ನಿರಾಕರಣೆ : ಓಶೋ ವ್ಯಾಖ್ಯಾನ


ಯಾವಾಗ ಮನಸ್ಸು ಎದೆ ತುಂಬಿಕೊಂಡು “ಹೌದು” ಎಂದು ಹೇಳುತ್ತದೆಯೋ ಆಗ ನೀವು ಕೇಳಲು ಸಿದ್ಧರಾಗಿರುವಿರಿ. ಆಗ ಮಾತ್ರ ನಿಮ್ಮ ಮುಂದೆ ಸತ್ಯವನ್ನು ಅನಾವರಣ ಮಾಡಬಹುದು. ಸ್ವಲ್ಪ ನಿರಾಕರಣೆ ನಿಮ್ಮೊಳಗೆ ಉಳಿದಿದ್ದರೂ ಸತ್ಯವನ್ನು ನಿಮ್ಮ ಮುಂದೆ ತೆರೆದಿಡುವುದು ಅಸಾಧ್ಯ… ~ ಓಶೋ | ಕನ್ನಡಕ್ಕೆ; ಚಿದಂಬರ ನರೇಂದ್ರ

ನಿಮ್ಮ
ಒಂದೇ ಒಂದು ತುಣುಕು
ನಿಮ್ಮೊಳಗೆ ಉಳಿದು ಹೋದರೂ
ವಿಗ್ರಹಗಳನ್ನು ಪೂಜಿಸುವ ಕರ್ಮದಿಂದ
ನೀವು ಪಾರಾಗಲಾರಿರಿ.

ಹಾಗಂತ
ಕಾರಣದ ಕೊಡಲಿಯಿಂದ
ಸಂಶಯ, ಅನುಮಾನಗಳನ್ನೆಲ್ಲ
ಕೊಚ್ಚುತ್ತ ಹೋದರೆ
ಅಲ್ಲೊಂದು ಸುಳ್ಳು ಮೂರ್ತಿ
ಹುಟ್ಟಿಕೊಳ್ಳುತ್ತದೆ.

ಅದರ ಹೆಸರೇ ‘ ಆತ್ಮವಿಶ್ವಾಸ ‘

– ರೂಮಿ

ಸೂಫಿ ಜುನಿಯಾದ್ ತನ್ನ ಮಾಸ್ಟರ್ ಜೊತೆ ಆಶ್ರಮದಲ್ಲಿ ಇದ್ದ. ಆ ಮಾಸ್ಟರ್ ಮಹಾ ವಿಚಿತ್ರದ ಮನುಷ್ಯ, ಮಾತು ಮಾತು ಮಾತಿಗೂ ವಾದ ಮಾಡುತ್ತಿದ್ದ, ನೀವು ಏನು ಹೇಳಿದರೂ ಅದನ್ನು ನಿರಾಕರಿಸುತ್ತಿದ್ದ, ಅದಕ್ಕೊಂದು ಪ್ರತಿವಾದ ಮಂಡಿಸುತ್ತಿದ್ದ. ನೀವು ಇದು ಬೆಳಗು ಎಂದರೆ, ಇಲ್ಲಾ ಇದು ರಾತ್ರಿ ಎನ್ನುತ್ತಿದ್ದ, ಅದು ಪ್ರಖರ ಬೆಳಗಾಗಿದ್ದರೂ ಅವನು ಒಪ್ಪಿಕೊಳ್ಳುತ್ತಿರಲಿಲ್ಲ.

ಜುನಿಯಾದ್ ಏನು ಹೇಳಿದರೂ ಮಾಸ್ಟರ್ ಅದನ್ನು ನಿರಾಕರಿಸುತ್ತಿದ್ದ. ಕೊನೆಗೆ ಜುನಿಯಾದ್ ಗೆ ಏನನ್ನಿಸಿತೋ, ಅವ ಮಾಸ್ಟರ್ ಜೊತೆ ವಾದಕ್ಕೆ ಇಳಿಯುವುದನ್ನ ನಿಲ್ಲಿಸಿಬಿಟ್ಟ, ಹೌದು ಮಾಸ್ಟರ್ ನೀವು ಹೇಳಿದ್ದು ನಿಜ ಎಂದು ಹೇಳಿ ಸುಮ್ಮನಾಗಿಬಿಡುತ್ತಿದ್ದ. ಜುನಿಯಾದ್ ಗೆ ಇದು ಎಷ್ಟು ಪ್ರ್ಯಾಕ್ಟೀಸ್ ಆಯಿತೆಂದರೆ , ಕೊನೆಗೆ ಜುನಿಯಾದ್ ಯಾರ ಮಾತನ್ನೂ ನಿರಾಕರಿಸುತ್ತಿರಲಿಲ್ಲ, ಅವನಿಂದ ವಾದ ಸಾಧ್ಯವೇ ಆಗುತ್ತಿರಲಿಲ್ಲ.

