ಜ್ಞಾನೋದಯದ ಒರೆಗಲ್ಲು : ಓಶೋ ವ್ಯಾಖ್ಯಾನ

ಜ್ಞಾನೋದಯವನ್ನ ತುಂಬಿಕೊಂಡ ಮನುಷ್ಯನ ವರ್ತನೆ, ಅವನು ಬದುಕಿಗೆ ಪ್ರತಿಕ್ರಯಿಸುವುದು ಪ್ರತಿ ಕ್ಷಣಕ್ಕನುಸಾರನಾಗಿ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ದಿನ ಬುದ್ಧ ತನ್ನ ಶಿಷ್ಯರ ಜೊತೆ ಕುಳಿತಿದ್ದಾಗ, ಸಿಟ್ಟಿನಿಂದ ಆಗಮಿಸಿದ ಒಬ್ಬ ಮನುಷ್ಯ ಬುದ್ಧನ ಮೇಲೆ ಉಗುಳಿ ಬಿಟ್ಟ. ಬುದ್ಧನ ಶಿಷ್ಯರು ಕೆಂಡಾಮಂಡಲರಾದರು, ಪ್ರಧಾನ ಶಿಷ್ಯ ಆನಂದನ ಸಿಟ್ಟು ನೆತ್ತಿಗೇರಿತು, “ ಗುರುವೇ ಆಜ್ಞೆ ಮಾಡು, ನಾನು ಈ ಮನುಷ್ಯನಿಗೆ ಬುದ್ಧಿ ಕಲಿಸುತ್ತೇನೆ” ಆನಂದ ಬುದ್ಧ ಗುರುವನ್ನು ಬೇಡಿಕೊಂಡ.

ಆದರೆ ಬುದ್ಧ ಶಾಂತ ಚಿತ್ತದಿಂದ ತನ್ನ ಮುಖ ಒರೆಸಿಕೊಳ್ಳುತ್ತ ಮಾತನಾಡಿದ, “ ಮಹಾಶಯ, ನಾನು ಇನ್ನೂ ಕೋಪವನ್ನು ಕಳೆದುಕೊಂಡಿದ್ದೆನೋ ಇಲ್ಲವೋ ಎನ್ನುವುದನ್ನ ಪರೀಕ್ಷೆ ಮಾಡಿಕೊಳ್ಳಲಿಕ್ಕೆ ಸಂದರ್ಭವೊಂದನ್ನು ಸೃಷ್ಟಿಸಿದ್ದಕ್ಕೆ ನಿಮಗೆ ಧನ್ಯವಾದ. ನಿಮ್ಮ ವರ್ತನೆ ನನ್ನಲ್ಲಿ ಸಿಟ್ಟು ಮೂಡಿಸಲಿಲ್ಲ, ನನಗೆ ಖುಶಿಯಾಗುತ್ತಿದೆ. ಇಂಥದೇ ಒಂದು ಸಂದರ್ಭವನ್ನ ನೀವು ಆನಂದನಿಗೂ ಲಭ್ಯ ಮಾಡಿದಿರಿ, ಆನಂದ ಇನ್ನೂ ಸಾಧನೆ ಮಾಡಬೇಕು ಎನ್ನುವ ಸಂದೇಶ ಬಹುಶಃ ಈಗ ಅವನಿಗೆ ತಲುಪಿರಬೇಕು. ಹಾಗಾಗಿ ನಮ್ಮಿಬ್ಬರ ಪರವಾಗಿ ಧನ್ಯವಾದಗಳನ್ನು ಸ್ವೀಕರಿಸಿ. ನಿಮಗೆ ಮತ್ತೆ ಯಾವಾಗಲಾದರೂ ಇನ್ನೊಬ್ಬರ ಮೇಲೆ ಉಗುಳುವ ಮನಸ್ಸಾದರೆ, ನಮ್ಮ ಆಶ್ರಮದ ಬಾಗಿಲು ನಿಮಗಾಗಿ ಸದಾ ತೆರೆದಿರುತ್ತವೆ”.

