ಓದುವಿಕೆ : To have or to be #16

Being ಜೀವನ ವಿಧಾನದ ಓದುಗರು ಬಹುತೇಕ ತಾಳುವ ನಿರ್ಣಯವೆಂದರೆ, ಹೆಚ್ಚು ಬೆಲೆ ಬಾಳುವ ಪುಸ್ತಕ ಕೂಡ ಯಾವ ಉಪಯೋಗಕ್ಕೆ ಬಾರದು ಅಥವಾ ಅದರ ಉಪಯೋಗ ಕೇವಲ ಸೀಮಿತವಾದದ್ದು… ಮೂಲ: ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ.

ಹಿಂದಿನ ಭಾಗವನ್ನು ಇಲ್ಲಿ ಓದಿ: https://aralimara.com/2023/04/08/fromm-12/

Reading

ಸಂಭಾಷಣೆಗೆ ಅನ್ವಯವಾಗುವ ಎಲ್ಲ ಅಂಶಗಳು ಓದುವಿಕೆಗೂ ಅನ್ವಯವಾಗುತ್ತವೆ, ನಿಜದಲ್ಲಿ ಓದುವಿಕೆ ಲೇಖಕನ ಜೊತೆಗಿನ ಸಂಭಾಷಣೆ , ಅಥವಾ ಲೇಖಕನ ಜೊತೆ ಸಂಭಾಷಣೆ ಸಾಧ್ಯವಾದಾಗಲೇ ಅದು ಓದುವಿಕೆ. ಖಂಡಿತ, ಓದುವಿಕೆಯಲ್ಲಿ (ವೈಯಕ್ತಿಕ ಸಂಭಾಷಣೆಯಲ್ಲಿ ಕೂಡ) ನಾನು ಯಾರನ್ನು ಓದುತ್ತಿದ್ದೇನೋ ( ಅಥವಾ ಯಾರ ಜೊತೆ ಮಾತನಾಡುತ್ತಿದ್ದೇನೋ) ಅದು ಬಹಳ ಮುಖ್ಯ. ಕಲೆಗೆ ಹತ್ತಿರವಾಗದ ಒಂದು ಚೀಪ್ ಕಾದಂಬರಿಯನ್ನು ಓದುವುದೆಂದರೆ ಹಗಲುಗನಸನ್ನ ಕಂಡಂತೆ. ಇಂಥ ಓದುವಿಕೆ ಸೃಜನಾತ್ಮಕ ಪ್ರತಿಕ್ರಿಯೆಯನ್ನ ಸಾಧ್ಯಮಾಡುವುದಿಲ್ಲ ; ಪುಸ್ತಕದಲ್ಲಿನ ಸಾಲುಗಳನ್ನ ಟೆಲಿವಿಜನ್ ಶೋ ನಂತೆ ಅಥವಾ, ಟೆಲಿವಿಜನ್ ನೋಡುವಾಗ ಮೆಲ್ಲುವ ಪಾಪ್ ಕಾರ್ನ್ ನಂತೆ ರುಚಿಯ ಬಗ್ಗೆ ಯಾವ ಗಮನ ಇಲ್ಲದಂತೆ ಕಂಸ್ಯೂಮ್ ಮಾಡಲಾಗುತ್ತದೆ. ಆದರೆ ಶ್ರೇಷ್ಠ ಕಲಾತ್ಮಕ ಕೃತಿಗಳನ್ನ, ಉದಾಹರಣೆಗೆ Balzac ನಂಥವನ ಕಾದಂಬರಿಗಳನ್ನ ಅಂತರಂಗದ ಭಾಗವಹಿಸುವಿಕೆಯೊಂದಿಗೆ, ಸೃಜನಾತ್ಮಕವಾಗಿ ಓದುವುದು ಸಾಧ್ಯ, being ಜೀವನ ವಿಧಾನದಲ್ಲಿ ಸಾಧ್ಯವಾಗುವಂತೆ. ಆದರೂ, ಬಹುಶಃ ಬಹಳಷ್ಟು ಬಾರಿ ಇಂಥ ಕೃತಿಗಳನ್ನ ಕೂಡ having ಜೀವನ ವಿಧಾನದ ಬಳಸುವಿಕೆಯ ಮಾರ್ಗದಲ್ಲಿ (consuming mode) ಓದಲಾಗುತ್ತದೆ. ಕೃತಿ ಕುತೂಹಲವನ್ನ ಕೆರಳಿಸಿದಾಗ, ಓದುಗರು ಕತೆಯ ಪ್ಲಾಟ್ ತಿಳಿದುಕೊಳ್ಳಲು ಉತ್ಸುಕರಾಗುತ್ತಾರೆ : ಕಥಾನಾಯಕ ಕೊನೆಗೆ ಬದುಕುತ್ತಾನೋ ಸಾಯುತ್ತಾನೋ? ನಾಯಕಿಯನ್ನ ನಾಯಕ ಒಲಿಸಿಕೊಳ್ಳುತ್ತಾನೋ ಅಥವಾ ನಾಯಕಿ ನಾಯಕನನ್ನು ವಿರೋಧಿಸುತ್ತಾಳ? ; ಓದುಗರಿಗೆ ಉತ್ತರಗಳು ಬೇಕು. ಕಾದಂಬರಿ ಅವರನ್ನು ಪ್ರಚೋದಿಸಲು ಬೇಕಾದ ಫೋರ್ ಪ್ಲೇ ದಂತೆ ಕೆಲಸ ಮಾಡುತ್ತದೆ; ಕತೆಯ ಸುಖಾಂತ ಅಥವಾ ದುಃಖಾಂತ ಅವರ ಅನುಭವವನ್ನು ಪರಾಕಾಷ್ಠತೆಗೆ ಒಯ್ದು ಮುಟ್ಟಿಸುತ್ತದೆ : ಕತೆಯ ಕೊನೆ ಅವರಿಗೆ ಗೊತ್ತಾದಾಗ, ಅವರಿಗೆ ಇಡೀ ಕತೆಯ ಅನುಭವವಾಗುತ್ತದೆ, ಥೇಟ್ ಅವರ ನೆನಪಿನ ಸರಣಿಯಿಂದ ಆಯ್ದು ತೆಗೆದಂತೆ. ಆದರೆ ಅವರ ತಿಳುವಳಿಕೆಯಲ್ಲಿ ಯಾವ ಹೆಚ್ಚುವರಿಯೂ ಆಗುವುದಿಲ್ಲ; ಅವರಿಗೆ ಕತೆಯೊಳಗಿನ ವ್ಯಕ್ತಿಯ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲ ಹಾಗಾಗಿ, ಮನುಷ್ಯ ಸ್ವಭಾವದ ಕುರಿತಾಗಿ ಅವರಿಗೆ ಯಾವ ಆಳ ಒಳನೋಟಗಳೂ ಲಭ್ಯವಾಗಿಲ್ಲ, ಅಥವಾ ಕತೆಯ ಕಾರಣವಾಗಿ ಅವರಿಗೆ ಸ್ವತಃ ತಮ್ಮ ಬಗ್ಗೆ ಯಾವ ಹೆಚ್ಚಿನ ತಿಳುವಳಿಕೆಯೂ ಸಾಧ್ಯವಾಗಿಲ್ಲ.