ಹೀಗೇ ಎಷ್ಟೋ ದಿನಗಳಾದ ಮೇಲೆ ಕೊನೆಗೊಮ್ಮೆ ಮಾಸ್ಟರ್ ಹೇಳಿದ, “ ಜುನಿಯಾದ್ ನೀನು ಗೆದ್ದೆ, ನಿನ್ನೊಳಗೆ ವಾದ ಮಾಡುವ ಸ್ವಭಾವವನ್ನು ಹುಟ್ಟುಹಾಕುವಲ್ಲಿ ನಾನು ಸೋತೆ. ಎಂದೂ ವಾದ ಮಾಡದವರು ಕೂಡ ಹೇಳುತ್ತಿದ್ದರು, ಇದೆಂಥ ಮೂರ್ಖತನ, ಇದು ಪಕ್ಕಾ ಹಗಲು, ಇದರಲ್ಲಿ ವಾದ ಮಾಡುವುದೇನಿದೆ? ಇದು ನಿಚ್ಚಳ ಸತ್ಯ ಎಂದು. ಆದರೆ ನೀನು, “ ಹೌದು ಮಾಸ್ಟರ್ ಇದು ರಾತ್ರಿ “ ಎಂದು ನನ್ನ ಮಾತು ಒಪ್ಪಿಕೊಂಡೆ. ನಿನ್ನ ನಂಬಿಕೆ ಆಳವಾದದ್ದು, ಇದು ಸಾಚಾ, ಇದರಲ್ಲಿ ಯಾವ ಜಾಣತನ ಇಲ್ಲ, ಯಾವ ಕಪಟ ಇಲ್ಲ. ಈಗ ನೀನು ಸತ್ಯವನ್ನು ಸ್ವೀಕರಿಸಲು ಸಿದ್ಧನಾಗಿರುವೆ. ಇನ್ನು ಮುಂದೆ ನಾನು ನಿನ್ನ ಜೊತೆ ವಾದಕ್ಕಿಳಿಯುವುದಿಲ್ಲ. ಈಗ ನಾನು ಸತ್ಯದ ಬಗ್ಗೆ ಮಾತನಾಡುತ್ತೇನೆ ಮತ್ತು ನಿನ್ನಲ್ಲಿ ಈಗ ಸತ್ಯವನ್ನು ಸ್ವೀಕರಿಸುವ ಭೂಮಿಕೆ ಸಿದ್ಧವಾಗಿದೆ.”

ಇಲ್ಲಿ ನಾನು ಸತ್ಯ ಸುಳ್ಳುಗಳ ಬಗ್ಗೆ ಮಾತನಾಡುತ್ತಿಲ್ಲ, ಸುಳ್ಳನ್ನು ಒಪ್ಪಿಕೊಳ್ಳಬೇಕು ಎಂದು ಹೇಳುತ್ತಿಲ್ಲ. ನಾನು ಮಾತನಾಡುತ್ತಿರುವುದು ನಿರಾರಣೆಯ ಸ್ವಭಾವದ ಬಗ್ಗೆ, ಅದು ನಮ್ನೊಳಗೆ ನಿರ್ಮಿಸಿರುವ ತಡೆಗೋಡೆಯ ಬಗ್ಗೆ. ಯಾವಾಗ ಮನಸ್ಸು ಎದೆ ತುಂಬಿಕೊಂಡು “ಹೌದು” ಎಂದು ಹೇಳುತ್ತದೆಯೋ ಆಗ ನೀವು ಕೇಳಲು ಸಿದ್ಧರಾಗಿರುವಿರಿ. ಆಗ ಮಾತ್ರ ನಿಮ್ಮ ಮುಂದೆ ಸತ್ಯವನ್ನು ಅನಾವರಣ ಮಾಡಬಹುದು. ಸ್ವಲ್ಪ ನಿರಾಕರಣೆ ನಿಮ್ಮೊಳಗೆ ಉಳಿದಿದ್ದರೂ ಸತ್ಯವನ್ನು ನಿಮ್ಮ ಮುಂದೆ ತೆರೆದಿಡುವುದು ಅಸಾಧ್ಯ. ಏಕೆಂದರೆ ಈ ಚೂರು ನಿರಾಕರಣೆ ಎಂಂಥಹದನ್ನೂ ತನ್ನೊಳಗೆ ಬಿಟ್ಟುಕೊಡುವುದಿಲ್ಲ. ಈ ನಿರಾಕರಣೆ ಎಷ್ಟು ಚಿಕ್ಕದಾಗಿದ್ದರೂ ಮಹಾ ಶಕ್ತಿಶಾಲಿ. ಈ ನಿರಾಕರಣೆಯ ಎದುರು ಸತ್ಯವನ್ನು ಹೇಳಬಹುದು ಆದರೆ ಬಿಚ್ಚಿಡುವುದು ಆಸಾಧ್ಯ, ನಿರಾಕರಣೆ ಸತ್ಯವನ್ನು ಮುಚ್ಚಿಹಾಕಿಬಿಡುತ್ತದೆ.

