ಪ್ರೀತಿ ಎಂಬ ವಿದ್ಯಮಾನ : ಓಶೋ ವ್ಯಾಖ್ಯಾನ

ಪ್ರೀತಿ ನಮ್ಮ ಮೊದಲ ಬಾಗಿಲು. ಈ ಬಾಗಿಲನ್ನು ದಾಟಿದೆವೆಂದರೆ ನಾವು ಕಾಲದ ಹಿಡಿತದಿಂದ ತಪ್ಪಿಸಿಕೊಳ್ಳುತ್ತೇವೆ. ಕಾಲ ನಮಗೆ ಈಗ ಸಮಸ್ಯೆಯೇ ಅಲ್ಲ. ಆದ್ದರಿಂದಲೇ ಪ್ರತೀ ಮನುಷ್ಯನಿಗೂ ಪ್ರೀತಿಸಲ್ಪಡುವುದೆಂದರೆ ಇಷ್ಟ, ಪ್ರೀತಿಸುವುದೆಂದರೆ ಇಷ್ಟ, ಕಾಲದ ನಿಯಮಾತೀತ ಹಿಡಿತದಿಂದ ಬಿಡುಗಡೆಯಾಗುವುದು ಇಷ್ಟ… ~ ಓಶೋ

ಪ್ರೇಮದ ದಾರಿ
ಒಳಗೊಳಗಿನ ವಾದ ವಿವಾದವಲ್ಲ.

ಇಲ್ಲಿ ಬಾಗಿಲು ಎಂದರೆ ಅನಾಹುತ.

ಆಕಾಶದಲ್ಲಿ ಹಕ್ಕಿಗಳು
ಅಪರೂಪದ ಬಿಡುಗಡೆಯ ವೃತ್ತಗಳನ್ನು
ಬರೆಯುತ್ತವೆ.
ಯಾವ ಶಾಲೆಯಲ್ಲಿ ಕಲಿಸುತ್ತಾರೆ
ಇದನ್ನೆಲ್ಲಾ?

ಅವು ಧೊಪ್ಪಂತ ಬೀಳುತ್ತವೆ
ಬೀಳುವಾಗಲೇ
ಅವುಗಳಿಗೆ ರೆಕ್ಕೆ ಮೂಡುತ್ತವೆ.

  • ರೂಮಿ

ಮೀರಾಳ ಬದುಕಿನಲ್ಲಿ ನಡೆದ ಒಂದು ಘಟನೆ ನೆನಪಾಗುತ್ತಿದೆ. ಮೀರಾ ಕೃಷ್ಣನ ಅನನ್ಯ ಪ್ರೇಮಿಯಾಗಿದ್ದವಳು. ಆಕೆ ರಾಜನೊಬ್ಬನ ಮಡದಿ. ತನ್ನ ಹೆಂಡತಿಯ ಕೃಷ್ಣಪ್ರೀತಿಯನ್ನು ಕಂಡು ರಾಜನಿಗೆ ಅಸೂಯೆ. ಇದು ಕೃಷ್ಣನ ಕಾಲ ಅಲ್ಲ. ಭೌತಿಕವಾಗಿ ಈಗ ಕೃಷ್ಣ ಇಲ್ಲ. ಕೃಷ್ಣ ಮತ್ತು ಮೀರಾಳ ನಡುವೆ ಸುಮಾರು ಐದು ಸಾವಿರ ವರ್ಷಗಳು ಆಗಿ ಹೋಗಿವೆ. ಪರಿಸ್ಥಿತಿ ಹೀಗಿರುವಾಗ ಮೀರಾ, ಕೃಷ್ಣನನ್ನು ಇಷ್ಟೊಂದು ಹಚ್ಚಿಕೊಳ್ಳುವುದು ಹೇಗೆ ಸಾಧ್ಯ? ಅವರ ನಡುವೆ ಸವೆದು ಹೋಗಿರುವ ಇಷ್ಟು ಅಗಾಧ ಸಮಯ ಅವಳಿಂದ ಕೃಷ್ಣನನ್ನು ಯಾಕೆ ದೂರ ಮಾಡಲಿಲ್ಲ?