ಫಿಲಾಸೊಫಿ ಯ ಪುಸ್ತಕವಾಗಲಿ ಅಥವಾ ಇತಿಹಾಸದ ಪುಸ್ತಕವಾಗಲಿ, ಜನರ ಓದುವಿಕೆಯ ವಿಧಾನಗಳಲ್ಲಿ ಯಾವ ಬದಲಾವಣೆಯೂ ಇಲ್ಲ. ಒಬ್ಬರು ಫಿಲಾಸೊಫಿ ಅಥವಾ ಇತಿಹಾಸದ ಪುಸ್ತಕ ಓದುವ ವಿಧಾನವನ್ನು ಶಿಕ್ಷಣದ ಮೂಲಕ ಬದಲಾಯಿಸಬಹುದು. ಸ್ಕೂಲ್ ಗಳು ತಮ್ಮ ವಿದ್ಯಾರ್ಥಿಗಳಿಗೆ ಕೆಲಮಟ್ಟಿನ “ಸಾಂಸ್ಕೃತಿಕ ಆಸ್ತಿಯನ್ನ” ವರ್ಗಾಯಿಸುವ ಉದ್ದೇಶವನ್ನು ಹೊಂದಿರುತ್ತವೆ, ಮತ್ತು ಶಾಲಾಜೀವನದ ಕೊನೆಗೆ ವಿದ್ಯಾರ್ಥಿಗಳು ಇಷ್ಟಿಷ್ಟು ಮಟ್ಟದ ತಿಳುವಳಿಕೆಯನ್ನ ಹೊಂದಿದ್ದಾರೆ (having) ಎಂದು ಪ್ರಮಾಣಿಕರಿಸಲಾಗುತ್ತದೆ (certify). ಲೇಖಕರ ಮುಖ್ಯ ವಿಚಾರಗಳನ್ನು ರಿಪೀಟ್ ಮಾಡಲು ಸಹಾಯವಾಗುವಂತೆ ವಿದ್ಯಾರ್ಥಿಗೆ ಪುಸ್ತಕಗಳನ್ನ ಓದುವುದನ್ನ ಕಲಿಸಲಾಗುತ್ತದೆ. ಈ ಬಗೆಯ ಓದಿನ ಕಾರಣವಾಗಿಯೇ ವಿದ್ಯಾರ್ಥಿಗಳಿಗೆ ಪ್ಲೇಟೋ, ಆರಿಸ್ಟಾಟಲ್, Descartes, ಸ್ಪಿನೋಜ, Leibniz, ಕ್ಯಾಂಟ್, Heidegger, ಸಾರ್ತ್ರೆ ಮುಂತಾದವರು ಗೊತ್ತಿರುವುದು.

