯೆ ಹೆಚ್ಚಿನ ವಿನಾಶಕ್ಕೆ ಕಾರಣವಾಗುವ ತನಕ, ಹಾಳು ಮಾಡಲು ಪ್ರಯತ್ನಿಸಿದರು. ಪ್ರಕೃತಿಯನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಪ್ರಕೃತಿಗೆ ವಿರುಧ್ಧವಾಗಿ ಸಂಚು ಮಾಡುವ ನಮ್ಮ ಹುಕಿ, ಪ್ರಕೃತಿ ಹೊಂದಿರುವ ಸೀಮಿತ ಸಂಪನ್ಮೂಲ ಕೊನೆಗೊಮ್ಮೆ ಖಾಲಿ ಆಗುತ್ತದೆ, ಮತ್ತು ಕೊನೆಗೆ ತನ್ನ ಮೇಲಿನ ಬಲಾತ್ಕಾರದ ವಿರುದ್ಧ ಪ್ರಕೃತಿ ಸಿಡಿದೇಳುತ್ತದೆ ಎನ್ನುವ ಸತ್ಯಕ್ಕೆ ನಮ್ಮನ್ನ ಕುರುಡು ಮಾಡಿತು.

ಕೈಗಾರಿಕಾ ಸಮಾಜ, ಪ್ರಕೃತಿಯನ್ನ ತಿರಸ್ಕಾರ ಭಾವದಿಂದ ನೋಡುತ್ತದೆ, ಅಷ್ಟೇ ಅಲ್ಲ ಯಂತ್ರದಿಂದ ನಿರ್ಮಾಣಗೊಳ್ಳದೇ ಇರುವ ಎಲ್ಲ ವಸ್ತುಗಳನ್ನ, ಯಂತ್ರ ನಿರ್ಮಿತಿಯಲ್ಲಿ ಭಾಗವಹಿಸದೇ ಇರುವ ( ವಿಶೇಷವಾಗಿ ಕಪ್ಪು ಜನಾಂಗ) ಎಲ್ಲರನ್ನು ಕೂಡ ದೂರ ಇಡುತ್ತದೆ.
ಜನ ಇವತ್ತು ಶಕ್ತಿಶಾಲಿ, ಮೆಕ್ಯಾನಿಕಲ್, ನಮ್ಮನ್ನು ನಾಶದ ಹಾದಿಯತ್ತ ಕರೆದೊಯ್ಯುತ್ತಿರುವ ಯಂತ್ರಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.


( ಮುಂದುವರೆಯುತ್ತದೆ…)

2 Comments

  1. ಕಮ್ಯೂನಿಸಂ ಬಗೆಗಿನ ವಿವರಗಳು ತಪ್ಪು..ಅದು ಹಾಗೆ ಹೇಳಿಲ್ಲ.

    ಅನಿಯಮಿತ ಅಪಾರ ಬೆಳವಣಿಗೆ ಅಲ್ಲ ಅದರ ಗುರಿ. ಅದು ನ್ಯಾಯಯುತ ಅಗತ್ಯದಂತೆ ಹಂಚಿಕೆ..ಅದಕ್ಕೆ ಹಣಕಾಸಿನ ಬಂಡವಾಳ ವಿಷಯವೇ ಅಲ್ಲ. ಅದು ಸರ್ಕಾರ/ ಸಮಾಜ ನಡೆಸುವ ಉತ್ಪಾದನೆ..ಲಾಭಕ್ಕಾಗಿ ಅಲ್ಲ ..ಅಗತ್ಯಕ್ಕಾಗಿ …

Leave a Reply