ಸಲಹೆಗಾರ ನಸ್ರುದ್ದೀನ್ ಹೇಳಿದ ಸತ್ಯ : ಓಶೋ ವ್ಯಾಖ್ಯಾನ

ಬದುಕನ್ನ ಆನಂದಿಂದಿಸಿ ಆದರೆ ಬದುಕಿನ ಮೇಲೆ ಒಂದು ಕಣ್ಣಿರಲಿ. ಸಾಧಕನಿಗೆ ಅವಶ್ಯಕವಾದದ್ದು ಏನೆಂದರೆ, ಅರಿವು ಅವನನ್ನು ಸದಾ ನೆರಳಿನಂತೆ ಹಿಂಬಾಲಿಸಬೇಕು… ~ ಓಶೋ| ಕನ್ನಡಕ್ಕೆ: ಚಿದಂಬರ ನರೇಂದ್ರ

ಇದು ಒಂದು ಸೂಫಿ ಕಥೆ.

ಒಮ್ಮೆ ನಸ್ರುದ್ದೀನ್ ನನ್ನು ಚಕ್ರವರ್ತಿಗೆ ಸಲಹೆಗಾರನನ್ನಾಗಿ ನೇಮಿಸಲಾಯಿತು. ಅವನು ರಾಜನಿಗೆ ಪ್ರತಿಯೊಂದು ವಿಷಯದಲ್ಲೂ ಸಲಹೆ ನೀಡುತ್ತ ಬಹುಬೇಗ ರಾಜನ ಮೆಚ್ಚುಗೆಗೆ ಪಾತ್ರನಾದ.

ಒಂದು ದಿನ ನಸ್ರುದ್ದೀನ್ ಚಕ್ರವರ್ತಿಯೊಂದಿಗೆ ಊಟಕ್ಕೆ ಕುಳಿತಿದ್ದ. ಅಂದು ಅರಮನೆಯ ಅಡುಗೆಯವ ಬೆಂಡೆಕಾಯಿ ಪಲ್ಯ ಮಾಡಿದ್ದ. ಚಕ್ರವರ್ತಿಗೆ ಬೆಂಡೆ ಕಾಯಿ ಪಲ್ಯ ತುಂಬ ಇಷ್ಟವಾಯ್ತು. ಅವನು ಮತ್ತಷ್ಟು ಇನ್ನಷ್ಟು ಪಲ್ಯ ಹಾಕಿಸಿಕೊಂಡು ತಿಂದ.

“ಮಹಾರಾಜ ನಿನಗೆ ಬೆಂಡೆಕಾಯಿ ಪಲ್ಯ ಇಷ್ಟವಾಗುವುದರ ಹಿಂದೆ ನಿನ್ನ ಪೂರ್ವಜರ ಆಶೀರ್ವಾದವಿದೆ. ಇತಿಹಾಸ ನೋಡಿದರೆ ಬಹುತೇಕ ಜ್ಞಾನಿಗಳಿಗೆ ಬೆಂಡೆಕಾಯಿ ಪಲ್ಯ ಎಂದರೆ ಪ್ರಾಣ. ಯಾರಿಗೆ ತರಕಾರಿಗಳ ಬಗ್ಗೆ ಜ್ಞಾನವಿದೆಯೋ ಅವರೆಲ್ಲ ಒಕ್ಕೊರಲನಿಂದ ಒಪ್ಪಿಕೊಳ್ಳುವ ವಿಷಯವೆಂದರೆ, ಬೆಂಡೆಕಾಯಿ ತರಕಾರಿಗಳ ರಾಜ, ಅದರಂಥ ಅದ್ಭುತ ತರಕಾರಿ ಇನ್ನೊಂದಿಲ್ಲ. ಬೆಂಡೆಕಾಯಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಪ್ರಾಪ್ತವಾಗುತ್ತದೆ, ಅದು ಮನುಷ್ಯನನ್ನು ಸದಾ ಆರೋಗ್ಯದಿಂದ ಇಡುತ್ತದೆ, ಹರೆಯವನ್ನು ಕಾಪಾಡುತ್ತದೆ, ದೀರ್ಘ ಆಯಸ್ಸನ್ನು ಸಾಧ್ಯ ಮಾಡುತ್ತದೆ. ನಿನಗೆ ಬೆಂಡೆಕಾಯಿ ಪಲ್ಯ ಇಷ್ಟವಾದದ್ದು ಒಳ್ಳೆಯದಾಯ್ತು”. ನಸ್ರುದ್ದೀನ್ ಬೆಂಡೆಕಾಯಿ ಉಪಯೋಗಗಳನ್ನ ಚಕ್ರವರ್ತಿಗೆ ತಿಳಿಸಿ ಹೇಳಿದ.

