ಕುರುಡನ ಕೈಯಲ್ಲಿ ಕಂದೀಲು: ಓಶೋ ವ್ಯಾಖ್ಯಾನ

ಕುರುಡು ಮನುಷ್ಯ ಕೈಯಲ್ಲಿ ಕಂದೀಲು ಹಿಡಿದುಕೊಂಡು ಕತ್ತಲಲ್ಲಿ ತನ್ನ ಮನೆಗೆ ಹೊರಟ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಒಬ್ಬ ಮನುಷ್ಯ, ಕುರುಡು ಮನುಷ್ಯನಿಗೆ ಡಿಕ್ಕಿ ಹೊಡೆದ… | ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ

ಒಮ್ಮೆ ಒಬ್ಬ ಕುರುಡು ಮನುಷ್ಯ ಝೆನ್ ಮಾಸ್ಟರ್ ನ ಭೇಟಿಗೆ ಬಂದಿದ್ದ. ಅವನು ಮಾಸ್ಟರ್ ಜೊತೆ ಮಾತು ಮುಗಿಸಿ ಅಲ್ಲಿಂದ ಹೊರಡುವಾಗ ಬಹಳ ರಾತ್ರಿಯಾಗಿತ್ತು. ಅಂದು ಅಮವಾಸ್ಯೆಯಾದ್ದರಿಂದ ಆಕಾಶದಲ್ಲಿ ಚಂದ್ರನಿರಲಿಲ್ಲ, ದಟ್ಟ ಮೋಡಗಳು ಆಕಾಶವನ್ನು ಆವರಿಸಿಕೊಂಡಿದಿದರಿಂದ ಒಂದು ನಕ್ಷತ್ರವೂ ಕಾಣಿಸುತ್ತಿರಲಿಲ್ಲ. ಇಷ್ಟು ಕಗ್ಗತ್ತಲೆಯಾದ್ದರಿಂದ ಝೆನ್ ಮಾಸ್ಟರ್ ಆ ಕುರುಡು ಮನುಷ್ಯನಿಗೆ ಒಂದು ಕಂದೀಲು ಕೊಟ್ಟ, “ ಕತ್ತಲು ಆಳವಾಗಿದೆ, ದಯವಿಟ್ಟು ಈ ಕಂದೀಲು ನಿನ್ನ ಜೊತೆಯಿರಲಿ”

ಮಾಸ್ಟರ್ ಮಾತು ಕೇಳಿ ಕುರುಡು ಮನುಷ್ಯ ಜೋರಾಗಿ ನಕ್ಕುಬಿಟ್ಟ, “ ಕುರುಡನಿಗೆ ಕಂದೀಲಿನಿಂದ ಏನು ಪ್ರಯೋಜನ? ನನಗೆ ಏನೂ ಕಾಣಿಸುವುದಿಲ್ಲ. ನನ್ನ ಕೈಯಲ್ಲಿ ಕಂದೀಲು ಇದ್ದರು ಒಂದೇ, ಇರದಿದ್ದರು ಒಂದೇ.”

“ಹೌದು ನಿನಗೆ ಏನೂ ಕಾಣಿಸುವುದಿಲ್ಲ ಎನ್ನುವುದು ನನಗೆ ಗೊತ್ತು ಆದರೆ ನಿನ್ನ ಕೈಯಲ್ಲಿ ಕಂದೀಲು ಇರುವುದರಿಂದ ಕತ್ತಲಲ್ಲಿ ನಿನಗೆ ಎದುರಾಗುವವರಿಗೆ ನೀನು ಕಾಣಿಸುತ್ತೀಯ, ಅವರು ನಿನಗೆ ಡಿಕ್ಕಿ ಹೊಡೆಯುವುದು ತಪ್ಪುತ್ತದೆ” ಝೆನ್ ಮಾಸ್ಟರ್ ಒತ್ತಾಯ ಪೂರ್ವಕವಾಗಿ ಆ ಕುರುಡು ಮನುಷ್ಯನ ಕೈಗೆ ಕಂದೀಲ ಕೊಟ್ಟು ಕಳುಹಿಸಿದ.

ಕುರುಡು ಮನುಷ್ಯ ಕೈಯಲ್ಲಿ ಕಂದೀಲು ಹಿಡಿದುಕೊಂಡು ಕತ್ತಲಲ್ಲಿ ತನ್ನ ಮನೆಗೆ ಹೊರಟ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಒಬ್ಬ ಮನುಷ್ಯ, ಕುರುಡು ಮನುಷ್ಯನಿಗೆ ಡಿಕ್ಕಿ ಹೊಡೆದ. “ ಏನು ವಿಷಯ ನೀನೂ ಕುರುಡನೇ ? ನನ್ನ ಕೈಯಲ್ಲಿರುವ ಕಂದೀಲು ನಿನಗೆ ಕಾಣಿಸಲಿಲ್ಲವೆ?” ಕುರುಡು ಮನುಷ್ಯ ತನಗೆ ಡಿಕ್ಕಿ ಹೊಡೆದವನನ್ನು ತರಾಟೆಗೆ ತೆಗೆದುಕೊಂಡ.