ಬುದ್ಧನ ಮಾತುಗಳಿಂದ ಆ ವ್ಯಕ್ತಿಗೆ ದಿಗ್ಭ್ರಮೆಯಾಯಿತು. ತನ್ನ ವರ್ತನೆಯಿಂದ ಬುದ್ಧ ಕೆರಳಬಹುದು ಎಂದು ನಿರೀಕ್ಷಿಸಿದವನಿಗೆ ಬುದ್ಧನ ಮಾತುಗಳನ್ನ ಕೇಳಿ ತನ್ನ ಕಿವಿಯನ್ನೇ ನಂಬಲಾಗಲಿಲ್ಲ. ಆ ಇಡೀ ರಾತ್ರಿ ಅವನಿಗೆ ನಿದ್ದೆ ಬರಲಿಲ್ಲ, ಹಾಸಿಗೆಯಲ್ಲಿ ಮಗ್ಗಲು ಬದಲಿಸುತ್ತಲೇ ಇದ್ದ. ಬುದ್ಧನ ಶಾಂತ ಮುಖ, ಅಂತಃಕರಣ ತುಂಬಿದ ಕಣ್ಣುಗಳು ಮತ್ತೆ ಮತ್ತೆ ಅವನ ಕಣ್ಣ ಮುಂದೆ ಬರತೊಡಗಿದವು. ಬುದ್ಧ ಆ ವ್ಯಕ್ತಿಗೆ ಧನ್ಯವಾದ ಹೇಳಿದಾಗ, ಅದು ಕೇವಲ ಶಿಷ್ಟಾಚಾರವಾಗಿರಲಿಲ್ಲ, ಕೇವಲ ತನ್ನ ಸಿಟ್ಟನ್ನ ತೋರಿಸಿಕೊಳ್ಳದಿರುವ ತಂತ್ರವಾಗಿರಲ್ಲ, ಬುದ್ಧ ತನ್ನ ಸಮಗ್ರವನ್ನು ಒಂದಾಗಿಸಿಕೊಂಡು ತನ್ನ ಮನಸ್ಪೂರ್ತಿಯಿಂದ ಧನ್ಯವಾದ ಹೇಳಿದ್ದ, ಇದರಲ್ಲಿ ಯಾವ ತೋರಿಕೆಯೂ ಇರಲಿಲ್ಲ. ಆ ವ್ಯಕ್ತಿಗೆ ತನ್ನ ಮೇಲೆಯೇ ಅಸಹ್ಯವಾಗತೊಡಗಿತು, ಬುದ್ಧನಂಥ ಮನುಷ್ಯನ ಮೇಲೆ ಉಗುಳಿದ ತನ್ನ ವರ್ತನೆಗಾಗಿ ಆತ ತನ್ನನ್ನು ತಾನು ಕ್ಷಮಿಸಿಕೊಳ್ಳಲಾರದೇ ಹೋದ.

ಮರುದಿನ ಮುಂಜಾನೆ ಆ ವ್ಯಕ್ತಿ ಬುದ್ದನ ಬಳಿ ಹೋಗಿ, ಅವನ ಪಾದಗಳ ಮುಂದೆ ಅಡ್ಡ ಬಿದ್ದ, “ ಕ್ಷಮಿಸು ಗುರುವೇ ನನ್ನಿಂದ ಮಹಾ ಅಪರಾಧವಾಗಿದೆ” ಬುದ್ಧನನ್ನು ಬೇಡಿಕೊಂಡ.

“ ಆಗಿ ಹೋದದ್ದನ್ನ ಮರೆತುಬಿಡು, ಕ್ಷಮೆ ಕೇಳುವ ಅವಶ್ಯಕತೆ ಏನಿಲ್ಲ “ ಬುದ್ಧ ಆ ವ್ಯಕ್ತಿಯನ್ನು ಎಬ್ಬಿಸಿ ಮಾತನಾಡಿಸಿದ.

ಬುದ್ಧ ಗಂಗಾನದಿಯ ದಂಡೆಯ ಮೇಲೆ ಕುಳಿತಿದ್ದ. ತನ್ನ ಮುಂದೆ ಇನ್ನೂ ದೀನನಾಗಿ ನಿಂತಿದ್ದ ಆ ಮನುಷ್ಯನನ್ನು ಕುರಿತು ಮಾತು ಮುಂದುವರೆಸಿದ, “ ಆ ನದಿಯನ್ನ ನೋಡು, ಪ್ರತಿ ಕ್ಷಣ ಎಷ್ಟೊಂದು ನೀರು ಹರಿದು ಹೋಗುತ್ತಿದೆ. ಆ ಘಟನೆ ನಡೆದು ಇಪ್ಪತ್ನಾಲ್ಕು ಗಂಟೆಯಾಗಿ ಹೋಯ್ತು, ಯಾವ ಭಾವ ಆ ಸಮಯದಲ್ಲಿ ನಿನ್ನಲ್ಲಿ ಇತ್ತೋ ಅದನ್ನು ಇನ್ನೂ ಯಾಕೆ ಹೊತ್ತುಕೊಂಡಿರುವೆ, ಮರೆತುಬಿಡು ಆಗಿ ಹೋದದ್ದನ್ನ”.