ಒಂದು ದಿನ ಮೀರಾಳ ಗಂಡ, ರಾಜ್ಯದ ದೊರೆ ಅವಳನ್ನು ಪ್ರಶ್ನೆ ಮಾಡಿದ, “ ನೀನು ನಿನ್ನ ಕೃಷ್ಣ ಪ್ರೀತಿಯ ಬಗ್ಗೆ ದಣಿವಿಲ್ಲದಂತೆ ಮಾತನಾಡುತ್ತೀಯ, ಅವನ ನೆನಪಲ್ಲಿ ಹಾಡುತ್ತೀಯ, ಕುಣಿಯುತ್ತೀಯ. ಆದರೆ ಎಲ್ಲಿ ಅವನು? ಯಾರೊಂದಿಗೆ ನಿನ್ನ ಈ ಪ್ರೇಮ? ಯಾರೊಂದಿಗೆ ಹೀಗೆ ನೀನು ನಿರಂತರವಾಗಿ ಮಾತನಾಡುತ್ತಿರುತ್ತೀಯ?” ಮೀರಾ ದೀನವಿಡಿ ಕೋಣೆಯ ಬಾಗಿಲು ಹಾಕಿಕೊಂಡು ಕೃಷ್ಣನ ಜೊತೆ ಹಾಡುತ್ತಿದ್ದಳು, ಕುಣಿಯುತ್ತಿದ್ದಳು, ನಗುತ್ತಿದ್ದಳು, ಜಗಳ ಮಾಡುತ್ತಿದಿದಳು.

ಅವಳ ಕಣ್ಣುಗಳಲ್ಲಿ ಯಾವಾಗಲೂ ಕೃಷ್ಣಪ್ರೀತಿಯ ಹುಚ್ಚು ತುಂಬಿಕೊಂಡಿರುತ್ತಿತ್ತು. ಅರಮನೆಯ ಬಹುತೇಕ ಎಲ್ಲರೂ ಅವಳಿಗೆ ಹುಚ್ಚು ಹಿಡಿದಿದೆ ಎಂದೇ ತಿಳಿದುಕೊಂಡಿದ್ದರು. “ ನಿನಗೆ ಹುಚ್ಚು ಹಿಡಿದಿದೆಯಾ? ಎಲ್ಲಿದ್ದಾನೆ ಕೃಷ್ಣ? ಯಾರನ್ನು ಪ್ರೀತಿಸುತ್ತಿದ್ದೀಯಾ? ಯಾರ ಜೊತೆ ಮಾತನಾಡುತ್ತಿದ್ದೀಯಾ? ನಾನು ಪ್ರತ್ಯಕ್ಷ ನಿನ್ನ ಕಣ್ಣ ಮುಂದಿರುವಾಗಲೂ ನೀನು ನನ್ನ ಮರೆತುಬಿಟ್ಟಿದ್ದೀಯಾ. ಯಾವದೋ ಕಾಲದ ಕಾಲ್ಪನಿಕ ಮನುಷ್ಯನೊಂದಿಗೆ ಗಂಟೆಗಟ್ಟಲೆ ಹರಟುತ್ತೀಯಾ. ಇದೆಂಥ ಹುಚ್ಚು ?” ರಾಜ, ಮೀರಾಳನ್ನು ಪ್ರಶ್ನೆ ಮಾಡುತ್ತಿದ್ದ.

“ ಕೃಷ್ಣ ಇಲ್ಲಿದ್ದಾನೆ ಆದರೆ ನೀನು ಇಲ್ಲಿಲ್ಲ. ಕೃಷ್ಣ ಶಾಶ್ವತ ಆದರೆ ನೀನಲ್ಲ. ಅವನು ಯಾವಾಗಲೂ ನನ್ನ ಜೊತೆ ಇರುತ್ತಾನೆ, ನನ್ನ ಜೊತೆಯೇ ಇದ್ದಾನೆ ಮತ್ತು ಈಗಲೂ ಕೂಡ. ನೀನು ನಿನ್ನೆಯೂ ಇಲ್ಲಿರಲಿಲ್ಲ, ಇವತ್ತೂ ಇಲ್ಲ, ನಾಳೆಯೂ ಇರುವುದಿಲ್ಲ, ಈ ಇಷ್ಟು ಇಲ್ಲದಿರುವಿಕೆಗಳ ನಡುವೆ ನಾನು ಇರುವುದಾದರೂ ಹೇಗೆ? ಯಾವ ಅಸ್ತಿತ್ವ ತಾನೇ ಇಷ್ಟು ಅನಸ್ತಿತ್ವಗಳ ನಡುವೆ ಇರುವುದು ಸಾಧ್ಯ?”. ಮೀರಾ ಗಂಡನಿಗೆ ಮರು ಪ್ರಶ್ನೆ ಮಾಡುತ್ತಾಳೆ.