ಒಮ್ಮೆ ಒಂದು ಹಳ್ಳಿಯಲ್ಲಿ, ಮದುವೆಯಾಗದ ಒಬ್ಬ ಸುಂದರ ಯುವತಿ ಗರ್ಭಿಣಿಯಾದಳು. ಅವಳ ತಂದೆ ತಾಯಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಮಗುವಿನ ತಂದೆ ಯಾರೆಂದು ಕೇಳಿದಾಗ, ಗಲಿಬಿಲಿಗೊಳಗಾದ ಯುವತಿ ಗಾಬರಿಯಲ್ಲಿ, ಅದೇ ಊರಿನಲ್ಲಿ ವಾಸವಾಗಿದ್ದ ಝೆನ್ ಮಾಸ್ಟರ್ ಹಕುಯಿನ್ ನ ಹೆಸರು ಹೇಳಿಬಿಟ್ಟಳು.

ತಂದೆ ತಾಯಿ ಮಾಸ್ಟರ್ ಮನೆ ಬಾಗಲಿಗೆ ಬಂದು ಗಲಾಟೆ ಮಾಡತೊಡಗಿದರು. ವಿಷಯ ತಿಳಿದುಕೊಂಡ ಮಾಸ್ಟರ್ “ಹೌದಾ” ಎಂದು ಉತ್ತರಿಸಿ ಸುಮ್ಮನಾದ.

ಈ ಘಟನೆಯಿಂದ ಊರಲ್ಲಿ ಮಾಸ್ಟರ್ ನ ಪ್ರತಿಷ್ಠೆಗೆ ಭಾರೀ ಧಕ್ಕೆಯಾಯಿತು. ಊರ ಜನರೆಲ್ಲ ಅವನನ್ನು ದೂಷಿಸತೊಡಗಿದರು.

ಕೆಲ ತಿಂಗಳುಗಳ ನಂತರ ಆ ಯುವತಿ ಹೆಣ್ಣು ಮಗುವನ್ನು ಹೆತ್ತಳು. ತಂದೆ ತಾಯಿ ಆ ಮಗುವನ್ನು ಎತ್ತಿಕೊಂಡು ಮಾಸ್ಟರ್ ಮನೆಗೆ ಬಂದರು. ಮಗುವನ್ನು ಅವನೇ ಸಾಕಬೇಕು ಎಂದು ಒತ್ತಾಯ ಮಾಡತೊಡಗಿದರು. ಮಾಸ್ಟರ್ “ಹೌದಾ” ಎಂದು ಉತ್ತರಿಸಿ, ಮಗುವನ್ನು ತನ್ನ ಸುಪರ್ದಿಗೆ ಪಡೆದುಕೊಂಡ.

ಎಷ್ಟೋ ತಿಂಗಳು ಮಾಸ್ಟರ್ ಮಗುವನ್ನು ಅಕ್ಕರೆಯಿಂದ ಬೆಳೆಸಿದ. ಆ ಯುವತಿ ತಾನು ಸುಳ್ಳು ಹೇಳಿದ ಪಾಪಪ್ರಜ್ಞೆ ಸಹಿಸಲಾಗದೇ, ತನ್ನ ತಂದೆ ತಾಯಿಯರಿಗೆ, ಅದೇ ಊರಿನ ಒಬ್ಬ ಯುವಕ ಇದಕ್ಕೆಲ್ಲ ಕಾರಣ ಎಂದು ನಿಜ ಹೇಳಿದಳು.

ಕೂಡಲೇ ಯುವತಿಯ ತಂದೆ ತಾಯಿ, ಮಾಸ್ಟರ್ ಮನೆಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿ, ಅವನ ಕ್ಷಮೆ ಕೇಳಿ ಮಗುವನ್ನು ವಾಪಸ್ಸು ಕೊಡಬೇಕೆಂದು ಬೇಡಿಕೊಂಡರು.

ಮಾಸ್ಟರ್ “ಹೌದಾ” ಎಂದು ಉತ್ತರಿಸಿ, ಮಗುವನ್ನು ಅವರಿಗೆ ಒಪ್ಪಿಸಿದ.

Leave a Reply