ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಭಾರ ಇರುವುದಿಲ್ಲ. ಆ ಹುಡುಗಿಯ ತಮ್ಮನನ್ನು ತಕ್ಕಡಿಯಲ್ಲಿ ತೂಗಿದ್ದರೆ ಖಂಡಿತವಾಗಿಯೂ ಅವನು ಒಂದಿಷ್ಟು ಕಿಲೋ ಭಾರಕ್ಕೆ ಸಮನಾಗಿ ತೂಗುತ್ತಿದ್ದ. ಆದರೆ ಪ್ರೇಮದ ತಕ್ಕಡಿಯಲ್ಲಿ ಆ ಭಾರ ಮಾಯವಾಗಿ ಹೋಗಿತ್ತು… ~ ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಕ್ಕಿಗಳ ಅತ್ಯಂತ ಇಷ್ಟದ ಹಾಡುಗಳನ್ನ
ನೀವು ಯಾವತ್ತೂ ಕೇಳಿರಲಾರಿರಿ.
ಹಕ್ಕಿಗಳ ಎದೆಯಾಳದ ಹಾಡು
ಕೇವಲ ಅಕಾಶದಲ್ಲಿ ನಿರಾಳವಾಗಿ ರೆಕ್ಕೆ ಬಿಚ್ಚಿದಾಗ,
ಬಿಡುಗಡೆಯ ಆಫೀಮು ಒಳಕ್ಕಿಳಿದಾಗ ಮಾತ್ರ.
ಕೈದಿಗಳಿಗಂತೂ ಇರಲೇಬೇಕು ಈ ಒಂದು ನಂಬಿಕೆ;
ಒಂದಿಲ್ಲೊಂದು ದಿನ ನಾವೂ ತಲುಪುತ್ತೇವೆ
ನಮ್ಮ ಇಷ್ಟದ ಜಾಗ,
ಎದುರಾಗುತ್ತೇವೆ ಬದುಕಿನ ನಿಯಮಾತೀತ
ಅದ್ಭುತ ಹತೋಟಿಗೆ,
ಮುಕ್ತರಾಗುತ್ತೇವೆ ಎಲ್ಲ ಗಾಯ, ಬಾಕಿಗಳಿಂದ.
ಒಮ್ಮೆ ಹಕ್ಕಿಯನ್ನು ನಿಲ್ಲಿಸಿ ಮಾತನಾಡಿಸಿದೆ.
ಈ ಕತ್ತಲ ಗುರುತ್ವದಿಂದ ಪಾರಾಗಿ
ಹೇಗೆ ಹಾರುತ್ತೀ ನೀನು ?
ಹಕ್ಕಿ ನಕ್ಕು ಹೇಳಿತು ;
ಪ್ರೇಮ, ನನ್ನ ಎತ್ತರಕ್ಕೇರಿಸುತ್ತದೆ .
-ಹಾಫಿಜ್
ಒಬ್ಬ ಸನ್ಯಾಸಿ ಹಿಮಾಲಯಕ್ಕೆ ತೀರ್ಥಯಾತ್ರೆಗೆಂದು ಹೋಗಿದ್ದ. ಪರ್ವತದ ಎತ್ತರ ತುಂಬ ನೇರವಾಗಿದ್ದರಿಂದ ಆತ ಧಾರಾಕಾರವಾಗಿ ಬೆವರತೊಡಗಿದ, ಆತನ ಉಸಿರುಕಟ್ಟತೊಡಗಿತು, ಆತ ಪೂರ ದಣಿದುಬಿಟ್ಟಿದ್ದ. ಅಷ್ಟರಲ್ಲಿ ಅವನಿಗೆ ಬೆನ್ನ ಮೇಲೆ ಒಂದು ಪುಟ್ಟ ಮಗುವನ್ನು ಹೊತ್ತ ಒಬ್ಬಳು ಒಂಭತ್ತು ಹತ್ತು ವರ್ಷದ ಹುಡುಗಿ ಬೆಟ್ಟ ಹತ್ತುತ್ತಿರುವುದು ಕಾಣಿಸಿತು. ಅವಳು ಕೂಡ ಬೆವರುತ್ತಿದ್ದಳಾದರೂ ಆಕೆಯ ಮುಖದಲ್ಲಿ ಕೊಂಚವೂ ಆಯಾಸವಿರಲಿಲ್ಲ. ಅವಳ ಉತ್ಸಾಹವನ್ನು ಕಂಡು ಆಶ್ಚರ್ಯಚಕಿತನಾದ ಸನ್ಯಾಸಿ, ಅವಳನ್ನು ಪ್ರೀತಿಯಿಂದ ಮಾತನಾಡಿಸಿದ, “ ಮಗಳೇ, ಈ ಬೆಟ್ಟದ ಹಾದಿ ನನ್ನಂಥವನಿಗೆ ಇಷ್ಟು ಆಯಾಸಕರವಾಗಿದೆ ಆದರೆ ನೀನು ಇಷ್ಟು ದೊಡ್ಡ ಭಾರ ಹೊತ್ತುಕೊಂಡಿದ್ದರೂ ನಿನ್ನ ಮುಖದಲ್ಲಿ ಚೂರೂ ಆಯಾಸ ಕಾಣುತ್ತಿಲ್ಲ, ನಿಜವಾಗಿಯೂ ನಿನಗೆ ದಣಿವಾಗುತ್ತಿಲ್ಲವೆ?”.