ಹೈಸ್ಕೂಲ್ ಮಟ್ಟದಿಂದ ಹಿಡಿದು ಪದವಿ ಮಟ್ಟದವರೆಗಿನ ಬೇರೆ ಬೇರೆ ಮಟ್ಟದ ಶಿಕ್ಷಣಗಳ ನಡುವಿನ ವ್ಯತ್ಯಾಸವನ್ನ, ವಿದ್ಯಾರ್ಥಿಗಳು ಗಳಿಸಿಕೊಂಡಿರುವ ಸಾಂಸ್ಕೃತಿಕ ಆಸ್ತಿಯ ಪ್ರಮಾಣದ (amount) ಮೇಲೆ ನಿರ್ಧರಿಸಲಾಗುತ್ತದೆ. ಇಂಥ ಆಸ್ತಿಯ ಪ್ರಮಾಣ ಮುಂದೆ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಗಳಿಸಲಿರುವ ಭೌತಿಕ ಆಸ್ತಿಯ (material property) ಪ್ರಮಾಣಕ್ಕೆ ಹೆಚ್ಚು ಕಡಿಮೆ ಹೋಲಿಕೆಯಾಗುತ್ತದೆ ಎಂದು ತಿಳಿಯಲಾಗುತ್ತದೆ. ಶಾಲೆಗಳಲ್ಲಿ ಅತ್ಯಂತ ಜಾಣರು ಎಂದು ಹೇಳಲಾಗುವ ವಿದ್ಯಾರ್ಥಿಗಳು ಯಾರೆಂದರೆ, ಯಾರು ಬೇರೆ ಬೇರೆ ಫಿಲಾಸೊಫರ್ ಗಳು ಹೇಳಿದ್ದನ್ನ ನಿಖರವಾಗಿ ಮರು ಒಪ್ಪಿಸಬಲ್ಲರೋ ( ರಿಪೀಟ್ ಮಾಡಬಲ್ಲರೋ) ಅಂಥ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳು ಎಂಥವರೆಂದರೆ ಮ್ಯೂಸಿಯಂಗಳಲ್ಲಿ ವೀಕ್ಷಕರೆದುರು ಪಾಠ ಒಪ್ಪಿಸುವ ಎಲ್ಲ ಮಾಹಿತಿ ಬಾಯಿಪಾಠ ಮಾಡಿರುವ ಗೈಡ್ ಗಳಂತೆ.