“ ಕ್ಷಮಿಸು, ನಾನೇನು ಕುರುಡನಲ್ಲ, ಆದರೆ ನಿನ್ನ ಕೈಯಲ್ಲಿರುವ ಕಂದೀಲು ಆರಿ ಹೋಗಿದೆ” ಎದುರಾದ ಮನುಷ್ಯ ಸಮಜಾಯಿಷಿ ಹೇಳಿದ.

ಕುರುಡು ಮನುಷ್ಯ ವಾಪಸ್ ಝೆನ್ ಮಾಸ್ಟರ್ ಬಳಿ ಹೋಗಿ ನಡೆದ ಸಂಗತಿಯನ್ನು ತಿಳಿಸಿ ಮಾತನಾಡಿದ, “ ಯಾವತ್ತೂ ಕುರುಡು ಮನುಷ್ಯನಿಗೆ ಕಂದೀಲು ಕೊಡಬೇಡ. ನನ್ನ ಕೈಯಲ್ಲಿ ಕಂದೀಲದ ಭರವಸೆ ಇಲ್ಲದೇ ಹೋಗಿದ್ದರೆ ನಾನು ಇನ್ನೂ ಹೆಚ್ಚು ಜಾಗರೂಕನಾಗಿ ನಡೆಯುತ್ತಿದ್ದೆ. ನಾನು ಯಾವಾಗಲೂ ಜಾಗರೂಕತೆಯಿಂದ ನಡೆಯುತ್ತೇನೆ ಆದರೆ ನನ್ನ ಕೈಯಲ್ಲಿ ಕಂದೀಲು ಇದ್ದುದರಿಂದ, ನಾನು ಕುರುಡ ಎನ್ನುವುದನ್ನ ಮರೆತು ನಡೆದುಬಿಟ್ಟೆ, ನನ್ನ ಕೈಯಲ್ಲಿದ್ದ ಕಂದೀಲು ಆರಿ ಹೋಗಿದ್ದು ಗೊತ್ತಾಗದೆಯೇ. ನನ್ನ ಕೈಯಲ್ಲಿದ್ದ ಕಂದೀಲು ಆರಿ ಹೋಗಿದ್ದು ನನಗೆ ಹೇಗೆ ಗೊತ್ತಾಗಬೇಕು?”

“ ನೀನು ಕೊಟ್ಟ ಈ ಕಂದೀಲಿನ ಕಾರಣವಾಗಿ ಮೊದಲಬಾರಿ ಜೀವನದಲ್ಲಿ ನಾನು ಇನ್ನೊಬ್ಬರಿಂದ ಗಾಯಗೊಂಡಿದ್ದೇನೆ. ಕುರುಡನಾಗಿದ್ದರೂ ಜೀವನದಲ್ಲಿ ನಾನು ಬಹಳ ಪ್ರಯಾಣ ಮಾಡಿದ್ದೇನೆ, ನಾನು ನನ್ನ ಕೈಯಲ್ಲಿದ್ದ ಕೋಲನ್ನ ನೆಲಕ್ಕೆ ಕುಟ್ಟುತ್ತ ನಡೆಯುತ್ತಿದ್ದರೆ ಜನ ನನಗೆ ದಾರಿ ಮಾಡಿಕೊಡುತ್ತಿದ್ದರು. ನನ್ನ ಕೋಲನ್ನ ಗಾಳಿಯಲ್ಲಿ ಮುಂದೆ ಆಡಿಸುತ್ತ ನನ್ನ ಎದುರು ಯಾರೂ ಇಲ್ಲವೆಂಬುದನ್ನ, ಯಾವುದು ಗೋಡೆ, ಯಾವುದು ಬಾಗಿಲು ಎನ್ನುವುದನ್ನ ನಾನು ಖಚಿತಪಡಿಸಿಕೊಳ್ಳುತ್ತಿದ್ದೆ. ಇದೇ ಮೊದಲ ಬಾರಿ ನೀನು ಕೊಟ್ಟ ಕಂದೀಲಿನ ಕಾರಣವಾಗಿ ಯಾವ ಭಯವಿಲ್ಲದೇ ನಡೆಯುತ್ತ ಗಾಯಮಾಡಿಕೊಂಡೆ.”


(Öshö
The Dhammapada`: The Way~ of the~ Buddha)

Leave a Reply