ಬುದ್ದ ತನ್ನ ಮಾತು ಮುಂದುವರೆಸಿದ, “ ನನಗೆ ನಿನ್ನ ಮೇಲೆ ನಿಜವಾಗಿಯೂ ಸಿಟ್ಟು ಬಂದಿರಲಿಲ್ಲ ಹಾಗಾಗಿ ನಾನು ನಿನ್ನ ಕ್ಷಮಿಸುವುದು ಹೇಗೆ? ಕ್ಷಮಿಸುವುದು ಕೂಡ ಒಂದು ಬಗೆಯ ಸೊಕ್ಕು ಅದನ್ನು ಸಿಟ್ಟು ಬಂದವ ಮಾತ್ರ ಮಾಡಬಲ್ಲ. ನಿನಗೆ ನಿಜವಾಗಿಯೂ ಕ್ಷಮೆ ಬೇಕನಿಸಿದರೆ, ಆನಂದನ ಕ್ಷಮೆ ಕೇಳು, ಅವನಿಗೆ ನಿನ್ನನ್ನು ಕ್ಷಮಿಸುವುದು ಸಾಧ್ಯವಾಗಬಹುದು”.

ಇದು ಜ್ಞಾನೋದಯವನ್ನ ತುಂಬಿಕೊಂಡ ಮನುಷ್ಯನ ವರ್ತನೆ, ಅವನು ಬದುಕಿಗೆ ಪ್ರತಿಕ್ರಯಿಸುವುದು ಪ್ರತಿ ಕ್ಷಣಕ್ಕನುಸಾರನಾಗಿ.

ಒಮ್ಮೆ ಇಬ್ಬರು ಝೆನ್ ಸನ್ಯಾಸಿಗಳು ನದಿಯಲ್ಲಿ ತಮ್ಮ ಊಟದ ತಟ್ಚೆ ತೊಳೆಯುತ್ತಿದ್ದಾಗ ಒಂದು ಚೇಳು ನದಿಯಲ್ಲಿ ಕೊಚ್ಚಿಕೊಂಡು ಹೋಗುವುದನ್ನು ಕಂಡರು.
ತಟ್ಚನೆ ಒಬ್ಬ ಸನ್ಯಾಸಿ ಅದನ್ನು ನದಿಯಿಂದ ಹೊರ ತೆಗೆದು ದಂಡೆಯ ಮೇಲೆ ಬಿಟ್ಟ. ಹೀಗೆ ಮಾಡುವಾಗ ಚೇಳು ಸನ್ಯಾಸಿಯ ಬೆರಳಿಗೆ ಕಚ್ಚಿಬಿಟ್ಟಿತು. ಸನ್ಯಾಸಿ ತಲೆ ಕೆಡಿಸಿಕೊಳ್ಳದೆ ಮತ್ತೆ ತಟ್ಟೆ ತೊಳೆಯುವುದನ್ನು ಮುಂದುವರೆಸಿದ.

ಸ್ವಲ್ಪ ಹೊತ್ತಿನ ನಂತರ ಚೇಳು ಮತ್ತೆ ಜಾರಿ ನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗ ತೊಡಗಿತು. ಸನ್ಯಾಸಿ ಮತ್ತೆ ಆ ಚೇಳನ್ನು ಎತ್ತಿ ದಂಡೆಯ ಮೇಲೆ ಬಿಟ್ಟ. ಚೇಳು ಮತ್ತೆ ಸನ್ಯಾಸಿಯ ಬೆರಳನ್ನು ಕಚ್ಚಿತು.

ಇದನ್ನೆಲ್ಲ ಗಮನಿಸುತ್ತಿದ್ದ ಇನ್ನೊಬ್ಬ ಸನ್ಯಾಸಿ ಕೇಳಿದ,

“ ಗೆಳೆಯಾ, ಕಚ್ಚುವುದು ಚೇಳಿನ ಸಹಜ ಧರ್ಮ, ಅದನ್ನು ಕಾಪಾಡಿ ಏನು ಪ್ರಯೋಜನ?

ಮೊದಲ ಸನ್ಯಾಸಿ ಉತ್ತರಿಸಿದ

“ ಗೆಳೆಯಾ, ನಾನು ಚೇಳನ್ನು ಕಾಪಾಡುತ್ತಿಲ್ಲ, ನನ್ನ ಸಹಜ ಧರ್ಮವನ್ನು ಕಾಪಾಡುತ್ತಿದ್ದೆನೆ ”

Leave a Reply