ಸನ್ಯಾಸಿಯ ಮಾತು ಕೇಳಿ ಆ ಪುಟ್ಟ ಹುಡುಗಿಗೆ ಸಿಟ್ಟು ಬಂತು, “ ಸ್ವಾಮಿಜೀ ಭಾರ ಹೊತ್ತು ನಡೆಯುತ್ತಿರುವವರು ನೀವು, ಆದರೆ ನನ್ನ ಬೆನ್ನ ಮೇಲಿರುವುದು ಭಾರ ಅಲ್ಲ, ಅದು ನನ್ನ ತಮ್ಮ”.
ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಭಾರ ಇರುವುದಿಲ್ಲ. ಆ ಹುಡುಗಿಯ ತಮ್ಮನನ್ನು ತಕ್ಕಡಿಯಲ್ಲಿ ತೂಗಿದ್ದರೆ ಖಂಡಿತವಾಗಿಯೂ ಅವನು ಒಂದಿಷ್ಟು ಕಿಲೋ ಭಾರಕ್ಕೆ ಸಮಗಾಗಿ ತೂಗುತ್ತಿದ್ದ. ಆದರೆ ಪ್ರೇಮದ ತಕ್ಕಡಿಯಲ್ಲಿ ಆ ಭಾರ ಮಾಯವಾಗಿ ಹೋಗಿತ್ತು. ಪ್ರೇಮದ ಮಾಂತ್ರಿಕತೆಯನ್ನು ನೋಡಿ, ಅದು ಗುರುತ್ವಾಕರ್ಷಣ ಶಕ್ತಿಯನ್ನು ಇಲ್ಲವಾಗಿಸಿಬಿಟ್ಟಿತ್ತು. ತಕ್ಕಡಿಯಲ್ಲಿ ತೂಗಿದರೆ, ಸನ್ಯಾಸಿ ಹೊತ್ತುಕೊಂಡಿದ್ದ ಭಾರ, ಆ ಪುಟ್ಟ ಹುಡುಗಿಯ ಬೆನ್ನಮೇಲೆ ಇದ್ದ ಅವಳ ತಮ್ಮನ ಭಾರಕ್ಕಿಂತ ಕಡಿಮೆ ಇರಬಹುದು ಆದರೆ ಆ ಪುಟ್ಟಹುಡುಗಿಯದು ಪ್ರೇಮದ ತಕ್ಕಡಿ, ಆ ತಕ್ಕಡಿಯಲ್ಲಿ ಅವಳ ತಮ್ಮ ಭಾರ ಅನಿಸುವುದೇ ಇಲ್ಲ. ಸನ್ಯಾಸಿ ತನ್ನ ತಮ್ಮನನ್ನು ಭಾರ ಎಂದದ್ದು ಹುಡುಗಿಗೆ ಸಿಟ್ಟು ತರಿಸಿತ್ತು.
ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಹೋಗುವಾಗ ನಿಮ್ಮಲ್ಲಿ ಭಕ್ತಿ ಇರುವುದಾದರೆ ನಿಮಗೆ ಆಯಾಸವಾಗುವುದಿಲ್ಲ. ನಿಮ್ಮೊಳಗೆ ಕೊಂಚ ಅಪನಂಬಿಕೆ ಇದ್ದರೂ ನಿಮಗೆ ಆ ಆಯಾಸವನ್ನು ಸಹಿಸುವುದು ಸಾಧ್ಯವಾಗುವುದಿಲ್ಲ.
ಬದುಕು ಸತ್ಯದ ಹುಡುಕಾಟವಾಗುವುದಾದರೆ, ಖುಶಿ ಮತ್ತು ದುಗುಡ ಯಾವುದೂ ನಿಮಗೆ ಭಾರವಲ್ಲ.
ಒಮ್ಮೆ ಒಬ್ಬ ಶಿಷ್ಯ, ಝೆನ್ ಮಾಸ್ಟರ್ ಗೆ ಪ್ರಶ್ನೆ ಹಾಕಿದ,
” ಮಾಸ್ಟರ್ ಜ್ಞಾನೋದಯ ಪಡೆಯಲು ಎಷ್ಟು ಸಮಯ ಬೇಕು? “
“ಏಳು ವರ್ಷ” ಮಾಸ್ಟರ್ ಉತ್ತರಿಸಿದ.
” ಕಷ್ಟ ಪಟ್ಟು ಸಾಧನೆ ಮಾಡಿದರೆ ? “
ಶಿಷ್ಯ ಮತ್ತೆ ಪ್ರಶ್ನೆ ಕೇಳಿದ.
” ಹದಿನಾಲ್ಕು ವರ್ಷ” ಮಾಸ್ಟರ್ ಉತ್ತರಿಸಿದ.