“ಅರೆ! ನನಗೇ ಗೊತ್ತಿರಲಿಲ್ಲವಲ್ಲ ಬೇಂಡೆಕಾಯಿಂದ ಇಷ್ಟೆಲ್ಲ ಉಪಯೋಗಗಳಿವೆಯೆಂದು!” ರಾಜನಿಗೆ ನಸ್ರುದ್ದೀನ್ ಹೇಳಿದ ಬೆಂಡೆಕಾಯಿ ಮಹಾತ್ಮೆ ಕೇಳಿ ಅಡುಗೆಯವನಿಗೆ ಆಶ್ಚರ್ಯವಾಯಿತು.

ರಾಜನಿಗೆ ಇಷ್ಟ ವೆಂದು ಮರುದಿನ ಮತ್ತೆ ಅಡುಗೆಯವ ಬೆಂಡೆಕಾಯಿ ಬಳಸಿ ಇನ್ನೊಂದುರೀತಿಯ ಪಲ್ಯ ಮಾಡಿದ. ಮತ್ತೊಮ್ಮೆ ನಸ್ರುದ್ದೀನ್ ರಾಜನ ಎದುರು ಬೆಂಡೆಕಾಯಿಯ ಗುಣಗಾನ ಮಾಡಿದ. ಮೂರನೇಯ ದಿನ ಮತ್ತೆ ರಾಜನ ಊಟಕ್ಕೆ ಬೆಂಡೆಕಾಯಿ ಬಳಸಲಾಯಿತು. ಆರನೇ ದಿನ ಚಕ್ರವರ್ತಿ ಸಿಟ್ಟಿನಿಂದ ಊಟದ ತಟ್ಟೆಯನ್ನ ಎಸೆದುಬಿಟ್ಟ. “ ನಿನಗೇನಾದರೂ ತಲೆ ಕೆಟ್ಟಿದೆಯಾ? ಈ ಬೆಂಡೆಕಾಯಿ ತಿಂದು ತಿಂದು ಬಾಯಿ ಕೆಟ್ಟು ಹೋಗಿದೆ. ನಮ್ಮ ರಾಜ್ಯದಲ್ಲಿ ಇನ್ನೊಂದು ತರಕಾರಿ ಸಿಗೋದಿಲ್ವ? ಇಡೀ ಜನ್ಮ ನಾನು ಬೆಂಡೆಕಾಯಿ ತಿನ್ಬೇಕಾ?”. ಚಕ್ರವರ್ತಿ, ಅಡುಗೆಯವನ ಮೇಲೆ ಕೆಂಡಾಮಂಡಲನಾದ.

ರಾಜನ ಪಕ್ಕ ಊಟಕ್ಕೆ ಕುಳಿತಿದ್ದ ನಸ್ರುದ್ದಿನ್ ತಕ್ಷಣ ಮಾತನಾಡಿದ, “ ಜಗತ್ತಿನ ಬಹಳಷ್ಟು ಆರೋಗ್ಯ ತಜ್ಞರ ಪ್ರಕಾರ, ಬೆಂಡೆಕಾಯಿ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ, ಬೆಂಡೆಕಾಯಿ ತಿನ್ನುವುದರಿಂದ ನಿಧಾನವಾಗಿ ಕಣ್ಣಿನ ದೃಷ್ಟಿ ಮಸುಕಾಗುತ್ತದೆ, ಮುಖದ ಮೇಲೆ ಸುಕ್ಕುಗಳು ಮೂಡುತ್ತವೆ, ವೃದ್ಧಾಪ್ಯ ಬೇಗ ಹತ್ತಿರವಾಗುತ್ತದೆ ಮತ್ತು ಸಾವಿನ ಸಮಯದಲ್ಲಿ ವ್ಯಕ್ತಿ ತೀವ್ರ ಹೊಟ್ಟೆ ನೋವು ಅನುಭವಿಸುತ್ತಾನೆ”.