ಈ ವಿದ್ಯಾರ್ಥಿಗಳು ಏನನ್ನು ಕಲಿಯಲು ವಿಫಲರಾಗುತ್ತಾರೆಂದರೆ, ತಾವು ಗಳಿಸಿರುವ ಇಂಥ ಮಾಹಿತಿ ಆಸ್ತಿಯ ಆಚೆ ಹಬ್ಬಿಕೊಂಡಿರುವ ಜ್ಞಾನದ ಬಗ್ಗೆ. ಅವರು ಈ ಫಿಲಾಸೊಫರ್ ಗಳನ್ನ ಪ್ರಶ್ನಿಸುವುದನ್ನ, ಅವರ ಜೊತೆ ವಾಗ್ವಾದ ಮಾಡುವುದನ್ನ ಕಲಿಯುವುದಿಲ್ಲ. ಅವರು ಫಿಲಾಸೊಫರ್ ಗಳ ಸ್ವಂತದ ದ್ವಂದ್ವಗಳನ್ನ, ಯಾವ ಸಮಸ್ಯೆಗಳನ್ನ ಬೇಕಂತಲೇ ಬಿಡಲಾಗಿದೆ, ಯಾವ ಪ್ರಶ್ನೆಗೆ ಉತ್ತರಕೊಡದೆ ನುಣುಚಿಕೊಳ್ಳಲಾಗಿದೆ ಎನ್ನುವುದನ್ನ ಗಮನಿಸಲು ಕಲಿಯುವುದಿಲ್ಲ. ಅವರು ಯಾವುದು ಹೊಸ ತಿಳುವಳಿಕೆ ಮತ್ತು ಯಾವುದು ಆ ಕಾಲದ common sense ಎನ್ನುವ ಕಾರಣಕ್ಕೆ ಲೇಖಕ ಹಳೆಯ ವಿಚಾರವನ್ನೇ ಮತ್ತೆ ಹೇಳಿದ್ದಾನೆ ಎನ್ನುವ ಬಗ್ಗೆ ಗಮನಹರಿಸುವುದನ್ನ ಕಲಿಯುವುದಿಲ್ಲ. ಯಾವಾಗ ಲೇಖಕ ಕೇವಲ ತನ್ನ ಬುದ್ಧಿಯನ್ನ ಉಪಯೋಗಿಸಿ ಹೇಳುತ್ತಿದ್ದಾನೆ ಯಾವಾಗ ತನ್ನ ಬುದ್ಧಿ ಮನಸ್ಸು ಎರಡನ್ನೂ ಉಪಯೋಗಿಸಿ ಮಾತನಾಡುತ್ತಿದ್ದಾನೆ ಎನ್ನುವ ವ್ಯತ್ಯಾಸವನ್ನು ಗುರುತಿಸುವುದನ್ನ ಅವರು ಕಲಿಯುವುದಿಲ್ಲ. ಅವರು, ಲೇಖಕ ನೈಜ (authentic) ಮನುಷ್ಯನಾ ಅಥವಾ ನಕಲಿ (fake) ವ್ಯಕ್ತಿತ್ವದವನಾ ಎನ್ನುವ ವ್ಯತ್ಯಾಸವನ್ನ ಗಮನಿಸುವುದನ್ನ ಕಲಿಯುವುದಿಲ್ಲ. ಹೀಗೇ ಇನ್ನೂ ಮುಂತಾದ ಸಂಗತಿಗಳನ್ನ ಕಲಿಯುವುದು ಅವರಿಗೆ ಸಾಧ್ಯವಾಗುವುದಿಲ್ಲ.

Being ಜೀವನ ವಿಧಾನದ ಓದುಗರು ಬಹುತೇಕ ತಾಳುವ ನಿರ್ಣಯವೆಂದರೆ, ಹೆಚ್ಚು ಬೆಲೆ ಬಾಳುವ ಪುಸ್ತಕ ಕೂಡ ಯಾವ ಉಪಯೋಗಕ್ಕೆ ಬಾರದು ಅಥವಾ ಅದರ ಉಪಯೋಗ ಕೇವಲ ಸೀಮಿತವಾದದ್ದು. ಅಥವಾ ಅವರು ಪುಸ್ತಕವನ್ನು ಪೂರ್ತಿ ಅರ್ಥಮಾಡಿಕೊಂಡಿದ್ದಾರೆ ಕೆಲವೊಮ್ಮೆ , ಲೇಖಕ ತಾನು ಬಹು ಮುಖ್ಯ ಎಂದು ತಿಳಿದುಕೊಂಡು ದಾಖಲಿಸಿದ್ದಕ್ಕಿಂತ ಹೆಚ್ಚು ಪರಿಪೂರ್ಣವಾಗಿ.

(ಮುಂದುವರೆಯುತ್ತದೆ)


(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )

1 Comment

Leave a Reply