ರಾಜನಾದವನು ಒಂದು ಕಾಲಕ್ಕೆ ಮಾತ್ರ ಸೀಮಿತ ಆದರೆ ಕೃಷ್ಣನಂಥ ಪ್ರೇಮಿ ಸದಾ ಶಾಶ್ವತ. ಅಶಾಶ್ವತದ ನಡುವಿನ ದೂರವನ್ನು ನಾಶಮಾಡಲಿಕ್ಕಾಗುವುದಿಲ್ಲ ಅದು ಎಷ್ಟೇ ಹತ್ತಿರವಿದ್ದರೂ, ಶಾಶ್ವತ ಎಷ್ಟೇ ದೂರವಿದ್ದರೂ ಕ್ಷಣಮಾತ್ರದಲ್ಲಿ ಅದನ್ನು ದಾಟಬಹುದು. ಇದು ಸಂಪೂರ್ಣವಾಗಿ ಬೇರೆಯದೇ ಆಯಾಮ.

ಹಾಗಾಗಿ ಪ್ರೀತಿ ನಮ್ಮ ಮೊದಲ ಬಾಗಿಲು. ಈ ಬಾಗಿಲನ್ನು ದಾಟಿದೆವೆಂದರೆ ನಾವು ಕಾಲದ ಹಿಡಿತದಿಂದ ತಪ್ಪಿಸಿಕೊಳ್ಳುತ್ತೇವೆ. ಕಾಲ ನಮಗೆ ಈಗ ಸಮಸ್ಯೆಯೇ ಅಲ್ಲ. ಆದ್ದರಿಂದಲೇ ಪ್ರತೀ ಮನುಷ್ಯನಿಗೂ ಪ್ರೀತಿಸಲ್ಪಡುವುದೆಂದರೆ ಇಷ್ಟ, ಪ್ರೀತಿಸುವುದೆಂದರೆ ಇಷ್ಟ, ಕಾಲದ ನಿಯಮಾತೀತ ಹಿಡಿತದಿಂದ ಬಿಡುಗಡೆಯಾಗುವುದು ಇಷ್ಟ. ಪ್ರೀತಿಯ ಮಾಂತ್ರಿಕತೆಯ ಬಗ್ಗೆ ಎಲ್ಲರಿಗೂ ಆಸಕ್ತಿ ಆದರೆ ಪ್ರೀತಿಯ ಮಹತ್ವ ಮತ್ತು ಆಳದ ಪರಿಚಯ ನಿಮಗಿಲ್ಲವಾದರೆ ನಿಮಗೆ ಪ್ರೀತಿಸುವುದೂ ಸಾಧ್ಯವಿಲ್ಲ, ಪ್ರೀತಿಸಲ್ಪಡುವುದೂ ಸಾಧ್ಯವಿಲ್ಲ. ಏಕೆಂದರೆ ಪ್ರೀತಿ ಈ ಜಗತ್ತಿನಲ್ಲಿ ತುಂಬ ಆಳವಾದ ವಿದ್ಯಮಾನ.

ಎಲ್ಲರಿಗೂ ಅವರಿರುವ ಸ್ಥಿತಿಯಲ್ಲೇ ಪ್ರೀತಿ ಸಾಧ್ಯ ಎನ್ನುವುದು ನಮ್ಮ ಆಲೋಚನೆಯಾದರೆ ಅದು ಸರಿಯಲ್ಲ. ಆದ್ದರಿಂದಲೇ ಅಲ್ಲವೇ ಎಲ್ಲ ಇಷ್ಟು ಹತಾಶರಂತೆ ವರ್ತಿಸುವುದು. ಪ್ರೀತಿ ಸಂಪೂರ್ಣವಾಗಿ ಒಂದು ವಿಭಿನ್ನ ವಿದ್ಯಮಾನ. ಕಾಲದ ಪರಿಧಿಯಲ್ಲಿ ನೀವು ಯಾರನ್ನಾದರೂ ಪ್ರೀತಿಸುವ ಪ್ರಯತ್ನ ಮಾಡುತ್ತೀರಾದರೆ, ನಿರಾಶೆ ನಿಮಗೆ ಕಟ್ಟಿಟ್ಟಬುತ್ತಿ. ಪ್ರೀತಿಯನ್ನ ಕಾಲದ ಆವರಣದಲ್ಲಿ ಹಿಡಿದುಕೊಳ್ಳುವುದು ಸಾಧ್ಯವೇ ಇಲ್ಲ.

Leave a Reply