ನಸ್ರುದ್ದೀನ್ ನ ಮಾತುಗಳನ್ನ ರಾಜನಿಗೆ ತುಂಬ ಆಶ್ಚರ್ಯವಾಯಿತು, “ ಇಷ್ಟು ದಿನ ನೀನು ಹೇಳುತ್ತಿದ್ದ ಬೆಂಡೆಕಾಯಿ ಮಹಿಮೆಯಿಂದ ಪ್ರಭಾವಿತನಾಗಿ ಅಡುಗೆಯ ಪ್ರತಿದಿನ ಬೆಂಡೆಕಾಯಿ ಪಲ್ಯ ಮಾಡುತ್ತಿದ್ದಾನೆ. ಇದೇನು ಇವತ್ತು ನೀನು ಬೆಂಡೆಕಾಯಿಯ ಮೇಲೆ ಆರೋಪ ಮಾಡುತ್ತಿದ್ದೀ?” ರಾಜ, ನಸ್ರುದ್ದೀನ್ ನ ಪ್ರಶ್ನೆ ಮಾಡಿದ.

“ ಮಹಾರಾಜ ನಾನು ನಿಮ್ಮ ಸೇವಕ, ಬೆಂಡೆಕಾಯಿಯ ಮನೆಯ ಆಳಲ್ಲ. ನನಗೆ ಬೆಂಡೆಕಾಯಿಯ ಬಗ್ಗೆ ಏನೂ ಗೊತ್ತಿಲ್ಲ. ನಮಗೆ ಅವತ್ತು ಬೆಂಡೆಕಾಯಿ ಇಷ್ಟವಾಯ್ತೆಂದು ನಾನು ಅದರ ಗುಣಗಾನ ಮಾಡಿದೆ. ನನಗೆ ಸಂಬಳ ಕೊಡುವವ ನೀನು, ಬೆಂಡೆಕಾಯಿ ಅಲ್ಲ. ನಿನಗೆ ಇಷ್ಟ ಇಲ್ಲ ಎಂದ ಮೇಲೆ ನಾನು ಬೆಂಡೆಕಾಯಿಯನ್ನು ತೀವ್ರವಾಗಿ ಖಂಡಿಸುವವನೇ”. ನಸ್ರುದ್ದೀನ್ ರಾಜನಿಗೆ ತಾನು ಕೆಲಸ ಮಾಡುವ ರೀತಿಯನ್ನು ಕುರಿತು ತಿಳಿಸಿ ಹೇಳಿದ.

ನಿಮ್ಮ ನಿಮ್ಮ ಖುಶಿಗಳನ್ನ ಇನ್ನೊಮ್ಮೆ ನೋಡಿಕೊಳ್ಳಿ. ನಿಮ್ಮ ಖುಶಿಗಳು ನಿಮಗೆ ಅರ್ಥಪೂರ್ಣ ಬದುಕೊಂದನ್ನು ಸಾಧ್ಯಮಾಡಲಾರವು, ಅವು ಕೇವಲ ಸೂಪರ್ ಫೀಶಿಯಲ್. ನಾನು ಈ ಖುಶಿಗಳ ವಿರುದ್ಧ ಇಲ್ಲ ಇದು ನಿಮಗೆ ನೆಪಿರಲಿ. ಯಾವಾಗಲೋ ಒಮ್ಮೆ ಬೆಂಡೆಕಾಯಿ ಓಕೆ, ಆದರೆ ಅದೇ ಸರ್ವಸ್ವ ಎಂದುಕೊಳ್ಳುವುದು ಮಹಾ ಅಪಾಯಕಾರಿ.

ಬದುಕನ್ನ ಆನಂದಿಂದಿಸಿ ಆದರೆ ಬದುಕಿನ ಮೇಲೆ ಒಂದು ಕಣ್ಣಿರಲಿ. ಸಾಧಕನಿಗೆ ಅವಶ್ಯಕವಾದದ್ದು ಏನೆಂದರೆ, ಅರಿವು ಅವನನ್ನು ಸದಾ ನೆರಳಿನಂತೆ ಹಿಂಬಾಲಿಸಬೇಕು. ನೀವು ಏನು ಮಾಡಿದರೂ, ಎಚ್ಚರಿಕೆಯಿಂದ ಮಾಡಿ, ನಿಮ್ನ ಪ್ರತೀ ಕೆಲಸದಲ್ಲೂ ಅರಿವು ನಿಮ್ಮ ಜೊತೆಗಿರಲಿ.

Leave a Reply